ಹಲವು ವರ್ಷದಿಂದ ಜಾತಕ ಪಕ್ಷಿಯಂತೆ ಕಾಯುತ್ತಿದ್ದ ಬಿಬಿಎಂಪಿಯ 4000 ಪೌರಕಾರ್ಮಿಕರು ಮೇ 1ರಿಂದ ಕಾಯಂ

| N/A | Published : Apr 14 2025, 02:00 AM IST / Updated: Apr 14 2025, 05:37 AM IST

ಹಲವು ವರ್ಷದಿಂದ ಜಾತಕ ಪಕ್ಷಿಯಂತೆ ಕಾಯುತ್ತಿದ್ದ ಬಿಬಿಎಂಪಿಯ 4000 ಪೌರಕಾರ್ಮಿಕರು ಮೇ 1ರಿಂದ ಕಾಯಂ
Share this Article
  • FB
  • TW
  • Linkdin
  • Email

ಸಾರಾಂಶ

ಹಲವು ವರ್ಷದಿಂದ ಕಾಯಂ ನೇಮಕಾತಿಗಾಗಿ ಜಾತಕ ಪಕ್ಷಿಯಂತೆ ಕಾಯುತ್ತಿದ್ದ ಗುತ್ತಿಗೆ ಪೌರಕಾರ್ಮಿಕರಿಗೆ ಇದೇ ಮೇ 1ರ ಕಾರ್ಮಿಕ ದಿನಾಚರಣೆಯಂದು ನೇಮಕಾತಿ ಪತ್ರವನ್ನು ವಿತರಣೆ ಮಾಡಲು ಬಿಬಿಎಂಪಿ ಸಿದ್ದತೆ ಮಾಡಿಕೊಳ್ಳುತ್ತಿದೆ.

 ಬೆಂಗಳೂರು : ಹಲವು ವರ್ಷದಿಂದ ಕಾಯಂ ನೇಮಕಾತಿಗಾಗಿ ಜಾತಕ ಪಕ್ಷಿಯಂತೆ ಕಾಯುತ್ತಿದ್ದ ಗುತ್ತಿಗೆ ಪೌರಕಾರ್ಮಿಕರಿಗೆ ಇದೇ ಮೇ 1ರ ಕಾರ್ಮಿಕ ದಿನಾಚರಣೆಯಂದು ನೇಮಕಾತಿ ಪತ್ರವನ್ನು ವಿತರಣೆ ಮಾಡಲು ಬಿಬಿಎಂಪಿ ಸಿದ್ದತೆ ಮಾಡಿಕೊಳ್ಳುತ್ತಿದೆ.

ಬಿಬಿಎಂಪಿಯಲ್ಲಿ ಗುತ್ತಿಗೆ ಹಾಗೂ ನೇರ ಪಾವತಿಯಡಿ ಕಾರ್ಯ ನಿರ್ವಹಿಸುತ್ತಿದ್ದು, ಪೌರ ಕಾರ್ಮಿಕರನ್ನು ಎರಡು ಹಂತದಲ್ಲಿ ನೇಮಕ ಮಾಡಿಕೊಳ್ಳಲಾಗಿದೆ. ಒಟ್ಟು 14,980 ಪೌರಕಾರ್ಮಿಕರನ್ನು ಕಾಯಂಗೊಳಿಸಲು ಅಧಿಸೂಚನೆ ಹೊರಡಿಸಲಾಗಿತ್ತು. ಈ ಪೈಕಿ ಇದೀಗ 12,699 ಹುದ್ದೆಗಳಿಗೆ ನೇಮಕ ಮಾಡಲಾಗಿದೆ.

ಮೊದಲ ಹಂತದಲ್ಲಿ ಸುಮಾರು ನಾಲ್ಕು ಸಾವಿರ ಮಂದಿಗೆ ಮೇ 1ರ ಕಾರ್ಮಿಕ ದಿನಾಚರಣೆಯಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ನೇಮಕಾತಿ ಪತ್ರ ವಿತರಿಸಲಿದ್ದಾರೆ. ಹೊರ ವರ್ತುಲ ರಸ್ತೆಯ ಸುಮ್ಮನಹಳ್ಳಿ ಜಂಕ್ಷನ್‌ ಬಳಿಯ ಶ್ರೀ ಬಾಬು ಜಗಜೀವನರಾಮ್‌ ಭವನದಲ್ಲಿ ವಿತರಣೆ ಕಾರ್ಯಕ್ರಮದ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ.

ಸಾಂಕೇತಿಕವಾಗಿ 50 ರಿಂದ 100 ಮಂದಿಗೆ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌ ನೇರವಾಗಿ ನೇಮಕಾತಿ ಪತ್ರ ನೀಡಲಿದ್ದಾರೆ. ಉಳಿದಂತೆ ವಲಯವಾರು ಕೌಂಟರ್‌ ಸ್ಥಾಪಿಸಿ ಸಮಾರಂಭದ ದಿನದಂದೇ ವಿತರಣೆ ಮಾಡಲು ಉದ್ದೇಶಿಲಾಗಿದೆ.

