ಭಾರತದ ಎಲ್ಲಾ ವರ್ಗದ ಜನರಿಗೆ ಸಮಾನತೆ ಸಾರುವ ಸಂವಿಧಾನವನ್ನು ಕೊಟ್ಟಿರುವವವರು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಇಂದು ಭೌತಿಕವಾಗಿ ನಮ್ಮ ಜೊತೆ ಇಲ್ಲದೆ ಇರಬಹುದು, ಆದರೆ ಅವರು ನಡೆದುಬಂದ ಹಾದಿ, ಅವರ ಆದರ್ಶ ಹಾಗೂ ವ್ಯಕ್ತಿತ್ವ ನಮಗೆಲ್ಲರಿಗೂ ಇಂದಿಗೂ ಪ್ರೇರಣೆಯಾಗಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ಜಿಲ್ಲಾಡಳಿತ, ಜಿಪಂ, ಸಮಾಜ ಕಲ್ಯಾಣ ಇಲಾಖೆ ಹಾಗೂ ಮೈಸೂರು ನಗರ ಪಾಲಿಕೆ ವತಿಯಿಂದ ರಾಷ್ಟ್ರನಾಯಕ ಡಾ.ಬಿ.ಆರ್.ಅಂಬೇಡ್ಕರ್ ಅವರ 69ನೇ ಮಹಾ ಪರಿನಿರ್ವಾಣ ಕಾರ್ಯಕ್ರಮದ ಪ್ರಯುಕ್ತ ಶನಿವಾರ ಪುರಭವನ ಆವರಣದ ಡಾ.ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಗೆ ಪುಷ್ಪಾರ್ಚನೆ ಮಾಡವ ಮೂಲಕ ಶಾಸಕರಾದ ತನ್ವೀರ್ ಸೇಠ್, ಟಿ.ಎಸ್. ಶ್ರೀವತ್ಸ, ಕೆ.ಹರೀಶ್ ಗೌಡ, ವಿಧಾನ ಪರಿಷತ್ ಸದಸ್ಯ ಮಂಜೇಗೌಡ, ಜಿಲ್ಲಾಧಿಕಾರಿ ಜಿ.ಲಕ್ಷ್ಮಿಕಾಂತ ರೆಡ್ಡಿ, ಅವರು ನಮನ ಸಲ್ಲಿಸಿದರು.

ಬಳಿಕ ಮಾತನಾಡಿದ ಶಾಸಕ ತನ್ವೀರ್ ಸೇಠ್ ಮಾತನಾಡಿ, ಭಾರತದ ಎಲ್ಲಾ ವರ್ಗದ ಜನರಿಗೆ ಸಮಾನತೆ ಸಾರುವ ಸಂವಿಧಾನವನ್ನು ಕೊಟ್ಟಿರುವವವರು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಇಂದು ಭೌತಿಕವಾಗಿ ನಮ್ಮ ಜೊತೆ ಇಲ್ಲದೆ ಇರಬಹುದು, ಆದರೆ ಅವರು ನಡೆದುಬಂದ ಹಾದಿ, ಅವರ ಆದರ್ಶ ಹಾಗೂ ವ್ಯಕ್ತಿತ್ವ ನಮಗೆಲ್ಲರಿಗೂ ಇಂದಿಗೂ ಪ್ರೇರಣೆಯಾಗಿದೆ ಎಂದರು.

ಅಂಬೇಡ್ಕರ್ ಅವರು ಕಟ್ಟ ಕಡೆಯ ಭಾರತೀಯನಿಗೂ ಸಿಗದೆ ಇರುವ ಸಮಾನತೆ ಎಂಬ ಶಕ್ತಿಯನ್ನು ಸಂವಿಧಾನದ ಮೂಲಕ ನೀಡಿದ್ದಾರೆ. ಸಂವಿಧಾನ ಆಶಯಗಳನ್ನು ಯಥಾವತ್ತಾಗಿ ಜಾರಿ ಮಾಡುವುದಕ್ಕೆ ಕರ್ನಾಟಕ ಸರ್ಕಾರ ಪ್ರತಿ ಶಾಲಾ ಕಾಲೇಜುಗಳಲ್ಲಿ, ಸಭೆ ಸಮಾರಂಭಗಳಲ್ಲಿ ಕಾರ್ಯಕ್ರಮಗಳಲ್ಲಿ ಬೋಧನೆ ಮಾಡಲಾಗುತ್ತಿದೆ. ಮೈಸೂರಿನಲ್ಲಿ ಅಂಬೇಡ್ಕರ್ ಭವನ ಆದಷ್ಟು ಬೇಗ ಲೋಕಾರ್ಪಣೆಯಾಗಲಿ ಎಂದು ಆಶಿಸಿದರು.

