ಸಾರಾಂಶ
ಬೆಂಗಳೂರು : ಅರಮನೆ ಮೈದಾನದ ಗಾಯತ್ರಿ ವಿಹಾರ ಹಾಲ್ ಗೇಟ್ ಸಂಖ್ಯೆ 4ರ ಬಳಿ ಸಂಭವಿಸಿದ ಆಕಸ್ಮಿಕ ಅಗ್ನಿ ಅವಘಡದಲ್ಲಿ ಅಲಂಕಾರಿಕ ವಸ್ತುಗಳು ಸುಟ್ಟು ಭಸ್ಮವಾಗಿವೆ.
ಭಾನುವಾರ ಸಂಜೆ ಸುಮಾರು 4ರ ಈ ಘಟನೆ ನಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಗೇಟ್ ಸಂಖ್ಯೆ 4ರ ಬಳಿಯ ತೆರೆದ ಸ್ಥಳದಲ್ಲಿ ಅಲಂಕಾರಿಕಾ ವಸ್ತುಗಳನ್ನು ಪ್ಯಾಕ್ ಮಾಡಿ ಒಂದು ಕಡೆ ಇರಿಸಲಾಗಿತ್ತು. ಸಂಜೆ ಏಕಾಏಕಿ ಬೆಂಕಿ ಹೊತ್ತಿಕೊಂಡು ಉರಿಯಲು ಆರಂಭಿಸಿದೆ. ಕೂಡಲೇ ಸಿಬ್ಬಂದಿ ಅಗ್ನಿಶಾಮಕ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಿದ್ದಾರೆ. ಒಂದು ವಾಹನದೊಂದಿಗೆ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ ಸುಮಾರು ಅರ್ಧ ತಾಸು ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸುದ್ದಿ ತಿಳಿದು ಸದಾಶಿವನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಅಗ್ನಿ ಅವಘಡಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಸೂರ್ಯ ಶಾಖ ಹೆಚ್ಚಾಗಿ ಬೆಂಕಿ ಹೊತ್ತಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ಸದಾಶಿವನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.