ಸಮಾಜ ಸುಧಾರಣೆಗೆ ಕನಕದಾಸರ ಕೊಡುಗೆ ಅಪಾರ - ಕೆ. ವೆಂಕಟೇಶ್

| Published : Dec 01 2023, 12:45 AM IST

ಸಾರಾಂಶ

ಜನರಿಗೆ ಅರ್ಥವಾಗುವ ಸರಳ ಕೀರ್ತನೆಗಳನ್ನು ರಚಿಸುವ ಮೂಲಕ ಸಾಮಾಜಿಕ ಬದಲಾವಣೆಗೆ ಹೆಚ್ಚಿನ ಒತ್ತು ನೀಡಿದ ಕನಕದಾಸರು ಸಮಾಜ ಸುಧಾರಣೆಗೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಪಶುಸಂಗೋಪನೆ, ರೇಷ್ಮೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್ ತಿಳಿಸಿದರು. ನಗರದ ಜಿಲ್ಲಾಡಳಿತ ಭವನದ ಅವರಣದಲ್ಲಿರುವ ವರನಟ ಡಾ. ರಾಜ್‌ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಭಕ್ತ ಶ್ರೇಷ್ಠ ಶ್ರೀ ಕನಕದಾಸ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಅವರು ಮಾತನಾಡಿದರು

ಚಾಮರಾಜನಗರದಲ್ಲಿ ಭಕ್ತಶ್ರೇಷ್ಠ ಕನಕದಾಸರ ಜಯಂತಿ ಆಚರಣೆ । ಭಕ್ತಶ್ರೇಷ್ಠನ ಮೆರವಣಿಗೆ ಗಮನಸೆಳೆದ ಡೊಳ್ಳು, ಗೊರವರ ಕುಣಿತ

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಜನರಿಗೆ ಅರ್ಥವಾಗುವ ಸರಳ ಕೀರ್ತನೆಗಳನ್ನು ರಚಿಸುವ ಮೂಲಕ ಸಾಮಾಜಿಕ ಬದಲಾವಣೆಗೆ ಹೆಚ್ಚಿನ ಒತ್ತು ನೀಡಿದ ಕನಕದಾಸರು ಸಮಾಜ ಸುಧಾರಣೆಗೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಪಶುಸಂಗೋಪನೆ, ರೇಷ್ಮೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್ ತಿಳಿಸಿದರು.

ನಗರದ ಜಿಲ್ಲಾಡಳಿತ ಭವನದ ಅವರಣದಲ್ಲಿರುವ ವರನಟ ಡಾ. ರಾಜ್‌ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಭಕ್ತ ಶ್ರೇಷ್ಠ ಶ್ರೀ ಕನಕದಾಸ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಅವರು ಮಾತನಾಡಿದರು.

ದಾಸಶ್ರೇಷ್ಠರಲ್ಲಿ ಒಬ್ಬರಾದ ಕನಕದಾಸರು ಸಮಾಜದ ಅಂಕು-ಡೊಂಕುಗಳನ್ನು ತಿದ್ದಿ, ಮೌಢ್ಯತೆ, ಜಾತೀಯತೆಯನ್ನು ತೊಡೆದುಹಾಕಲು ಜನಸಾಮಾನ್ಯರಿಗೆ ಅರ್ಥವಾಗುವ ಸರಳ ಕೀರ್ತನೆಗಳ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡಿದರು. ಅವರ ಕೀರ್ತನೆಗಳ ಸಾರ, ಸಂದೇಶಗಳನ್ನು ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಂಡು ಮುನ್ನೆಡೆಯಬೇಕಿದೆ ಎಂದು ತಿಳಿಸಿದರು.

ಕನಕದಾಸರು ಒಂದು ಸಮುದಾಯಕ್ಕೆ ಸೀಮಿತವಾದವರಲ್ಲ. ಎಲ್ಲಾ ವರ್ಗಗಳಿಗೂ ಅನ್ವಯವಾಗುವ, ಜಾಗೃತಗೊಳಿಸುವ ಕೀರ್ತನೆಗಳನ್ನು ರಚಿಸಿ ಸಮಾಜವನ್ನು ಎಚ್ಚರಿಸಿದರು. ಸಂತರ ತತ್ವಸಿದ್ದಾಂತ, ವಿಚಾರಧಾರೆ, ಚಿಂತನೆಗಳನ್ನು ಅರಿಯಲು ಸರ್ಕಾರ ವಿವಿಧ ಮಹಾಪುರುಷರ, ದಾರ್ಶನಿಕರ ಜಯಂತಿಗಳನ್ನು ಆಚರಿಸಲು ಅನುವು ಮಾಡಿಕೊಟ್ಟಿದೆ. ಅವರ ಸಂದೇಶಗಳನ್ನು ಅರಿತು ಸಮಾಜದ ಇತರರಿಗೂ ಮನವರಿಕೆ ಮಾಡುವ ಮೂಲಕ ಕನಕದಾಸರಿಗೆ ಗೌರವ ಸಲ್ಲಿಸಬೇಕು.ಕನಕ ಭವನದ ಮುಂದುವರೆದ ಕಾಮಗಾರಿಗೆ ಅಗತ್ಯ ಅನುದಾನ ಒದಗಿಸುವುದಾಗಿ ತಿಳಿಸಿ, ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಎಲ್ಲಾ ಸೌಲಭ್ಯಗಳನ್ನು ನೀಡಲು ಸರ್ಕಾರ ಬದ್ಧವಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಮಾತನಾಡಿ, 1509ರಲ್ಲಿ ಹಾವೇರಿ ಜಿಲ್ಲೆಯ ಬಾಡದಲ್ಲಿ ಜನಿಸಿದ ಕನಕದಾಸರು 100 ವರ್ಷಗಳ ಕಾಲ ಜೀವಿಸಿದ್ದರು.ಕನ್ನಡದಲ್ಲಿ ಸರಳ ಕೀರ್ತನೆಗಳನ್ನು ರಚಿಸುವ ಮೂಲಕ ಸಮಾಜವನ್ನು ತಿದ್ದುವ ಕೆಲಸ ಮಾಡಿದ್ದರು. ಜೀವನದಲ್ಲಿ ಪ್ರತಿಯೊಬ್ಬರೂ ಉತ್ತಮ ಪ್ರಜೆಯಾಗಿ ರೂಪುಗೊಳ್ಳಲು ಮಹಾಪುರುಷರು ಕೀರ್ತನಾ ಸಂದೇಶಗಳನ್ನು ನಮಗೆ ನೀಡಿದ್ದಾರೆ. ಅವರ ಜೀವನಾದರ್ಶಗಳನ್ನು ಪಾಲಿಸಬೇಕು ಎಂದರು.

