ಸಾರಾಂಶ
- ಕೃಷ್ಣ ಭೈರೇಗೌಡ,
ಕಂದಾಯ ಸಚಿವರು, ಕರ್ನಾಟಕ ರಾಜ್ಯ ಸರಕಾರ
ಭಾರತದ ಸಂವಿಧಾನದ ನಿರ್ದೇಶಕ ತತ್ವಗಳ ವಿಧಿ 38(2), ‘ಸರಕಾರವು ವಿವಿಧ ಭಾಗಗಳಲ್ಲಿ ನೆಲೆಸಿರುವ ಜನರ ಅಸಮಾನತೆಯನ್ನು ಕಡಿಮೆಗೊಳಿಸುತ್ತ ಶ್ರಮಿಸಬೇಕು’ ಎಂದು ಹೇಳುತ್ತದೆ. ಸಂತುಲಿತ ಪ್ರಾದೇಶಿಕ ಅಭಿವೃದ್ಧಿಯತ್ತ ಎಷ್ಟೇ ಪ್ರಯತ್ನಗಳು ನಡೆದಾಗ್ಯೂ, ಈ ಅಸಮಾನ ಬೆಳವಣಿಗೆ ಭಾರತದ ನತದೃಷ್ಟ ವಾಸ್ತವವಾಗಿದೆ.
ಸ್ವಾತಂತ್ರ್ಯ ಪಡೆಯುವ ವೇಳೆಗೆ ಭಾರತದ ಹೆಚ್ಚಿನ ಪ್ರದೇಶಗಳು ಏಕರೀತಿಯ ದಾರಿದ್ರ್ಯ ಮತ್ತು ಹಿಂದುಳಿದಿರುವಿಕೆಗೆ ತುತ್ತಾಗಿದ್ದವು. ಒಂದೇ ಬಗೆಯ ಅಭಿವೃದ್ಧಿ ನೆಲೆಯಿಂದ ಶುರು ಮಾಡಿದರೂ ಕೆಲವು ರಾಜ್ಯಗಳು ಸಾಮಾಜಿಕ, ಮಾನವ ಸಂಪನ್ಮೂಲ ಮತ್ತು ಆರ್ಥಿಕ ಕ್ಷೇತ್ರಗಳಲ್ಲಿ ಅಪಾರ ಸುಧಾರಣೆ ಸಾಧಿಸಿವೆ. ಒಳ್ಳೆಯ ಸಾಧನೆ ಮಾಡುತ್ತಿರುವ ರಾಜ್ಯಗಳು ಮತ್ತು ಇತರ ರಾಜ್ಯಗಳ ನಡುವಿನ ಅಂತರ ‘80ರ ದಶಕದ ಬಳಿಕ ಇನ್ನಷ್ಟು ಹೆಚ್ಚಾಗಿದೆ.
ತಲಾ ಆದಾಯವನ್ನು ಸಾಮಾಜಿಕ, ಆರ್ಥಿಕ ಅಭಿವೃದ್ಧಿಯ ಸೂಚಿಯಾಗಿ ಗಮನಿಸಿದರೆ 60ರ ದಶಕದಲ್ಲಿ ಈ ಅಂತರ -30%ದಿಂದ +30%ರ ಮಟ್ಟದಲ್ಲಿತ್ತು. ಆದರೆ ಈಗ ಈ ಅಂತರ -60%ರಿಂದ +90%ರವರೆಗೂ ಹೆಚ್ಚಿದೆ.
ವೈರುಧ್ಯವೆಂದರೆ, ಉತ್ತಮ ಸಾಧನೆ ತೋರುತ್ತಿರುವ ರಾಜ್ಯಗಳಿಂದ ಕುಂಟುತ್ತಿರುವ ರಾಜ್ಯಗಳಿಗೆ ಅಪಾರ ಆರ್ಥಿಕ ಸಂಪನ್ಮೂಲವನ್ನು ವರ್ಗಾವಣೆ ಮಾಡುತ್ತಿರುವ ಸಂದರ್ಭದಲ್ಲೇ ಇದು ಜರುಗಿದೆ. ಹಣಕಾಸು ಆಯೋಗಗಳು ಮತ್ತು ಕೇಂದ್ರ ಸರಕಾರಗಳು ಈ ಕುಂಟುತ್ತಿರುವ ರಾಜ್ಯಗಳಿಗೆ ನಿಧಿ ಹಂಚಿಕೆ, ಕೇಂದ್ರ ಪ್ರಾಯೋಜಿತ ಯೋಜನೆಗಳು, ವಿವೇಚನಾ ನಿಧಿಗಳ ಮೂಲಕ ಆರ್ಥಿಕ ಸಂಪನ್ಮೂಲಗಳನ್ನು ಸಂವಿಧಾನದ ವಿಧಿ 38(2)ರ ಅನ್ವಯ ಒದಗಿಸಿವೆ.
