2025ರ ಕೊನೆಗೆ ಬಂದಿದ್ದೇವೆ. ಈ ವರ್ಷದಲ್ಲಿ ಹೊಸ ವ್ಯಕ್ತಿತ್ವದ ಮಾದರಿಯೊಂದನ್ನು ಸೈಕಿಯಾಟ್ರಿಸ್ಟ್ ಪತ್ತೆ ಮಾಡಿದ್ದಾರೆ. ಈಗ ಚಾಲ್ತಿಯಲ್ಲಿರುವ ಎಕ್ಸ್ಟ್ರಾವರ್ಟ್, ಅಂತರ್ಮುಖಿಗಳು (introvert) ಹಾಗೂ ಆ್ಯಂಬಿವರ್ಟ್‌ಗಳಿಗಿಂತ ಬೇರೆಯಾಗಿ ನಿಲ್ಲುವ ಒಟ್ರಾವರ್ಟ್‌ಗಳು ಒಂಥರಾ ಎಲ್ಲೂ ಸಲ್ಲದವರು.
2025ರ ಕೊನೆಗೆ ಬಂದಿದ್ದೇವೆ. ಈ ವರ್ಷದಲ್ಲಿ ಹೊಸ ವ್ಯಕ್ತಿತ್ವದ ಮಾದರಿಯೊಂದನ್ನು ಸೈಕಿಯಾಟ್ರಿಸ್ಟ್ ಪತ್ತೆ ಮಾಡಿದ್ದಾರೆ. ಈಗ ಚಾಲ್ತಿಯಲ್ಲಿರುವ ಎಕ್ಸ್ಟ್ರಾವರ್ಟ್, ಅಂತರ್ಮುಖಿಗಳು (introvert) ಹಾಗೂ ಆ್ಯಂಬಿವರ್ಟ್‌ಗಳಿಗಿಂತ ಬೇರೆಯಾಗಿ ನಿಲ್ಲುವ ಒಟ್ರಾವರ್ಟ್‌ಗಳು ಒಂಥರಾ ಎಲ್ಲೂ ಸಲ್ಲದವರು. ಕೊಂಚ ಲಘುವಾಗಿ ಇದನ್ನು ಬ್ಲೂಟೂಥ್ ಫೆನಾಮೆನನ್ ಅನ್ನಬಹುದು.
ಅರವಿಂದ್ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಹ್ಯಾಂಡ್‌ಸಮ್ ಹುಡುಗ. ಪಾರ್ಟಿಗಳಲ್ಲಿ ಇವನಿದ್ದರೇ ಜೋಶ್. ಫ್ರೆಂಡ್ಸ್ ಸರ್ಕಲ್‌ನಲ್ಲೆಲ್ಲ ಪಾರ್ಟಿ ಸ್ಟಾರ್ ಅಂತಲೇ ಫೇಮಸ್. ಸೋಷಲ್ ಗ್ಯಾದರಿಂಗ್‌ನಲ್ಲಿ ತಮಾಷೆ ಮಾಡುತ್ತ, ಎಲ್ಲರನ್ನೂ ನಗಿಸುತ್ತ, ಸೈಲೆಂಟ್ ಇರುವವರನ್ನೂ ಬಿಡದೇ ಡ್ಯಾನ್ಸ್ ಮಾಡಿಸುತ್ತ ಇದ್ದರೆ ಎಲ್ಲ ಕಣ್ಣೂ ಇವನ ಮೇಲೆ. ಒಂಥರಾ ಸೆಂಟರ್ ಆಫ್ ಅಟ್ರಾಕ್ಷನ್ ಅಂತಾರಲ್ಲ, ಹಾಗೆ.
