ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಶಾಲಾ ಕಾಲೇಜುಗಳು, ಸಂಘ-ಸಂಸ್ಥೆಗಳಲ್ಲಿ ಧ್ವಜಾ ಅನಾವರಣ, ದೇಶಕ್ಕಾಗಿ ತ್ಯಾಗ ಮಾಡಿದ ಮಹನೀಯರ ಸ್ಮರಣೆ, ಸಾಂಸ್ಕೃತಿಕ ಕಾರ್ಯಕ್ರಮ ಸೇರಿದಂತೆ ವಿವಿಧ ಕಾರ್ಯಕ್ರಮಗಳ ಮೂಲಕ ಬೆಂಗಳೂರಿನಲ್ಲಿ 76ನೇ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.ಸರ್ಕಾರಿ ಕಚೇರಿ, ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಸೇರಿ ಪಕ್ಷದ ಕಚೇರಿಗಳು, ಶಾಲಾ ಕಾಲೇಜುಗಳು ಹಾಗೂ ಸಂಘ ಸಂಸ್ಥೆಗಳಲ್ಲಿ ಗಣ್ಯರು ಧ್ವಜಾರೋಹಣ ನೆರವೇರಿಸಿ ಸಂವಿಧಾನದ ಶ್ರೇಷ್ಠತೆ, ಪ್ರಜೆಗಳ ಕರ್ತವ್ಯಗಳ ಬಗ್ಗೆ ತಿಳಿಸಿದರು. ಸರ್ಕಾರಗಳ ಸಾಧನೆ, ಮುಂದಿನ ಗುರಿಗಳ ಕುರಿತು ವಿವರಿಸಿದರು. ನಗರ ಪೊಲೀಸ್ ಆಯುಕ್ತ ದಯಾನಂದ್ ಅವರು ಕಮೀಷನರ್ ಕಚೇರಿಯಲ್ಲಿ ಧ್ವಜಾರೋಹಣ ನಡೆಸಿದರು. ಈ ವೇಳೆ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.
ಬಿಬಿಎಂಪಿ ಆಯುಕ್ತರಿಂದ ಧ್ವಜ ಹಾರಾಟ:ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆಡಳಿತಾಧಿಕಾರಿ ಎಸ್.ಆರ್ ಉಮಾಶಂಕರ್, ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಧ್ವಜ ಹಾರಿಸಿದರು. ಈ ವೇಳೆ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್, ಡಾ. ಹರೀಶ್ ಕುಮಾರ್, ಅವಿನಾಶ್ ಮೆನನ್ ರಾಜೇಂದ್ರನ್, ಸುರಳ್ಕರ್ ವಿಕಾಸ್ ಕಿಶೋರ್, ಪ್ರೀತಿ ಗೆಹ್ಲೋಟ್, ವಲಯ ಆಯುಕ್ತ ರಮ್ಯಾ, ಉಪ ಆಯುಕ್ತ ಮಂಜುನಾಥ ಸ್ವಾಮಿ, ಜಂಟಿ ಆಯುಕ್ತೆ ಪ್ರತಿಭಾ, ಮುಖ್ಯ ಅಭಿಯಂತರರು ಸೇರಿ ಇತರರಿದ್ದರು.
ಸಂವಿಧಾನದ ಅರಿವು ವಿಸ್ತರಿಸಿಕೊಳ್ಳಿ:ಜೋಶಿಶ್ರೇಷ್ಠ ಸಂವಿಧಾನದ ಭದ್ರ ಬುನಾದಿಯ ಮೇಲೆ ನಮ್ಮ ಶಕ್ತಿಯುತ ಪ್ರಜಾಪ್ರಭತ್ವ ನಿಂತಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಮಹೇಶ ಜೋಶಿ ಹೇಳಿದರು. ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಧ್ವಜ ಹಾರಿಸಿದ ಬಳಿಕ ಮಾತನಾಡಿದರು. ಸಂವಿಧಾನದಿಂದಾಗಿ ಭಾರತದ ಶಾಸಕಾಂಗ, ನ್ಯಾಯಾಂಗ ಮತ್ತು ಕಾರ್ಯಾಂಗಗಳು ದಕ್ಷವಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಗಿದೆ. ಸಂವಿಧಾನದ ಅರಿವು ವಿಸ್ತರಿಸಿಕೊಳ್ಳುವುದು, ಅದರ ಕುರಿತು ಜಾಗೃತಿ ಮೂಡಿಸುವುದು ಗಣರಾಜ್ಯೋತ್ಸವದಂದು ನಾವು ಮಾಡಬೇಕಾದ ಸಂಕಲ್ಪ ಎಂದರು.
