ವಾಣಿಜ್ಯ ಮಂಡಳಿ ಅಧ್ಯಕ್ಷರಿಗೇ ಬೆವರಿಳಿಸಿದ ಅಕಾಡೆಮಿ ಸಾಧು!

| Published : Mar 11 2024, 01:19 AM IST / Updated: Mar 11 2024, 07:13 AM IST

Sadhu Kokila
ವಾಣಿಜ್ಯ ಮಂಡಳಿ ಅಧ್ಯಕ್ಷರಿಗೇ ಬೆವರಿಳಿಸಿದ ಅಕಾಡೆಮಿ ಸಾಧು!
Share this Article
  • FB
  • TW
  • Linkdin
  • Email

ಸಾರಾಂಶ

ಕಾಂಗ್ರೆಸ್‌ನ ಹೊಸ ಗ್ಯಾರಂಟಿಗೆ ಜನರಿಂದ ಒನ್‌ ಮೋರ್‌ ಒನ್‌ ಮೋರ್‌ ಕೂಗು ಕೇಳಿಸಿದ್ದು, ವೇದಿಕೆಯಲ್ಲೇ ವಾಣಿಜ್ಯ ಮಂಡಳಿ ಅಧ್ಯಕ್ಷರಿಗೆ ಬೆವರಿಳಿಸಿದ ಸಾಧು ಕೋಕಿಲ ಮುಂತಾದ ರಸವತ್ತಾದ ಸುದ್ದಿಗಳ ಸಂಗ್ರಹ

ಸಾಧು ಕೋಕಿಲ ಗೊತ್ತಲ್ಲ, ಕನ್ನಡದ ಸಕಲ ಕಲಾ ವಲ್ಲಭ. ಹತ್ತಾರು ಪ್ರತಿಭೆಗಳ ಸಂಗಮ!. ಈ ಅದ್ಬುತ ಕಲಾಕಾರ್‌ನಲ್ಲಿ ಎಷ್ಟು ಪ್ರತಿಭೆಗಳು ಸೇರಿ ಬಿಟ್ಟಿವೆಯೆಂದರೆ ಅಸಲಿಗೆ ಈ ಸಾಧು ಏನು ಎಂದು ಕೆಲವೊಮ್ಮೆ ಕೋಕಿಲಗೂ ಗೊಂದಲವಾಗಿಬಿಡುತ್ತದೆ. 

ಅದ್ಬುತ ಸಂಗೀತ ನಿರ್ದೇಶಕ, ಪಾರ್ಟ್ ಟೈಂ ಗಾಯಕ, ಫುಲ್ ಟೈಂ ರಾಜಕಾರಣಿ, ಕನ್ನಡದ ಅಮೋಘ ಹಾಸ್ಯನಟ. ಇದರ ಜತೆಗೆ ಈಗ ಕರ್ನಾಟಕ ಚಲನಚಿತ್ರ ಅಕಾಡೆಮಿಗೆ ನೂತನ ಅಧ್ಯಕ್ಷ ಕೂಡ. 

ಇಷ್ಟೆಲ್ಲ ಇರುವಾಗ ಕೋಕಿಲಗೆ ಸಾಧು ಬಗ್ಗೆ ಕನ್ಫೂಸ್‌ ಆಗೋದು ಸಹಜ ಬಿಡಿ.ಮೊನ್ನೆ 15ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಸಮಾರೋಪ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ ಅದೇ ರೀತಿ ಆಯ್ತು.

ಈ ಕಾರ್ಯಕ್ರಮಕ್ಕೆ ಅತಿಥಿಯಾಗಿದ್ದ ಸಾಧು ಭಾಷಣಕ್ಕೆ ನಿಂತರು. ನಿಂತವರೇ, ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷನಾಗಿ ಈಗಷ್ಟೇ ಅಧಿಕಾರ ವಹಿಸಿಕೊಂಡಿದ್ದೇನೆ ಎಂದು ಬಾಂಬ್‌ ಹಾಕಿದರು. 

ಇದಕ್ಕೆ ಸಭಿಕರು ಓ...ಎಂದು ಕಿರುಚಿದರೇ, ಇನ್ನು ಕೆಲವರು ಚಲನಚಿತ್ರ ಅಕಾಡೆಮಿ... ಅಕಾಡೆಮಿ ಎಂದು ಕೂಗಿಕೊಂಡರು. ತಕ್ಷಣವೇ ಗೊಂದಲದಿಂದ ಹೊರ ಬಂದ ಕೋಕಿಲ ಚಲನಚಿತ್ರ ಅಕಾಡೆಮಿ ಅಧ್ಯಕ್ಷನಾಗಿ ಎಂದು ತಮ್ಮ ಸರಿಪಡಿಸಿಕೊಂಡರು. 

ಜತೆಗೆ, ವೇದಿಕೆಯಲ್ಲಿದ್ದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್‌.ಎಂ.ಸುರೇಶ್‌ ಅವರತ್ತ ನೋಡಿ, ಅಯ್ಯಯ್ಯೋ ಅಧ್ಯಕ್ಷರು, ಬೆವತೋಗ್ತಿದ್ದಾರೆ ಎಂದಾಗ ಸಭಿಕರನ್ನು ನಗೆಗಡಲಲ್ಲಿ ತೇಲಿಸಿತು.

