‘ಸವೆದ ಪಯಣ’: ರಂಗಭೂಮಿ ಹಾಗೂ ಚಲನಚಿತ್ರ ನಟ ಬಿ.ಎಂ. ಮಹದೇವ್ ಮೂರ್ತಿ ಅವರ ಜೀವನ ಚಿತ್ರಣ

| Published : Aug 20 2024, 12:49 AM IST / Updated: Aug 20 2024, 05:11 AM IST

ಸಾರಾಂಶ

ಎಪ್ಪತ್ತರ ದಶಕದಲ್ಲಿಯೇ ಅಂತರಧರ್ಮೀಯ ಮದುವೆಯಾಗಿ ಐವತ್ತು ವರ್ಷಗಳ ನಂತರವೂ ಅದನ್ನು ಆದರ್ಶ ಎಂಬಂತೆ ಕಾಪಾಡಿಕೊಂಡು ಬಂದಿರುವ ಕೆನರಾ ಬ್ಯಾಂಕಿನ ನಿವೃತ್ತ ಉದ್ಯೋಗಿ, ರಂಗಭೂಮಿ ಹಾಗೂ ಚಲನಚಿತ್ರ ನಟ ಬಿ.ಎಂ. ಮಹದೇವ್ ಮೂರ್ತಿ ಅವರು ‘ಸವೆದ ಪಯಣ’ ಕೃತಿಯ ಮೂಲಕ ತಮ್ಮ ಜೀವನ ಚಿತ್ರಣವನ್ನು ಕಟ್ಟಿಕೊಟ್ಟಿದ್ದಾರೆ.

 ಮೈಸೂರು :  ಎಪ್ಪತ್ತರ ದಶಕದಲ್ಲಿಯೇ ಅಂತರಧರ್ಮೀಯ ಮದುವೆಯಾಗಿ ಐವತ್ತು ವರ್ಷಗಳ ನಂತರವೂ ಅದನ್ನು ಆದರ್ಶ ಎಂಬಂತೆ ಕಾಪಾಡಿಕೊಂಡು ಬಂದಿರುವ ಕೆನರಾ ಬ್ಯಾಂಕಿನ ನಿವೃತ್ತ ಉದ್ಯೋಗಿ, ರಂಗಭೂಮಿ ಹಾಗೂ ಚಲನಚಿತ್ರ ನಟ ಬಿ.ಎಂ. ಮಹದೇವ್ ಮೂರ್ತಿ ಅವರು ‘ಸವೆದ ಪಯಣ’ ಕೃತಿಯ ಮೂಲಕ ತಮ್ಮ ಜೀವನ ಚಿತ್ರಣವನ್ನು ಕಟ್ಟಿಕೊಟ್ಟಿದ್ದಾರೆ.

ಮಹದೇವ್ ಮೂರ್ತಿ ಅವರು ಸ್ವತಃ ತಾವೇ ಅನೇಕ ಸಮಸ್ಯೆ ಮತ್ತು ಸಂಘರ್ಷಗಳನ್ನು ಸೃಷ್ಟಿಸಿಕೊಂಡು, ಅವುಗಳನ್ನು ಜಯಿಸಿ, ಬದುಕಿದ ರೀತಿ ಈ ಕೃತಿಯಲ್ಲಿ ಅನಾವರಣಗೊಂಡಿದೆ. ಜೊತೆಗೆ ಎಷ್ಟೇ ಒತ್ತಡ ಬಂದರೂ ಸೊಗ್ರಬೇಗಂ ಅವರು ಪ್ರೀತಿಯಿಂದ ಹಿಂದೆ ಸರಿಯದಿದ್ದುದು, ಶ್ರೀಮಂತಿಕೆಯನ್ನು ತ್ಯಜಿಸಿ ಬಂದಿದ್ದು ಕೂಡ ಅನುಕರಣೀಯ ಎನಿಸುತ್ತದೆ.