ಇಷ್ಟಾದರೂ ಮಾನವ ಸಂಪನ್ಮೂಲ, ಸಾಮಾಜಿಕ, ಆರ್ಥಿಕ ಅಭಿವೃದ್ಧಿಯ ಅಂತರ ಹೆಚ್ಚುತ್ತಲೇ ಇದೆ. ಅಂದರೆ ಸಂಪನ್ಮೂಲ ಕೊರತೆ ಇದಕ್ಕೆ ಕಾರಣವಲ್ಲ ಎಂದಾಯಿತು.ಕಳೆದ 50 ವರ್ಷಗಳ ಅನುಭವ ಹೀಗಿದ್ದರೂ ಉತಮ ಸಾಧನೆ ಮಾಡುತ್ತಿರುವ ರಾಜ್ಯಗಳಿಂದ ಹಿಂದುಳಿದ ರಾಜ್ಯಗಳಿಗೆ ಆರ್ಥಿಕ ಸಂಪನ್ಮೂಲ ವರ್ಗಾವಣೆ ಮೂಲಕ ಈ ಸಮಸ್ಯೆ ನಿವಾರಿಸಬಹುದೆಂಬ ಚಿಂತನೆಗೆ ನಾವು ಜೋತು ಬಿದ್ದಿದ್ದೇವೆ.
ಒಂದೋ ಇದು ಅಸಮಾನತೆಯನ್ನು ನಿವಾರಿಸುವ ಮೇಲ್ಪದರದ ಹುಸಿ ಬದ್ಧತೆಯಾಗಿದೆ; ಇಲ್ಲಾ ಕೆಲವು ರಾಜ್ಯಗಳಿಗೆ ಆರ್ಥಿಕ ಸಂಪನ್ಮೂಲ ವರ್ಗಾಯಿಸುವ ಅನುಕೂಲದ ಹಾದಿಯಾಗಿದೆ. ಸಮಸ್ಯೆಗಳನ್ನು ಆಳವಾಗಿ ಅರ್ಥ ಮಾಡಿಕೊಂಡರಷ್ಟೇ ಪರಿಹಾರಗಳು ಹೊರಹೊಮ್ಮಲು ಸಾಧ್ಯ.
ಮಾನವ ಸಂಪನ್ಮೂಲ, ಸಾಮಾಜಿಕ, ಆರ್ಥಿಕ ಅಭಿವೃದ್ಧಿಯಲ್ಲಿರುವ ಅಂತರ, ಭಿನ್ನ ಹಾದಿ-ಗತಿ, ದಕ್ಷಿಣದ ರಾಜ್ಯಗಳ ಸಾಧನೆಗಳ ಕಾರಣಗಳನ್ನು ನೀಲಕಂಠನ್ ಅವರು ಅದ್ಭುತವಾಗಿ ಪ್ರಸ್ತುತಪಡಿಸುತ್ತಾರೆ. ಅವರು ಸಮಸ್ಯೆಯನ್ನು ವಿಶ್ಲೇಷಿಸಿ ಉತ್ತಮ ಸಾಧನೆಯ ಕಾರಣಗಳನ್ನು ಮುಂದಿಡುತ್ತಾರೆ. ಈ ಪ್ರಕ್ರಿಯೆ ಮೂಲಕ ಅವರು ಸಮಸ್ಯೆಯ ಆಳವಾದ ಅರ್ಥೈಸುವಿಕೆಯ ಪುರಾವೆ ಮುಂದಿಡುತ್ತಾರೆ. ಅಷ್ಟೇ ಅಲ್ಲ, ಸಾಧ್ಯ ಪರಿಹಾರದತ್ತ ನಮ್ಮನ್ನು ನಿರ್ದೇಶಿಸುತ್ತಾರೆ. ಖಾಸಗಿ ವಲಯದ ವೃತ್ತಿಪರರಾದರೂ ನಮ್ಮ ಕೆಲವು ‘ಸಾರ್ವಜನಿಕ ನೀತಿ ಪರಿಣಿತ’ರಿಗಿಂತ ಉತ್ತಮವಾದ ಸಾಮಾಜಿಕ, ಆರ್ಥಿಕ ಅಭಿವೃದ್ಧಿ ವಿಶ್ಲೇಷಣೆಯನ್ನು ಅವರು ಮಾಡಿ ಸಮಸ್ಯೆಯ ಮೇಲೆ ಬೆಳಕು ಚೆಲ್ಲುತ್ತಾರೆ.
