ಸಾರಾಂಶ
ಸಂಪರ್ಕ ಸಾಧನಗಳು ಹೆಚ್ಚಾದಂತೆ ಜನ ಸಂಪರ್ಕ ಕಡಿಮೆಯಾಗುತ್ತಿದೆ. ಇಂಥಾ ದುರಿತ ಕಾಲದಲ್ಲಿ ಜನಮಾನಸದ ಚಿತ್ತ ಎತ್ತ ಸಾಗುತ್ತಿದೆ ಎಂಬ ಬಗ್ಗೆ ಲೇಖಕರಿಲ್ಲಿ ಆತ್ಮಾವಲೋಕನ ಮಾಡಿಕೊಂಡಿದ್ದಾರೆ.
- ವಿಕ್ರಮ್ ಹತ್ವಾರ್
ನಾವು ಸಣ್ಣವರಿರುವಾಗ, ನಮ್ಮ ತಂದೆ ಪ್ರತಿ ಶುಕ್ರವಾರ ರಾತ್ರಿ ಸೆಕೆಂಡ್ ಶೋ ಸಿನಿಮಾಗೆ ಕರೆದುಕೊಂಡು ಹೋಗುತ್ತಿದ್ದರು. ಶಿವಾಜಿ ನಗರದಲ್ಲಿದ್ದ ನಮ್ಮ ಕಾಫಿ ಬಾರ್ಸಂ ಬಾಗಿಲು ಮುಚ್ಚುವುದು ರಾತ್ರಿ ಒಂಬತ್ತಾಗುತ್ತಿತ್ತು. ಅದಾದ ಮೇಲೆ ಮನೆಯಲ್ಲೇ ಊಟ ಮುಗಿಸಿ, ಮನೆಯವರೆಲ್ಲ ಸ್ಕೂಟರಿನಲ್ಲಿ ಸಿನಿಮಾಗೆ ಹೊರಡುತ್ತಿದ್ದೆವು. ಅಲಸೂರಿನ ಮಾರುತಿ ಥಿಯೇಟರ್ ಅಥವಾ ಆದರ್ಶ ಥಿಯೇಟರಿನಲ್ಲಿ ಆ ವಾರ ಬಿಡುಗಡೆಯಾದ ಕನ್ನಡ ಚಿತ್ರ ನೋಡುತ್ತಿದ್ದೆವು. ತೊಂಬತ್ತರ ದಶಕದಲ್ಲಿ ಬಿಡುಗಡೆಯಾದ ಕನ್ನಡದ ಎಲ್ಲಾ ಕೆಟ್ಟ ಒಳ್ಳೆಯ ಸಿನಿಮಾಗಳನ್ನು ನಾವು ಥಿಯೇಟರಿನಲ್ಲಿ ನೋಡಿದ್ದೇವೆ. ಮಧ್ಯರಾತ್ರಿ ಮನೆಗೆ ಬಂದು ಮಲಗಿದ ಮೇಲೆ ನಮ್ಮ ನಮ್ಮಲ್ಲೇ ಆ ಸಿನಿಮಾದ ವಿಮರ್ಶೆ ನಡೆಯುತ್ತಿತ್ತು. ಮಾರನೆಯ ದಿವಸ ಶಾಲೆಯಲ್ಲಿ ಸ್ನೇಹಿತರ ಮುಂದೆ ನಾನು ಆ ಸಿನಿಮಾದ ಕತೆ ಮತ್ತು ವಿಮರ್ಶೆಯನ್ನು ಬೆರೆಸಿ ಹೇಳುತ್ತಿದ್ದೆ. ಇದಲ್ಲದೆ ಭಾನುವಾರದಂದು ನಾಗ, ಅಜಂತಾ, ಲಕ್ಷ್ಮಿ, ಲಾವಣ್ಯ ಥಿಯೇಟರಿನಲ್ಲಿ ಹಿಂದಿ, ತಮಿಳು, ತೆಲುಗು ಸಿನಿಮಾಗಳನ್ನು ಆಗಾಗ್ಗೆ ನೋಡುತ್ತಿದ್ದೆವು. ಹೀಗೆ ನನ್ನ ಬಾಲ್ಯದ ಸುಮಾರು ನಾಲ್ಕಾರು ವರ್ಷ ಕಾಲ ಸಿನಿಮಾ ಎನ್ನುವುದು ನಮ್ಮ ಬದುಕಿನ ವ್ರತದಂತೆ ಅವಿಭಾಜ್ಯ ಆಚರಣೆ ಎಂಬಂತೆ ಇತ್ತು.
