ಸಾರಾಂಶ
ಬೆಂಗಳೂರು : ಕಿದ್ವಾಯಿ ಸ್ಮಾರಕ ಗಂಥಿ ಆಸ್ಪತ್ರೆಗೆ ದೂರದ ಊರುಗಳಿಂದ ಕ್ಯಾನ್ಸರ್ ಚಿಕಿತ್ಸೆಗೆ ಬರುವ ಬಡವರಿಗೆ ಒಳ ರೋಗಿಗಳಾಗಿ ದಾಖಲಿಸಿಕೊಂಡ ಬಳಿಕವೇ ಆರೋಗ್ಯ ಪರೀಕ್ಷೆಗಳನ್ನು ನಡೆಸುವಂತೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ್ ಪ್ರಕಾಶ್ ಪಾಟೀಲ್ ಸೂಚನೆ ನೀಡಿದ್ದಾರೆ.
ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಗೆ ದೂರದ ಊರಿನಿಂದ ಬರುವ ಬಡ ರೋಗಿಗಳಿಗೆ ಒಂದೊಂದು ದಿನ ಒಂದೊಂದು ಪರೀಕ್ಷೆ ಮಾಡಿ ವಾಪಸು ಕಳುಹಿಸುತ್ತಾರೆ. ಇದರಿಂದ ನಿತ್ಯ ದೂರದ ಊರುಗಳಿಗೆ ಹೋಗಿ ಬರಲು ಕಷ್ಟವಾಗುವ ಜತೆಗೆ ಆರ್ಥಿಕವಾಗಿ ಹೊರೆ ಆಗುತ್ತದೆ. ಆಸ್ಪತ್ರೆಯಲ್ಲಿನ ಈ ವಿಳಂಬ ಧೋರಣೆ ಬಗ್ಗೆ ಸಚಿವರಿಗೆ ದೂರುಗಳು ಬಂದಿದ್ದವು.
ಈ ಹಿನ್ನೆಲೆಯಲ್ಲಿ ಕಿದ್ವಾಯಿ ಆಸ್ಪತ್ರೆ ಅಧಿಕಾರಿಗಳಿಗೆ ನಿರ್ದೇಶ ನೀಡಿರುವ ಶರಣ್‌ಪ್ರಕಾಶ್ ಪಾಟೀಲ್ ಅವರು, ಬಡ ರೋಗಿಗಳನ್ನು ಆಸ್ಪತ್ರೆಯ ವಾರ್ಡ್‌ಗಳಲ್ಲಿ ಒಳರೋಗಿಗಳಾಗಿ ಸೇರಿಸಿಕೊಳ್ಳಬೇಕು. ಆರಂಭಿಕ ರೋಗ ನಿರ್ಣಯ ಹಾಗೂ ಅಂತಿಮ ಆರೋಗ್ಯ ವರದಿಗಳು ಸಿದ್ಧವಾಗುವವರೆಗೂ ಹೊರಗೆ ಉಳಿಸದೆ ದಾಖಲಿಸಿಕೊಳ್ಳಬೇಕು ಎಂದು ಸೂಚನೆ ನೀಡಿದ್ದಾರೆ.
ಶುಕ್ರವಾರ ಸಚಿವರು ಆಸ್ಪತ್ರೆಗೆ ಭೇಟಿ ನೀಡಿದ ವೇಳೆ ರೋಗಿಗಳ ಸಂಖ್ಯೆ ಹೆಚ್ಚಿದ್ದರೂ ಆಸ್ಪತ್ರೆಯ ಹಾಸಿಗೆಗಳು ಶೇ.70ಕ್ಕಿಂತ ಕಡಿಮೆ ಭರ್ತಿಯಾಗಿತ್ತು. ಈ ಬಗ್ಗೆ ವಿವರಣೆ ಕೇಳಿದ ಅವರು, ವೈದ್ಯಕೀಯ ತಪಾಸಣೆ ಅಂತಿಮ ವರದಿಗಳನ್ನು ನೀಡಲು ಒಂದೆರಡು ದಿನ ತೆಗೆದುಕೊಳ್ಳಬಹುದು. ಈ ಅವಧಿಯಲ್ಲಿ ಒಳರೋಗಿಗಳಾಗಿ ದಾಖಲಾಗಲು ಬಯಸುವವರಿಗೆ ಒಪ್ಪಿಗೆ ಪತ್ರವನ್ನು ಒದಗಿಸಿ. ಒಂದು ವೇಳೆ ಹಾಸಿಗೆಗಳು ತುಂಬಿದ್ದರೆ, ಅವರಿಗೆ ಧರ್ಮಶಾಲೆಯಲ್ಲಿ ಸ್ಥಳಾವಕಾಶ ಕಲ್ಪಿಸಿ ಎಂದು ಸೂಚಿಸಿದ್ದಾರೆ.