ಹೀಗೆ ಫುಲ್ ಜೋಶ್‌ನಲ್ಲಿ ಮಿಂಚುತ್ತಿರುವಾಗಲೇ ಎಲ್ಲರ ಗಮನವನ್ನು ಮತ್ತೆಲ್ಲಿಗೋ ದಾಟಿಸಿ, ಕ್ಷಣಮಾತ್ರದಲ್ಲಿ ಅಲ್ಲಿಂದ ಕಣ್ಮರೆಯಾಗಿ ಬಿಡುತ್ತಾನೆ. ಜೋರಾಗಿ ಉಸಿರೆಳೆದುಕೊಳ್ಳುತ್ತ ಹೊರಗೆ ಬರುತ್ತಾನೆ. ಯಾರಿಗೂ ಕಾಣದ ಜಾಗದಲ್ಲಿ ಒಬ್ಬನೇ ನಿಂತು ಬೀದಿ ದೀಪಗಳನ್ನೋ, ದೀಪದ ಸುತ್ತ ಹಾರುವ ಕೀಟಗಳನ್ನೋ ತದೇಕ ಚಿತ್ತದಿಂದ ನೋಡುತ್ತ ನಿಲ್ಲುತ್ತಾನೆ. ಉದ್ವಿಗ್ನಗೊಂಡ ಅವನ ಮನಸ್ಸು ನಿಧಾನಕ್ಕೆ ಶಾಂತವಾಗುತ್ತ ಹೋಗುತ್ತದೆ.
ತಾನು ಯಾಕೆ ಹೀಗೆ ಅನ್ನುವುದು ಅವನಿಗೇ ಇನ್ನೂ ಅರ್ಥವಾಗಿಲ್ಲ. ಪಾರ್ಟಿಯಲ್ಲಿ ಎಲ್ಲರ ಜೊತೆಗೆ ಅಷ್ಟು ಸಲೀಸಾಗಿ ಬೆರೆತರೂ, ಎಲ್ಲರ ಆಕರ್ಷಣೆಯ ಕೇಂದ್ರವಾಗಿದ್ದರೂ ಅವನ ಮನಸ್ಸು ಒಳಗಿಂದೊಳಗೇ ತಾನು ಇಲ್ಲಿಗೆ ಸೇರಿದವನಲ್ಲ ಅಂತ ಹೇಳುತ್ತಿರುತ್ತದೆ. ಅಲ್ಲಿಂದ ಒಮ್ಮೆ ಪಾರಾದರೆ ಸಾಕು ಎಂದು ಚಡಪಡಿಸುತ್ತದೆ. ಆದರೆ ಅದ್ಯಾವುದನ್ನೂ ಹೊರ ಜಗತ್ತಿಗೆ ತೋರ್ಪಡಿಸಿಕೊಳ್ಳದೇ ತನ್ನ ಸ್ವಭಾವಕ್ಕೆ ತದ್ವಿರುದ್ಧವಾಗಿರುವ ಕಲೆಯೂ ಅವನಿಗೆ ಗೊತ್ತು. ತನ್ನ ಅಂತರಂಗವನ್ನು ಹೊರ ಜಗತ್ತಿನಿಂದ ಮುಚ್ಚಿಟ್ಟು ಬೇರೆ ಥರ ಅಂತ ತೋರಿಸಿಕೊಳ್ಳುತ್ತ ಹೋಗುತ್ತಾನೆ.
ಇದು ಈ ಕಾಲದಲ್ಲಿ ಪತ್ತೆಹಚ್ಚಲಾದ ವ್ಯಕ್ತಿತ್ವದ ಮಾದರಿ. ಇಟ್ಟಿರುವ ಹೆಸರು ‘ಒಟ್ರಾವರ್ಟ್’. ಡಾ ರಾಮಿ ಕಾಮಿಸ್ಕಿ ಎಂಬ ವಿಶ್ವಪ್ರಸಿದ್ಧ ಸೈಕಿಯಾಟ್ರಿಸ್ಟ್ ಈ ಮಾದರಿಯನ್ನು ಪತ್ತೆ ಹಚ್ಚಿ ಅದಕ್ಕೆ ‘ಒಟ್ರಾವರ್ಟ್’ ಅನ್ನೋ ವಿಚಿತ್ರ ಹೆಸರನ್ನೂ ಇಟ್ಟಿದ್ದಾರೆ. ಈ ಮನೋರೋಗತಜ್ಞನ ಜನಪ್ರಿಯ ಪುಸ್ತಕ ‘ದಿ ಗಿಫ್ಟ್ ಆಫ್ ನಾಟ್ ಬಿಲಾಂಗಿಂಗ್’ ಅನ್ನೋದು. ಅದರಲ್ಲಿ ಈ ‘ಒಟ್ರಾವರ್ಟ್’ಗಳ ಬಗ್ಗೆ ವಿವರವಾಗಿ ಬರೆದಿದ್ದಾರೆ. ಅದನ್ನು ಅವರ ಮಾತುಗಳಲ್ಲೇ ನೋಡೋಣ.