ಸಿನಿಮಾ ಬಿಟ್ಟರೆ ವರ್ಷಕ್ಕೊಮ್ಮೆ ಬೇಸಿಗೆಯಲ್ಲಿ ಆರ್.ಬಿ.ಎ.ಎನ್.ಎಂ.ಎಸ್ ಶಾಲೆ ಎದುರಿನ ಮೈದಾನದಲ್ಲಿ ಎಕ್ಸಿಬಿಶನ್ ಇರುತ್ತಿತ್ತು. ಹೆಗ್ಗಾತ್ರದ ಹಪ್ಪಳ, ಮಿರ್ಚಿ ಬಜ್ಜಿ ತಿನ್ನುತ್ತಿದ್ದೆವು. ಊಟವೇನಿದ್ದರೂ ಮನೆಯಲ್ಲೇ. ವರ್ಷಕ್ಕೊಂದೆರಡು ಬಾರಿ ಮಾತ್ರ ಹೊರಗೆ ಹೋಟೆಲಲ್ಲಿ ಊಟ. ವರ್ಷಕ್ಕೊಮ್ಮೆ ಊರಿಗೆ ಹೋದರೆ ಎರಡು ತಿಂಗಳು ನಮ್ಮ ಪ್ರಪಂಚವೇ ಬದಲಾಗುತ್ತಿತ್ತು. ಯಕ್ಷಗಾನ, ಸಮುದ್ರ, ಭಜನೆ, ಇಸ್ಪೀಟು, ಗದ್ದೆಯಲ್ಲಿನ ಆಟ, ದಿನಕ್ಕೊಂದು ಮನೆಯಲ್ಲಿ ಸಮಾರಾಧನೆ ಊಟ, ದೇವಸ್ಥಾನಗಳ ಸುತ್ತಾಟ - ಹೀಗೆ ಕಾಲ ಸರಿಯುತ್ತಿತ್ತು. ಊರಿನಲ್ಲಿರಲಿ ಅಥವ ಬೆಂಗಳೂರಿನಲ್ಲಿರಲಿ- ಟಿ.ವಿ ಎನ್ನುವುದು ಶುಕ್ರವಾರ ಭಾನುವಾರ ಮಾತ್ರ ನೋಡಬಹುದಾದ ವಸ್ತು. ಶುಕ್ರವಾರದ ಚಿತ್ರಮಂಜರಿ, ಭಾನುವಾರ ಬೆಳಗ್ಗೆ ರಾಮಾಯಣ ಮಹಾಭಾರತ, ಸಂಜೆಗೆ ಕನ್ನಡ ಸಿನಿಮಾ. ಮಿಕ್ಕ ಸಮಯದಲ್ಲಿ ಟಿ.ವಿ ಎಂಬುದು ಮಹಾ ಬೋರಿಂಗ್ ವಸ್ತು. ಅದಕ್ಕಿಂತ ಹೆಚ್ಚಾಗಿ ಶಿವಾಜಿನಗರದ ಗಲ್ಲಿಗಳಲ್ಲಿ ಜರಗುತ್ತಿದ್ದ ಜಗಳಗಳು ಮಜವಾಗಿರುತ್ತಿದ್ದವು. ಜನರೆಲ್ಲ ಸುತ್ತುವರಿದು ಇಂಥ ‘ಸೆಂಡೆ’ಗಳನ್ನು (ಜಗಳಕ್ಕೆ ತಮಿಳಿನಲ್ಲಿ ಸೆಂಡೆ ಎನ್ನುತ್ತಾರೆ) ನೋಡುತ್ತ ನಿಂತುಬಿಡುತ್ತಿದ್ದರು.
