ಪಂಪ್ ಇಟ್ ಬೇಬಿ, ಪಂಪ್ ! ಮಕ್ಕಳಿಗೆ ಹಾಲು ಕುಡಿಸೋದು ಹೇಗೆ? ಈ ಪ್ರಶ್ನೆಗೆ ತಾಯಿಗೆ ಪಾಠ ಹೇಳಿಕೊಡಲಾಗುತ್ತದೆ

| Published : Jan 19 2025, 02:15 AM IST / Updated: Jan 19 2025, 08:57 AM IST

breast feeding mother

ಸಾರಾಂಶ

ಮಕ್ಕಳಿಗೆ ಹಾಲು ಕುಡಿಸೋದು ಹೇಗೆ? ಈ ಪ್ರಶ್ನೆಗೆ ಉತ್ತರ ತಿಳಿಯಲು ತಾಯಿಗೆ ಪಾಠ ಹೇಳಿಕೊಡಲಾಗುತ್ತದೆ. ಅಲ್ಲಿ ಹಾಲುಣಿಸುವ ಕುರಿತಾದ ವಿವಿಧ ಬಗೆಗಳನ್ನು ತಿಳಿಸಲಾಗುತ್ತದೆ. ಈ ಬರಹ ಮಗುವಿನ ಹಾಲು ಕುಡಿಸುವ ಪಾಠವನ್ನು ಕಲಿತ ಮಾಡರ್ನ್‌ ಅಮ್ಮನ ಕತೆ

- ಮೇಘನಾ ಸುಧೀಂದ್ರ 

‘ಮಲ್ಟಿಪಲ್ ಫೀಟಸ್ ಅಲ್ವಾ? ಪೊಲಾಪ್ಲಸ್ ವಿಂಗ್ ಗೆ ಹೋಗಿ ಅಲ್ಲಿ ನಿಮಗೆಲ್ಲಾ ಮಾಹಿತಿ ಕೊಡುತ್ತಾರೆ, ಅದಕ್ಕಂತಲೇ ಪರಿಣತರನ್ನ ನಮ್ಮ ಆಸ್ಪತ್ರೆ ಪ್ರತಿ ಶನಿವಾರ - ಭಾನುವಾರ ಕರೆಸುತ್ತಾರೆ. ಪ್ಲೀಸ್ ಗೋ’ ಎಂದಾಗ ನಾನು ಬೋರು ವಿಷಯ ಎಂದೇ ಹೋದೆ.

‘ಇವೆಲ್ಲಾ ಹೆಣ್ಣು ಮಕ್ಕಳ ವಿಷಯ’ ಎಂದು ಮಡಿವಂತಿಕೆ ತೋರಿಸುತ್ತಿದ್ದ ಕಾಲ ಮುಗಿದಿರುವ ಕಾರಣ ನನ್ನ ಗಂಡನೂ ಎಲ್ಲಾ ಚೆಕಪ್ಪು, ಕ್ಲಾಸುಗಳಿಗೆ ನನ್ನ ಜೊತೆಯಲ್ಲಿ ಬರಲೇಬೇಕಾಗಿತ್ತು. ಬೋರು ಹೊಡೆದರೂ ಕೂರಲೇ ಬೇಕಿತ್ತು. ಈ ದಿನ ಇದ್ದ ಕ್ಲಾಸು ಲಾಕ್ಟೇಷನ್. ಸರಳವಾಗಿ ಹೇಳಬೇಕೆಂದರೆ ಮಕ್ಕಳಿಗೆ ಹಾಲು ಕುಡಿಸೋದು ಹೇಗೆ ಎಂದು. ಅಲ್ಲಿ ಬಂದ ಪರಿಣಿತರು, ‘ಹಾಲು ಕುಡಿಸೋದು ಬಹಳ ಸಹಜ ಪ್ರಕ್ರಿಯೆ. ಮಕ್ಕಳು ಕುಡಿಯೋದು ಅಷ್ಟೇ ಸುಲಭ. ಆದರೆ 2010ರ ನಂತರ ಹುಟ್ಟುವ ಮಕ್ಕಳಲ್ಲಿ 70 ಪ್ರತಿಶತ ಮಕ್ಕಳು ಎದೆಹಾಲು ಕುಡಿಯೋದೆ ಇಲ್ಲ. ಕುಡಿದರೂ ಅವರು ಅದನ್ನ ಬಾಟಲಿಯಲ್ಲೇ ಕುಡಿಯೋದು’ ಎಂದು ಭಯಂಕರ ಸ್ಟಾಟಿಸ್ಟಿಕ್ಸ್ ಹೇಳಿದ ಮೇಲೆ ನನ್ನ ಗಂಡನಿಗೆ ದಿಗಿಲಾಯಿತು. ಕೈ ಎತ್ತಿ, ‘ಯಾಕೆ?’ ಎಂದು ಕೇಳಿದ. ‘ಮಕ್ಕಳು ಮಹಾ ಸೋಂಬೇರಿಗಳು ಅದಕ್ಕೆ’ ಎಂದು ಹೇಳಿದರು.