ಜಲಕ್ಷಾಮ ನಿವಾರಣೆಗೆ ಬ್ರಿಲಿಯೆಂಟ್ ಪ್ಲಾನ್‌!
ನೀವು ಏನೇ ಹೇಳಿ ನಮ್ಮ ರಾಜ್ಯ ಸರ್ಕಾರ ಮಾತ್ರ ಬ್ರಿಲಿಯೆಂಟ್ಟು.. ಎಂತಹುದೇ ಸಮಸ್ಯೆ ಎದುರಾಗಲಿ ಕಿಂಚಿತ್ತೂ ಗಾಬರಿ ಬೀಳದೆ ಎಲ್ಲ ಸರಿಪಡಿಸುತ್ತೇವೆ ಎಂದು ಗ್ಯಾರಂಟಿ ಮೇಲೆ ಗ್ಯಾರಂಟಿ ಕೊಡುತ್ತಲೇ ಸಾಗುವ ಈ ಸರ್ಕಾರ ನಗರವನ್ನು ಕಾಡುತ್ತಿರುವ ಜಲಕ್ಷಾಮ ಸಮಸ್ಯೆ ನಿವಾರಣೆ ಕುರಿತು ಬ್ರಿಲಿಯೆಂಟ್ ಭರವಸೆಯೊಂದನ್ನು ನೀಡಿದೆ.

ನಿಮಗೆ ಗೊತ್ತಿರುವಂತೆ ಬೆಂಗಳೂರನ್ನು ಜಲಕ್ಷಾಮ ಕಾಡಿದೆ. ರಸ್ತೆ ರಸ್ತೆಯಲ್ಲಿ ಜನ ಬಿಂದಿಗೆ ಹಿಡಿದು ಬೀದಿಗೆ ಇಳಿದಿದ್ದಾರೆ. ತಡವಾಗಿಯಾದರೂ ಎಚ್ಚೆತ್ತುಕೊಂಡ ರಾಜ್ಯ ಸರ್ಕಾರ ಸರಣಿ ಸಭೆಗಳನ್ನು ನಡೆಸಿ ಕುಡಿಯುವ ನೀರಿನ ಅಪವ್ಯಯಕ್ಕೆ 5 ಸಾವಿರ ರು. ದಂಡ ಹಾಗೂ ಟ್ಯಾಂಕರ್‌ಗಳ ಸುಲಿಗೆಗೆ ನಿರ್ಬಂಧ ಹೇರಿದೆ.

ತನ್ಮೂಲಕ ಸಮಸ್ಯೆಯ ತೀವ್ರತೆಯನ್ನು ಒಪ್ಪಿಕೊಂಡಿದೆ.ಅಷ್ಟು ಮಾಡಿ ಜನರ ದಾಹ ನೀಗಿಸಲು ಪ್ರಯತ್ನಗಳನ್ನು ನಡೆಸಿದ್ದರೆ ಸರ್ಕಾರದ ಈ ವಿಚಾರ ನಮ್ಮ ಡೈರಿಗೆ ಆಹಾರವಾಗುತ್ತಿರಲಿಲ್ಲ. 

ಆದರೆ, ಈ ಸರ್ಕಾರ ಒಂದು ಭರ್ಜರಿ ಭರವಸೆ ನೀಡಿ ಡೈರಿ ಪಾಲಾಗಿದೆ.ಆ ಭರವಸೆ- ನಗರವನ್ನು ಕಾಡಿರುವ ಈ ಜಲಕ್ಷಾಮವನ್ನು ಕೇವಲ ಮೂರ್ನಾಲ್ಕು ತಿಂಗಳಲ್ಲಿ ಸಂಪೂರ್ಣ ಬಗೆಹರಿಸುತ್ತೇವೆ!ಇಡೀ ನಗರವನ್ನು ಈ ಪರಿ ಬಾಧಿಸುತ್ತಿರುವ ಜಲ ಕ್ಷಾಮವನ್ನು ಅದು ಹೇಗೆ ಪರಿಹರಿಸಿಬಿಡುತ್ತೇನೆ ಎಂದು ಸರ್ಕಾರ ಈ ಪರಿ ವಿಶ್ವಾಸದಲ್ಲಿ ಹೇಳುತ್ತಿದೆ ಎಂದು ಬೆಂಗಳೂರಿನ ನಾಗರೀಕರು ಸಹಜವಾಗಿಯೇ ಅಚ್ಚರಿಕೊಂಡಿದ್ದಾರೆ. 

ಅಸಲಿ ವಿಷಯ- ಇನ್ನೂ ಮೂರ್ನಾಲ್ಕು ತಿಂಗಳಲ್ಲಿ ಹೇಗೂ ಬೇಸಗೆ ಕಳೆಯುತ್ತದೆ. ಜೂನ್‌ ವೇಳೆಗೆ ಪೂರ್ಣ ಪ್ರಮಾಣದಲ್ಲಿ ಮಳೆ ಶುರುವಾಗಿ ನೀರಿನ ಸಮಸ್ಯೆ ತನ್ನಿಂತಾನೇ ಇಲ್ಲದಂತಾಗುತ್ತದೆ. ಅದಾಗಿ, ಸರ್ಕಾರ ಉಚಿತ ಗ್ಯಾರಂಟಿ ನೀಡಿ ಬಿಟ್ಟಿದೆ. 

