ನಾಲಂದಾದಲ್ಲಿ ಕಳೆದು ಹೋದ ಕಾಲ - ಬಿಹಾರಿಗಳಿಂದಲೇ ಜೀವನ ತತ್ವವನ್ನುಕಲಿಯಬೇಕು : ಡಾ. ಕೆ.ಎಸ್. ಪವಿತ್ರ

| Published : Jan 05 2025, 01:33 AM IST / Updated: Jan 05 2025, 06:37 AM IST

ನಾಲಂದಾದಲ್ಲಿ ಕಳೆದು ಹೋದ ಕಾಲ - ಬಿಹಾರಿಗಳಿಂದಲೇ ಜೀವನ ತತ್ವವನ್ನುಕಲಿಯಬೇಕು : ಡಾ. ಕೆ.ಎಸ್. ಪವಿತ್ರ
Share this Article
  • FB
  • TW
  • Linkdin
  • Email

ಸಾರಾಂಶ

ಕಾಲಕ್ಕೆ ಕವಳ ತಿನ್ನಿಸಿ ನಿಧಾನ ಗತಿ ಕಲಿಸಿದಂಥಾ ಜನರು, ಅವರ ಬದುಕಿನ ಸೊಗಸನ್ನು ಆಸ್ವಾದಿಸುವ ಜೊತೆ ನಾಲಂದಾವನ್ನೂ ದರ್ಶನ ಮಾಡಿದ ಲೇಖಕಿ, ಆ ಅನುಭವವನ್ನು ಸಾರವತ್ತಾಗಿ ದಾಖಲಿಸಿದ್ದಾರೆ.

- ಡಾ. ಕೆ.ಎಸ್. ಪವಿತ್ರ

ಚುಮುಚುಮು ಚಳಿ, ಬೆಳ್ಳಗೆ ಮುಸುಕಿದ ಮಂಜು. ಬೋಧಗಯಾದಿಂದ ನಾಲಂದಾ ನೋಡಲೇಬೇಕು ಎಂಬ ಹಠದಿಂದ ಹೊರಟಿದ್ದೆ.

ಬುದ್ಧದೇವ ಹೇಳಿದ ನಿರ್ಲಿಪ್ತತೆಯನ್ನೂ ನಿಧಾನವನ್ನೂ ಹುಟ್ಟಿನಿಂದ ರೂಢಿಸಿಕೊಂಡವನು ತಾನು ಎಂಬಂತೆ ವೇಗವಿರೋಧಿಯಾಗಿ ವಾಹನ ಚಲಾಯಿಸುತ್ತಿದ್ದ ಚಾಲಕ ಸೂರಜ್‌ ಕುಮಾರ್, ನಾನು ಧಾವಂತದಲ್ಲಿ ಅವಸರಿಸಿದರೂ ಕಿಂಚಿತ್ತೂ ತಲೆಕೆಡಿಸಿಕೊಳ್ಳದೆ ಆರಾಮವಾಗಿ ಹೊರಟಿದ್ದ. ಅವನನ್ನೂ, ಇತರ ಚಾಲಕರನ್ನೂ ನೋಡಿದರೆ ಬಿಹಾರಿಗಳಿಂದಲೇ ಜೀವನ ತತ್ವವನ್ನುಕಲಿಯಬೇಕು ಎನಿಸುವಂತಿತ್ತು.

