ಬೆಂಗಳೂರಿನ ಸುಗಮ ಸಂಚಾರಕ್ಕೆ ₹ 73, 600 ಕೋಟಿಯ ಬೃಹತ್‌ ಗಾತ್ರದ ಯೋಜನೆ

| N/A | Published : Mar 30 2025, 03:03 AM IST / Updated: Mar 30 2025, 05:10 AM IST

patna traffic

ಸಾರಾಂಶ

ಬೆಂಗಳೂರಿನ ಸುಗಮ ಸಂಚಾರಕ್ಕೆ ಅಂತಾರಾಷ್ಟ್ರೀಯ ಸಂಸ್ಥೆಯ ಸಹಾಯದೊಂದಿಗೆ ಅಧ್ಯಯ ನಡೆಸಿ ಬರೋಬ್ಬರಿ ₹73,600 ಕೋಟಿ ಮೊತ್ತದ ಬೃಹತ್‌ ಗಾತ್ರದ ಯೋಜನೆಗಳನ್ನು ಕೈಗೊಳ್ಳುವುದಕ್ಕೆ ಮುಂದಾಗಿದೆ.

 ಬೆಂಗಳೂರು : ಬೆಂಗಳೂರಿನ ಸುಗಮ ಸಂಚಾರಕ್ಕೆ ಅಂತಾರಾಷ್ಟ್ರೀಯ ಸಂಸ್ಥೆಯ ಸಹಾಯದೊಂದಿಗೆ ಅಧ್ಯಯ ನಡೆಸಿ ಬರೋಬ್ಬರಿ ₹73,600 ಕೋಟಿ ಮೊತ್ತದ ಬೃಹತ್‌ ಗಾತ್ರದ ಯೋಜನೆಗಳನ್ನು ಕೈಗೊಳ್ಳುವುದಕ್ಕೆ ಮುಂದಾಗಿದೆ.

ಆ ಯೋಜನೆಗಳನ್ನು ಅನುಷ್ಠಾನಗೊಳಿಸುವುದಕ್ಕೆ ವಿಶೇಷ ಉದ್ದೇಶಿತ ಘಟಕ ಸ್ಥಾಪಿಸುವುದಕ್ಕೆ ತೀರ್ಮಾನಿಸಲಾಗಿದ್ದು, ಪ್ರಮುಖವಾಗಿ ಟನಲ್‌ ರಸ್ತೆ, ಡಬ್ಬಲ್‌ ಡೆಕ್ಕರ್‌ ಫ್ಲೈಓವರ್‌, ವೈಟ್‌ಟಾಪಿಂಗ್‌, ಎಲಿವೇಟೆಡ್ ಕಾರಿಡಾರ್‌ ಹಾಗೂ ರಾಜಕಾಲುವೆ ಬಫರ್‌ನಲ್ಲಿ ರಸ್ತೆ ನಿರ್ಮಾಣ ಯೋಜನೆ ಅನುಷ್ಠಾನಕ್ಕೆ ತೀರ್ಮಾನಿಸಲಾಗಿದೆ.