ಮೊದಲ ಸಲ ದೂರದರ್ಶನದಲ್ಲಿ ಮಾಯಾಮೃಗ, ಮನೆತನ, ಜನನಿ ಧಾರಾವಾಹಿಗಳು ಬರುವುದಕ್ಕೆ ಶುರುವಾದ ಮೇಲೆ, ಮನರಂಜನೆ ಎಂಬುದು ಮನೆಯೊಳಗೇ ದೊರೆಯಬಹುದಾದ ನಿತ್ಯದ ವಸ್ತುವಾಯಿತು. ಈ ಧಾರಾವಾಹಿಗಳು ಕಿರುತೆರೆಯ ಜಾಯಮಾನವನ್ನೇ ಪಲ್ಲಟಗೊಳಿಸಿದವು. ಆ ಕಾಲಕ್ಕೂ ಇದ್ದದ್ದು ಕೆಲವೇ ಕೆಲವು ಚಾನೆಲ್‌ಗಳು - ಉದಯ ಟಿ.ವಿ, ಸನ್ ಟಿ.ವಿ, ಝೀ ಟಿ.ವಿ, ಸ್ಟಾರ್ ಸ್ಪೋರ್ಟ್ಸ್ ಮತ್ತು ಸ್ಟಾರ್ ಟಿ.ವಿ. ಆ ನಂತರದಲ್ಲಿ ಲೆಕ್ಕವಿಲ್ಲದಷ್ಟು ಚಾನೆಲ್, ಡೈಲಿ ಸೀರಿಯಲ್‌ಗಳು ಬಂದವು.
ನಾವು ವಾರ್ತೆಗಳಿಗೆ ಅಬ್ಬಬ್ಬಾ ಎಂದರೆ ದಿನಕ್ಕೆ ಅರ್ಧ ಗಂಟೆ ಕಾಲ ನೀಡುತ್ತಿದ್ದೆವು. ನಂತರ ಹುಟ್ಟಿಕೊಂಡ ಸುದ್ದಿ ಮಾಧ್ಯಮಗಳು ನಮ್ಮ ಇಡಿಯ ದಿನವನ್ನೇ ಕಬಳಿಸಲು ಶುರು ಮಾಡಿದವು. ಬೀದಿಯ ಜಗಳ, ಸಂಸಾರದ ಸಮಸ್ಯೆಗಳೆಲ್ಲ ಸುದ್ದಿಯಾದವು. ಜಗತ್ತಿನ ಎಲ್ಲ ಬಗೆಯ ರಂಜಕ ಸಂಗತಿಗಳು ನ್ಯೂಸ್ ಒಳಗೆ ಬಂತು. ನ್ಯೂಸ್ ಎನ್ನುವುದೇ ಮನರಂಜನೆ ಆಯಿತು. ಎಲ್ಲವನ್ನೂ ಮನೆಯಲ್ಲೇ ಕುಳಿತು ಅನುಭವಿಸುವಂತಾಯಿತು.