*
ನೀನು ಒಟ್ರಾವರ್ಟಾ? ಒಮ್ಮೆ ಚೆಕ್ ಮಾಡು
ವೀಕೆಂಡ್‌ನಲ್ಲಿ ಕ್ಲಾಸ್‌ನ ಒಂದಿಷ್ಟು ಜನ ಯಾರದೋ ಮನೆಯಲ್ಲಿ ಸ್ಲೀಪ್ ಓವರ್‌ಗೆ ಹೋಗ್ತಿದ್ದಾರೆ. ನಿನಗೂ ಬರುವಂತೆ ಆಹ್ವಾನ ಬಂದಿದೆ. ಮನೆಯಲ್ಲಿ ಅಮ್ಮ ಹೋಗು, ಫ್ರೆಂಡ್ಸ್ ಜೊತೆಗೆ ಎನ್‌ಜಾಯ್ ಮಾಡು ಅಂತಿದ್ದಾಳೆ. ಅಪ್ಪನೂ ಅಮ್ಮನ ಮಾತನ್ನು ಅನುಮೋದಿಸುತ್ತಾನೆ. ನೀನು ಈಗ ಕಂಗಾಲಾಗಿದ್ದೀಯ. ಅರೆ, ಅಪ್ಪ, ಅಮ್ಮ ಸ್ಲೀಪ್ ಓವರ್‌ಗೆ ಹೋಗೋದು ಬೇಡ ಅಂತಾರೆ ಅಂದುಕೊಂಡರೆ ಅವರೂ ಹೋಗು, ಎನ್‌ಜಾಯ್ ಮಾಡು ಅಂತಿದ್ದಾರಲ್ಲ. ಈಗ ನಾನೇನು ಮಾಡಲಿ ಅಂತ
ನಿನ್ನ ಒಳಗೇ ಪೇಚಾಟ ಶುರುವಾಗಿದೆ.
ಬುದ್ಧಿ ಬಂದಾಗಿನಿಂದಲೂ ನಿನಗೆ ಪಾರ್ಟಿಗಳು, ಸೋಷಲ್ ಲೈಫ್ ಅಂದರೆ ಅಷ್ಟಕ್ಕಷ್ಟೇ. ಹಾಗಂತ ನೀನು ಅಂತರ್ಮುಖಿ ಅಲ್ಲ. ಒಬ್ಬರೋ ಇಬ್ಬರೋ ಕ್ಲೋಸ್ ಫ್ರೆಂಡ್ಸ್ ಜೊತೆ ಸುತ್ತಾಟ, ಓಡಾಟ ನಿನಗಿಷ್ಟ. ಅದೇ ಫ್ರೆಂಡ್ಸ್ ಟೀಮ್ ಜೊತೆ ಸೇರ್ಕೊಂಡು, ಬಾ ಅಂತ ಕರೆದರೆ ನೀನು ಅಲ್ಲಿಂದ ಎಸ್ಕೇಪ್ ಆಗಿ ಬಿಡುತ್ತೀಯ.
ನಿಂಗೆ ಫ್ರೆಂಡ್ ಜೊತೆಗೆ ಬ್ಯಾಡ್ಮಿಂಟನ್ ಆಡೋದು ಇಷ್ಟ. ಆದರೆ ಟೀಮ್ ಜೊತೆ ಸೇರ್ಕೊಂಡು ಕ್ರಿಕೆಟ್ ಅಂದರೆ ನೀನು ಹಿಂದೇಟು ಹಾಕ್ತೀಯ. ಫ್ರೆಂಡ್ ಮನೆಗೆ ಹೋಗಿ ಅವಳ ಜೊತೆಗೆ ಓದ್ಕೊಳ್ಳೋದು ಇಷ್ಟ ಆಗುತ್ತೆ. ಅದೇ ರೀಡರ್ಸ್ ಕ್ಲಬ್ ಅಂತ ಒಂದಿಷ್ಟು ಜನ ಸೇರಿ ಪುಸ್ತಕದ ಬಗ್ಗೆ ಚರ್ಚೆ ಮಾಡ್ತಿದ್ರೆ ಅಲ್ಲಿ ನೀನಿರಲ್ಲ.
