ಸಾರಾಂಶ
ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ಜಿಲ್ಲಾ ಕಾಂಗ್ರೆಸ್ ಮುಖಂಡರು । ಅಂಬೇಡ್ಕರ್ ತತ್ವಾದರ್ಶ ಪಾಲಿಸುವಂತೆ ಜವರೇಗೌಡ ಕರೆ
ಕನ್ನಡಪ್ರಭ ವಾರ್ತೆ ಹಾಸನನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಅವರ ೬೭ನೇ ಪರಿ ನಿರ್ವಾಣ ದಿನದ ಅಂಗವಾಗಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.
ನಮನ ಸಲ್ಲಿಸಿ ಮಾತನಾಡಿದ ಕಾಂಗ್ರೆಸ್ ಮುಖಂಡ ಎಚ್.ಕೆ. ಜವರೇಗೌಡ,ಇಂದು ಭಾರತೀಯ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಆವರ ೬೭ನೇ ಪುಣ್ಯತಿಥಿ. ಈ ಹಿನ್ನಲೆ ಪ್ರತಿ ವರ್ಷ ಡಿಸೆಂಬರ್ ೬ ರಂದು ‘ಮಹಾ ಪರಿನಿರ್ವಾಣ್ ದಿವಸ್’ ಎಂದು ಆಚರಿಸಲಾಗುತ್ತದೆ. ಮಧ್ಯಪ್ರದೇಶದ ಮೋವ್ ಜಿಲ್ಲೆಯಲ್ಲಿ ೧೮೯೧ರ ಎಪ್ರಿಲ್ ೧೪ ರಂದು ದಲಿತ ಕುಟುಂಬದಲ್ಲಿ ಹುಟ್ಟಿದ ಅಂಬೇಡ್ಕರ್. ಚಿಕ್ಕಂದಿನಿಂದಲೂ ಅವಮಾನವನ್ನೇ ಎದುರಿಸಿದವರು. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮೂಲ ಹೆಸರು ಅಂಬಾವಾಡ್ಕರ್. ಶಾಲಾ ದಿನಗಳಲ್ಲಿ ದಾಖಲಾತಿಗಾಗಿ ಅವರ ಶಿಕ್ಷಕಿ ಅಂಬೇಡ್ಕರ್ ಎಂದು ನಾಮಕರಣ ಮಾಡಿದ್ದರು. ದಲಿತರ ಶಿಕ್ಷಣ, ಮಹಿಳೆಯರ ಸಬಲೀಕರಣ, ಹಾಗೂ ಬಡಜನರ ಆರ್ಥಿಕ ಸ್ಥಿತಿ ಸುಧಾರಿಸುವ ಸಲುವಾಗಿ ತಮ್ಮ ಇಡೀ ಜೀವನವನ್ನು ಮುಡಿಪಾಗಿಟ್ಟವರು ಡಾ. ಭೀಮ್ ರಾವ್ ರಾಮ್ ಜಿ ಅಂಬೇಡ್ಕರ್. ತಮ್ಮ ಜೀವನದ ಕೊನೆಯ ದಿನಗಳಲ್ಲಿ ಬೌದ್ಧ ಧರ್ಮ ಸ್ವೀಕಾರ ಮಾಡಿದ್ದರು. ಬೌದ್ಧ ಧರ್ಮದಲ್ಲಿ ಮರಣ ಹೊಂದಿದ ದಿನವನ್ನು ಪರಿನಿರ್ವಾಣ ಎಂದು ಕರೆಯುತ್ತಾರೆ. ಆದ್ದರಿಂದ ಡಾ. ಬಿ.ಆರ್. ಅಂಬೇಡ್ಕರ್ ಅವರು ನಿಧನದ ದಿನವನ್ನು ಪರಿನಿರ್ವಾಣ್ ದಿವಸ್ ಎಂದು ಆಚರಿಸಲಾಗುತ್ತಿದೆ ಎಂದರು.