ಸಾರಾಂಶ
ಮೈಸೂರು : ಮಾನಸ ಗಂಗೋತ್ರಿ ಪ್ರಾಣಿಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕ ಡಾ.ಎಸ್.ಎನ್.ಹೆಗಡೆ ಅವರು ಕನ್ನಡದಲ್ಲಿ ವಿಜ್ಞಾನ ಕೃತಿಗಳ ರಚನೆಯಲ್ಲಿ ನಿಷ್ಣಾತರು. ಇದೀಗ ‘ಮಂಡೂಕ ಪ್ರಪಂಚದೊಳಗೆ ಇಣುಕುನೋಟ’ ಹಾಗೂ ‘ಮರುಭೂಮಿಯ ಪ್ರಾಣಿಗಳು’ ಎಂಬ ಮತ್ತೆರಡು ವಿಜ್ಞಾನ ಕೃತಿಗಳನ್ನು ಪ್ರಕಟಿಸಿದ್ದಾರೆ.
‘ಮಂಡೂಕ ಪ್ರವಂಚದೊಳಗೆ ಇಣುಕುನೋಟ’ ಕೃತಿಯು ಉಭಯಜೀವಿಯಾದ ಕಪ್ಪೆ ಕುರಿತದ್ದು. ಬಾವಿಯೊಳಗಿನ ಕಪ್ಪೆ, ಕುಪ್ಪಳಿಸುವ ಕಪ್ಪೆಗಳು, ಕಪ್ಪೆಯ ಅಂಗರಚನೆ, ಪ್ರಣಯ, ಸಂಗೀತ ಮತ್ತು ಪ್ರಜನನ, ಮೊಟ್ಟೆ. ಬೆಳವಣಿಗೆ ಮತ್ತು ರೂಪ ಪರಿವರ್ತನೆ, ಕಪ್ಪೆ ಕಾಲಿನ ರಫ್ತು, ಹಾರುವ ಕಪ್ಪೆ, ಮಂಡೂಕಗಳು, ದೇವರ ಕಪ್ಪೆ, ಕೆಲವು ವಿಶಿಷ್ಟ ಕಪ್ಪೆ ಪ್ರಬೇಧಗಳು ಅಧ್ಯಾಯಗಳ ಮೂಲಕ ಅವರು ಕಪ್ಪೆ ಹಾಗೂ ಮಂಡೂಕಗಳ ಪ್ರಪಂಚ ವೈವಿಧ್ಯಮಯ ಹಾಗೂ ವಿಶಾಲವಾದುದು ಎಂಬುದನ್ನು ವಿವರಿಸಿದ್ದಾರೆ. ಕಪ್ಪೆ, ಮಂಡೂಕಗಳಿಂದ ಮಾನವನಿಗೆ ಸಾಕಷ್ಟು ಪ್ರಯೋಜನಗಳಿವೆ ಎಂಬುದನ್ನು ಮನವರಿಕೆ ಮಾಡಿಕೊಡಲಾಗಿದೆ. ಜೊತೆಗೆ ಫ್ರಾನ್ಸ್ ಸೇರಿದಂತೆ ಕೆಲವೊಂದು ದೇಶಗಳಲ್ಲಿ ಕಪ್ಪೆ ಕಾಲಿನ ಮಾಂಸಕ್ಕೆ ಭಾರಿ ಬೇಡಿಕೆ ಇದ್ದು, ಭಾರತದಿಂದಲೂ ರಫ್ತಾಗುತ್ತಿತ್ತು. ಸಾಕಷ್ಟು ಪ್ರತಿಭಟನೆಯ ನಂತರ ಇದು ಕಡಿಮೆಯಾಗಿದೆ ಎಂಬುದನ್ನು ದಾಖಲಿಸಿದ್ದಾರೆ.
ಜನಸಾಮಾನ್ಯರದಲ್ಲಿ ಕೂಪ ಮಂಡೂಕ- ಬಾವಿಯೊಳಗಿರುವ ಕಪ್ಪೆ, ಅದುವೇ ಪ್ರಪಂಚ ಎಂದು ತಿಳಿದಿರುತ್ತದೆ ಎಂಬ ಮಾತಿದೆ. ಆದರೆ ಡಾ.ಎಸ್.ಎನ್. ಹೆಗಡೆ ಅವರು ಕಪ್ಪೆ ಬೇರೆ, ಮಂಡೂಕ ಬೇರೆ ಎಂಬುದನ್ನು ತಿಳಿಸಿಕೊಟ್ಟಿದ್ದಾರೆ. ಕಪ್ಪೆಗೆ ಚೂಪು ಮೂತಿ, ಮೃದು ಚರ್ಮ, ಉದ್ದಕಾಲು ಇದ್ದರೆ ಮಂಡೂಕಕ್ಕೆ ಉರುಟು ಮೂತಿ, ಒರಟು ಚರ್ಮ, ಹಾಗೂ ಗಿಡ್ಡ ಕಾಲು ಇರುತ್ತದೆ!.
ವರುಣ ಕೈಕೊಟ್ಟಾಗ ಕಪ್ಪೆ ಮದುವೆ ಮಾಡುವುದು ಏಕೆ? ಎಂಬುದನ್ನು ಇಲ್ಲಿ ಸ್ವಾರಸ್ಯಕರವಾಗಿ ಬರೆದಿದ್ದಾರೆ.