ಅಮರಜ್ಯೋತಿ ಉದ್ಯಾನವನ:ಅಮರಜ್ಯೋತಿ ಉದ್ಯಾನವನ ಗೆಳೆಯರ ಬಳಗದಿಂದ ರಾಷ್ಟ್ರ ಧ್ವಜ ಹಾರಿಸಲಾಯಿತು. ಮುಖಂಡರಾದ ಶ್ರೀನಿವಾಸ್ ಎಂ. ಕರೇಗೌಡ್ರು. ಆಡಿಟರ್ ಸುಬ್ರಹ್ಮಣ್ಯ. ಸಂದೇಶ ಶೆಟ್ಟಿ. ಶಿವಕುಮಾರ ಪಿ.ಆರ್. ಇದ್ದರು.ಜಿಕೆವಿಕೆ: ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯವು ಹೆಬ್ಬಾಳದ ಜಿಕೆವಿಕೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕುಲಪತಿ ಡಾ. ಎಸ್.ವಿ.ಸುರೇಶ್ ರಾಷ್ಟ್ರ ಧ್ವಜ ಹಾರಿಸಿದರು. ರಾಷ್ಟ್ರದ ಏಕತೆ, ಸಮಾನತೆ, ಭಾತೃತ್ವವನ್ನು ಕಾಯ್ದುಕೊಂಡ ಕೀರ್ತಿ ನಮ್ಮ ಸಂವಿಧಾನದ್ದು. ಈ ಮಹಾ ಗ್ರಂಥ ನಮ್ಮ ದೇಶಕ್ಕಷ್ಟೆ ಅಲ್ಲದೆ ಇತರೆ ದೇಶಗಳಿಗೂ ಮಾದರಿ ಎಂದರು. ಹೆಚ್ಚುತ್ತಿರುವ ಹವಾಮಾನ ಬದಲಾವಣೆ, ಪ್ರಾಕೃತಿಕ ಅವಘಡಗಳು ಕೃಷಿ ಕ್ಷೇತ್ರದ ಮೇಲೆ ವೈತಿರಿಕ್ತ ಪರಿಣಾಮ ಬೀರುತ್ತಿದ್ದರೂ ಕರ್ನಾಟಕದಲ್ಲಿ 14.35 ಮಿಲಿಯನ್ ಟನ್ ಆಹಾರ ಉತ್ಪಾದನೆ ಸಾಧಿಸುವಲ್ಲಿ ನಮ್ಮ ಕೃಷಿಕರು ಯಶಸ್ವಿಯಾಗಿದ್ದಾರೆ ಎಂದರು. ಭಾರತೀಯ ಸೇನೆಯ ಕರ್ನಲ್ ಎಂ.ಜಿ.ತಿಮ್ಮಯ್ಯ ಅವರನ್ನು ಸನ್ಮಾನಿಸಲಾಯಿತು.