 ಹುಟ್ಟಿದ ನಾಲ್ಕಾರು ನಿಮಿಷದಲ್ಲೇ ಸೋಂಬೇರಿತನವನ್ನು ಪ್ರದರ್ಶನ ಮಾಡುವ ಮಕ್ಕಳ ಬಗ್ಗೆ ನನಗೆ ಹೆಮ್ಮೆ ಎನಿಸಿತು. ಜೀವನದುದ್ದಕ್ಕೂ ಸೋಂಬೇರಿತನ ಅಕ್ವೈರ್ಡ್ ಕ್ಯಾರೆಕ್ಟರ್ ಎಂದು ಅಮ್ಮ ಬೈಯ್ಯುತ್ತಿದ್ದದ್ದು ಅದನ್ನೇ ನನ್ನ ಗಂಡನೂ ಮುಂದುವರೆಸಿಕೊಂಡು ವ್ಯಂಗ್ಯವಾಗಿ ಅನ್ನುತ್ತಿದ್ದದ್ದು ಕೇಳಿ ಎಷ್ಟು ಸುಳ್ಳು ಎಂದನಿಸಿತು. 

ಸೋಂಬೇರಿತನ ಬಹಳ ಸಹಜ, ಅದನ್ನ ಅಷ್ಟು ಹೀಗಳೆಯಬಾರದು ಎಂದು ಖುಷಿಯಾಯಿತು. ‘ಪ್ರಕೃತಿ ಹೆಣ್ಣು ಮಕ್ಕಳ ವಿಚಾರದಲ್ಲಿ ಬಹಳ ಬಯಾಸ್ಡ್ ಎಂದು ಅನ್ನಿಸತೊಡಗಿತು. ಹೆಣ್ಣಿಗೆ ಮಾತ್ರ ಇಂತಹ ಸಮಸ್ಯೆಗಳನ್ನು, ಆಲೋಚನೆಗಳನ್ನು ಮತ್ತು ಗೊಂದಲಗಳನ್ನು ತಂದೊಡ್ಡಿ ತಾನು ಒಳ್ಳೆ ತಾಯಿಯೋ ಅಥವಾ ಕೆಟ್ಟ ತಾಯಿಯೋ ಅನ್ನುವ ಪ್ರಶ್ನೆಯನ್ನು ದಿನನಿತ್ಯ ಮಾಡಿಕೊಳ್ಳುವ ಹಾಗೆ ಮಾಡುತ್ತದೆ.

 ಗಂಡಸರಿಗೆ ಸಪೋರ್ಟ್ ರೋಲ್ ಇರುತ್ತದೆ ಹೊರತು ಅವರೇ ಮೇಲು ಬಿದ್ದು ಏನ್ನನ್ನೂ ಮಾಡಬೇಕಿಲ್ಲ ಎಂದು ನನ್ನ ಚಿಂತನೆಯನ್ನು ಗಂಡನಿಗೆ ಮೆಲ್ಲಗೆ ಹೇಳುತ್ತಿದ್ದೆ. ಅವನಿಗೆ ಈ ಕ್ಲಾಸೇ ಸಿಕ್ಕಾಪಟ್ಟೆ ಬೋರಾಗುತ್ತಿತ್ತು, ನನ್ನ ಮಾತು ಇನ್ನೂ ಬೋರು ಮಾಡಿತು. ಎದ್ದು ನಿಂತು, ‘ಹೆಣ್ಣು ಮಕ್ಕಳಿಗೆ ಇಂತಹ ಕಷ್ಟಗಳು ಬೇಡ ಎಂದರೆ ಏನು ಮಾಡಬಹುದು ತಿಳಿಸಿ?’ ಎಂದು ಕೇಳಿದ. 