ಅಲ್ಲಲ್ಲಿ ‘ಟೋಟೋ’ ಎಂಬ ಮಕ್ಕಳಾಟಿಕೆಯ ಹೆಸರಿನ ಬ್ಯಾಟರಿ ಚಾಲಿತ ವಾಹನಗಳು, ಮುಂದೆ ಹೋದಂತೆ ಗುಲಾಬಿ ವರ್ಣದ ಕಮಲಗಳಿಂದ ತುಂಬಿದ ಕೆರೆಗಳು, ಬಹುದಿನಗಳಿಂದ ನೋಡಿರದಿದ್ದ ಬೆರಣಿಗಳು, ತಲೆಗೆ ಮಫ್ಲರ್‌ ಕಟ್ಟಿ ಬೆಳಿಗ್ಗೆ ಬೆಳಿಗ್ಗೆ ಜಿಲೇಬಿ ತಿನ್ನುತ್ತಿರುವ ಬಿಹಾರಿ ಮಂದಿ, ಮಧ್ಯೆ ಮಧ್ಯೆ ಬುದ್ಧನಿಗೆ ಸಂಬಂಧಿಸಿದ ತಾಣಗಳು, ಹೊಸತೊಂದು ಪ್ರಪಂಚ. ಇದ್ದಕ್ಕಿದ್ದಂತೆ ರಸ್ತೆಯ ಪಕ್ಕದಲ್ಲಿ ಸೂರಜ್‌ಕುಮಾರ್‌ ಕಾರು ನಿಲ್ಲಿಸಿ ‘ರಥದ ಚಕ್ರದ ಗುರುತುಗಳಿರುವ ಯುದ್ಧಭೂಮಿಯ ತಾಣ’ ಎಂದ. ಕುತೂಹಲದಿಂದ ಕೆಳಗಿಳಿದು ನೋಡಿದರೆ ಅದು ಕಂಡದ್ದು ಮಳೆ-ಗಾಳಿಗಳಿಂದ ಕೊರೆಯಲ್ಪಟ್ಟಿದ್ದ ಕಲ್ಲುಬಂಡೆಗಳ ಗುರುತಿನಂತೆ!ನಾಲಂದಾ ಬೋಧಗಯಾದಿಂದ 86 ಕಿಲೋಮೀಟರ್‌ ದೂರವಷ್ಟೆ. ಘಾಟಿ ತಿರುವುಗಳ್ಯಾವುದೂ ಇಲ್ಲದ ನೇರ ರಸ್ತೆ. ಆದರೆ ಈ 86 ಕಿ.ಮೀ. ಕ್ರಮಿಸಲು ಚಾಲಕ ಹೇಳಿದ ಅಂದಾಜು ಸಮಯ ಮೂರು ಗಂಟೆಗಳು! ಅರೆರೆ, ‘ನಾವಾದರೆ ಒಂದೂವರೆಗಂಟೆಯಲ್ಲಿ ಗಾಡಿ ಹೊಡೆಯುತ್ತಿದ್ದೆವು’ ಎಂದು ನಾನೆಂದದ್ದಕ್ಕೆ, ಸೂರಜ್‌ಕುಮಾರ್ ಹೇಳಿದ ಮಾತು - ‘ಬಹೆನ್‌ಜೀ ಇದು ಬಿಹಾರ. ಆ ನಿಯಮ ಇಲ್ಲಿ ಪಾಲಿಸುವುದಿಲ್ಲ. ಒಂದೊಮ್ಮೆ ನೀವು ಹೇಳಿದಿರೆಂದು ನಾನು ಜೋರಾಗಿ ಓಡಿಸಿ, ಆ ಕಡೆಯಿಂದ ಎಮ್ಮೆ, ಈ ಕಡೆಯಿಂದ ಆರಾಮವಾಗಿ ಪಾನ್‌ ಅಗಿಯುತ್ತಾ ಒಬ್ಬ ದಾರಿಹೋಕ ಹಠಾತ್ತಾಗಿ ಬಂದರೆ, ಆಮೇಲೆ ನಾನು ಅವರಿಗೆ ಗುದ್ದಿ ನೀವು ನಾಲಂದಾ ಬದಲು ಆಸ್ಪತ್ರೆ ಸೇರುವಂತಾದೀತು. ಆದ್ದರಿಂದಲೇ ನಾವೆಲ್ಲ ನಿಧಾನವಾಗಿಯೇ ಗಾಡಿ ಓಡಿಸುತ್ತೇವೆ. ಇಲ್ಲಿ ರೈಲು ಗೇಟ್‌ ಕೂಡ ರೈಲು ಬರುವ 20 ನಿಮಿಷ ಮೊದಲೇ ಹಾಕಿಬಿಡುತ್ತಾರೆ. ಏಕೆಂದರೆ ಬಿಹಾರಿಗಳು ಗಾಡಿ ಓಡಿಸುತ್ತಲೇ ಇರುತ್ತಾರೆ. ರೈಲು ಬಂದು ಬಡಿಯಬಹುದೆಂಬ ಭಯವೇ ಅವರಿಗಿಲ್ಲ. ಒಮ್ಮೆ ರೈಲೇ ನಿಂತು ಬಿಡಬೇಕಾಯಿತು!’