6 ಸಾವಿರಕ್ಕೂ ಪರಿಶೀಲನೆ ಬಾಕಿ:

ನೇಮಕ ಮಾಡಿಕೊಂಡ 12 ಸಾವಿರಕ್ಕೂ ಅಧಿಕ ಪೌರಕಾರ್ಮಿಕರಲ್ಲಿ ಶೇ.50 ರಷ್ಟು ಸಾಮಾನ್ಯ ವರ್ಗದಲ್ಲಿ ನೇಮಕಗೊಂಡಿದ್ದಾರೆ. ಈ ಪೌರಕಾರ್ಮಿಕರಿಗೆ ಜಾತಿ ಮೀಸಲಾತಿ ಅನ್ವಯವಾಗುವುದಿಲ್ಲ. ಹಾಗಾಗಿ, ಸಿಂಧುತ್ವ ಪರಿಶೀಲನೆ ಪ್ರಶ್ನೆ ಉದ್ಬವಿಸುವುದಿಲ್ಲ. ಆದರೆ, ಪೊಲೀಸ್‌ ಪರಿಶೀಲನೆ ಅಗತ್ಯವಿದೆ. ಈಗಾಗಲೇ ಬಹುತೇಕ ಪೊಲೀಸ್‌ ಪರಿಶೀಲನೆ ಪೂರ್ಣಗೊಂಡಿದ್ದು, ಇವರಿಗೆ ನೇಮಕಾತಿ ಪತ್ರ ನೀಡಲಾಗುತ್ತಿದೆ.

ಆದರೆ, ಮೀಸಲಾತಿಯಡಿ ನೇಮಕಗೊಂಡ ಅಭ್ಯರ್ಥಿಗಳ ಸಿಂಧುತ್ವ ಪರಿಶೀಲನೆ ವಿವಿಧ ಜಿಲ್ಲಾಧಿಕಾರಿ ಕಚೇರಿಯಲ್ಲಿ ಆಗಬೇಕಿದೆ. ಹಾಗಾಗಿ, ತಡವಾಗುತ್ತಿದೆ. ಪರಿಶೀಲನೆ ಪೂರ್ಣಗೊಂಡದಂತೆ ಮೇ 1ರ ನಂತರ ಆಯಾ ವಲಯ ಮಟ್ಟದಲ್ಲಿ ವಿತರಿಸಲು ನಿರ್ಧರಿಸಲಾಗಿದೆ.

2,281 ಹುದ್ದೆ ಖಾಲಿ:

ಬಿಬಿಎಂಪಿಯು ಮೊದಲ ಹಂತದಲ್ಲಿ 3,673 ಹುದ್ದೆ, ಎರಡನೇ ಹಂತದಲ್ಲಿ 11,307 ಹುದ್ದೆ ಒಟ್ಟು 14,980 ಹುದ್ದೆ ನೇಮಕಕ್ಕೆ ಅಧಿಸೂಚನೆ ಹೊರಡಿಸಲಾಗಿತ್ತು. ಮೀಸಲಾತಿಗೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತಿರುವವರನ್ನು ನೇಮಕ ಸಾಧ್ಯವಾಗದ ಹಿನ್ನೆಲೆಯಲ್ಲಿ ಮೀಸಲಾತಿ ಪಾಲನೆಗೆ ವಿನಾಯಿತಿ ಪಡೆಯಲಾಗಿತ್ತು. ಎಲ್ಲ ಹುದ್ದೆಗಳನ್ನು ನೇಮಕ ಮಾಡಿಕೊಳ್ಳುವುದಕ್ಕೆ ಸಾಧ್ಯವಾಗಿಲ್ಲ. ಈವರೆಗೆ 12,699 ಹುದ್ದೆಗಳನ್ನು ಭರ್ತಿ ಮಾಡಲಾಗಿದೆ. ಇನ್ನೂ 2,281 ಹುದ್ದೆ ಖಾಲಿ ಇವೆ. ಈ ಹುದ್ದೆಗೆ ಗ್ರಾಮೀಣ ಅಭ್ಯರ್ಥಿ, ಅಂಗವಿಕಲ, ಮಾಜಿ ಸೈನಿಕ ಸೇರಿದಂತೆ ಮೊದಲಾದ ಮೀಸಲಾತಿಗೆ ಭರ್ತಿ ಸಾಧ್ಯವಾಗಿಲ್ಲ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವಲಯವಾರು ನೇಮಕಾತಿ ವಿವರ

ವಲಯ ನೇಮಕಾತಿ ಸಂಖ್ಯೆ

ಪಶ್ಚಿಮ2,564

ಪೂರ್ವ2,341

ದಕ್ಷಿಣ3,012

ಆರ್‌ಆರ್‌ನಗರ1,118

ಮಹದೇವಪುರ1,369

ಬೊಮ್ಮನಹಳ್ಳಿ1,019

ದಾಸರಹಳ್ಳಿ468

ಯಲಹಂಕ808

ಒಟ್ಟು12,699