ಇಂತಹ ಪ್ರಶ್ನೆಯನ್ನು ನಿರೀಕ್ಷಿಸಿದ್ದ ಡಾಕ್ಟ್ರು, ‘ನೋಡಿ ಇದನ್ನ ಬ್ರೆಸ್ಟ್ ಪಂಪ್ ಎನ್ನುತ್ತಾರೆ. ದಿನಕ್ಕೆ 5- 6 ಸಲ ಪಂಪ್ ಮಾಡಿ ಎದೆ ಹಾಲು ತೆಗೆದು ಬಾಟಲಿನಲ್ಲಿ ಅಥವಾ ಈ ಕವರಿನಲ್ಲಿ ಶೇಖರಿಸಬಹುದು. ಆಗ ಅಮ್ಮನಿಗೆ ವಿಶ್ರಾಂತಿ ಸಿಗುತ್ತದೆ, ಅಪ್ಪನೂ ಪೇರೆಂಟಿಂಗಿನಲ್ಲಿ ಜಾಸ್ತಿ ಭಾಗವಹಿಸಬಹುದು. ಇದು ಈಗಿನ ಕಾಲಕ್ಕೆ ಸಿಗುತ್ತಿರುವ ಸ್ವಾತಂತ್ರ್ಯ. ಉಪಯೋಗಿಸಿಕೊಳ್ಳಿ’ ಎಂದು ಪಂಪ್ ನಮ್ಮ ಕೈಗಿಟ್ಟು ಮ್ಯಾನುಯಲ್ ಕೊಟ್ಟು ನಮ್ಮ ಬುದ್ಧಿವಂತಿಕೆ ಪರೀಕ್ಷಿಸುವ ಹಾಗೆ ನೋಡುತ್ತಿದ್ದರು.

 ಒಂದು ಕಪ್ ಆಕಾರಕ್ಕೆ ಒಂದು ನಳಿಕೆ ಅದಕ್ಕೊಂದು ಫಿಲ್ಟರ್ ಅದಕ್ಕೊಂದು ಫ್ಲ್ಯಾಂಜ್ ಮೇಲೆ ಒಂದು ಟರ್ ಟರ್ ಎಂದು ಸದ್ದು ಮಾಡುವ ಪಂಪ್ ಇತ್ತು. ಇದನ್ನೆಲ್ಲಾ ಜೋಡಿಸೋದಕ್ಕೆ 10 ನಿಮಿಷ ತೆಗೆದುಕೊಂಡೆವು. ಲೆಗೋ ಜೋಡಿಸುವ ನಮ್ಮ ಹವ್ಯಾಸ ಇವತ್ತು ತುಂಬಾ ಉಪಯೋಗಕ್ಕೆ ಬಂತು. ಹಾಲನ್ನು ಪಂಪ್ ಹೇಗೆ ಮಾಡುವುದು ಎಂದು 20 ನಿಮಿಷಗಳ ಪ್ರೆಸೆಂಟೇಷನ್ ಹಾಕಿ ಕ್ಲಾಸಿಗೆ ಬ್ರೇಕ್ ಕೊಟ್ಟು ಹೊರಟು ಹೋದರು. 