ಜಿಲ್ಲಾ ಮಾಧ್ಯಮ ವಕ್ತಾರ ದೇವರಾಜೇಗೌಡ ಮಾತನಾಡಿ, ಬಹುಮುಖ ವ್ಯಕ್ತಿತ್ವ ಹೊಂದಿದ್ದ ಅಂಬೇಡ್ಕರ್, ಕೇವಲ ಸಂವಿಧಾನ ಶಿಲ್ಪಿ ಮಾತ್ರವಲ್ಲದೇ ಉತ್ತಮ ನ್ಯಾಯವಾದಿ, ಶಿಕ್ಷಣತಜ್ಞ, ಪತ್ರಕರ್ತ, ರಾಜಕಾರಣಿ, ಸಮಾಜಶಾಸ್ತ್ರಜ್ಞ ಹಾಗೂ ಆರ್ಥಿಕತಜ್ಞರೂ ಆಗಿದ್ದರು. ಸಮಾಜದಲ್ಲಿ ಪಿಡುಗಾಗಿದ್ದ ಅಸ್ಪೃಶ್ಯತೆ ತೊಡೆದುಹಾಕುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಜತೆಗೆ ದಲಿತರ ಸರ್ವಾಂಗೀಣ ಏಳಿಗೆಗಾಗಿ ಪಣತೊಟ್ಟಿದ್ದರು. ಲಿಂಗ ಸಮಾನತೆಯ ಜತೆಗೆ ದಲಿತರ ಜೀವನದಲ್ಲೂ ಶಿಕ್ಷಣದ ಬೆಳಕು ಮೂಡಬೇಕು ಎಂದು ಹೋರಾಡಿದವರು ಡಾ. ಬಿ ಆರ್. ಅಂಬೇಡ್ಕರ್. ಯುಎಸ್‌ನ ಕೊಲಂಬಿಯಾ ವಿಶ್ವವಿದ್ಯಾಲಯ ಹಾಗೂ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ನಲ್ಲಿ ಸರ್ಕಾರದ ವಿದ್ಯಾರ್ಥಿ ವೇತನ ಪಡೆಯುವ ಮೂಲಕ ಶಿಕ್ಷಣ ಪಡೆದರು. ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ನಿಂದ ಡಾಕ್ಟರ್ ಆಲ್ ಸೈನ್ಸ್ ಎಂಬ ಅಪರೂಪದ ಡಾಕ್ಟರೇಟ್ ಪದವಿಯನ್ನು ಪಡೆದ ಜಗತ್ತಿನ ಮೊದಲ ವ್ಯಕ್ತಿ ಎನಿಸಿಕೊಂಡವರು. ಅಸ್ಪಶ್ಯತೆ ಎನ್ನುವ ಸಾಮಾಜಿಕ ಪಿಡುಗಿಗೆ ಅಂತ್ಯ ಹಾಡಿದ್ದರು. ಜಾತ್ಯಾತೀತ, ಸಮಾಜವಾದಿ, ಪ್ರಜಾಪ್ರಭುತ್ವದಲ್ಲಿ ಅಪಾರ ವಿಶ್ವಾಸ ಹೊಂದಿದ್ದ ಅವರು, ಮಾನವ ಕುಲದ ಹಕ್ಕುಗಳು, ಸ್ವಾತಂತ್ರ್ಯ, ಸಮಾನತೆಯ ಸ್ಥಾಪನೆಗಾಗಿ ಹೋರಾಡಿದ ಮಹಾನ್ ನಾಯಕ ಎಂದು ಬಣ್ಣಿಸಿದರು.
ಕಾಂಗ್ರೆಸ್ ಪಕ್ಷದ ಮುಖಂಡರಾದ ತಾರಚಂದನ್, ಅಶೋಕ್ ನಾಯಕರಹಳ್ಳಿ, ಮಲ್ಲಿಗೆವಾಳು ದೇವಪ್ಪ, ಬಿ.ಕೆ. ರಂಗಸ್ವಾಮಿ, ಕುಮಾರಸ್ವಾಮಿ, ಅಬ್ದುಲ್ ಸಮದ್, ಶಿವಕುಮಾರ್, ಶೇಖರಪ್ಪ ಇತರರು ಉಪಸ್ಥಿತರಿದ್ದರು.--
ಹಾಸನದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಅವರ ೬೭ನೇ ಪರಿ ನಿರ್ವಾಣ ದಿನ ಆಚರಿಸಲಾಯಿತು.ಜಿಲ್ಲಾ ಕಾಂಗ್ರೆಸ್ ಮುಖಂಡರು,ಕಾರ್ಯಕರ್ತರು ಭಾಗವಹಿಸಿದ್ದರು.