ಸೋ, ನಾಗರೀಕರು ಈಗ ಓನ್‌ ಮೋರ್‌ ಓನ್‌ ಮೋರ್‌ ಅನ್ನುತ್ತಾ ಚಟಪಟ... ಚಟಪಟ... ಆಗಬೇಕು ಅಷ್ಟೇ!ಈ ಚುನಾವಣೆಗೂ ವಾಟರ್ ಆಮೀಷ!ಚುನಾವಣೆ ಸಂದರ್ಭದಲ್ಲಿ ಮತದಾರರಿಗೆ ಸೀರೆ, ಕುಕ್ಕರ್‌, ಟಿವಿ, ಮಿಕ್ಸಿ, ದಿನಸಿ, ಕೋಪನ್‌, ಹಣ, ಮದ್ಯ ಹಂಚುವುದು ಮಾಮೂಲಿ. 

ಆದರೆ, ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಸಿಲಿಕಾನ್‌ ಸಿಟಿ ಬೆಂಗಳೂರಿನ ರಾಜಕಾರಣಿಗಳು ಹೊಸ ಆಮೀಷವೊಡ್ಡಲು ಅಣಿಯಾಗುತ್ತಿದ್ದಾರಂತೆ!ಅದು ಉಚಿತ ಟ್ಯಾಂಕರ್ ವಾಟರ್‌ ಹಂಚಿಕೆ.

ಜಲಕ್ಷಾಮ ಎದುರಾಗಿ ಜನರ ನೀರಿಗಾಗಿ ಪರಿತಪಿಸುತ್ತಿರುುದನ್ನು ಕಂಡ ನಮ್ಮ ರಾಜಕಾರಣಿಗಳು ಇನ್ನೂ ನೀರಿನ ದಾಹ ನಗರದಲ್ಲಿ ಹೆಚ್ಚುತ್ತಲೇ ಹೋಗುತ್ತದೆ. ಸರಿಯಾಗಿ ಚುನಾವಣೆ ನಡೆಯುವ ವೇಳೆಗೆ ಅದು ಮಿತಿ ಮೀರುತ್ತದೆ ಎಂದು ದೂ...ರ ದೃಷ್ಟಿಯಿಂದ ಕಂಡುಕೊಂಡಿದ್ದಾರೆ. 

ಹೀಗಾಗಿ, ಈ ಬಾರಿ ಜನರಿಗೆ ಬಿಯರ್‌ ಬಂದಲು ನೀರು ಹಂಚಲು ಸಜ್ಜಾಗಿದ್ದಾರಂತೆ. ಜಲಮಂಡಳಿ ಮತ್ತು ಬಿಬಿಎಂಪಿಯಿಂದ ಟ್ಯಾಂಕರ್‌ ನೀರು ಪೂರೈಕೆ ಮಾಡಿದರೂ ನೀರನ್ನು ದೊಡ್ಡ ಪ್ರಮಾಣದಲ್ಲಿ ಸಂಗ್ರಹಿಸಿಟ್ಟುಕೊಳ್ಳುವುದಕ್ಕೆ ನೀರಿನ ಸಿಂಟೆಕ್ಸ್‌, ಡ್ರಮ್‌ಗಳಿಲ್ಲ. 

ಇದನ್ನೇ ಬಂಡವಾಳವಾಗಿಸಿಕೊಂಡಿರುವ ರಾಜಕೀಯ ಪಕ್ಷದ ಮುಖಂಡರು ಲೋಕಸಭಾ ಚುನಾವಣೆ ವೇಳೆ ಮತದಾರರನ್ನು ಸೆಳೆಯುವುದಕ್ಕೆ ನೀರಿನ ಸಿಂಟೆಕ್ಸ್‌, ಡ್ರಮ್‌ ಹಂಚಿಕೆ ಮಾಡಲು ಚಿಂತಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ತಮ್ಮ ತಮ್ಮ ವ್ಯಾಪ್ತಿಯ ಕೊಳಗೇರಿ, ಬಡವರು ವಾಸಿಸುವ ಪ್ರದೇಶದಲ್ಲಿ ಎಷ್ಟು ಮನೆಗಳಿವೆ. ಎಷ್ಟು ಡ್ರಮ್‌ ಮತ್ತು ಸಿಂಟೆಕ್ಸ್‌ ಬೇಕಾಗಲಿದೆ ಎಂಬ ಲೆಕ್ಕಚಾರ ಶುರುವಾಗಿದೆಯಂತೆ.ಸಂಪತ್ ತರೀಕೆರೆಶ್ರೀಕಾಂತ್‌ ಗೌಡಸಂದ್ರವಿಶ್ವನಾಥ ಮಲೇಬೆನ್ನೂರು