ಸ್ಕ್ರೀನ್ನನ್ನೇ ಗುರಾಯಿಸುತ್ತಿದ್ದ ನನಗೆ ನಮ್ಮ ತೋಟದ ಹತ್ತಿರ ಇರುವ ಡೈರಿ ನೆನಪಾಯಿತು. ಅಲ್ಲಿ ಹಸುಗಳ ಕೆಚ್ಚಲಿಗೆ ಪೈಪ್ ಹಾಕಿ ಹಾಲನ್ನು ಕರೆದು ‘ಇದು ೦ ಅಡಲ್ಟ್ರೇಟೆಡ್ ಹಾಲು’ ಎಂದು ಮಾರಾಟ ಮಾಡುತ್ತಾರೆ, ಹೀಗೆ ಇದೂನೂ ಅನ್ನಿಸುತ್ತಿದೆ ಎಂದು ಗಂಡನಿಗೆ ಹೇಳಿದೆ. ಮಕ್ಕಳು ಮಾಡಿಕೊಳ್ಳೋದು ಎಂದರೆ ಮುಂದಿನ ಪೀಳಿಗೆಯನ್ನು ಈ ಭೂಮಿಗೆ ತರುವುದಷ್ಟೇ ಅಲ್ಲ ಬಹಳಷ್ಟು ಗೊತ್ತಿಲ್ಲದ ಜವಾಬ್ದಾರಿಗಳನ್ನು ಹೊರುವುದು. 

ಬೇಡವೆಂದರೂ ಕಳಚಿಕೊಳ್ಳೋಕೆ ಆಗದು ಎಂಬುದು ಅರಿವಾಗುವುದಕ್ಕೆ ತುಂಬಾ ಸಮಯ ಬೇಕಾಗಿರಲ್ಲಿಲ್ಲ, ಇದೊಂದೇ ಕ್ಲಾಸ್ ಸಾಕಾಗಿತ್ತು. ‘ಪವರ್ ಪಂಪಿಂಗ್’ ಬಗ್ಗೆ ಹೆಚ್ಚಿನ ಮಾಹಿತಿ ಕೊಡುತ್ತೇನೆ ಎಂದು ಇನ್ನೊಬ್ಬರು ಕನ್ಸಲ್ಟೆಂಟ್ ಒಳಗೆ ಬಂದರು. 20-10-20 ಇದು ನಿಮ್ಮ ದಿನ ನಿತ್ಯದ ಮಂತ್ರ ಆಗಬೇಕು ಎಂದು ಹೇಳಿದರು. ಜಿಮ್ ಟ್ರೈನರ್ ಮಾತನ್ನ ನೆನಪಿಸಿದ ಹಾಗೆ ಆಯಿತು. ಅದಕ್ಕಿಂತಲೂ ಇದೇನು ಕಡಿಮೆ ಇಲ್ಲ, ಕ್ಯಾಲೋರೀಸ್ ಬರ್ನ್ ಆಗೇ ಆಗುತ್ತದೆ ಎಂದು ಕೇಳಿದ ಮಾತು ನಾನು ಬಳಕುವ ಬಳ್ಳಿಯಾಗುತ್ತೇನೆ ಎಂದು ಅನ್ನಿಸಿ ಇನ್ನೂ ಸೀರಿಯಸ್ಸಾಗಿ ಈ ಮಾತನ್ನು ಕೇಳಿಸಿಕೊಳ್ಳುತ್ತಿದ್ದೆ.

ಹೀಗೆ ಎರಡು ಮೂರು ವಾರಾಂತ್ಯ ಕ್ಲಾಸುಗಳಲ್ಲಿ ಕಳೆದ ಮೇಲೆ ಕತ್ತಲಿನ ಲೋಕದಿಂದ ಬೆಳಕಿನ ಲೋಕಕ್ಕೆ ನನ್ನ ಮಕ್ಕಳು ಕಾಲಿಡೋಕೆ ಅಚಾನಕ್ಕಾಗಿ ನಿರ್ಧರಿಸಿದರು. ಇಂಜೀನಿಯರ್ರುಗಳು ಜುಗಾಡಿಗೆ ತುಂಬಾ ಹೆಸರು ವಾಸಿಯಾಗಿರುವ ಕಾರಣ ಮತ್ತು ಕಡಿಮೆ ದುಡ್ಡಿಗೆ ಕೆಲಸ ತೆಗೆಯುವ ಯಂತ್ರಗಳನ್ನು ಹುಡುಕುವ ಕಾರಣ ನಾನು ಅಷ್ಟೆಲ್ಲಾ ದುಡ್ಡು ಯಾಕೆ ಖರ್ಚು ಮಾಡಬೇಕೆಂದು ವೈರ್‌ಲೆಸ್‌ ಪಂಪ್ ತರಿಸಿಟ್ಟುಕೊಂಡೆ. ಪಂಪ್ ಹಾಕಿಕೊಂಡು ನಾನು ಡ್ಯಾನ್ಸ್ ಮಾಡಬಹುದು, ಮಲಗಬಹುದು ಎಂದೆಲ್ಲಾ ಹೇಳಿದ್ದರು. ಮಕ್ಕಳು ಸೋಂಬೇರಿಯಾಗಿ ಹುಟ್ಟುತ್ತಾರೆ ಅನ್ನೋದು ಬಿಡಿ, ಅಮ್ಮನೇ ಶತ ಸೋಂಬೇರಿ ಎಂಬ ಘನವಾಕ್ಯಕ್ಕೇ ಕಳಶಪ್ರಾಯದಂತೆ ನಾನಿದ್ದೆ. 

