ದಸರೆಗೆ ಅಗತ್ಯ ಬಂದೋಬಸ್ತ್ ಕೈಗೊಳ್ಳಲು ಡಿಜಿಪಿ ಡಾ. ಅಲೋಕ್ ಮೋಹನ್ ಸೂಚನೆ- ಮೈಸೂರು ನಗರ, ದಕ್ಷಿಣ ವಲಯ ಜಿಲ್ಲೆಗಳ ಎಸ್ಪಿಗಳೊಂದಿಗೆ ಸಭೆ

| Published : Oct 10 2023, 01:01 AM IST

ದಸರೆಗೆ ಅಗತ್ಯ ಬಂದೋಬಸ್ತ್ ಕೈಗೊಳ್ಳಲು ಡಿಜಿಪಿ ಡಾ. ಅಲೋಕ್ ಮೋಹನ್ ಸೂಚನೆ- ಮೈಸೂರು ನಗರ, ದಕ್ಷಿಣ ವಲಯ ಜಿಲ್ಲೆಗಳ ಎಸ್ಪಿಗಳೊಂದಿಗೆ ಸಭೆ
Share this Article
  • FB
  • TW
  • Linkdin
  • Email

ಸಾರಾಂಶ

ದಸರೆಗೆ ಅಗತ್ಯ ಬಂದೋಬಸ್ತ್ ಕೈಗೊಳ್ಳಲು ಡಿಜಿಪಿ ಡಾ. ಅಲೋಕ್ ಮೋಹನ್ ಸೂಚನೆ
ಫೋಟೋ- 9ಎಂವೈಎಸ್5 ಮೈಸೂರು ನಗರ ಪೊಲೀಸ್ ಆಯುಕ್ತರ ಕಚೇರಿಗೆ ಸೋಮವಾರ ಆಗಮಿಸಿದ ಡಿಜಿಪಿ ಡಾ. ಅಲೋಕ್ ಮೋಹನ್. 9ಎಂವೈಎಸ್6 ಮೈಸೂರು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಸೋಮವಾರ ನಡೆದ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಡಿಜಿಪಿ ಡಾ. ಅಲೋಕ್ ಮೋಹನ್ ಮಾತನಾಡಿದರು. ---- ಕನ್ನಡಪ್ರಭ ವಾರ್ತೆ ಮೈಸೂರು ನಾಡಹಬ್ಬ ದಸರಾ ಮಹೋತ್ಸವಕ್ಕೆ ಅಗತ್ಯ ಬಂದೋಬಸ್ತ್ ಕೈಗೊಳ್ಳಬೇಕು ಎಂದು ಕರ್ನಾಟಕ ಪೊಲೀಸ್ ಮಹಾ ನಿರ್ದೇಶಕ ಡಾ. ಅಲೋಕ್ ಮೋಹನ್ ಸೂಚಿಸಿದರು. ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಸೋಮವಾರ ನಡೆದ ಮೈಸೂರು ನಗರ ಹಾಗೂ ದಕ್ಷಿಣ ವಲಯ ಜಿಲ್ಲೆಗಳ ಎಸ್ಪಿಗಳ ಸಭೆಯಲ್ಲಿ ಮಾತನಾಡಿದ ಅವರು, ಅಗತ್ಯಕ್ಕೆ ತಕ್ಕಂತೆ ಹೆಚ್ಚುವರಿ ಸಿಬ್ಬಂದಿ ನಿಯೋಜನೆ ಮಾಡಿಕೊಂಡು ಭದ್ರತೆಯಲ್ಲಿ ಯಾವುದೇ ಲೋಪವಾಗದಂತೆ ಕ್ರಮ ವಹಿಸಬೇಕು ಎಂದರು. ದಸರಾ ವೇಳೆ ಮೈಸೂರಿಗೆ ಅಕ್ಕಪಕ್ಕದ ಜಿಲ್ಲೆ ಮತ್ತು ರಾಜ್ಯಗಳಿಂದ ಲಕ್ಷಾಂತರ ಮಂದಿ ಆಗಮಿಸಲಿದ್ದು, ಅಪರಾಧ ಕೃತ್ಯಗಳು ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಈ ನಿಟ್ಟಿನಲ್ಲಿ ಹೊರಗಿನಿಂದ ಬರುವ ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಗಳ ಬಗ್ಗೆ ಪೊಲೀಸರು ನಿಗಾ ವಹಿಸಬೇಕು. ರೈಲು ನಿಲ್ದಾಣ ಮತ್ತು ಬಸ್ ನಿಲ್ದಾಣಗಳಲ್ಲಿ ಅನುಮಾನಸ್ಪದವಾಗಿ ಕಂಡು ಬರುವ ವ್ಯಕ್ತಿಗಳ ಮೇಲೆ ನಿಗಾ ವಹಿಸಬೇಕು ಎಂದು ಅವರು ತಿಳಿಸಿದರು. ಮಹಿಳೆಯರಿಗೆ ಕೆಎಸ್ಆರ್‌ಟಿಸಿ ಬಸ್ ಗಳಲ್ಲಿ ಉಚಿತ ಬಸ್ ವ್ಯವಸ್ಥೆ ಇರುವುದರಿಂದ ದಸರಾ ಮಹೋತ್ಸವಕ್ಕೆ ಈ ಬಾರಿ ನಿರೀಕ್ಷೆಗೂ ಮೀರಿ ಜನ ಸಾಗರ ಹರಿದು ಬರಲಿದ್ದು, ನಗರ ಮತ್ತು ಗ್ರಾಮಾಂತರ ಬಸ್ ನಿಲ್ದಾಣ, ರೈಲು ನಿಲ್ದಾಣಗಳಲ್ಲಿ ಹೆಚ್ಚು ಮಹಿಳಾ ಪೊಲೀಸ್ ಸಿಬ್ಬಂದಿ ನೇಮಿಸಬೇಕು. ಜೊತೆಗೆ ದಸರಾ ಕಾರ್ಯಕ್ರಮಗಳು ನಡೆಯುವ ಅರಮನೆ ಆವರಣ, ಫಲಪುಷ್ಪ ಪ್ರದರ್ಶನ, ಯುವ ಸಂಭ್ರಮ, ಯುವ ದಸರಾ, ರೈತ ದಸರಾ, ಮಹಿಳಾ ದಸರಾ ಮೊದಲಾದ ಸ್ಥಳಗಳಲ್ಲಿ ಮಹಿಳೆಯರ ಸುರಕ್ಷತೆಗೆ ಹೆಚ್ಚು ಒತ್ತು ನೀಡಿ ಮಹಿಳಾ ಸಿಬ್ಬಂದಿ ನಿಯೋಜಿಸುವಂತೆ ಅವರು ಸೂಚಿಸಿದರು. ನಂತರ ಮೈಸೂರು ನಗರ, ದಕ್ಷಿಣ ವಲಯ ಜಿಲ್ಲೆಗಳಲ್ಲಿ ಅಪರಾಧ ಪ್ರಕರಣಗಳ ಪತ್ತೆ, ನಿಯಂತ್ರಣ, ಕಾನೂನು ಮತ್ತು ಸುವ್ಯವಸ್ಥೆ ಬಗ್ಗೆ ಮಾಹಿತಿ ಪಡೆದ ಡಿಜಿಪಿಯವರು, ಅಪರಾಧ ನಿಯಂತ್ರಣಕ್ಕೆ ಅಗತ್ಯ ಮುಂಜಾಗ್ರತಾ ಕ್ರಮ ವಹಿಸುವಂತೆ ಸೂಚಿಸಿದರು. ದಕ್ಷಿಣ ವಲಯದ ಡಿಐಜಿ ಡಾ.ಎಂ.ಬಿ. ಬೋರಲಿಂಗಯ್ಯ, ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್, ಡಿಸಿಪಿಗಳಾದ ಎಂ. ಮುತ್ತುರಾಜು, ಎಸ್. ಜಾಹ್ನವಿ, ಮೈಸೂರು ಎಸ್ಪಿ ಸೀಮಾ ಲಾಟ್ಕರ್ ಮೊದಲಾದವರು ಇದ್ದರು.