ಗಟ್ಟಿಯಾದ ಅಂಕಿ-ಅಂಶಗಳ ಬಲದಿಂದಲೇ ಅವರು ವಿಶ್ಲೇಷಣೆ ಮತ್ತು ವಿಷಯ ಸಮಾಪನ ಮಾಡುತ್ತಾರೆ. ತೌಲನಿಕವಾದ ಅಂಕಿ-ಅಂಶಗಳನ್ನು ಸುಲಭವಾಗಿ ಅರ್ಥವಾಗುವ ರೀತಿಯಲ್ಲಿ ಮಂಡಿಸುತ್ತಾರೆಕೊಂಚ ಪ್ರಚೋದಕ ಶೀರ್ಷಿಕೆ ಇದ್ದರೂ ಈಗಿರುವ ‘ಬಿಗು’ವಿನ ಕಾರಣಗಳನ್ನು ಒಪ್ಪುವಂತೆ ನಮ್ಮನ್ನು ಒತ್ತಾಯಿಸಿ, ನಮ್ಮ ಒಕ್ಕೂಟವನ್ನು ಇನ್ನಷ್ಟು ಬಲಪಡಿಸುವ ಅವರ ಉದ್ದೇಶ ಈ ಕೃತಿಯಲ್ಲಿ ಸ್ಪಷ್ಟವಾಗಿ ವ್ಯಕ್ತವಾಗುತ್ತದೆ.
ಈ ‘ಬಿಗು’ವಿನ ಕಾರಣಗಳನ್ನು ನಿರ್ಲಕ್ಷಿಸುವುದು ಪರಿಹಾರವಲ್ಲ. ನಮ್ಮ ಒಕ್ಕೂಟ ಕಾಲಕಾಲಕ್ಕೆ ಹಲವು ಸವಾಲುಗಳನ್ನು ಚಾರಿತ್ರಿಕವಾಗಿ ಎದುರಿಸಿದೆ. ವಿಪರೀತ ತದ್ವಿರುದ್ಧ ನಿಲುವುಗಳ ಮಧ್ಯೆ ಒಮ್ಮತ ಮೂಡಿಸುವುದು, ಸಂಧಾನದ ಮೂಲಕ ವಿಭಿನ್ನ ದೃಷ್ಟಿಕೋನ, ಹಿತಾಸಕ್ತಿಗಳನ್ನು ಸಂಭಾಳಿಸುವ ಹಾದಿಗಳ ಮೂಲಕ ನಾವು ಹಲವಾರು ಸವಾಲುಗಳನ್ನು ಪರಿಹರಿಸಿದ್ದೇವೆ. ತನ್ಮೂಲಕ ಒಕ್ಕೂಟವನ್ನು ಇನ್ನಷ್ಟು ಬಲಯುತಗೊಳಿಸಿದ್ದೇವೆ.
ದಕ್ಷಿಣ ಭಾರತ ಮತ್ತು ಉತ್ತಮ ಸಾಧನೆ ತೋರುತ್ತಿರುವ ಇತರ ರಾಜ್ಯಗಳು ದೇಶದ ಅಭಿವೃದ್ಧಿಗೆ ಹೆಚ್ಚಿನ ಪಾಲು ನೀಡಿವೆ. ಈ ರಾಜ್ಯಗಳು ಬೆಳವಣಿಗೆ, ಪ್ರತಿಭೆ,ಉದ್ಯೋಗ, ಅವಕಾಶ, ಆದಾಯಗಳ ಚಾಲಕ ಶಕ್ತಿಗಳಾಗಿವೆ. ಈ ರಾಜ್ಯಗಳು ಮಾನವ ಸಂಪನ್ಮೂಲ, ಆರ್ಥಿಕ ಅಭಿವೃದ್ಧಿ, ಮೂಲಭೂತ ಸಂರಚನಾ ಅಭಿವೃದ್ಧಿಗೆ ಅಪಾರ ಹೂಡಿಕೆ ಮಾಡಿವೆ.
ಆದ್ದರಿಂದಲೇ ಈ ರಾಜ್ಯಗಳ ಸಾಮಾಜಿಕ-ಆರ್ಥಿಕ ಸಾಧನೆ ರಾಷ್ಟ್ರೀಯ ಸರಾಸರಿಗಿಂತ ಮೇಲಿದೆ. ಈ ರಾಜ್ಯಗಳು ತಮ್ಮ ಸಾಧನೆಯನ್ನು ಇನ್ನಷ್ಟು ಉತ್ತಮಗೊಳಿಸಲು ಸತತವಾಗಿ ಇನ್ನಷ್ಟು ಹೂಡಿಕೆ ಮಾಡಬೇಕಾದ ಅಗತ್ಯಇದೆ. ಈ ರಾಜ್ಯಗಳ ಪ್ರಜೆಗಳ ನಿರೀಕ್ಷೆಯೂ ಅದೇ. ಈ ಸಾಧನೆಯ ಸಾತತ್ಯಕ್ಕೆ ಬೇಕಾದ ಹೂಡಿಕೆಗೆ ಯಾವ ಅಡ್ಡಿ, ತಡೆಗಳೂ ಇರಬಾರದು.ಇದು ಸಾಧನೆ ಮಾಡುತ್ತಿರುವ ರಾಜ್ಯಗಳ ಹಿತಕ್ಕಾಗಿ ಅಷ್ಟೇ ಅಲ್ಲ, ದೇಶದ ಒಟ್ಟಾರೆ ಒಕ್ಕೂಟದ ಹಿತಕ್ಕಾಗಿ ಅವಶ್ಯಕವಿದೆ.
