ಸಮಸ್ತ ಭಾರತೀಯರ ದಾರಿದೀಪ ಅಂಬೇಡ್ಕರ್‌ , ಬಡವ- ಶ್ರೀಮಂತ, ಜಾತಿ-ಧರ್ಮ ಭೇದವಿಲ್ಲದೆ ಪ್ರತಿಯೊಬ್ಬರಿಗೂ ಸಮಾನ ಹಕ್ಕು ಕೊಟ್ಟ ಸಂವಿಧಾನಶಿಲ್ಪಿಪ್ರತಿ ನಾಗರಿಕನ ಧ್ವನಿಯಾಗಿ, ರಾಷ್ಟ್ರನಾಯಕರಾಗಿ ಶಾಶ್ವತವಾಗಿ ಅಂಬೇಡ್ಕರ್‌ ನೆಲೆಸಿದ್ದಾರೆ.  

ಬಡವ- ಶ್ರೀಮಂತ, ಜಾತಿ-ಧರ್ಮ ಭೇದವಿಲ್ಲದೆ ಪ್ರತಿಯೊಬ್ಬರಿಗೂ ಸಮಾನ ಹಕ್ಕು ಕೊಟ್ಟ ಸಂವಿಧಾನಶಿಲ್ಪಿ

ಪ್ರತಿ ನಾಗರಿಕನ ಧ್ವನಿಯಾಗಿ, ರಾಷ್ಟ್ರನಾಯಕರಾಗಿ ಶಾಶ್ವತವಾಗಿ ಅಂಬೇಡ್ಕರ್‌ ನೆಲೆಸಿದ್ದಾರೆ. ಅವರ ಕನಸಿನ ಸಮಾನ ಭಾರತವನ್ನು ನಿರ್ಮಿಸುವುದೇ ನಾವು ಅವರಿಗೆ ಸಲ್ಲಿಸುವ ನಿಜವಾದ ಗೌರವ. ಅಂಬೇಡ್ಕರ್ ಅವರು ಶೋಷಿತರ ಧ್ವನಿಯಾದಂತೆಯೇ, ಇಡೀ ರಾಷ್ಟ್ರದ ನೈತಿಕ ಆತ್ಮಸಾಕ್ಷಿಯೂ ಆಗಿದ್ದರು.

-ಸಿ. ಟಿ. ರವಿ, ವಿಧಾನ ಪರಿಷತ್‌ ಸದಸ್ಯ

 ನವೆಂಬರ್‌ 26 : ಸಂವಿಧಾನ ದಿವಸ

ಭಾರತದ ಇತಿಹಾಸದಲ್ಲಿ ಡಾ. ಬಿ.ಆರ್‌. ಅಂಬೇಡ್ಕರ್ ಅವರ ಹೆಸರು ಸದಾ ಜೀವಂತ. ಅವರನ್ನು ಕೇವಲ ಸಂವಿಧಾನದ ನಿರ್ಮಾತೃ ಎಂದು ನೆನಪಿಸಿಕೊಳ್ಳುವುದು ಅಪೂರ್ಣ. ಅವರ ಚಿಂತನೆ, ದೂರದೃಷ್ಟಿ ಮತ್ತು ಕೊಡುಗೆಗಳು ಸಮಾಜದ ಒಂದು ವರ್ಗಕ್ಕೆ ಮಾತ್ರ ಸೀಮಿತವಾಗಿರದೆ, ಪ್ರತಿ ಭಾರತೀಯನ ಏಳಿಗೆಗೆ ಮೀಸಲಾಗಿದ್ದವು. ತುಳಿತಕ್ಕೊಳಗಾದ ಸಮುದಾಯಗಳ ಜೊತೆಗೆ ಪ್ರತಿಯೊಬ್ಬ ಮನುಷ್ಯನಿಗೆ ಸ್ವಾಭಿಮಾನ ಮತ್ತು ಗೌರವಯುತ ಜೀವನ ಸಿಗಬೇಕು ಎಂಬುದು ಅವರ ಮಹತ್ವಾಕಾಂಕ್ಷೆಯಾಗಿತ್ತು. ಅವರು ರೂಪಿಸಿದ ಸಂವಿಧಾನವು ಜಾತಿ, ಮತ, ಲಿಂಗ ಭೇದವಿಲ್ಲದೆ, ಸಮಸ್ತ ನಾಗರಿಕರಿಗೆ ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ಭದ್ರತೆಯನ್ನು ನೀಡುತ್ತದೆ.