ಇಷ್ಟಾದ ಮೇಲೆ ನಾನು ಬಾಯಿಮುಚ್ಚಿ, ಕಣ್ತೆರೆದು ಕುಳಿತೆ!ದಾರಿಯಲ್ಲಿ ರಾಜಗೃಹ ರಾಜಗೀರ್‌ನ ಬಿಸಿನೀರ ಬುಗ್ಗೆಗಳು, ಸಂಗ್ರಹಾಲಯಗಳು ಕಣ್ಣಿಗೆ ಬಿದ್ದರೂ, ‘ಜರಾಸಂಧ ಐಸ್‌ಕ್ರೀಂ ಪಾರ್ಲರ್’ ನೋಡಿ ಕಣ್ಣರಳಿದರೂ, ನಾಲಂದಾ ನೋಡಲೇಬೇಕೆನ್ನುವ ಹಠಕ್ಕೆ, ಮತ್ತೆ ಅದನ್ನು ನೋಡಲು ಸಾಧ್ಯವಾಗದಿದ್ದರೆ ಎಂಬ ಆತಂಕದಲ್ಲಿ ಹೆದರಿ ಅಲ್ಲೆಲ್ಲೂ ಇಳಿಯಲೇ ಇಲ್ಲ. ನಾಲಂದಾ ತಲುಪಿದ ಮೇಲೆ ಸೂರಜ್‌ಕುಮಾರ್ ಕೇಳಿದ ‘ನಿಮಗೆ ‘ಒರಿಜಿನಲ್’ ನಾಲಂದಾ ನೋಡಬೇಕೋ, ಈಗಿನದು ಬೇಕೋ?’ ನಾನು ನಿರ್ಧರಿಸುವ ಮೊದಲೇ ತಾನೇ ಹೇಳಿಯೂ ಬಿಟ್ಟ- ‘ಮೊದಲಿನದು ಅವಶೇಷ, ಈಗಿನದು ಬರೀ ದೊಡ್ಡ ಕಟ್ಟಡ’. ‘ನಾನು ಬಂದಿರುವುದು ಅಂದಿನ ನಾಲಂದಾ ನೋಡಲು. ಎರಡು ಗಂಟೆ ಸಮಯದಲ್ಲಿ ಹೋಗಿ ನೋಡಿ ಬರುತ್ತೇನೆ’ ಎಂದೆ.

 ‘ಆರಾಮವಾಗಿ ಬನ್ನಿ’ ಎಂದು ಗೇಟಿನ ಮುಂದೆಯೇ ನಿಲ್ಲಿಸಿಬಿಟ್ಟ! ‘ನೀನು ಪಾರ್ಕಿಂಗ್‌ನಲ್ಲಿ ಕಾರು ಹಾಕು, ನಾನು ಆಮೇಲೆ ಬಂದು ಕರೆ ಮಾಡುವೆ’ ಎಂದರೆ, ‘ಇದು ಬಿಹಾರ, ನೀವೇನೂ ಹೆದರಬೇಡಿ ನಾನೆಲ್ಲಾ ನೋಡಿಕೊಳ್ಳುತ್ತೇನೆ!’ ಎಂದ. ಮೊದಲು ನಾಲಂದಾ ಒಳಗೆ ಪ್ರವೇಶಿಸಲು ತುಂಬಾ ಮೇಧಾವಿಗಳಿಗೆ ಮಾತ್ರ ಸಾಧ್ಯವಿತ್ತಂತೆ. ಈಗ ಹಾಗೇನೂ ಇಲ್ಲವಲ್ಲ! ಟಿಕೆಟ್‌ ಕೊಂಡರೆ ಸಾಕು! ಸರಿ ಒಳಗೆ ಪ್ರವೇಶಿಸಿ ಬಾಗಿಲಲ್ಲೇ ಸಿಕ್ಕಿದ ಶಿಬ್‌ ಕುಮಾರ್ ಶರ್ಮಾ ಎಂಬ ಗೈಡ್‌ನ್ನು ಮುಂದಿಟ್ಟುಕೊಂಡು ನಾಲಂದಾದಲ್ಲಿ ಅಲೆದಾಟ ಆರಂಭವಾಯಿತು.