ಮೌಂಟ್ ಕಾರ್ಮೆಲ್ ಕಾಲೇಜು: ವಸಂತನಗರದ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ 76ನೇ ಗಣರಾಜ್ಯೋತ್ಸವ ನಡೆಯಿತು. ಮುಖ್ಯ ಅತಿಥಿ ನಿವೃತ್ತ ಡೆಪ್ಯುಟಿ ಕಮಾಂಡೆಂಟ್ ಕರ್ನಲ್ ಎ.ಜೆ. ಭಂಡಾರಿ ಮಾತನಾಡಿ, ಯುದ್ಧದ ಸಮಯದಲ್ಲಿ ಸಂಭವಿಸಿದ ಘಟನೆಗಳನ್ನು ವಿವರಿಸಿ, ರಾಷ್ಟ್ರಭಕ್ತಿಯ ಮಹತ್ವವನ್ನು ಪುನಃ ಒತ್ತಿ ಹೇಳಿದರು. ಧ್ವಜಾರೋಹಣದ ನಂತರ, ಅವರ ನೇತೃತ್ವದಲ್ಲಿ ಸಂವಿಧಾನದ ಪ್ರಮಾಣವಚನ ನೀಡಲಾಯಿತು. ಸಂಸ್ಥೆ ನಿರ್ದೇಶಕರಾದ ಸಿಸ್ಟರ್ ಅಲ್ಬಿನ, ಪ್ರಾಚಾರ್ಯರಾದ ಡಾ. ಜಾರ್ಜ್ ಲೇಖಾ, ಡಾ. ಸಿಸ್ಟರ್ ಸಜಿತಾ ಇದ್ದರು.ಗೂರ್ಖಾ ರೈಫಲ್ಸ್: ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ಭಾರತೀಯ ಸೇನೆಯ 4/8 ಗೂರ್ಖಾ ರೈಫಲ್ಸ್ ಪೈಪ್ ಬ್ಯಾಂಡ್‌ನವರು ಭಾನುವಾರ ಕಬ್ಬನ್ ಪಾರ್ಕ್‌ನ ವಾದ್ಯರಂಗದಲ್ಲಿ ಆಕರ್ಷಕ ಬ್ಯಾಂಡ್ ಪ್ರದರ್ಶನ ನೀಡಿದರು. ಗೂರ್ಖಾ ಸಾಂಪ್ರದಾಯಿಕ ಹಾಗೂ ರಾಷ್ಟ್ರಭಕ್ತಿಯ ಸಂಗೀತವನ್ನು ಶಿಸ್ತುಬದ್ಧವಾಗಿ ನುಡಿಸಿದರು. ಈ ಪ್ರದರ್ಶನವು ಭಾರತೀಯ ಸೇನೆಯ ಧೈರ್ಯ, ಪರಂಪರೆ ಮತ್ತು ವೃತ್ತಿಪರತೆಯ ಪ್ರತೀಕವಾಗಿದೆ ಎಂದು ಬ್ಯಾಂಡ್ ತಿಳಿಸಿದೆ.
ಬೆಂಗಳೂರು ಜಲಮಂಡಳಿಯಲ್ಲಿ ಸಂಭ್ರಮ: ಬೆಂಗಳೂರು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಚೇರಿ ಆವರಣದಲ್ಲಿ ಮಂಡಳಿ ಅಧ್ಯಕ್ಷ ಡಾ.ವಿ.ರಾಮ್‌ಪ್ರಸಾತ್ ಮನೋಹರ್ ಧ್ವಜಾ ಅನಾವರಣ ಮಾಡಿದರು. ಈ ವೇಳೆ ಅವರು ಮಾತನಾಡಿ, 76ನೇ ಗಣರಾಜ್ಯೋತ್ಸವದ ಈ ಸಂದರ್ಭದಲ್ಲಿ ಜಲಮಂಡಳಿಯು 60ನೇ ವರ್ಷದ ಸಾರ್ಥಕ ಸಂಭ್ರಮದಲ್ಲಿದೆ. ಜಲಮಂಡಳಿಯ ಗ್ರಾಹಕರಿಗೆ ನಾವು ಸಲ್ಲಿಸುವ ಸೇವೆಯೇ ಸಂವಿಧಾನಕ್ಕೆ ತೋರುವ ಗೌರವ ಎಂದರು. ಮುಖ್ಯ ಆಡಳಿತಾಧಿಕಾರಿ ಹಾಗೂ ಕಾರ್ಯದರ್ಶಿ ಮದನ್ ಮೋಹನ್, ಪ್ರಧಾನ ಮುಖ್ಯ ಅಭಿಯಂತರ ಸುರೇಶ ಇದ್ದರು.