ಶಾಸಕ ಕೆ. ಹರೀಶ್ ಗೌಡ ಮಾತನಾಡಿ, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪರಿನಿರ್ವಾಣದ ದಿನವನ್ನು ಇಂದು ಭಾರತ ದೇಶದಾದ್ಯಂತ ಆಚರಿಸಲಾಗುತ್ತಿದ್ದು, ಅವರು ನೀಡಿರುವ ಸಂವಿಧಾನವನ್ನು ಭಾರತದ 140 ಕೋಟಿ ಜನರು ಅಳವಡಿಸಿಕೊಂಡು ಬದುಕುತ್ತಿದ್ದೇವೆ ಅವರ ತತ್ವಗಳೇ ನಮಗೆ ಆದರ್ಶ ಎಂದರು.

ಶಾಸಕ ಟಿ.ಎಸ್. ಶ್ರೀವತ್ಸ ಮಾತನಾಡಿ, ಅಂಬೇಡ್ಕರ್ ಅವರು ಬಿಟ್ಟು ಹೋದ ದಿನವನ್ನು ಪರಿನಿರ್ವಾಣ ದಿನ ಎಂದು ಗೌರವ ಸಮರ್ಪಣೆ ಮಾಡಲಾಗುತ್ತಿದ್ದು, ಅವರು ದಲಿತರಿಗೆ ಹಾಗೂ ಮಹಿಳೆಯರಿಗೆ ಸಮಾಜದಲ್ಲಿ ಸಮಾನ ಅವಕಾಶ ಕೊಟ್ಟಂತಹ ಮೇರು ವ್ಯಕ್ತಿತ್ವ ಅಂಬೇಡ್ಕರ್ ಅವರದ್ದು. ಅವರು ನಡೆದು ಬಂದ ಹಾದಿ ನಮಗೆಲ್ಲರಿಗೂ ಸ್ಪೂರ್ತಿದಾಯಕವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಕಲ್ಯಾಣ ಶ್ರೀ ಬಂತೇಜಿ ಮಾತನಾಡಿ, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಚಿಂತನೆ, ತತ್ವಗಳು ಅವರು ನಡೆದು ಬಂದಂತಹ ಹಾದಿ ಎಲ್ಲರಿಗೂ ಸಹ ಅಮೂಲ್ಯವಾದದ್ದು ಹಾಗೂ ಮಾರ್ಗದರ್ಶಕವಾಗಿದೆ. ಆಧುನಿಕ ಯುಗದಲ್ಲಿ ನಮಗೆ ಸಿಕ್ಕಂತಹ ಭಾಗ್ಯವಿದಾತರು ಹಾಗೂ ಜ್ಯಾತ್ಯಾತೀತವಾಗಿ ಧರ್ಮತೀತವಾಗಿ ಎಲ್ಲಾ ಜನಾಂಗವು ಒಪ್ಪಿಕೊಳ್ಳಬಹುದಾದಂತಹ ರತ್ನ ಎಂದರೆ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಎಂದರು.

ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಚಿಂತನೆಗಳು ಪ್ರತಿಯೊಬ್ಬರಿಗೂ ಕೂಡ ಸಾಮಾಜಿಕ ಆರೋಗ್ಯ, ಮಾನಸಿಕ ಆರೋಗ್ಯವನ್ನು ನೀಡುವಂತಹ ಪ್ರಬುದ್ಧ ಆಲೋಚನೆ. ಇದು ಪ್ರತಿಯೊಬ್ಬ ಮಾನವ ಜನಾಂಗಕ್ಕೆ ಪ್ರಸ್ತುತವಾಗಿವೆ. ಧರ್ಮಾತೀತ, ಜ್ಯಾತ್ಯಾತೀತವಾದ ಮಾನವೀಯ ಮೌಲ್ಯಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡಾಗ ನಾವು ಪ್ರಬುದ್ಧರಾಗಲು ಸಾಧ್ಯ ಎಂದರು.

ಧರ್ಮವಲ್ಲದ ಧರ್ಮದಲ್ಲಿ ಇರುವಂತಹ ಎಲ್ಲರಿಗೂ ಸರಿಯಾದ ದಾರಿ ತೋರುವ ಮಾರ್ಗ ಎಂದರೇ ಅದು ಬುದ್ಧ ಮಾರ್ಗ. ಅದನ್ನು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಮಾನವರ ಜಗತ್ತಿನ ಅಭಿವೃದ್ಧಿಗಾಗಿ ಪ್ರಬುದ್ಧತೆಗಾಗಿ ಕೊಟ್ಟಿದ್ದಾರೆ ಎಂದರು.

ನಾವು ಎಲ್ಲರನ್ನು ಸಾಮಾಜಿಕವಾಗಿ, ಸಂಸ್ಕೃತಿಕವಾಗಿ, ಆರ್ಥಿಕವಾಗಿ ರಾಜಕೀಯವಾಗಿ ಸಮಾನತೆಯಿಂದ ಕಾಣಬೇಕು. ಧರ್ಮ ಬೇರೆಯಲ್ಲ ಸಂವಿಧಾನ ಬೇರೆಯಲ್ಲ ಅದರ ತತ್ವಗಳು ಪೂರಕವಾಗಿ ಮಾನವೀಯತೆ ಯನ್ನು ಪರಿಗಣಿಸುತ್ತಾ ಬಂದಿದ್ದು, ಮಾನವೀಯತೆ ಎಂಬುದು ಧರ್ಮದ ಪ್ರಮುಖ ದಾರಿಯಾಗಬೇಕು. ಇಡೀ ಜಗತ್ತಿನಲ್ಲಿ ಎಲ್ಲರನ್ನೂ ಮನುಷ್ಯರಂತೆ ಕಾಣಲು ಮಾನವೀಯತೆಯಿಂದ ಮಾತ್ರ ಸಾಧ್ಯ ಎಂದರು.