ಸಾರ್ವತ್ರಿಕ ಮತದಾನ ಹಕ್ಕು

ಅಂಬೇಡ್ಕರ್ ಅವರು ಪ್ರಜಾಪ್ರಭುತ್ವವು ಕೇವಲ ಆಡಳಿತ ವ್ಯವಸ್ಥೆಯಾಗದೆ, ನಮ್ಮ ಜೀವನಕ್ರಮವಾಗಿರಬೇಕು ಎಂದು ಆಶಿಸಿದರು. ಅವರ ಅತ್ಯಂತ ಕ್ರಾಂತಿಕಾರಕ ನಿರ್ಧಾರಗಳಲ್ಲಿ, ವಯಸ್ಕ ಮತಾಧಿಕಾರ ಪ್ರಮುಖವಾದದ್ದು. ಸಂವಿಧಾನ ರಚನೆಯಾಗುತ್ತಿದ್ದ ಆ ಕಾಲಘಟ್ಟದಲ್ಲಿ, ವಿಶ್ವದ ಅನೇಕ ಮುಂದುವರಿದ ದೇಶಗಳು ಕೂಡ ಮತದಾನದ ಹಕ್ಕನ್ನು ಎಲ್ಲ ನಾಗರಿಕರಿಗೆ ಸಮಾನವಾಗಿ ನೀಡಿರಲಿಲ್ಲ. ಅಮೆರಿಕ, ಇಂಗ್ಲೆಂಡ್‌ನಂತಹ ದೇಶಗಳಲ್ಲಿಯೂ ಮಹಿಳೆಯರಿಗೆ ಮತದಾನದ ಹಕ್ಕು ತಡವಾಗಿ ದೊರೆಯಿತು. ಅಂಬೇಡ್ಕರ್ ಅವರ ದೃಷ್ಟಿ ಅತ್ಯಂತ ಸ್ಪಷ್ಟವಾಗಿತ್ತು. ಅವರು, ‘ಪ್ರತಿಯೊಬ್ಬ ನಾಗರಿಕನು ತಾನು ಭಾರತೀಯನೆಂಬ ಕಾರಣಕ್ಕೆ ಮಾತ್ರ ಸಮಾನ ಹಕ್ಕಿಗೆ ಅರ್ಹ’ ಎಂದು ದೃಢವಾಗಿ ನಂಬಿದ್ದರು. ಈ ದೃಷ್ಟಿಯ ಆಧಾರದ ಮೇಲೆ, ಸಾರ್ವತ್ರಿಕ ಮತದಾನದ ಹಕ್ಕನ್ನು ಸಂವಿಧಾನದ ಭಾಗವನ್ನಾಗಿ ಮಾಡಿದರು. ಈ ನಿರ್ಧಾರದಿಂದಾಗಿ, ಭಾರತವು ಪ್ರಜಾಪ್ರಭುತ್ವದ ಆರಂಭದಲ್ಲಿಯೇ ರಾಜಕೀಯ ಸಮಾನತೆಯನ್ನು ಸಾಧಿಸಿತು. ಇದು ಕೆಳಸ್ತರದ ಜನರಿಗೂ, ಸಮಾಜದ ದುರ್ಬಲ ವರ್ಗಗಳಿಗೂ ಸರ್ಕಾರದ ಆಯ್ಕೆಯಲ್ಲಿ ನೇರವಾಗಿ ಭಾಗವಹಿಸುವ ಶಕ್ತಿಯನ್ನು ನೀಡಿತು.

ಸಮಾನ ನಾಗರಿಕ ಸಂಹಿತೆಗೆ ಒಲವು

ಏಕರೂಪ ನಾಗರಿಕ ಸಂಹಿತೆಯ ಬಗ್ಗೆ ತಮ್ಮದೇ ಆದ ಸ್ಪಷ್ಟ ಅಭಿಪ್ರಾಯಗಳನ್ನು ಹೊಂದಿದ್ದ ಅಂಬೇಡ್ಕರ್, ‘ಧರ್ಮಾಧಾರಿತ ವೈಯಕ್ತಿಕ ಕಾನೂನುಗಳನ್ನು ರದ್ದುಪಡಿಸಬೇಕು ಮತ್ತು ಎಲ್ಲ ನಾಗರಿಕರಿಗೂ ಒಂದೇ ರೀತಿಯ ಕಾನೂನು ಇರಬೇಕು’ ಎಂದಿದ್ದರು. ವೈಯಕ್ತಿಕ ಕಾನೂನುಗಳು ಮಹಿಳೆಯರನ್ನು ಕೀಳಾಗಿ ಕಾಣುತ್ತವೆ, ಲಿಂಗ ಅಸಮಾನತೆಯನ್ನು ಶಾಶ್ವತಗೊಳಿಸುತ್ತವೆ ಎಂದು ನಂಬಿದ್ದ ಅವರು, ವಿವಾಹ, ವಿಚ್ಛೇದನ, ಆಸ್ತಿ ಹಕ್ಕು, ದತ್ತು ಮುಂತಾದ ವಿಷಯಗಳಲ್ಲಿ ಮಹಿಳೆಯರಿಗೆ ಸಮಾನ ಹಕ್ಕುಗಳನ್ನು ನೀಡುವ ಏಕರೂಪ ನಾಗರಿಕ ಸಂಹಿತೆಗೆ ಒತ್ತಾಯಿಸಿದ್ದರು. ಆದರೆ ಸಂವಿಧಾನ ರಚನೆಯ ಸಮಯದಲ್ಲಿ ಸಮುದಾಯಗಳ ಒಮ್ಮತದ ಕೊರತೆಯಿಂದಾಗಿ, ಇದನ್ನು ಕಡ್ಡಾಯ ಕಾನೂನಿನ ಬದಲು ರಾಜ್ಯ ನಿರ್ದೇಶಕ ತತ್ವಗಳ ಪಟ್ಟಿಯಲ್ಲಿ ಸೇರಿಸಲಾಯಿತು.

