ರಾಜ್ಯಾದ್ಯಂತ 393 ಆಶಾಕಿರಣ ದೃಷ್ಟಿ ಕೇಂದ್ರ: ನಾಳೆ ಏಕಕಾಲಕ್ಕೆ ಲೋಕಾರ್ಪಣೆ

| Published : Jul 02 2025, 01:47 AM IST

ಸಾರಾಂಶ

ಅಂಧತ್ವ ನಿವಾರಣೆಗಾಗಿ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ರಾಜ್ಯಾದ್ಯಂತ 393 ಆಶಾಕಿರಣ ದೃಷ್ಟಿ ಕೇಂದ್ರಗಳನ್ನು (ವಿಷನ್ ಸೆಂಟರ್) ಸ್ಥಾಪಿಸಲಾಗಿದ್ದು, ಜು.3 ರಂದು ಏಕಕಾಲಕ್ಕೆ ಈ ಎಲ್ಲಾ ಕೇಂದ್ರಗಳು ಲೋಪಾರ್ಪಣೆಗೊಳ್ಳಲಿವೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಅಂಧತ್ವ ನಿವಾರಣೆಗಾಗಿ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ರಾಜ್ಯಾದ್ಯಂತ 393 ಆಶಾಕಿರಣ ದೃಷ್ಟಿ ಕೇಂದ್ರಗಳನ್ನು (ವಿಷನ್ ಸೆಂಟರ್) ಸ್ಥಾಪಿಸಲಾಗಿದ್ದು, ಜು.3 ರಂದು ಏಕಕಾಲಕ್ಕೆ ಈ ಎಲ್ಲಾ ಕೇಂದ್ರಗಳು ಲೋಪಾರ್ಪಣೆಗೊಳ್ಳಲಿವೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.

ನಗರದ ಆರೋಗ್ಯಸೌಧದಲ್ಲಿ ಮಂಗಳವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ನಗರದ ಎಂ.ಸಿ.ಲೇಔಟ್‌ನ ಕೇಂದ್ರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಈ ದೃಷ್ಟಿ ಕೇಂದ್ರಗಳನ್ನು ಉದ್ಘಾಟಿಸಲಿದ್ದಾರೆ ಎಂದು ಹೇಳಿದರು.

ರಾಜ್ಯದಲ್ಲಿ 2022ರಲ್ಲಿ ಆರಂಭವಾದ ಆಶಾಕಿರಣ ಕಾರ್ಯಕ್ರಮವನ್ನು ಮೊದಲ ಎರಡು ಹಂತಗಳಲ್ಲಿ 8 ಜಿಲ್ಲೆಗಳಲ್ಲಿ ಜಾರಿಗೊಳಿಸಲಾಗಿತ್ತು. ಮೊದಲಿಗೆ ಮನೆಮನೆ ಪ್ರಚಾರ ನಡೆಸಿ ಕಣ್ಣಿನ ತಪಾಸಣೆ ಮಾಡಿ, ಅಗತ್ಯ ಇರುವವರಿಗೆ ಉಚಿತ ಕನ್ನಡ ವಿತರಣೆ, ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ಒದಗಿಸಲಾಯಿತು.

ಈ ಎರಡು ಹಂತದಲ್ಲಿ ಕೋಟ್ಯಂತರ ಜನರ ತಪಾಸಣೆ ಬಳಿಕ 4.3 ಲಕ್ಷ ಜನರಿಗೆ ಉಚಿತ ಕನ್ನಡಕ ವಿತರಣೆ, 1.05 ಲಕ್ಷ ಜನರಿಗೆ ಉಚಿತ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ. ಈಗ ಮೂರನೇ ಹಂತದಲ್ಲಿ ಯೋಜನೆಯನ್ನು ಮರು ವಿನ್ಯಾಸಗೊಳಿಸಿ, ಎಲ್ಲಾ ಜಿಲ್ಲಾ ಮತ್ತು ತಾಲುಕು ಆಸ್ಪತ್ರೆಗಳು, ಸಮುದಾಯ ಆರೋಗ್ಯ ಕೇಂದ್ರಗಳು ಹಾಗೂ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ ಶಾಶ್ವತ ದೃಷ್ಟಿಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ.

ಇದರಿಂದ ಸಾರ್ವಜನಿಕರು ಹತ್ತಿರ ಕೇಂದ್ರಗಳಿಗೆ ಸ್ವತಃ ತೆರಳಿ ತಪಾಸಣೆ ಮಾಡಿಸಿಕೊಂಡು ಉಚಿತ ಕನ್ನಡಕ, ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸಾ ಸೌಲಭ್ಯಗಳನ್ನ ಪಡೆಯಬಹುದು ಎಂದು ವಿವರಿಸಿದರು.