ಧಾರಾವಾಹಿ ಯುಗದಿಂದ ರಿಯಾಲಿಟಿ ಶೋ ಯುಗ ದಾಟಿ ಓಟಿಟಿ ಕಾಲಕ್ಕೆ ಬರುವಷ್ಟರಲ್ಲಿ ಮನರಂಜನೆ ನಮ್ಮ ಅಂಗೈಯೊಳಗಿನ ವಸ್ತುವಾಯಿತು. ಈಗ ನಾವು ಹೋದಲ್ಲೆಲ್ಲ ಮನರಂಜನೆ ನಮ್ಮನ್ನು ಹಿಂಬಾಲಿಸಿಕೊಂಡು ಬರುತ್ತಿದೆ. ರಾಜಕೀಯ, ಸಿನಿಮಾ, ಕಾಮ, ಅಧ್ಯಾತ್ಮ, ಕಾವ್ಯ, ವಿಮರ್ಶೆ, ಹೊಡೆದಾಟ ಎಲ್ಲವೂ ಈಗ ಅಗ್ಗದ ರೀಲ್ಸ್‌ಗಳಲ್ಲೇ ಸಿಗುತ್ತಿದೆ. ಸುದ್ದಿ ಸರಕುಗಳು ರಾಶಿ ರಾಶಿ ಗುಪ್ಪೆಯಾಗುತ್ತಿದೆ. ಎಷ್ಟು ಸ್ಕ್ರೋಲ್ ಮಾಡಿದರೂ ಮುಗಿಯದ ಅಕ್ಷಯ ಪರದೆ ನಮ್ಮ ಕೈಯೊಳಗೇ ಇರುವಾಗ, ಬೇಕಾದ್ದನ್ನು ನೋಡುವ ಬೇಡವೆನ್ನಿಸಿದ್ದನ್ನು ತಳ್ಳಿ ಹಾಕುವ ಆಯ್ಕೆಯೂ ಇರುವಾಗ, ರಾತ್ರಿ ಇಡೀ ನಿದ್ದೆಗೆಟ್ಟು ಯಕ್ಷಗಾನ ಯಾಕೆ ನೋಡಬೇಕು?
ಸಿನಿಮಾಗಾಗಿ ಮೂರು ಗಂಟೆ ಸಮಯ ವ್ಯಯ ಮಾಡುವ ರಿಸ್ಕ್ ಯಾಕೆ ತೆಗೆದುಕೊಳ್ಳಬೇಕು? ‘ಟೈಮ್ ಈಸ್ ಮನಿ’ ಅಂತ ನಂಬಿರುವ ಈ ಕಾಲದಲ್ಲಿ, ಒಂದು ಸಿನಿಮಾಗಾಗಿ ಮನೆ ಮಂದಿಯೆಲ್ಲ ಜೊತೆಗೂಡಿ, ಟ್ರಾಫಿಕ್ ದಾಟಿ ಥಿಯೇಟರ್ ತಲುಪಿ, ಗಾಡಿ ಪಾರ್ಕ್ ಮಾಡಿ, ತುಂಬಿರುವ ಲಿಫ್ಟಿನಲ್ಲಿ ಜಾಗ ಸಿಗದೆ, ದುಬಾರಿ ತಿನಿಸು ಖರೀದಿಸಿ, ಎರಡೂವರೆಯಿಂದ ಮೂರು ಗಂಟೆ ಕೂರಬೇಕು. ಕುಳಿತ ಮೇಲೆ ಪರದೆ ಮೇಲೆ ಏನು ಬಂದರೂ ಸಹಿಸಿಕೊಳ್ಳಬೇಕು. ಇದೇ ದೊಡ್ಡ ಹಿಂಸೆ ಅಂತ ನನ್ನ ಅನೇಕ ಸ್ನೇಹಿತರು ಹೇಳಿದ್ದನ್ನು ಕೇಳಿದ್ದೇನೆ. ಪುಸ್ತಕ ಬಿಡುಗಡೆ ಸಮಾರಂಭದ ಮಾತುಗಳನ್ನು ನಮಗೆ ಬೇಕಾದಾಗ ಯೂಟ್ಯೂಬಿನಲ್ಲಿ ಕೇಳುವ ಅವಕಾಶವಿರುವಾಗ, ಒಂದು ಭಾನುವಾರದ ಅರ್ಧ ದಿನವನ್ನು ಅನ್ಯಾಯವಾಗಿ ಯಾಕೆ ಹಾಳು ಮಾಡಬೇಕು? ಅಂತ ಸಾಹಿತಿ ಮಿತ್ರರು ಹೇಳುವುದನ್ನೂ ಕೇಳಿದ್ದೇನೆ.