ಒಟ್ಟಾರೆ ಹೇಳೋದಾದರೆ ನಿನಗೆ ಟೀಮ್ ವರ್ಕ್ ಅಂದರೆ ಅಲರ್ಜಿ. ನೀನಲ್ಲಿ ಸಲೀಸಾಗಿ ‘ಫಿಟ್’ ಆಗಲಾರೆ. ಅದೇ ನಿನಗೇ ಒಂದು ಕೆಲಸ ಕೊಟ್ಟರೆ ಬಹಳ ಚೆನ್ನಾಗಿ ಮಾಡಬಲ್ಲೆ.
ಕೆಲವೊಮ್ಮೆ ಸಾಮಾಜಿಕ ಸಂದರ್ಭಗಳು ಇನ್ನೊಂದು ಬಗೆಯಲ್ಲಿ ಬರುತ್ತವೆ. ನೀನು ಗ್ರೂಪ್‌ಗಳಲ್ಲಿ ಸೇರಲೇ ಬೇಕಾಗುತ್ತದೆ. ಪಾರ್ಟಿಯಲ್ಲಿ ಪಾಲ್ಗೊಳ್ಳದಿದ್ದರೆ ನಿನ್ನ ಪ್ರೊಫೆಶನಲ್ ಬೆಳವಣಿಗೆಗೆ ಸಮಸ್ಯೆ ಆಗುತ್ತೆ. ಅಂಥಾ ಸಮಯದಲ್ಲಿ ನೀನು ಅಲ್ಲಿಗೆ ಹೋಗುತ್ತೀಯ, ಬಹಳ ಸೋಷಲ್ ಆಗಿ ಎಲ್ಲರ ಜೊತೆಗೆ ಬೆರೆಯುತ್ತೀಯ. ಕೆಲವೊಮ್ಮೆ ಯಾವ ಲೆವೆಲ್‌ವರೆಗೂ ಹೋಗ್ತೀಯ ಅಂದರೆ ನಿನ್ನ ಈ ರೀತಿಯನ್ನು ನೋಡಿದವರು ನೀನು ಖಂಡಿತಾ ಎಕ್ಸ್ಟ್ರಾವರ್ಕ್ ಅಂದುಕೊಳ್ಳುತ್ತಾರೆ. ಆದರೆ ನಿನ್ನೊಳಗೆ ನೀನು ಉಸಿರುಕಟ್ಟಿದವಳ ಹಾಗೆ ಚಡಪಡಿಸುತ್ತಿರುತ್ತೀಯ. ನಾನು ಇಲ್ಲಿಗೆ ಸೇರಿದವಳಲ್ಲ ಅನ್ನುವ ಭಾವನೆ ನಿನ್ನನ್ನು ಒಳಗೊಳಗೇ ಅಲ್ಲಾಡಿಸುತ್ತಿರುತ್ತದೆ.
.. ಇವೆಲ್ಲ ಗುಣಗಳು ನಿನ್ನಲ್ಲಿವೆಯಾ, ಹಾಗಿದ್ದಲ್ಲಿ, ನೀನು ಒಟ್ರೋವರ್ಟ್ ಆಗಿರಬಹುದು.