ಯಾರಾದರೂ ನಿರಂತರವಾಗಿ ಮಾತನಾಡುತ್ತಿದ್ದರೆ ‘ಏನು, ಕಪ್ಪೆ ತರ ವಟ, ನಟ ಅಂತೀಯ’ಎನ್ನುತ್ತೇವೆ. ಲೇಖಕರ ಪ್ರಕಾರ, ಮಳೆಗಾಲದ ರಾತ್ರಿಯಲಿ ನಿರಂತರವಾಗಿ
‘ವಟರ್, ವಟರ್...’ ಎಂದು ಕೇಳಿಸುವ ಕಿರುಚಾಟವೇ ಕಪ್ಪೆಯ ಪ್ರಣಯ ಸಂಗೀತವಂತೆ!.
ಈ ನಿರುಪದ್ರವಿ ಜೀವಿಗಳ ಹಲವು ಪ್ರಬೇಧಗಳು ಈಗಾಗಲೇ ವಿನಾಶದ ಹಾದಿಯಲ್ಲಿದ್ದು, ಅವುಗಳ ಸಂರಕ್ಷಣೆಯಾಗಬೇಕು ಎಂಬ ಕಳಕಳಿಯನ್ನು ವ್ಯಕ್ತಪಡಿಸಿದ್ದಾರೆ.
‘ಮರಭೂಮಿಯ ಪ್ರಾಣಿಗಳು’ ಕೃತಿಯಲ್ಲಿ ಚೇಳುಗಳ ಪ್ರಪಂಚ- ಅರಿಝೋನಾ ತೊಗಟೆ ಚೇಳು, ಡೆತ್ ಸ್ಟ್ಯಾಕರ್, ದಪ್ಪ ಬಾಲದ ಚೇಳು, ಚಕ್ರವರ್ತಿ ಚೇಳು, ಮರುಭೂಮಿಯ ಕೂದಲುಳ್ಳ ದೈತ್ಯ ಚೇಳು, ಪ್ಯಾಲಸ್ಟೈನ್ ಹಳದಿ ಚೇಳು, ಕಪ್ಪು ಕೊಂಬಿನ ಬಾಲದ ಚೇಳು, ದಿಬ್ಬದ ಚೇಳು, ನೆಲದ ಹಳದಿ ಚೇಳು, ಪೂರ್ವದ ಮರಳಿನ ಚೇಳು, ಜೇಡದ ಬಲೆ, ಆರು ಕಣ್ಣಿನ ಮರಳ ಜೇಡ, ಮರಳುಗಾಡಿನ ತರಂಟುಲಾ, ಮರುಭೂಮಿಯ ಏಕಾಂಗಿ ಜೇಡ, ಕಪ್ಪು ವಿಧವೆ, ಮರಳಿನ ತೋಳ ಜೇಡ, ದೈತ್ಯ ಏಡಿ ಜೇಡ, ಭಾರತದ ಮುಳ್ಳು ಬಾಲದ ಉಡ, ಕೊಂಬಿನ ಹಲ್ಲಿ,- ಫ್ರೈನೊಸೊಮ, ಒರಟು ಹೊರಪಿನ ಮರಳು ಬೋವಾ, ಗರಗಸ ಮಂಡಲ, ಬುಡುಬುಡುಕೆ ಹಾವು, ಕ್ಯಾರಕಲ್- ಸೊಗಸಾದ ಬೆಕ್ಕು, ಏಷ್ಯಾದ ಕಾಡುಬೆಕ್ಕು, ಮರುಭೂಮಿಯ ನರಿ, ಚಿಂಕಾರ- ನಿಗೂಢ ಪ್ರಾಣಿ, ಕೃಷ್ಣ ಮೃಗ, ಕಾಡು ಕತ್ತೆ, ಮರುಭೂಮಿಯ ಹಡಗು- ಒಂಟೆ, ಬಿಲ್ಬಿ ಎಂಬ ಹೆಗ್ಗಣ, ದಕ್ಷಿಣ ಆಫ್ರಿಕಾದ ಮುಂಗುಸಿ- ಮೀರ್ ಕಾಟ್ ಕುರಿತ ವಿವರಿಸಿದ್ದಾರೆ. ಮರುಭೂಮಿಯ ವಿರರೀತ ಸೆಖೆ, ಶುಷ್ಕತೆ ಹಾಗೂ ವಿರಳ ಸಸ್ಯವರ್ಗ ಇರುವ ಹವಾಮಾನಕ್ಕೆ ತಕ್ಕಂತೆ ಹೊಂದಾಣಿಕೆ ಮಾಡಿಕೊಂಡು ಅಲ್ಲಿಯೂ ಹಲವು ಪ್ರಾಣಿಗಳು ಜೀವಿಸುತ್ತವೆ ಎಂಬುದನ್ನು ತಿಳಿಯಬಹುದು.
ಈ ಕೃತಿಗಳು ಕೇವಲ ಪ್ರಾಣಿಶಾಸ್ತ್ರ ವಿದ್ಯಾರ್ಥಿಗಳು, ಸಂಶೋಧಕರು, ಬೋಧಕರಿಗೆ ಮಾತ್ರವಲ್ಲದೇ ಪ್ರಾಣಿ ಪ್ರಪಂಚದ ಬಗ್ಗೆ ತಿಳಿಯಲು ಆಸಕ್ತಿ ಇರುವ ಎಲ್ಲರಿಗೂ ಉಪಯುಕ್ತವಾಗಿವೆ. ಆಸಕ್ತರು ಡಾ.ಎಸ್.ಎನ್. ಹೆಗಡೆ, ಮೊ. 94483 65799 ಅಥವಾ ವಿಜಯಲಕ್ಷ್ಮಿ ಪ್ರಕಾಶನ, ಮೊ. 98867 65816 ಸಂಪರ್ಕಿಸಬಹುದು.