ಆರ್ಥಿಕ ಸಮಾನತೆಗೆ ಭದ್ರ ಬುನಾದಿ

ಭಾರತದ ಆರ್ಥಿಕತೆಯ ಕೀಲಿಕೈ ಚುನಾವಣೆಯಲ್ಲಿ ಗೆದ್ದ ಒಂದು ರಾಜಕೀಯ ಪಕ್ಷದ ಅಥವಾ ಸರ್ಕಾರದ ಕೈಯಲ್ಲಿ ಇರಬಾರದು. ಬದಲಿಗೆ, ಅದೊಂದು ಸ್ವತಂತ್ರ ಸಂಸ್ಥೆಯ ನಿಯಂತ್ರಣದಲ್ಲಿರಬೇಕು ಎಂಬುದು ಅಂಬೇಡ್ಕರ್ ಅವರ ನಿಲುವಾಗಿತ್ತು. ಭಾರತದ ಆರ್ಥಿಕ ವ್ಯವಸ್ಥೆಯ ಬಗ್ಗೆ ಅವರ ಆಳವಾದ ತಿಳಿವಳಿಕೆಯು ಅವರ ಪ್ರಸಿದ್ಧ ಕೃತಿ ‘ದಿ ಪ್ರಾಬ್ಲಂ ಆಫ್ ದಿ ರೂಪಿ: ಇಟ್ಸ್ ಒರಿಜಿನ್ ಆ್ಯಂಡ್ ಇಟ್ಸ್ ಸೊಲ್ಯೂಷನ್’ನಲ್ಲಿ ವ್ಯಕ್ತವಾಗಿದೆ. ಈ ಕೃತಿ ಭಾರತದಲ್ಲಿ ಕೇಂದ್ರೀಯ ಬ್ಯಾಂಕ್‌ನ ಅಗತ್ಯತೆ ಮತ್ತು ಕಾರ್ಯನಿರ್ವಹಣೆಗೆ ಬಲವಾದ ಸೈದ್ಧಾಂತಿಕ ತಳಹದಿಯನ್ನು ಒದಗಿಸಿತು. ಅವರ ಈ ವಾದವನ್ನು ಒಪ್ಪಿಕೊಂಡ ಬ್ರಿಟಿಷ್ ಸರ್ಕಾರ 1935ರಲ್ಲಿ ಕಲ್ಕತ್ತಾದಲ್ಲಿ ರಿಸರ್ವ್ ಬ್ಯಾಂಕ್ ಅನ್ನು ಸ್ಥಾಪಿಸಿತು. ಈ ಸಂಸ್ಥೆಗೆ ದೇಶದ ಆರ್ಥಿಕ ನೀತಿಗಳನ್ನು ರೂಪಿಸುವ, ನೋಟು ಮತ್ತು ನಾಣ್ಯಗಳನ್ನು ಮುದ್ರಿಸುವ, ಬ್ಯಾಂಕಿಂಗ್ ವಲಯ ಮತ್ತು ಇತರ ಮಹತ್ವದ ವಿಷಯಗಳ ಬಗ್ಗೆ ಸ್ವತಂತ್ರವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಅಧಿಕಾರವನ್ನು ನೀಡಲಾಯಿತು.

ಜಾತೀಯತೆ, ಅಸಮಾನತೆ ವಿರುದ್ಧ ಕಹಳೆ

ಅಂಬೇಡ್ಕರ್ ಅವರು ಸಮಾಜದಲ್ಲಿನ ಅಸಮಾನತೆ ಮತ್ತು ಜಾತಿ ಪದ್ಧತಿಯನ್ನು ಪ್ರಶ್ನಿಸಿದರು. ಸಮಾನತೆ ಇಲ್ಲದ ಸಮಾಜ ಎಂದಿಗೂ ಪ್ರಗತಿ ಸಾಧಿಸಲಾರದು ಎಂಬುದು ಅವರ ಅಚಲ ವಿಶ್ವಾಸವಾಗಿತ್ತು. ಕಾನೂನು ಮಂತ್ರಿಯಾಗಿ, ಹಿಂದೂ ಕೋಡ್ ಮಸೂದೆಗಳನ್ನು ಮಂಡಿಸಿ, ಭಾರತೀಯ ಮಹಿಳೆಯರ ಕಾನೂನು ಸ್ಥಾನಮಾನವನ್ನೇ ಬದಲಿಸಿದರು. ಮಹಿಳೆಯರಿಗೆ ಆಸ್ತಿ ಹಕ್ಕು ನೀಡುವಿಕೆ, ಮದುವೆ ಮತ್ತು ವಿಚ್ಛೇದನದಲ್ಲಿ ಸಮಾನತೆ, ಶೋಷಣೆಯಿಂದ ರಕ್ಷಣೆ ಹೀಗೆ ಅವರು ರೂಪಿಸಿದ ಅನೇಕ ಕಾನೂನು ಸುಧಾರಣೆಗಳು ಕ್ರಾಂತಿಕಾರಿಯಾಗಿದ್ದವು.