ಶಿಬ್‌ಕುಮಾರ್ ಶರ್ಮಾ ತನ್ನ ಜ್ಞಾನ, ಇತಿಹಾಸ, ಕಲ್ಪನೆ ಎಲ್ಲವನ್ನೂ ಬೆರೆಸಿ, ಪಾನ್ ಬಾಯಲ್ಲಿ ತುಂಬಿ, ‘ರಸ’ವತ್ತಾದ ಬಿಹಾರಿ ಹಿಂದಿಯಲ್ಲಿ ನಾಲಂದಾವನ್ನು ವರ್ಣಿಸಿದ. ನಾನಂದುಕೊಂಡಿದ್ದಂತೆ ‘ನಳಂದಾ’ ತಪ್ಪು ಎಂಬುದನ್ನು ಖಂಡಿಸಿ ಹೇಳಿದ. ನನ್ನ ಬಾಯಲ್ಲಿ ‘ನಾಲಂದಾ’ ಎಂದು ನಾಲ್ಕೈದು ಬಾರಿ ಹೇಳಿಸಿ ಗಟ್ಟಿ ಮಾಡಿಸಿದ. ನಾಲಂದಾ ಎಂದರೆ ‘ನ ಅಲಂ ದಾ’ - ಜ್ಞಾನದ ನಿರಂತರತೆಯನ್ನು ಪ್ರತಿನಿಧಿಸುತ್ತದೆ ಎಂದು ವಿವರಿಸಿದ. ತಾವರೆ ಹೂವಿನ ‘ನಾಳ’ದಿಂದಲೂ ಇದು ಬಂದಿದೆ ಎಂದ. ನಾನು ದಾರಿಯಲ್ಲಿ ನೋಡಿದ್ದ ಕೆಂಪು ತಾವರೆ ಹೂಗಳ ನೆನೆಸಿಕೊಂಡು ಅವನ ಬಳಿ ‘ಇಲ್ಲಿ ತುಂಬಾ ತಾವರೆಗಳು ಎಂಬ ಕಾರಣವಿರಬಹುದೇ’ ಅಂದದ್ದಕ್ಕೆ ನನ್ನನ್ನು ಅಜ್ಞಾನಿ ಎಂಬಂತೆ ನೋಡಿ ‘ಕಮಲ- ಬ್ರಹ್ಮಜ್ಞಾನ- ಮೋಕ್ಷ’ ಎಂದೆಲ್ಲ ಮತ್ತಷ್ಟು ವಿವರಿಸಿದ.

ನಾಲಂದಾ ತುಂಬ ಹಳೆಯ, ಶ್ರೇಷ್ಠ ಕಲಿಕಾ ಕೇಂದ್ರವೊಂದರ ಪಳೆಯುಳಿಕೆ. ಬೌದ್ಧಧರ್ಮದ ಮಹಾಯಾನ ಪಂಥದೊಂದಿಗೆ ಗಣಿತ, ವಿಜ್ಞಾನ, ಖಗೋಳ ಶಾಸ್ತ್ರ, ಕಲೆ, ವೈದ್ಯಕೀಯ ಮೊದಲಾದ ವೈವಿಧ್ಯಮಯ ಶಾಸ್ತ್ರ ಪರಿಣತಿಗೆ ಹೆಸರಾಗಿದ್ದ, ನಿಜಾರ್ಥದಲ್ಲಿ ವಿಶ್ವವಿದ್ಯಾಲಯವಾಗಿದ್ದ ಕೇಂದ್ರ. ಜಗತ್ತಿನ ಹಲವು ದೇಶಗಳಿಂದ ವಿದ್ಯಾಕಾಂಕ್ಷಿಗಳಾಗಿ ಜನ ಇಲ್ಲಿಗೆ ಬರುತ್ತಿದ್ದರು.