ಮುದ್ದು ಮುದ್ದು ಮಕ್ಕಳು ಓಟಿಯಲ್ಲಿ ಕಣ್ಣು ಬಿಟ್ಟು ಅತ್ತು ಒಂದು ಫ್ಯಾಮಿಲಿ ಫೋಟೊ ತೆಗೆದ ನಂತರ ‘ಟೈಮ್ ಟು ಫೀಡ್’ ಎಂದು ಪೀಡಿಯಾಟ್ರೀಷನ್ ಅಂದರು. ‘ನನ್ನ ಪಂಪ್’ ಎಂದು ಪೆದ್ದು ಪೆದ್ದಾಗಿ ಹೇಳಿದೆ. ‘ನಾಟ್ ಅಲೌಡ್, ನ್ಯಾಚುರಲ್ ವೇ ಬೆಸ್ಟ್ ವೇ’ ಎಂದರು. ನಾನೂ ನನ್ನ ಮಕ್ಕಳು ಇಬ್ಬರೂ ತಬ್ಬಿಬ್ಬಾಗಿ ಮುಖ ನೋಡಿಕೊಳ್ಳುತ್ತಿದ್ದೆವು. ನನಗೇ ಸವಾಲು ಹಾಕುವ ಹಾಗೆ ಮಗಳು ಒಂದು ಸೆಕೆಂಡೂ ಸುಮ್ಮನಿರದೇ ಮುಖ ಕಿವುಚಿಕೊಂಡು ವ್ಯಾ ವ್ಯಾ ವ್ಯಾ ವ್ಯಾ ಎಂದು ಅಳಲು ಶುರು ಮಾಡಿ, ಮಗನನ್ನೂ ಒದ್ದು ಎಚ್ಚರಿಸಿದಳು. ಅವನ ಧ್ವನಿಯೂ ವ್ಯಾ ವ್ಯಾಗೆ ಸೇರಿಕೊಂಡು ಡಬ್ಬಲ್ ಧಮಾಕಾ ಎಂಬುದು ನನ್ನ ಕಿವಿಗೆ ಕರ್ಕಶವಾಗಿ ಕೇಳಿಸಲು ಆರಂಭಿಸಿತು. ‘ಹಾಲು ಕೊಡಮ್ಮ’ ಎಂದು ನರ್ಸ್ ಬೈದ ಮೇಲೆ ನನ್ನ ಪಂಪ್ ಕಥೆ ಮುಗಿದೇ ಹೋಯಿತು ಎಂದು ಹಾಲು ಕುಡಿಸಿದೆ. 

20 ನಿಮಿಷದ ಹಿಂದೆಯಷ್ಟೇ ಲೀಟರುಗಟ್ಟಲೆ ರಕ್ತ ಸುರಿಸಿ, 7 ಲೇಯರ್ ಕುಯ್ದು ಮಕ್ಕಳನ್ನು ಹೆತ್ತಿದ್ದಕ್ಕೆ ಒಂದು ನಿಮಿಷವೂ ರೆಸ್ಟ್ ಕೊಡದೇ ನನ್ನನ್ನು ಒಂದು ಪ್ರಾಣಿಗಿಂತ ಕಡೆಯಾಗಿ ನಡೆಸಿಕೊಂಡ ತಾಯ್ತನದ ಬಗ್ಗೆ ನನಗೆ ಕೋಪ ಬಂತು. ಆದರೆ ಇದು ದೈವತ್ವಕ್ಕೆ ಏರುವ ಅತಿ ಸುಲಭ ಮಾರ್ಗ ಎಂದು ತಿಳಿದು ಸುಮ್ಮನಾದೆ. 