ನಮ್ಮಲ್ಲಿ ಸಂಪರ್ಕ ಸಾಧನ ಹೆಚ್ಚಾದಂತೆ ಜನ ಸಂಪರ್ಕ ಕಡಿಮೆಯಾಗುತ್ತ ಬಂತು. ಸಾಮಾಜಿಕ ಜಾಲತಾಣದಲ್ಲಿ ಸಾವಿರಾರು ಸ್ನೇಹಿತರು ಹಿಂಬಾಲಕರು ಅಭಿಮಾನಿಗಳು. ನಾವು ಹೇಳಿದ್ದು ಎಲ್ಲರನ್ನೂ ತಲುಪುತ್ತಿದೆ ಎಲ್ಲರ ಮೇಲೂ ಪ್ರಭಾವ ಬೀರುತ್ತಿದೆ ಎನ್ನುವ ಸ್ವಾನುರಕ್ತಿ. ನೆಟ್‌ವರ್ಕ್ ಬೆಳೆಯಿತೇ ಹೊರತು ಮನುಷ್ಯರ ನಡುವಿನ ನಂಟು ಬೆಳೆಯಲಿಲ್ಲ. ಅಂತರಂಗಗಳು ಬೆಸೆಯಲಿಲ್ಲ. ಅಂತಃಕರಣದ ಸೆಳೆತವಿಲ್ಲದೆ, ಶುಷ್ಕ ಸ್ವಾರ್ಥ ವರ್ಚುಯಲ್ ಗುಂಪುಗಳು ಹೆಚ್ಚಾದವು. ಮನುಷ್ಯರೊಂದಿಗೆ ಸೇರಿ ಮಾತನಾಡುವ ನಗುವ ಹರಟುವ ಅಭ್ಯಾಸವೇ ತಪ್ಪಿ ಹೋಗಿ, ಮನುಷ್ಯರನ್ನು ಭೇಟಿಯಾಗುವುದಕ್ಕೇ ಹಿಂಜರಿಯುವ ಪರಿಸ್ಥಿತಿ ಬಂತು. ಈ ವರ್ಚುಯಲ್ ಜಗತ್ತು ಮತ್ತು ತುಣುಕು ರಂಜನೆಯ ರೀಲ್ಸ್ ಅನುಭವ ಒಂದು ಕಡೆಯಾದರೆ, ಇಂದು ಅಗತ್ಯಕ್ಕಿಂತ ಹೆಚ್ಚಿನ ಆಯ್ಕೆ ಎಲ್ಲದರಲ್ಲೂ ಸಿಗುತ್ತಿದೆ. ರಸ್ತೆ ಬದಿಯ ದೋಸೆ ಬಂಡಿಯ ಎದುರು ನಿಂತರೂ, ನೂರು ವೆರೈಟಿ ದೋಸೆಯ ಲಿಸ್ಟ್ ನೋಡುತ್ತ ಯಾವುದನ್ನು ಆರ್ಡರ್ ಮಾಡಬೇಕು ಅನ್ನುವುದು ತೋಚದ ಸ್ಥಿತಿ. ಮನೆಯ ಗೋಡೆಗೆ ಯಾವ ಬಣ್ಣವಿರಲೆಂದು ಕೆಟಲಾಗ್ ತೆರೆದರೆ, ಒಂದೇ ಬಣ್ಣದ ನೂರಾರು ಶೇಡ್. ಪಾಲಕ್ ಪನ್ನೀರ್ ಮಾಡೋಣವೆಂದು ಅಂತರ್ಜಾಲ ಹುಡುಕಿದರೆ ನೂರಾರು ಬಗೆಯ ರೆಸಿಪಿ. ಓಟಿಟಿ ತೆರೆದರೆ ಎಷ್ಟೊಂದು ಸೀರೀಸ್‌ಗಳು, ಸಿನಿಮಾಗಳು! ಆಯ್ಕೆಗಳು ಇರಬೇಕು ಎನ್ನುವ ಸಾಮಾಜಿಕ ನಿಲುವು ಸರಿಯೇ. ಆದರೆ, ಆಯ್ಕೆಗಳು ಹೀಗೆ ಹುಚ್ಚಾಪಟ್ಟೆ ಹೆಚ್ಚಾದಂತೆ ಸಾಮೂಹಿಕ ಅನುಭವ ಕಡಿಮೆಯಾಗುತ್ತಿರುವುದೂ ನಿಜವೇ. ಇವು ನಮ್ಮ ಗೊಂದಲವನ್ನು ಹೆಚ್ಚಿಸುತ್ತವೆ. ನುರಿತ ಮನಸ್ಸುಗಳಿಗೆ ಮಾತ್ರ ಸಾವಿರಾರು ಆಯ್ಕೆಗಳ ಮಧ್ಯೆ ಸರಿಯಾದುದನ್ನು ತಕ್ಕುದಾದುದನ್ನು ಗುರುತಿಸುವ ಸಾಮರ್ಥ್ಯವಿರುತ್ತೆ.