ಶಿಬ್‌ ಕುಮಾರ್ ಶರ್ಮಾ ಹೇಳಿದ- ‘ನಿಮ್ಮ ಈಗಿನ ಎಂಟ್ರೆನ್ಸ್‌ ಎಕ್ಸಾಂ ಬಂದಿದ್ದೇ ಇಲ್ಲಿಂದ! ದ್ವಾರ ಪಾಲಕನನ್ನು ನಾಲಂದಾದಲ್ಲಿ ‘ದ್ವಾರ ಪಂಡಿತ್’ ಎಂದೇ ಕರೆಯುತ್ತಿದ್ದರು. ಆತ ಪರೀಕ್ಷೆ ಮಾಡಿದಾಗ ಅದರಲ್ಲಿ ಪಾಸಾದರೆ ಮಾತ್ರ ಪ್ರವೇಶ. ಇಲ್ಲವೇ ಅಲ್ಲಿಂದಲೇ ಗೇಟ್‌ಪಾಸ್! ಅದು ನಿಜವಾದ ಪ್ರವೇಶ ಪರೀಕ್ಷೆ!’ ಎಂದ.

ಹಲವು ರಾಜವಂಶಗಳು, ಸುತ್ತಮುತ್ತಲ ಹಳ್ಳಿಯ ಜನ ನಾಲಂದಾದ ಪೋಷಕರಾದವರು. ಅವಶೇಷಗಳನ್ನು ತೋರಿಸುತ್ತಾ, ಹೇಗೆ ಅಂದಿನ ವಾಸ್ತುಶಿಲ್ಪದಲ್ಲಿ ಪ್ರತಿಫಲಿಸುವ ಬೆಳಕಿನ ಕಲ್ಲುಗಳನ್ನು ಮಾಡಿ, ಪ್ರಕಾಶ ಬೀಳುವಂತೆ ಮಾಡುತ್ತಿದ್ದರು ಎಂಬಂತಹ ಅಚ್ಚರಿಗಳನ್ನೂ ಒಂದೊಂದಾಗಿ ನನ್ನ ನಾಲಂದಾ ಮಾರ್ಗದರ್ಶಕ ತೋರಿಸಿದ. ಸ್ಯಾಟಿಷ್ ಸರ್ವೇಯರ್ ಫ್ರಾನ್ಸಿಸ್ ಬುಚ್‌ನನ್ ಹ್ಯಾಮಿಲ್ಟನ್ 1812ರಲ್ಲಿ, ನಾಲಂದಾದ ಅವಶೇಷಗಳನ್ನು ಗುರುತಿಸಿದರೆ, 1961ರಲ್ಲಿ ಸರ್‌ ಅಲೆಕ್ಯಾಂಡರ್‌ ಕನ್ನಿಂಗ್‌ ಹ್ಯಾಂ ಅದನ್ನು ಒಂದು ‘ವಿಶ್ವವಿದ್ಯಾಲಯ’ ಎಂದು ಗುರುತಿಸಿದ. 12ನೇ ಶತಮಾನದಲ್ಲಿ ಭಕ್ತಿಯಾರ್ ಖಿಲ್ಜಿ ನಾಲಂದಾವನ್ನು ನಾಶ ಮಾಡಲು ಅದಕ್ಕೆ ಬೆಂಕಿ ಹಚ್ಚಿದನಂತೆ. ಆಗ ಅಲ್ಲಿದ್ದ ವಿದ್ಯಾರ್ಥಿಗಳು ತಾವು ಓಡುವಾಗ ಬೆಂಕಿ ನಂದಿಸಲು ಮಣ್ಣೆರಚುತ್ತಾ ಓಡಿದರಂತೆ. ಆಗ ಅಲ್ಲಿದ್ದ ಗ್ರಂಥಾಲಯದ ಅಪಾರ ಗ್ರಂಥರಾಶಿ ಎಷ್ಟೆಂದರೆ ಗ್ರಂಥಾಲಯ ಆರು ತಿಂಗಳುಗಳ ಕಾಲ ಹೊತ್ತಿ ಉರಿಯಿತಂತೆ! ಜ್ಞಾನವೇ ಹತ್ತಿ ಉರಿದಂತೆ!