ಹೆಬ್ಬಾಳದಿಂದ ಸಿಲ್ಕ್‌ ಬೋರ್ಡ್‌ ವರೆಗೆ ಹಾಗೂ ಕೆ.ಆರ್‌.ಪುರದಿಂದ ಮೈಸೂರು ರಸ್ತೆ ವರೆಗೆ ಎರಡು ಟನಲ್‌ ರಸ್ತೆ ಯೋಜನೆಗೆ 42 ಸಾವಿರ ಕೋಟಿ ರು., ಹೊರ ವರ್ತುಲ, ಒಳ ವರ್ತುಲ ರಸ್ತೆಯಿಂದ ಮತ್ತು ನಗರದ ಕೇಂದ್ರ ಭಾಗದಿಂದ ಹೈಡೆನ್ಸಿಟಿ ಕಾರಿಡಾರ್‌ಗಳ ಮಾರ್ಗವಾಗಿ ನಗರದ ಒಳಗೆ ಮತ್ತು ಹೊರಗೆ ಹೋಗುವುದಕ್ಕೆ ಪ್ರತ್ಯೇಕ ಸಿಗ್ನಲ್‌ ಮುಕ್ತ ಕಾರಿಡಾರ್ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಅದರಡಿ 110 ಕಿ.ಮೀ ಉದ್ದದ ರಸ್ತೆಯನ್ನು 13,200 ಕೋಟಿ ರು., 9 ಸಾವಿರ ಕೋಟಿ ರು. ವೆಚ್ಚದಲ್ಲಿ 40 ಕಿ.ಮೀ ಡಬಲ್‌ ಡೆಕ್ಕರ್‌ ಫ್ಲೈಓವರ್‌ ನಿರ್ಮಾಣ, ರಾಜಕಾಲುವೆಯ ಬಫರ್‌ನಲ್ಲಿ 3 ಸಾವಿರ ಕೋಟಿ ರು. ವೆಚ್ಚದಲ್ಲಿ 300 ಕಿ.ಮೀ ಉದ್ದದ ರಸ್ತೆ ನಿರ್ಮಾಣ ಹಾಗೂ 6 ಸಾವಿರ ಕೋಟಿ ರು. ವೆಚ್ಚದಲ್ಲಿ ನಗರದ ಪ್ರಮುಖ ರಸ್ತೆಗಳನ್ನು ವೈಟ್‌ಟಾಪಿಂಗ್‌ ರಸ್ತೆ ನಿರ್ಮಾಣಕ್ಕೆ ಮಾಡಲಾಗುತ್ತಿದೆ.

ಉಳಿದಂತೆ 400 ಕೋಟಿ ಸ್ಕೈಡೆಕ್‌ ಹಾಗೂ ರಸ್ತೆ ಅಗಲೀಕರಣ ಯೋಜನೆಗಳನ್ನು ಕೈಗೊಳ್ಳಲಾಗುತ್ತದೆ.

118 ರಸ್ತೆ ಅಗಲೀಕರಣ:

ರಸ್ತೆ ಅಭಿವೃದ್ಧಿ ಮತ್ತು ಅಗಲೀಕರಣ ಯೋಜನೆಯಡಿ ಬೆಂಗಳೂರಿನ ರಸ್ತೆ ಜಾಲವನ್ನು ಅಭಿವೃದ್ಧಿಪಡಿಸುವುದು, ಸಂಪರ್ಕ, ಸುರಕ್ಷತೆ ಮತ್ತು ಸುಸ್ತಿರತೆಯನ್ನು ಹೆಚ್ಚಿಸುವ ಉದ್ದೇಶದಿಂದ ನಗರದ 118 ರಸ್ತೆಗಳನ್ನು ಅಗಲೀಕರಣಕ್ಕೆ ಮತ್ತು ಆಧುನಿಕ ಮಾದರಿಯಲ್ಲಿ ಅಭಿವೃದ್ದಿಪಡಿಸುವುದಕ್ಕೆ ಕ್ರಿಯಾ ಯೋಜನೆ ರೂಪಿಸಲಾಗಿದ್ದು, 2025-26ನೇ ಸಾಲಿನ ಬಜೆಟ್‌ನಲ್ಲಿ 694 ಕೋಟಿ ರು. ನೀಡುವುದಾಗಿ ಘೋಷಿಸಲಾಗಿದೆ.

1 ಸಾವಿರ ಕಿ.ಮೀ ಪಾದಚಾರಿ ಮಾರ್ಗ:

ನಗರದಲ್ಲಿ ಮುಖ್ಯ ಮತ್ತು ಉಪ ಮುಖ್ಯ ರಸ್ತೆಗಳು ಸೇರಿದಂತೆ ಮುಂದಿನ ದಿನಗಳಲ್ಲಿ ಅಭಿವೃದ್ಧಿ ಪಡಿಸಲಾಗುವ ರಸ್ತೆಗಳಲ್ಲಿ ಪಾದಚಾರಿಗಳು ಸುರಕ್ಷಿತವಾಗಿ ಸಂಚಾರ ಮಾಡುವುದಕ್ಕೆ 1 ಸಾವಿರ ಕಿ.ಮೀ ಉದ್ದದ ಪಾದಚಾರಿ ಮಾರ್ಗ ನಿರ್ಮಾಣಕ್ಕೆ ತೀರ್ಮಾನಿಸಿದೆ.