ಜನಸಂಖ್ಯಾ ವಿನಿಮಯಕ್ಕೆ ಸೂಚನೆ

ಹಿಂದೂ ಮುಸ್ಲಿಂ ಏಕತೆ ಸಾಧ್ಯವಿಲ್ಲ, ಮುಸ್ಲಿಮರು ಯಾವತ್ತೂ ಹಿಂದೂಗಳ ಜೊತೆಗಿನ ದೇಶವನ್ನು ಒಪ್ಪಿಕೊಳ್ಳುವುದಿಲ್ಲ ಎಂಬುದು ಅವರ ಅಭಿಪ್ರಾಯವಾಗಿತ್ತು. ಹಾಗೆಯೇ ನಿಜವಾದ ಸಾಮಾಜಿಕ ಏಕತೆ ಇಲ್ಲದಿದ್ದರೆ ರಾಜಕೀಯ ಏಕತೆಯನ್ನು ಬಲವಂತವಾಗಿ ಮುಂದುವರಿಸಲಾಗದು ಎಂದು ಅವರು ಎಚ್ಚರಿಸಿದರು. ರಿಲಿಜನ್ನಿನ ಆಧಾರದಲ್ಲಿ ದೇಶವಿಭಜನೆಯು ಅನಿವಾರ್ಯವಾದರೆ, ಜನಸಂಖ್ಯೆಯ ವಿನಿಮಯವನ್ನು ಸೂಚಿಸಿದರು. ಅಲ್ಲದೆ, ವಿಭಜನೆಯು ಆರ್ಥಿಕ ಹೊರೆ, ಗಡಿ-ನೀರಿನ ಗಲಾಟೆ ಮತ್ತು ಭಾರತದ ಮೇಲಿನ ಸೈನಿಕ ವೆಚ್ಚದ ಹೆಚ್ಚಳಕ್ಕೆ ಕಾರಣವಾಗುತ್ತದೆ ಎಂದು ಸ್ಪಷ್ಟಪಡಿಸಿದರು. ಈ ಸಮಸ್ಯೆಯನ್ನು ವಾಸ್ತವಿಕ ಮತ್ತು ವೈಜ್ಞಾನಿಕವಾಗಿ ಪರಿಹರಿಸಬೇಕು ಎಂದಿದ್ದರು.

ಕಾಂಗ್ರೆಸ್‌ ಸರ್ಕಾರದಿಂದ ಅಗೌರವ

ಅಂಬೇಡ್ಕರ್ ಅವರ ದೂರದೃಷ್ಟಿ ಮತ್ತು ಸಮಾನತೆಯ ಪ್ರತಿಪಾದನೆಯೇ ನಮ್ಮ ಸಂವಿಧಾನದ ಮೂಲಾಧಾರ. ಈ ದೇಶಕ್ಕೆ ಅವರ ಕೊಡುಗೆ ಅಪಾರ. ಆದರೂ ಸ್ವಾತಂತ್ರ್ಯಾನಂತರ ಅವರಿಗೆ ಸಂಸತ್ತಿಗೆ ಪ್ರವೇಶ ಮಾಡಲು ಬಿಡದೆ ಇದ್ದಿದ್ದು ಹಾಗೂ ಎರಡು ಬಾರಿ ಚುನಾವಣೆಯಲ್ಲಿ ಸೋಲಿಸಿದ್ದು, ಅಂದಿನ ಆಳುವ ವರ್ಗ ಮಾಡಿದ ಐತಿಹಾಸಿಕ ತಪ್ಪು. ದೇಶದ ಅತ್ಯುನ್ನತ ಗೌರವವಾದ ‘ಭಾರತರತ್ನ’ವನ್ನು ಸಹ ಅವರಿಗೆ ಬಹುಕಾಲ ನೀಡಲಿಲ್ಲ. ಇವೆಲ್ಲವನ್ನೂ ಅವಲೋಕಿಸಿದಾಗ ಅಂಬೇಡ್ಕರ್ ಅವರ ಕೊಡುಗೆಗಳನ್ನು ಉದ್ದೇಶಪೂರ್ವಕವಾಗಿಯೇ ಅಂದಿನ ಸರ್ಕಾರ ನಿರ್ಲಕ್ಷಿಸಿತ್ತು ಎಂಬುದು ಗಮನಕ್ಕೆ ಬರುತ್ತದೆ.