ಮುಖ್ಯ ಭಾಷಣ ಮಾಡಿದ ಮೈಸೂರಿನ ಸಂದರ್ಶಕ ಪ್ರಾಧ್ಯಾಪಕ ಹಾಗೂ ಸಂಶೋಧಕ ಡಾ. ರಾಜಶೇಖರ ಜಮದಂಡಿ ಅವರು, ಕನಕದಾಸರು ಆಧ್ಯಾತ್ಮದ ದಿವ್ಯದೃಷ್ಠಿ ಹೊಂದಿದ್ದರು. ಮನಸ್ಸಿನ ಕಲ್ಮಶವನ್ನು ತೊಡೆದುಹಾಕಿದ ಕನಕದಾಸರ ಕೀರ್ತನೆಗಳು ಇಂದಿಗೂ ಪ್ರಸ್ತುತವಾಗಿದೆ. ಮನಸ್ಸಿನ ಕಲ್ಮಶ ತಿಳಿಯಲು ಅಂತರಂಗದ ಕಣ್ಣು ತೆರೆಯಬೇಕು. ಅಂತರಂಗ, ಬಹಿರಂಗ ಶುದ್ದಿಯನ್ನು ಜೀವನದಲ್ಲಿ ಎಲ್ಲರೂ ಮೈಗೂಡಿಸಿಕೊಳ್ಳಬೇಕು ಎಂದರು.

ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು, ಬಂಡೀಪುರ ಬಿ.ಆರ್.ಟಿ ಹುಲಿ ಸಂರಕ್ಷಿತ ಪ್ರದೇಶದ ಉಪ ಅರಣ್ಯ ಸಂರಕ್ಷಣಾಧಿಕಾರಿ ದೀಪಾ ಜೆ. ಕಂಟ್ರಾಕ್ಟರ್, ಉಪವಿಭಾಗಾಧಿಕಾರಿ ಮಹೇಶ್, ತಹಸೀಲ್ದಾರ್ ಬಸವರಾಜು, ತಾಲೂಕು ಸಮಾಜದ ಅಧ್ಯಕ್ಷರು ಹಾಗೂ ಕನಿಷ್ಠ ವೇತನ ಸಲಹಾ ಮಂಡಳಿಯ ಮಾಜಿ ಅಧ್ಯಕ್ಷ ಉಮೇಶ್, ಮುಖಂಡ ರಾಜಶೇಖರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಗುರುಲಿಂಗಯ್ಯ ಕಾರ್ಯಕ್ರಮದಲ್ಲಿ ಇದ್ದರು.

ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ನಗರದ ಪ್ರವಾಸಿ ಮಂದಿರದಲ್ಲಿ ಭಕ್ತ ಶ್ರೇಷ್ಠ ಶ್ರೀ ಕನಕದಾಸರ ಭಾವಚಿತ್ರ ಮೆರವಣಿಗೆಗೆ ಶಾಸಕ ಸಿ. ಪುಟ್ಟರಂಶೆಟ್ಟಿ ಅವರು ಚಾಲನೆ ನೀಡಿದರು. ನಂತರ ಶಾಸಕ ಸಿ. ಪುಟ್ಟರಂಶೆಟ್ಟಿ, ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಮೆರವಣಿಗೆಯಲ್ಲಿ ಭಾಗವಹಿಸಿದರು. ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿದ ಮೆರವಣಿಗೆಯಲ್ಲಿ ಡೊಳ್ಳುಕುಣಿತ, ಗೊರವರ ಕುಣಿತ, ವೀರಗಾಸೆ ಸೇರಿದಂತೆ ವಿವಿಧ ಜಾನಪದ ಕಲಾತಂಡಗಳು ಭಾಗವಹಿಸಿ ಮೆರವಣಿಗೆಗೆ ಅಕರ್ಷಕ ಮೆರುಗು ನೀಡಿದವು.

------------

30ಸಿಎಚ್‌ಎನ್‌54

ಚಾಮರಾಜನಗರದ ಜಿಲ್ಲಾಡಳಿತ ಭವನದ ಅವರಣದಲ್ಲಿರುವ ವರನಟ ಡಾ. ರಾಜ್‌ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಆಯೋಜಿಸಲಾಗಿದ್ದ ಭಕ್ತ ಶ್ರೇಷ್ಠ ಶ್ರೀ ಕನಕದಾಸ ಜಯಂತಿ ಕಾರ್ಯಕ್ರಮದಲ್ಲಿ ಕನಕದಾಸರ ಭಾವಚಿತ್ರಕ್ಕೆ ಪಶುಸಂಗೋಪನೆ, ರೇಷ್ಮೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್ ಅವರು ಪುಷ್ಪಾರ್ಚನೆ ನೆರವೇರಿಸಿದರು.

----