ಇವತ್ತಿಗೂ ಕೂಡ ಜಾತಿ ವ್ಯವಸ್ಥೆ ಹೋಗಿಲ್ಲ. ಅಂತರ್ಜಾತಿಯ ಗಂಡು- ಹೆಣ್ಣು ಪ್ರೀತಿಸಿದರೆ ‘ಮರ್ಯಾದೆಗೇಡು’ಹತ್ಯೆಗಳು ನಡೆಯುತ್ತಿವೆ. ಹೀಗಿರುವಾಗ ಎಪ್ಪತ್ತರ ದಶಕದಲ್ಲಿಯೇ ಅಂತರಧರ್ಮೀಯ ಯುವತಿಯನ್ನು ಅದರಲ್ಲೂ ಹೈದರಾಬಾದ್ ಮೂಲದ ನವಾಬರ ವಂಶಸ್ಥರನ್ನು ಟಿ. ನರಸೀಪುರ ತಾಲೂಕಿನ ಎಂ. ಕೆಬ್ಬೇಹುಂಡಿಯ ಪರಿಶಿಷ್ಚ ಜಾತಿಯ ಯುವಕ ಪ್ರೀತಿಸಿ, ಮದುವೆಯಾಗಿದ್ದು, ಸ್ವಲ್ಪ ಸಮಯದಲ್ಲಿಯೇ ಭಿನ್ನಾಭಿಪ್ರಾಯ ಬಂದರೂ ಇಬ್ಬರೂ ಅತ್ಯಂತ ತಾಳ್ಮೆ, ಸಹನೆಯಿಂದ ಬದುಕು ಕಟ್ಟಿಕೊಂಡಿದ್ದು ಸುಲಭ ಸಂಗತಿಯಲ್ಲ.

ಈಗ ಮಹದೇವ್ ಮೂರ್ತಿ ಅವರಿಗೆ 75, ಸೊಗ್ರ ಬೇಗಂ ಅವರಿಗೆ 73 ವರ್ಷ. ವಿವಾಹವಾಗಿ 53 ವರ್ಷಗಳು ಉರುಳಿವೆ. 1971ರ ಜು.7 ರಂದು ಮೈಸೂರಿನಲ್ಲಿ ರಮಾವಿಲಾಸ ರಸ್ತೆಯಲ್ಲಿದ್ದ ಗಾಂಧಿ ಶಾಂತಿ ಪ್ರತಿಷ್ಠಾನದ ಸಭಾಂಗಣದಲ್ಲಿ ನಡೆದ ವಿವಾಹದಲ್ಲಿ ಡಾ.ರಾಮಮನೋಹರ ಲೋಹಿಯಾ ಅವರ ಸಂಗಾತಿ ಡಾ.ರಮಾಮಿತ್ರ, ಪ್ರೊ.ಎಂ.ಡಿ. ನಂಜುಂಡಸ್ವಾಮಿ, ಡಾ.ಯು.ಆರ್. ಅನಂತಮೂರ್ತಿ, ಪ್ರೊ.ಕೆ. ರಾಮದಾಸ್, ದೇವನೂರ ಮಹಾದೇವ, ಪ. ಮಲ್ಲೇಶ್, ಬಿ.ಎನ್. ಶ್ರೀರಾಂ, ಉಮರಬ್ಬ, ಕ್ಷೀರಸಾಗರ ಮೊದಲಾದವರು ಭಾಗವಹಿಸಿದ್ದರು. ತಮ್ಮ ಬದುಕು ಇತರರಿಗೂ ತಿಳಿಯಲಿ ಎಂಬ ಉದ್ದೇಶದಿಂದ ಮಹದೇವ್ ಮೂರ್ತಿ ಅವರು ಆತ್ಮಕಥೆಯನ್ನು ಬರೆದಿದ್ದಾರೆ.