ಐಟಿ-ಬಿಟಿ ಕಾರಿಡಾರ್‌ ಅಭಿವೃದ್ಧಿಗೆ ₹400 ಕೋಟಿ:

ಸೆಂಟ್ರಲ್ ಸಿಲ್ಕ್ ಬೋರ್ಡ್‌ನಿಂದ ಕೆಆರ್‌ಪುರ ಲೌರಿ ಜಂಕ್ಷನ್ ಮುಖಾಂತರ ಬೈಯ್ಯಪ್ಪನಹಳ್ಳಿ ಮೆಟ್ರೊ ನಿಲ್ದಾಣದವರೆಗೆ ಹೊರವರ್ತುಲ ರಸ್ತೆಯಲ್ಲಿ ಹಲವಾರು ಐಟಿ-ಬಿಟಿ ಕಂಪನಿಗಳಿದ್ದು, ಈ ಪ್ರದೇಶದ ರಸ್ತೆ ಉನ್ನತಿಗಾಗಿ ರಾಜ್ಯ ಸರ್ಕಾರ, ಮೆಟ್ರೋ ಹಾಗೂ ಪಾಲಿಕೆ ಸಹಯೋಗದೊಂದಿಗೆ 400 ಕೋಟಿ ರು. ವೆಚ್ಚದಲ್ಲಿ ಸುಮಾರು 22.2 ಕಿ.ಮೀ ರಸ್ತೆಯನ್ನು ಜಾಗತಿಕ ಮಟ್ಟದೊಂದಿಗೆ ಉನ್ನತೀಕರಿಸುವುದಾಗಿ ಬಿಬಿಎಂಪಿ ಘೋಷಿಸಿದೆ.

ಇತ್ತಿಚಿಗೆ ಮಳೆ ಬಂದಾಗ ಐಟಿ ಬಿಟಿ ಕಾರಿಡಾರ್‌ನಲ್ಲಿ ಭಾರೀ ಪ್ರಮಾಣ ನೀರು ತುಂಬಿಕೊಂಡು ಸಮಸ್ಯೆ ಉಂಟಾಗುತ್ತಿತ್ತು. ಈ ಸಮಸ್ಯೆ ಪರಿಹಾರಕ್ಕೆ ಬಜೆಟ್‌ನಲ್ಲಿ ಅನುದಾನ ನೀಡಲಾಗಿದೆ.

ವಾರ್ಡ್‌ಗಳ ಅಭಿವೃದ್ಧಿಗೆ ₹675 ಕೋಟಿ:

ಬಿಬಿಎಂಪಿಯ 225 ವಾರ್ಡ್‌ ಅಭಿವೃದ್ಧಿಗಾಗಿ ಪ್ರತಿ ವಾರ್ಡ್‌ಗೆ 2.50 ಕೋಟಿಗಳಂತೆ ಹಾಗೂ ನಿರ್ವಹಣೆ ಕಾಮಗಾರಿಗಳಿಗಾಗಿ 50 ಲಕ್ಷಗಳಂತೆ ಒಟ್ಟಾರೆ 675 ಕೋಟಿ ರು. ಅನುದಾನ ಮೀಸಲಿರಿಸಿದೆ. ಜತೆಗೆ, ಟಿಡಿಆರ್ ಬಳಸಿ ಆರ್‌ಟಿನಗರ ಪೊಲೀಸ್ ಠಾಣೆಯಿಂದ ಅಂಬೇಡ್ಕರ್ ಕಾಲೇಜುವರೆಗಿನ ರಸ್ತೆ, ಲಿಂಗರಾಜಪುರ, ಫ್ಲೈಓವರ್‌ರಸ್ತೆ, ಪುಲಿಕೇಶಿನಗರ ಶ್ಯಾಂ ಪುರ ಮುಖ್ಯರಸ್ತೆ, ಯಶವಂತಪುರದ ಕೆಂಚನಹಳ್ಳಿ ಮುಖ್ಯರಸ್ತೆ ಮತ್ತು ಮಹದೇವಪುರದ ರಸ್ತೆಗಳನ್ನು ಅಗಲೀಕರಣ ಮಾಡುವುದಾಗಿ ಬಿಬಿಎಂಪಿ ಭರವಸೆ ನೀಡಿದೆ.