ನಾಲಂದಾದ ತುಂಬ ಓಡಾಡುವಾಗ ಭೈರಪ್ಪನವರ ‘ಸಾರ್ಥ’ ಕಾದಂಬರಿಯ ಕಥಾನಕಗಳು, ಅಮರ ಚಿತ್ರಕಥೆಯಲ್ಲಿ ಬರುವ ಹ್ಯೂಯೆನ್‌ತ್ಸಾಂಗ್ ನೆನಪಾಗುತ್ತಲೇ ಇದ್ದವು. ಶಿಬ್‌ಕುಮಾರ್ ಶರ್ಮಾನಿಗೆ ಕೈಮುಗಿದು ದುಡ್ಡುಕೊಟ್ಟು ಕಳಿಸಿ, ಉಳಿದ ಕಾಲ ಸುಮ್ಮನೇ ಅವಶೇಷಗಳ ನಡುವೆ ಕುಳಿತೇ ಇದ್ದೆ. ಇದನ್ನು ‘ಅವಶೇಷ’ ಎನ್ನಲು ಮನಸ್ಸು ಒಪ್ಪಲಿಲ್ಲ. ಹಳೆಯದೆಲ್ಲವನ್ನೂ ಹಾಗೇ ಇರಬೇಕು ಎಂದರೆ ಅದು ಹೇಗೆ ಸಾಧ್ಯ.. ಕಾಲಕ್ಕೆ, ಮನುಷ್ಯ ಸ್ಮೃತಿಗೆ ಶಕ್ತಿಯಿದೆ ಎಂದಾದರೆ ಉಳಿದಿರುವುದರಿಂದಲೇ ಕಲ್ಪನೆಯನ್ನು ಬೆಳೆಸಿ, ಪೂರ್ಣಗೊಳಿಸಿ, ಇಂದಿನ ಬದುಕಿಗೆ ಸ್ಫೂರ್ತಿ ಪಡೆಯುವುದು ಸಾಧ್ಯವಲ್ಲವೆ? ಮನಸ್ಸು ಕಾಲದಲ್ಲಿ ಹಿಂದಕ್ಕೆ ಪಯಣಿಸಿ, ಮೂಕವಾಗಿತ್ತು.

ನಾಲಂದಾದ ಈಗಿನ ಸುತ್ತಮುತ್ತಲ ಪರಿಸರ ಅಜ್ಞಾನದ ಮಡಿಲಲ್ಲಿ ನರಳುತ್ತಲೇ ಇರುವುದು ಸ್ಪಷ್ಟವಾಗಿ ತೋರುತ್ತಿತ್ತು. ಪಕ್ಕದಲ್ಲಿಯೇ ಭವ್ಯವಾಗಿ ನಿಂತಿರುವ ಇಂದಿನ ಹೊಸ ನಾಲಂದಾ ಈ ಜನರಲ್ಲಿ ಅಜ್ಞಾನವನ್ನು ತೊಡೆದು ಜ್ಞಾನವನ್ನು ತುಂಬೀತು ಹೇಗೆ ಎಂದು ವಿಸ್ಮಯ ಪಡುತ್ತಾ ವಾಸ್ತವಕ್ಕೆ ಮರಳಿದೆ.