ಮೊದಲಿಗೆ ಪೂರ್ವಜರು, ತಂದೆ- ತಾಯಿ, ಒಡ ಹುಟ್ಟಿದವರ ಬಗ್ಗೆ ವಿವರ ದಾಖಲಿಸಿದ್ದಾರೆ. ನಂತರ ತಾವು ಜನಿಸಿದ ಹಳ್ಳಿ, ಅದರ ಇತಿಹಾಸ, ಅಲ್ಲಿನ ಶಾಲೆಯಲ್ಲಿ ಓದು, ಆಟಗಳು, ಒಕ್ಕಲುತನ, ಮದುವೆಗಳು, ಹಬ್ಬ-ಹರಿದಿನಗಳು, ಬುಡಬುಡಿಕೆ ದಾಸಯ್ಯನ ಹಾಲಕ್ಕಿ ಶಕುನ, ಮಹದೇಶ್ವರ ಬೆಟ್ಟಕ್ಕೆ ಕಾಲ್ನಡಿಗೆಯಲ್ಲಿ ಹೋಗುತ್ತಿದ್ದುದು ವಿವರಿಸಿದ್ದಾರೆ.

ಮೈಸೂರಿಗೆ ಬಂದ ನಂತರ ಇಲ್ಲಿನ ದಸರಾ ನೆನಪು, ಬೆಂಗಳೂರಿನಲ್ಲಿ ಹಾಸ್ಟೆಲ್ ವಾಸ, ಮೈಸೂರಿನಲ್ಲಿ ಕಾಲೇಜು ವ್ಯಾಸಂಗ, ಸರಸ್ವತಿಪುರಂ ಮನೆ, ರೆಬೆಲ್ ಸ್ಟಾರ್ ಅಂಬರೀಶ್ ಸೇರಿದಂತೆ ಕೆಲವರ ಸ್ನೇಹ, ಸಮಾಜವಾದಿ ಯುವಜನ ಸಭಾದೊಂದಿಗೆ ಸಂಪರ್ಕ, ಮೈಸೂರಿಗೆ ರಜೆಗೆ ಬಂದಾಗ ತಮ್ಮ ರಸ್ತೆಯಲ್ಲಿರುವ ಮನೆಯಲ್ಲಿ ಉಳಿದುಕೊಂಡಿದ್ದ ಸೊಗ್ರಾ ಬೇಗಂ ಜೊತೆ ಪ್ರೇಮಾಂಕುರ, ಅದರಿಂದ ಆದ ಅವಘಡಗಳು, ಕೊನೆಗೂ ಪ್ರಗತಿಪರರ ಸಮ್ಮುಖದಲ್ಲಿ ಸರಳ ವಿವಾಹ, ನಂತರ ವಿರಸ, ಪ್ರೊ.ಎಂ.ಡಿ. ನಂಜುಂಡಸ್ವಾಮಿ, ಕೆ. ರಾಮದಾಸ್ ಮತ್ತಿತರರು ಬುದ್ಧಿ ಹೇಳಿದ ನಂತರ ಕಷ್ಟ- ಸುಖ ಹಂಚಿಕೊಂಡು ಜೊತೆಯಾಗಿ ಬಾಳಿದ್ದನ್ನು ವಿವರಿಸಿದ್ದಾರೆ. 

ಆರಂಭದಲ್ಲಿ ಕೃಷಿ ಇಲಾಖೆಯ ನೌಕರಿಯಲ್ಲಿದ್ದ ಅವರು ನಂತರ ಕೆನರಾ ಬ್ಯಾಂಕ್ ಸೇರಿದ್ದು, ಅಲ್ಲಿನ ಚಟುವಟಿಕೆಗಳು, ಸಹೋದ್ಯೋಗಿಗಳಿಂದ ನಾಟಕಗಳು, ಶ್ರಮದಾನ, ಗ್ರಾಹಕರ ಕಾರ್ಯಕ್ರಮ, ಗೋಕಾಕ್ ಚಳವಳಿ, ದಲಿತ ಸಂಘರ್ಷ ಸಮಿತಿಯ ಜೊತೆ ಗುರುತಿಸಿಕೊಂಡಿದ್ದು,. ಸಿನಿಮಾ ಚಟುವಟಿಕೆಗಳು ಆರಂಭವಾದ ನಂತರ ಬ್ಯಾಂಕಿನ ಉದ್ಯೋಗದಿಂದ ಸ್ವಯಂ ನಿವೃತ್ತಿ ಪಡೆದಿದ್ದು, ವ್ಯಾಪಾರ- ವಹಿವಾಟು, ಮಕ್ಕಳ ಮದುವೆ, ಮೈಸೂರಿನಲ್ಲಿ ಇತ್ತೀಚಿನ ಚಟುವಟಿಕೆಗಳನ್ನು ಕೂಡ ಇಲ್ಲಿ ದಾಖಲಿಸಿದ್ದಾರೆ.