ಒಟ್ರೋವರ್ಟ್‌ಗಳ ಒಂದು ಸ್ವಭಾವ ಅಂದರೆ ಅವರು ಬಾಲ್ಯದಿಂದಲೇ ಗುಂಪಿನ ಜೊತೆ ಸೇರುವವರಲ್ಲ. ಹಾಗೆಂದು ಅಂತರ್ಮುಖಿಗಳೂ ಅಲ್ಲ. ಇಂಟ್ರಾವರ್ಟ್‌ಗಳ ಸಂಕೋಚ, ನಾಚಿಕೆಯ ಪ್ರವೃತ್ತಿ ಇವರದಲ್ಲ. ಈ ಎರಡರ ಮಧ್ಯದ ಆ್ಯಂಬಿವರ್ಟ್‌ಗಳಂತೂ ಅಲ್ಲವೇ ಅಲ್ಲ. ಕ್ಲೋಸ್ ಫ್ರೆಂಡ್ಸ್ ಜೊತೆಗೆ ಮಾಲ್, ಶಾಪಿಂಗ್, ಔಟಿಂಗ್ ಅಂತ ಬಿಂದಾಸ್ ಆಗಿ ಓಡಾಡಬಲ್ಲರು. ಅದೇ ಸ್ಕೂಲ್ ಟ್ರಿಪ್‌ಗೋ ದೊಡ್ಡ ಗುಂಪುಗಳಲ್ಲೋ ಇದ್ದಾಗ ಇವರಿಗೆ ಒಂಟಿತನ ಕಾಡುತ್ತದೆ.
ಇಂಥಾದ್ದೊಂದು ವ್ಯಕ್ತಿತ್ವದ ಬಗ್ಗೆ ನಮಗೆ ಅರಿವೇ ಇಲ್ಲದ ಕಾರಣ ಗೊತ್ತಿದ್ದೋ ಗೊತ್ತಿಲ್ಲದೆಯೋ ಈ ಒಟ್ರಾವರ್ಟ್‌ಗಳನ್ನು ಒಂದು ರೀತಿ ‘ಹೊರಗಿಡಲ್ಪಟ್ಟ’ ಮಾದರಿಯಾಗಿ ಮಾಡಿಬಿಟ್ಟಿದ್ದೇವೆ. ಈ ಕಾರಣಕ್ಕೇ ಅವರು ಕೆಲವೊಮ್ಮೆ ಕಷ್ಟಪಟ್ಟು ತಮ್ಮದಲ್ಲದ ಪಾತ್ರವನ್ನು ನಿಭಾಯಿಸುತ್ತಿರುತ್ತಾರೆ. ಅದು ಅವರಲ್ಲಿ ಒತ್ತಡ, ಅಸಹಾಯಕತೆ ಕೆಲವೊಮ್ಮೆ ಖಿನ್ನತೆಯಂಥಾ ಸಮಸ್ಯೆಗೂ ಕಾರಣವಾಗುತ್ತದೆ.
ಅವಿಭಕ್ತ ಕುಟುಂಬಗಳಲ್ಲಿ, ಸಾಂಸ್ಕೃತಿಕ ಸಮಾರಂಭಗಳಲ್ಲಿ ಈ ಸ್ವಭಾವದವರು ಕಡೆಗಣನೆಗೆ ಕೆಲವೊಮ್ಮೆ ಅವಮಾನಕ್ಕೆ ಒಳಗಾಗುವುದೂ ಇದೆ.
ಒಟ್ರಾವರ್ಟ್ ಅನ್ನೋದರ ಅರ್ಥ ಏನು?
‘ಒಟ್ರೋ’ ಅಂದರೆ ಬೇರೊಬ್ಬರು ಅಂತ ಅರ್ಥ. ವರ್ಟ್ ಅಂದರೆ ತಿರುಗುವಿಕೆ . ಒಟ್ಟಾಗಿ ‘ಒಟ್ರಾವರ್ಟ್’ ಅಂದರೆ ಗುಂಪಿನಿಂದ ಹೊರಗುಳಿಯಲ್ಪಟ್ಟವರು, ಬೇರ್ಪಟ್ಟವರು ಎಂದಾಗುತ್ತದೆ.
ಇದೊಂದು ಸಮಸ್ಯೆಯಾ?