ಈ ಐತಿಹಾಸಿಕ ಅನ್ಯಾಯವನ್ನು ಸರಿಪಡಿಸುವ ನಿಟ್ಟಿನಲ್ಲಿ, ದಶಕಗಳ ನಂತರ ಬಿಜೆಪಿ ಬೆಂಬಲಿತ ವಿ.ಪಿ. ಸಿಂಗ್ ಸರ್ಕಾರ ಅಂಬೇಡ್ಕರರಿಗೆ 1990ರಲ್ಲಿ ಮರಣೋತ್ತರ ಭಾರತರತ್ನ ಪ್ರಶಸ್ತಿ ನೀಡಿ ಗೌರವಿಸಿತು. ವರ್ಷಗಳ ಕಾಲ ನ.26ನ್ನು ಕೇವಲ ‘ಕಾನೂನು ದಿನ’ ಎಂದು ಕರೆಯಲಾಗುತ್ತಿತ್ತು. ಆದರೆ ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರ ಈ ದಿನವನ್ನು ‘ಸಂವಿಧಾನ ಗೌರವ ದಿವಸ’ ಎಂದು ಪುನರ್ನಾಮಕರಣ ಮಾಡಿ, ಅಂಬೇಡ್ಕರರ ಕೊಡುಗೆಯನ್ನು ಎತ್ತಿಹಿಡಿಯಿತು.

ಪ್ರತಿ ವರ್ಗದ ನಾಯಕ

ಡಾ. ಅಂಬೇಡ್ಕರ್ ಅವರು ಈ ದೇಶದ ಪ್ರತಿಯೊಂದು ಸಮುದಾಯದ ಧ್ವನಿಯಾಗಿದ್ದರು. ಅವರು ರೂಪಿಸಿದ ಸಂವಿಧಾನವು ಬಡವ-ಶ್ರೀಮಂತ, ಜಾತಿ-ಧರ್ಮ, ಲಿಂಗ-ಪ್ರದೇಶ ಎಂಬ ಯಾವುದೇ ಭೇದವಿಲ್ಲದೆ ಪ್ರತಿಯೊಬ್ಬ ಭಾರತೀಯ ನಾಗರಿಕನಿಗೂ ಸಮಾನ ಹಕ್ಕುಗಳನ್ನು ಖಾತರಿಪಡಿಸಿತು. ಹೀಗಾಗಿ ಅವರು ಪ್ರತಿ ನಾಗರಿಕನ ಧ್ವನಿಯಾಗಿ, ರಾಷ್ಟ್ರನಾಯಕರಾಗಿ ಶಾಶ್ವತವಾಗಿ ನೆಲೆಸಿದ್ದಾರೆ. ಅವರ ಕನಸಿನ ಸಮಾನ ಭಾರತವನ್ನು ನಿರ್ಮಿಸುವುದೇ ನಾವು ಅವರಿಗೆ ಸಲ್ಲಿಸುವ ನಿಜವಾದ ಗೌರವ. ಅಂಬೇಡ್ಕರ್ ಅವರು ಶೋಷಿತರ ಧ್ವನಿಯಾದಂತೆಯೇ, ಇಡೀ ರಾಷ್ಟ್ರದ ನೈತಿಕ ಆತ್ಮಸಾಕ್ಷಿಯೂ ಆಗಿದ್ದರು. ಭಾರತದ ಪ್ರಜಾಪ್ರಭುತ್ವ, ಕಾನೂನು ಮತ್ತು ಸಾಮಾಜಿಕ ಅಡಿಪಾಯಗಳನ್ನು ಸದೃಢಗೊಳಿಸಿದರು. ಅವರ ಪರಂಪರೆಯು ನಮ್ಮೆಲ್ಲರನ್ನು ವಿಭಜನೆಗಳನ್ನು ಬದಿಗಿಟ್ಟು, ನ್ಯಾಯ ಮತ್ತು ಘನತೆಯ ತಳಹದಿಯ ಮೇಲೆ ಬಲಿಷ್ಠ ರಾಷ್ಟ್ರವನ್ನು ಕಟ್ಟಲು ಪ್ರೇರೇಪಿಸುತ್ತದೆ.