ಕೃಷ್ಣ ಜನಮನ ಅವರ ಮುನ್ನುಡಿ, ಪ್ರೊ.ಕಾಳೇಗೌಡ ನಾಗವಾರ ಅವರ ಬೆನ್ನುಡಿ ಇದೆ. ಇದಲ್ಲದೇ ಈ ಕೃತಿ ಕುರಿತು ಎಂ.ಎಸ್. ಪರಶಿವಮೂರ್ತಿ, ಹೊರೆಯಾಲ ದೊರೆಸ್ವಾಮಿ, ಎಸ್. ಚಿಕ್ಕಸಾವಕ, ನಾ. ದಿವಾಕರ ಅವರ ಅನಿಸಿಕೆಗಳು ಕೂಡ ಇವೆ.

ಸಂಸ್ಕೃತಿ ಬುಕ್ ಏಜೆನ್ಸೀಸ್ ಈ ಕೃತಿಯನ್ನು ಪ್ರಕಟಿಸಿದ್ದು, ಆಸಕ್ತರು ಮೊ.94480 37762 ಅಥವಾ ಬಿ.ಎಂ. ಮಹದೇವ್ ಮೂರ್ತಿ, ಮೊ. 80952 03458 ಸಂಪರ್ಕಿಸಬಹುದು.

ಬಾಳತೇರು- ಕವನ ಸಂಕಲನ:

ಬಿ.ಎಂ.ಮಹದೇವ್ ಮೂರ್ತಿ ಅವರ ‘ಬಾಳತೇರು’ ಕವನ ಸಂಕಲನವನ್ನು ಸಂಸ್ಕೃತಿ ಬುಕ್ ಪ್ಯಾರಡೈಸ್ ಪ್ರಕಟಿಸಿದೆ. ಇಲ್ಲಿ 50 ಕವನ, ಹನಿಗವನ, ಚುಟುಕುಗಳಿವೆ. ಬಹುತೇಕ ತಮ್ಮ ಅನುಭವಗಳಿಗೆ ಅವರು ಅಕ್ಷರ ರೂಪ ನೀಡಿದ್ದಾರೆ. ಇದಕ್ಕೆ ಮಗನ ಜನನ, ಮಗಳ ಮರಣ, ಮೊಮ್ಮಗಳ ಜನನ- ಹೀಗೆ ಎಲ್ಲವೂ ಕವನಗಳಾಗಿರುವುದನ್ನು ನಿದರ್ಶನವಾಗಿ ನೀಡಬಹುದು. ಜೊತೆಗೆ ಸುತ್ತಮುತ್ತಲಿನ ಸಮಾಜ, ಅದರೊಳಗಿನ ದುಷ್ಟ ಸಂಸ್ಕೃತಿ, ಮನುಜ ಸಂಬಂಧಗಳು, ನಾಗರಿಕರಾಗಿ ನಮ್ಮನ್ನು ಸದಾ ಕಾಡುವ ರಾಜಕಾರಣ ಕೂಡ ಕವನಕ್ಕೆ ವಸ್ತುಗಳಾಗಿವೆ. ಇಲ್ಲಿ ಕವಿ ಭಾವನಾತ್ಮಕವಾಗಿ ಕೆಲವು ಕವನಗಳನ್ನು ರಚಿಸಿದ್ದಾರೆ. ಒಂದಷ್ಟರಲ್ಲಿ ಸಾತ್ವಿಕ ಸಿಟ್ಟನ್ನು ಕೂಡ ಹೊರಹಾಕಿದ್ದಾರೆ.

ಅಸಾದುಲ್ಲಾ ಬೇಗ್ ಅವರ ಮುನ್ನುಡಿ, ನಾ. ದಿವಾಕರ ಅವರ ಬೆನ್ನುಡಿ ಇದೆ.