ಎರಡು ಘಂಟೆಯ ನಂತರ ಏಳುತ್ತಾರೆ ಅಂದಿದ್ದನ್ನು ಸುಳ್ಳು ಮಾಡೋದಕ್ಕೆ ಇಬ್ಬರೂ ಒಂದು ಘಂಟೆಯ ನಂತರವೇ ವ್ಯಾ ವ್ಯಾ ಎಂದು ಎದ್ದರು. ಹಾಲನ್ನು ಬಾಟಲಿಗೆ ಹಾಕೋ ಅಷ್ಟರಲ್ಲಿ ಇಬ್ಬರೂ ಆಕಾಶ ಭೂಮಿ ಒಂದು ಮಾಡಿ ಪಕ್ಕದ ವಾರ್ಡಲ್ಲಿ ಇದ್ದವರೂ ಇವರನ್ನ ವಿಚಾರಿಸಿಕೊಳ್ಳೋ ಹಾಗೆ ಮಾಡಿದರು. ಪಚ ಪಚ ಎಂದು 3 ನಿಮಿಷದಲ್ಲಿ ಹಾಲು ಕುಡಿದು ಮತ್ತೆ ಆರಾಮಾಗಿ ಮಲಗಿದರು. ‘ಮುಂದ….’ ಎಂದು ಇಬ್ಬರೂ ಮುಖ ನೋಡಿಕೊಂಡೆವು. 

ಪಂಪ್ ಸ್ಟರಲೈಜ್ ಮಾಡಿ, ಬಾಟಲು ಸ್ಟರಲೈಜ್ ಮಾಡಿ ಒಣಗಿಸಿ ಮತ್ತೆ ಪಂಪ್ ಮಾಡುವಷ್ಟರಲ್ಲಿ ಮತ್ತೆ ಎದ್ದರು. 2 ನಿಮಿಷದ ಅವರ ಕೆಲಸಕ್ಕೆ ಬರೋಬ್ಬರಿ 1.5 ಘಂಟೆಯ ನಮ್ಮ ಶ್ರಮದ ಅವಶ್ಯಕತೆ ಇತ್ತು. ದಿನಕ್ಕೆ 8 ಬಾರಿ ಹತ್ತು ಬಾರಿ ಇದೇ ಸಾಹಸ ಮಾಡುವಷ್ಟು ತಾಳ್ಮೆ ನಮಗೆ ಬೇಕಿದೆ ಎಂದು ತಿಳಿಯಲು ನಮಗಿಬ್ಬರಿಗೂ ತುಂಬ ಸಮಯ ಹಿಡಿಯಲಿಲ್ಲ. ಪಂಪ್ ಮಾಡು ಕುಡಿಸು, ತೊಳಿ ಬಳಿಯಲ್ಲಿ ಎಷ್ಟು ತಿಂಗಳು ಕಳೆದವು ಎಂದು ಲೆಕ್ಕ ಇಡಲು ನನಗೆ ಸಮಯವೇ ಸಿಕ್ಕಿರಲಿಲ್ಲ. 

