ಸಾರಾಂಶ
ಇದೇ ವಾರ, ಪ್ರಾಯಶಃ ಮುಂದಿನ ನಾಲ್ಕು ದಿನಗಳಲ್ಲಿ ಲೋಕಸಭೆಗೆ ಸಾರ್ವತ್ರಿಕ ಚುನಾವಣೆ ಘೋಷಣೆಯಾಗಬಹುದು ಎಂಬ ಬಲವಾದ ನಿರೀಕ್ಷೆ ಇರುವಾಗಲೇ, ಕೇಂದ್ರ ಚುನಾವಣಾ ಆಯುಕ್ತ ಅರುಣ್ ಗೋಯಲ್ ಅವರು ಹಠಾತ್ ರಾಜೀನಾಮೆ ನೀಡಿರುವುದು ಹಲವು ಬಗೆಯ ಚರ್ಚೆಗಳನ್ನು ಹುಟ್ಟುಹಾಕಿದೆ. ಇದು ಸ್ವಾಭಾವಿಕ. ಗೋಯಲ್ ಅವರು 2022ರ ನ.18ರಂದು ಇದೇ ರೀತಿ ರಾಜೀನಾಮೆ ನೀಡಿದ್ದರು. ಅವರನ್ನು ಮರುದಿನವೇ ಕೇಂದ್ರ ಸರ್ಕಾರ ಚುನಾವಣಾ ಆಯುಕ್ತರನ್ನಾಗಿ ನೇಮಕ ಮಾಡಿತ್ತು. ಅದು ಸುಪ್ರೀಂಕೋರ್ಟ್ ಕೆಂಗಣ್ಣಿಗೂ ಗುರಿಯಾಗಿತ್ತು. 2025ಕ್ಕೆ ದೇಶದ ಮುಖ್ಯ ಚುನಾವಣಾ ಆಯುಕ್ತರಾಗಿ 2027ರವರೆಗೂ ಹಲವು ಚುನಾವಣೆಗಳನ್ನು ನಡೆಸುವ ಗುರುತರ ಹೊಣೆಗಾರಿಕೆಯನ್ನು ಅರುಣ್ ಗೋಯಲ್ ಅವರು ಹೊತ್ತಿದ್ದರು. ಆದರೆ ಅವರು ದಿಢೀರ್ ರಾಜೀನಾಮೆ ನೀಡಿದ್ದು ಏಕೆ ಎಂಬುದು ಈಗ ಹಲವು ಅನುಮಾನಗಳಿಗೆ ಕಾರಣವಾಗಿದೆ. 1985ನೇ ಬ್ಯಾಚಿನ ಐಎಎಸ್ ಅಧಿಕಾರಿಯಾಗಿರುವ ಗೋಯಲ್ ಅವರಿಗೆ ಇಂತಹ ಮಹತ್ವದ ಸಂದರ್ಭದಲ್ಲಿ ರಾಜೀನಾಮೆ ನೀಡಬಾರದು ಎಂದು ಗೊತ್ತಿರುವುದಿಲ್ಲವೇ? ಖಂಡಿತಾ ಗೊತ್ತಿರುತ್ತದೆ. ಹಾಗಾದರೆ ಅವರು ರಾಜೀನಾಮೆ ನೀಡಿದ್ದಕ್ಕೆ ಅಸಲಿ ಕಾರಣ ಏನಿರಬಹುದು? ಆರೋಗ್ಯ ಚೆನ್ನಾಗಿರಲಿಲ್ಲವೇನೋ ಎಂದು ಊಹಿಸುವಂತೆಯೂ ಇಲ್ಲ. ಏಕೆಂದರೆ ಅವರು ಆರೋಗ್ಯವಾಗಿ ಸಮರ್ಥರಾಗಿದ್ದಾರೆ. ಹಾಗಾದರೆ ಅಸಲಿ ಕಾರಣ ಏನು? ಹಲವಾರು ಅನುಮಾನಗಳು ಏಳುತ್ತಿವೆ.
ಟಿ.ಎನ್.ಶೇಷನ್ ಅವರು ಚುನಾವಣಾ ಆಯುಕ್ತರಾಗಿದ್ದಾಗ ಕೇಂದ್ರ ಚುನಾವಣಾ ಆಯೋಗ ಏಕ ವ್ಯಕ್ತಿಯ ಸಾಂವಿಧಾನಿಕ ಸಂಸ್ಥೆಯಾಗಿತ್ತು. 90ರ ದಶಕದ ಮಧ್ಯಭಾಗದ ವೇಳೆ ಮುಖ್ಯ ಆಯುಕ್ತರ ಜತೆಗೆ ಇಬ್ಬರು ಆಯುಕ್ತರನ್ನು ನೇಮಕ ಮಾಡಲು ತಿದ್ದುಪಡಿ ತರಲಾಯಿತು. ಆಯೋಗದ ಮೂವರು ಸದಸ್ಯರ ಪೈಕಿ ಅನೂಪ್ ಪಾಂಡೆ ಕಳೆದ ತಿಂಗಳು ನಿವೃತ್ತರಾಗಿದ್ದರು. ಇದೀಗ ಗೋಯಲ್ ರಾಜೀನಾಮೆ ಕೊಟ್ಟಿದ್ದಾರೆ. ಇಬ್ಬರು ಆಯುಕ್ತರ ಉಪಸ್ಥಿತಿಯಲ್ಲೇ ಕೆಲವೊಂದು ಚುನಾವಣೆಗಳು ನಡೆದಿವೆ. ಆದರೆ ಮುಖ್ಯ ಚುನಾವಣಾ ಆಯುಕ್ತರೊಬ್ಬರೇ ಚುನಾವಣೆ ಘೋಷಿಸಿದ ನಿದರ್ಶನ ಇಲ್ಲ. ಹಾಗಂತ ಅವರು ಚುನಾವಣೆ ಘೋಷಣೆ ಮಾಡುವಂತೆಯೇ ಇಲ್ಲ ಎಂಬ ನಿಯಮವಂತೂ ಅಲ್ಲ. ಆದರೆ ಮೂವರು ಸದಸ್ಯರ ಆಯೋಗದಲ್ಲಿ ಏಕ ವ್ಯಕ್ತಿ ಚುನಾವಣೆ ಘೋಷಣೆ ಮಾಡಿದರೆ ಆಯೋಗದ ಕಾರ್ಯನಿರ್ವಹಣೆ ಬಗ್ಗೆಯೇ ಪ್ರಶ್ನೆಗಳು ಏಳಬಹುದು. ಹೀಗಾಗಿ ಕೇಂದ್ರ ಸರ್ಕಾರ ಚುನಾವಣಾ ಆಯುಕ್ತರ ನೇಮಕಾತಿಗೆ ತ್ವರಿತ ಪ್ರಕ್ರಿಯೆಗಳನ್ನು ಆರಂಭಿಸಿ ಲೋಕಸಭೆ ಚುನಾವಣೆ ವಿಳಂಬವಾಗದಂತೆ ನೋಡಿಕೊಳ್ಳಬೇಕು. ಪ್ರತಿಪಕ್ಷಗಳೂ ಇದಕ್ಕೆ ಸಹಕರಿಸಬೇಕು.