ಇದು ಸಮಸ್ಯೆ ಅಲ್ಲ. ಇದೊಂದು ವ್ಯಕ್ತಿತ್ವದ ಮಾದರಿ. ಈ ಮಾದರಿಯನ್ನು ಪತ್ತೆ ಹಚ್ಚಿದ ಅಮೆರಿಕಾ ಮೂಲದ ಸೈಕಿಯಾಟ್ರಿಸ್ಟ್ ಡಾ ರಾಮಿ ಕಾಮಿಸ್ಕಿ ಅವರೇ ಈ ವ್ಯಕ್ತಿತ್ವ ಹೊಂದಿದವರಾಗಿದ್ದರು. ಬಾಲ್ಯದಲ್ಲಿನ ಒಂದು ಘಟನೆಯನ್ನು ಇವರು ಇತ್ತೀಚೆಗೆ ಹೇಳಿಕೊಂಡಿದ್ದಾರೆ. ‘ಚಿಕ್ಕವನಿದ್ದಾಗ ನಾನು ಸ್ಕೂಲಲ್ಲಿ ಸ್ಕೌಟ್ಸ್‌ಗೆ ಸೇರಿಕೊಂಡಿದ್ದೆ. ನನಗೆ ಸ್ಕೌಟ್ಸ್ ಯೂನಿಫಾರ್ಮ್ ತೊಡಿಸಿ ಬೇರೆ ಮಕ್ಕಳ ಜೊತೆಗೆ ವೃತ್ತಾಕಾರದಲ್ಲಿ ಕೂರಿಸಿದ್ದರು. ಅಲ್ಲಿ ಒಂದಿಷ್ಟು ಚಟುವಟಿಕೆಗಳಿದ್ದವು. ಘೋಷಣೆ ಕೂಗಿಸುತ್ತಿದ್ದರು. ಮಕ್ಕಳೆಲ್ಲ ಉತ್ಸಾಹದಿಂದ ಜೋರು ಜೋರಾಗಿ ಘೋಷಣೆ ಕೂಗುತ್ತ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರೆ ನನಗೆ ಮಾತ್ರ ಅಲ್ಲಿಂದ ಓಡಿಹೋಗಾಣ ಅಂತ ಅನಿಸುತ್ತಿತ್ತು. ನಾನು ಇವರಂಥಲ್ಲ. ಬೇರೆ ಥರ ಅನ್ನೋದೂ ಆಗ ಗೊತ್ತಾಯಿತು’ ಎಂದು ಡಾ ರಾಮಿ ವಿವರಿಸುತ್ತಾರೆ.
ಬ್ಲೂಟೂಥ್ ಫೆನಾಮೆನನ್
ಒಟ್ರಾವರ್ಟ್ ವ್ಯಕ್ತಿತ್ವವನ್ನು ಬ್ಲೂಟೂಥ್ ಫೆನಾಮೆನನ್ ಅಂತಾರೆ. ಯಾಕೆಂದರೆ ಈ ಒಟ್ರಾವರ್ಟ್‌ಗಳು ಕ್ಲೋಸ್ ಇರುವ ವ್ಯಕ್ತಿತ್ವಗಳ ಜೊತೆ ಮಾತ್ರ ಸೇರಬಲ್ಲರು. ಕೆಲವೇ ಕೆಲವರಷ್ಟೇ ಇವರ ಆತ್ಮೀಯ ಬಳಗದಲ್ಲಿರುತ್ತಾರೆ.
ಒಟ್ರಾವರ್ಟ್‌ಗಳ ವಿಶೇಷತೆ ಏನು?
ಇವರಲ್ಲಿ ಸ್ವಂತಿಕೆ ಹೆಚ್ಚು. ಇವರು ಒಂದು ಗುಂಪಿನ ಅಭಿಪ್ರಾಯಕ್ಕೆ ಬದ್ಧವಾಗಿ ಗೋಣು ಅಲ್ಲಾಡಿಸೋದಿಲ್ಲ. ಬದಲಿಗೆ ತಮ್ಮ ಸ್ವತಂತ್ರ್ಯ ವ್ಯಕ್ತಿತ್ವ ಹೊಂದಿರುತ್ತಾರೆ. ಭಾವನಾತ್ಮಕವಾಗಿಯೂ ಇವರಿಗೆ ಇತರರೊಂದಿಗೆ ಅವಲಂಬನೆ ಕಡಿಮೆ. ಸರಿಯಾದ ಕ್ರಮದಲ್ಲಿ ಈ ವ್ಯಕ್ತಿತ್ವದವರನ್ನು ಬೆಳೆಸಿದರೆ ಇವರು ದೊಡ್ಡ ಅನ್ವೇಷಕರಾಗಿ ಬೆಳೆಯಬಲ್ಲರು.