ಭಾರತದಲ್ಲಿ ಪ್ರತಿಯೊಬ್ಬರು ಒಂದೊಂದು ಧರ್ಮದಲ್ಲಿ ಇದ್ದಾರೆ. ಆದರೆ ಆ ಧರ್ಮದಲ್ಲಿ ನಾವು ಏನನ್ನು ಕಲಿತಿದ್ದೇವೆ ಎಂಬುದು ಬಹಳ ಮುಖ್ಯ. ಮಾನವೀಯತೆ ಎಂಬುದು ಪ್ರಕೃತಿಯ ನಿಯಮವಾಗಿದೆ. ಮಾನವೀಯತೆ ಎಂಬ ಬೆಳಕನ್ನು ಪ್ರಪಂಚಕ್ಕೆ ಕೊಟ್ಟಂತಹ ಮೊದಲಿಗರು ಎಂದರೆ ಬುದ್ಧ. ಪ್ರತಿಯೊಬ್ಬರು ಸ್ಪಷ್ಟವಾಗಿ ಮತ್ತು ಪಾರದರ್ಶಕವಾಗಿ ತಮ್ಮ ಬದುಕನ್ನು ಕಟ್ಟಿಕೊಳ್ಳುವ ಅವಶ್ಯಕತೆ ಇದೆ. ಅನ್ಯಾಯ ಅಧರ್ಮ ಹೊರತು ಪಡಿಸಿ ಸತ್ಯವನ್ನು ನೀಡುವ ಧರ್ಮವನ್ನು ಪಾಲಿಸಬೇಕು ಎಂದರು.

ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಭೌತಿಕವಾಗಿ ಕಣ್ಮರೆಯಾಗಿರಬಹುದು. ಆದರೆ ಅವರು ಸಮಾನತೆಯ ಜ್ಯೋತಿಯಾಗಿ, ಜ್ಞಾನದ ಸಂಕೇತವಾಗಿ ಜಗತ್ತಿನಾದ್ಯಂತ ಬೆಳಗುತ್ತಿದ್ದಾರೆ. ಆ ಬೆಳಕಿನ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ನಮ್ಮ ಜೀವನವನ್ನು ಉತ್ತಮವಾಗಿ ಕಟ್ಟಿಕೊಳ್ಳಬಹುದು. ಉತ್ತಮ ಜೀವನವನ್ನು ಕಟ್ಟಿ ಕೊಳ್ಳುವುದಕ್ಕೆ ಡಾ.ಬಿ.ಆರ್. ಅಂಬೇಡ್ಕರ್ ಅವರು ಯಾವುದೇ ಧರ್ಮ, ಜಾತಿಗೆ ಸೀಮಿತವಾಗದೆ ಸಮಾನತೆ ಎಂಬ ಮಂತ್ರದೊಂದಿಗೆ ಜೀವನ ನಡೆಸಿ ಎಂದು ಸರ್ವರಿಗೂ ಸಾರಿದ್ದಾರೆ ಎಂದರು.

ಈ ವೇಳೆ ಡಾ. ಕಲ್ಯಾಣ ಸಿರಿ ಬಂತೇಜಿ, ಬೋಧಿ ರತ್ನ ಬಂತೇಜಿ ಹಾಗೂ ಬುದ್ಧ ಪ್ರಕಾಶ್ ಬಂತೇಜಿ ಅವರು ಬುದ್ಧ ವಂದನೆ, ಧರ್ಮ ವಂದನೆ ಹಾಗೂ ಸಂಘ ವಂದನೆ ಭೋದಿಸಿದರು.

ಜಿಪಂ ಸಿಇಒ ಎಸ್. ಯುಕೇಶ್ ಕುಮಾರ್, ನಗರ ಪಾಲಿಕೆ ಆಯುಕ್ತ ಶೇಕ್ ತನ್ವೀರ್ ಅಸೀಫ್, ನಗರ ಪೊಲೀಸ್ ಆಯುಕ್ತ ಸೀಮಾ ಲಾಟ್ಕರ್, ಮೈಸೂರು ವಿವಿ ಕುಲಸಚಿವೆ ಎಂ.ಕೆ. ಸವಿತಾ, ಡಿಸಿಪಿ ಬಿಂದು ಮಣಿ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಬಿ. ರಂಗೇಗೌಡ, ಸಹಾಯಕ ನಿರ್ದೇಶಕ ಜನಾರ್ಧನ್ ಸೇರಿದಂತೆ ಹಲವರು ಇದ್ದರು.