ಹಾಗೆಂದ ಮಾತ್ರಕ್ಕೆ ಜನರು ಹೊರಗೆ ಹೋಗುತ್ತಲೇ ಇಲ್ಲ ಅಂತಲ್ಲ. ಯಾವುದೇ ರೆಸಾರ್ಟ್ ಹೋಮ್ ಸ್ಟೇಗಳಲ್ಲಿ ಶನಿವಾರ ಭಾನುವಾರ ರೂಮು ಸಿಗುವುದಿಲ್ಲ. ಬೆಂಗಳೂರಿನ ಹೋಟೆಲ್ ಪಬ್‌ಗಳಲ್ಲಿ ಟೇಬಲ್ ಸಿಗುವುದಿಲ್ಲ. ಊಟಕ್ಕಾಗಿ ಅರ್ಧ ಮುಕ್ಕಾಲು ಗಂಟೆ ಸಾಲಿನಲ್ಲಿ ಕಾಯಬೇಕಾದ ಪರಿಸ್ಥಿತಿ. ಊಟಕ್ಕೆ ಹೊರಗೆ ಹೋಗಿ ಬರುವುದೇ ಒಂದು ಸಣ್ಣ ಟ್ರಿಪ್ಪಿಗೆ ಹೋಗಿ ಬಂದಂತೆ. ಉಳಿದಂತೆ ನಾಡಿನ ಎಲ್ಲ ಪ್ರವಾಸೀ ತಾಣಗಳಲ್ಲು ಟ್ರಾಫಿಕ್ ಜಾಮ್ ಸಾಮಾನ್ಯವಾಗಿ ಹೋಗಿದೆ.
ಕ್ಷಣಿಕತೆಯಲ್ಲಿ ಮುಳುಗಿರುವವರಿಗೆ ಧಾರಣಾ ಶಕ್ತಿಯೇ ಇಲ್ಲ. ಈಗ ಏನಿದ್ದರೂ ಎರಡರಿಂದ ಮೂರು ನಿಮಿಷಗಳ ತುಣುಕು ವೀಡಿಯೋಗಳು ಮಾತ್ರ ಚಲಾವಣೆಯಾಗುತ್ತೆ ಎನ್ನುವ ಥಿಯರಿಯೂ ತಪ್ಪು. ಅದು ಯೂಟ್ಯೂಬ್ ಚಾನೆಲ್ ದಂಧೆಯ ಒಂದು ಸ್ಟ್ರಾಟೆರ್ಜಿ. ಗಮನಿಸಿ, ಒಂದು ಟಿ.ವಿ ಸೀರೀಸ್ ಹಿಡಿದು ಕುಳಿತರೆ, ಏಳೆಂಟು ಎಪಿಸೋಡು ಮುಗಿಯುವವರೆಗೂ ಸತತವಾಗಿ ಆರು ತಾಸು ಬೇಕಾದರೂ ನಮ್ಮ ಜನರು ಕೂರುತ್ತಾರೆ. *ಒಟ್ಟಿನಲ್ಲಿ ವಾರಾಂತ್ಯಗಳಲ್ಲಿ ಜನರಿಗೆಲ್ಲ ಹುಚ್ಚು ಕೆದರಿ ಬಂದಂತೆ ಎಲ್ಲೆಲ್ಲೂ ಅಲೆದಾಡುತ್ತಿದ್ದಾರೆ. ಎಲ್ ನೋಡಿದ್ರೂ ಜನ...