ಬರಬರುತ್ತಾ ಮಕ್ಕಳ ಹಸಿವು ಮತ್ತು ಸುಸ್ತು ಜಾಸ್ತಿಯಾಗುತ್ತಲೇ ಇತ್ತು. ಎದೆಹಾಲು ಅಮೃತದ ಸಮಾನ ಎಂದು ಪ್ರತೀ ಕ್ಲಿನಿಕ್ಕಿನಲ್ಲಿ ಹಾಕಿದ ಪೋಸ್ಟರ್ ನನ್ನ ಈಗೋ ಬೂಸ್ಟ್ ಮಾಡುತ್ತಿತ್ತೇ ವಿನಹ ನನಗೆ ಸ್ವಲ್ಪವೂ ಕೂಡ ರೆಸ್ಟ್ ಸಿಗುತ್ತಿರಲ್ಲಿಲ್ಲ. ಮೊದಮೊದಲು ಒಟ್ಟಿಗೆ ಎದ್ದು ಹಾಲು ಕುಡಿದು ಮಲಗುತ್ತಿದ್ದವರು ಬರಬರುತ್ತಾ ಒಬ್ಬರಾದಮೇಲೆ ಒಬ್ಬರು ಎದ್ದು ಒಬ್ಬರಿಗೊಬ್ಬರು ಸ್ಪರ್ಧೆ ಮಾಡುತ್ತಾ ನನ್ನ ಕೆಲಸವನ್ನೂ ಇನ್ನೂ ಕಠಿಣ ಮಾಡಿಬಿಡುತ್ತಿದ್ದರು. ತಿಂಗಳಾನುಗಟ್ಟಲೆ ಹಗಲು ರಾತ್ರಿ ಎನ್ನುವ ವ್ಯತ್ಯಾಸ ಇಲ್ಲದೇ ಕೂರೋದು ಪಂಪ್ ಮಾಡುವುದು, ನಾನೊಂದು ಮೆಷೀನಾಗಿದ್ದೇನೆ ಎಂದು ಹೇಳುವಷ್ಟು ರೋಸಿ ಹೋಗಿದ್ದೆ.

ಆಮೇಲಾಮೇಲೆ ಇದು ಡಿಸ್ಟ್ರೆಸ್ ಟೈಮ್ ಎಂದು ಕೈಯಲ್ಲಿ ಪುಸ್ತಕ, ಮೊಬೈಲು ಮತ್ತು ಆಂಟಿ ಸ್ಟ್ರೆಸ್ ಬಾಲ್ ಹಿಡಿದು ಕೆಲಸ ಮುಗಿಸಿಬಿಡುತ್ತಿದ್ದೆ. ಪವಿತ್ರ ಕಾರ್ಯ ಎಂದು ಶುರುವಾಗಿ ಒಂದು ಕೆಲಸ ಎಂದು ಮಾರ್ಪಾಟಾಗಿದ್ದು ಮನಸ್ಸಿಗೆ ಬೇಜಾರೇ ಆಗಿಬಿಡ್ತು. ಅಸಾಧ್ಯ ನೋವು, ಬೇಜಾರು ಮತ್ತು ನಿತ್ರಾಣದೊಂದಿಗೆ ಪಂಪ್ ಹಾಕಿ ಕೂತೆ, ಪಂಪ್ ಎಲ್‌ಇಡಿ ಮೇಲೆ, ‘ಎಮ್ಟಿ, ಎಮ್ಟೀ’ ಕೆಂಪು ಕಲರಿನಲ್ಲಿ ಬಂತು. ಇನ್ನೊಂದು ಹತ್ತು ನಿಮಿಷದಲ್ಲಿ ಮಕ್ಕಳು ಏಳುತ್ತಾರೆ ಎಂದು ಅರಿವಾಗಿ ಮತ್ತೂ ಸ್ಪೀಡ್ ಜಾಸ್ತಿ ಮಾಡಿದೆ.

ಉಹೂ ಇನ್ನೂ ಕೆಂಪು ಕಲರ್ ಮುಖಕ್ಕೆ ಹೊಡೆಯುತ್ತಲೇ ಇತ್ತು. 30 ನಿಮಿಷದ ನಂತರ ಪಂಪ್ ಡ್ರೈ ಅಗಿಯೇ ಹೊರತೆಗೆಯಬೇಕಾಯಿತು. ಇದು ಸಂತೋಷದ ವಿಷಯವೋ ಅಥವಾ ಬೇಜಾರಿನ ವಿಷಯವೋ ಗೊತ್ತಾಗದೇ ಮಕ್ಕಳ ಕ್ರಿಬ್ಬನ್ನೇ ನೋಡುತ್ತಾ ಕುಳಿತೆ. ಗಂಡ ಇನ್ನೂ ಗೊಂದಲದಲ್ಲಿ ನನ್ನ ಮುಖ ನೋಡುತ್ತಿದ್ದ.