ಏನ್ ಜನ ಏನ್ ಜನ - ಅಂತ ಶಾಪ ಹಾಕುತ್ತಿದ್ದಾರೆ! ಈ ಎಲ್ಲ ವಿಪರೀತ ಸಂಗತಿಗಳೇ ನಮ್ಮ ಇಂದಿನ ಸಾಮೂಹಿಕ ಅನುಭೂತಿಗೆ ಸವಾಲು. ಹೀಗೆ ಛಿದ್ರಗೊಂಡಿರುವ ಚದುರಿ ಹೋಗಿರುವ ಜನ ಮಾನಸವನ್ನು ಸೆಳೆಯುವುದಕ್ಕೆ ಯಾವ ಬಗೆಯ ಮಾಂತ್ರಿಕ ಶಕ್ತಿ ಬೇಕು? ಇಂಥ ಚದುರಿದ ತುಣುಕು ಅನುಭವಗಳನ್ನು ಮೀರಿದ, ಯಾವುದೋ ಒಂದು ಹಿರಿದಾದ ಅನುಭವವನ್ನು ನೀಡುವಂತಿದ್ದರೆ ಮಾತ್ರ ಬಹುಶಃ ಜನರು ಕಲೆ, ಸಾಹಿತ್ಯ, ಸಿನಿಮಾದತ್ತ ತಿರುಗುತ್ತಾರೆ. ಅವು ಮಾಡಬೇಕಾದ್ದು ಅದನ್ನೇ. ಅಂಥ ಅನುಭವ ನೀಡಬಲ್ಲ ಸಂಗತಿ ಯಾವುದೆನ್ನುವುದನ್ನು ಎಲ್ಲರೂ ಸತತವಾಗಿ ಹುಡುಕುತ್ತಲೇ ಇದ್ದಾರೆ.
ಸಾಹಿತ್ಯ, ಸಿನಿಮಾ, ಕಾವ್ಯ, ಕಲೆ ಎನ್ನುವುದು ಇಂದು ನೂರರು ಸಂಗತಿಗಳ ನಡುವಿನ ಆಯ್ಕೆಯ ವಿಚಾರವಾಗಿದೆ; ಅನಿವಾರ್ಯವಾಗಿಲ್ಲ. ಹಾಗಾಗಿ, ಹಿಂದೆಂದಿಗಿಂತಲೂ ಇಂದು ಈ ಎಚ್ಚರ ಮುಖ್ಯ. ಇಂದಿನ ಈ ಶತಮಾನದ ಅತ್ಯಂತ ಪ್ರಮುಖ ಸಂಗತಿ ಅನ್ನಿಸಿದ್ದು ಎರಡೇ ದಿನದಲ್ಲಿ ಇನ್ನೊಂದು ರೋಚಕ ಸಂಗತಿ ಬರುತ್ತಿದ್ದಂತೆ ತನ್ನ ಮಹತ್ವ ಕಳೆದುಕೊಂಡು ಸೊರಗುತ್ತಿರುವ ಕ್ಷಣಿಕತೆಯನ್ನು ನಿತ್ಯವೂ ನೋಡುತ್ತಿರುವಾಗ, ತನ್ನ ಧಾರಣಾ ಶಕ್ತಿಯನ್ನು ಉಜ್ಜೀವಿಸಬಲ್ಲ ಯಾವುದೋ ಮಾಂತ್ರಿಕತೆಗಾಗಿ ಜನಮಾನಸ ಕಾಯುತ್ತಿರುತ್ತದೆ. ಮನರಂಜನೆ ಮಾತ್ರವಲ್ಲ; ಚಳುವಳಿಗಳ ಬಗೆಗೂ ಈ ಮಾತು ನಿಜ.