ರಾಜ್ಯಗಳಲ್ಲಿ ಸೃಷ್ಟಿಯಾಗುವ ಉದ್ಯೊಗಗಳು, ಅವಕಾಶಗಳು, ಆದಾಯಗಳೆಲ್ಲ, ಉಳಿದ ರಾಜ್ಯಗಳಿಗೂ ಲಾಭ ತರುತ್ತವೆ. ಚಿನ್ನದ ಮೊಟ್ಟೆ ಇಡುವ ಕೋಳಿಯನ್ನು ಪೋಷಿಸಬೇಕಲ್ಲವೇ?ಈ ರಾಜ್ಯಗಳ ಕಾಳಜಿಯನ್ನು ನಿರ್ಲಕ್ಷಿಸುವುದು ಅಥವಾ ಅವುಗಳನ್ನು ವಿಭಜಕ ಎಂದು ಮುದ್ರೆ ಒತ್ತುವುದು ಒಕ್ಕೂಟಕ್ಕೆ ಮಾಡುವ ಸೇವೆಯಲ್ಲ. ಈ ರಾಜ್ಯಗಳ ಅಗತ್ಯಗಳಿಗೆ ಸ್ಪಂದಿಸಿ ಸಾಮೂಹಿಕವಾಗಿ ಪರಿಹಾರ ಹುಡುಕಲು ನಾವೆಲ್ಲ ತೊಡಗಬೇಕಿದೆ. ನಮ್ಮ ದೇಶ ಮತ್ತು ಒಕ್ಕೂಟವನ್ನು ಇನ್ನಷ್ಟು ಸಶಕ್ತಗೊಳಿಸುವ ಬಗೆ ಇದು. ಆದ್ದರಿಂದಲೇ ಉತ್ತಮ ಸಾಧನೆ ಮಾಡುತ್ತಿರುವ ರಾಜ್ಯಗಳ ಆರ್ಥಿಕ ಅಗತ್ಯಗಳನ್ನು ಪೂರೈಸುವ ಚೌಕಟ್ಟೊಂದನ್ನು ಅಭಿವೃದ್ಧಿಗೊಳಿಸಬೇಕಿದೆ.
ಈ ಚೌಕಟ್ಟು ಹಿಂದುಳಿದಿರುವ ರಾಜ್ಯಗಳ ಅಗತ್ಯಗಳನ್ನೂ ಪೂರೈಸುವಂತಿರಬೇಕು. ಉತ್ತಮ ಸಾಧನೆ ಮಾಡುತ್ತಿರುವ ರಾಜ್ಯಗಳು ದೇಶದ ಅಭಿವೃದ್ಧಿಗೆ ಕೊಡುಗೆ ನೀಡುತ್ತಿವೆಯಷ್ಟೇ.ಉತ್ತಮ ಸಾಧನೆ ಮಾಡಿರುವ ರಾಜ್ಯಗಳು ಸಾಮಾಜಿಕ, ಆರ್ಥಿಕ ಮತ್ತು ಮಾನವ ಸಂಪನ್ಮೂಲ ಕ್ಷೇತ್ರಗಳಲ್ಲಿ ಇನ್ನಷ್ಟು ಸಾಧನೆ ಮಾಡಲು ಹೂಡಿಕೆ ಮಾಡಬೇಕಿದೆ. ಅದಕ್ಕೆ ಆರ್ಥಿಕ ಸಂಪನ್ಮೂಲ ಬೇಕು. ಈ ರೀತಿಯ ಹೂಡಿಕೆ ಇಲ್ಲದಿದ್ದರೆ ಈ ರಾಜ್ಯಗಳ ಸಾಧನೆ ಇಳಿಮುಖವಾಗಬಹುದು. ಇದು ಉಳಿದ ರಾಜ್ಯಗಳನ್ನಷ್ಟೇ ಅಲ್ಲ, ದೇಶವನ್ನೇ ಪ್ರಭಾವಿಸಬಹುದು.
ಎಲ್ಲರಿಗೂ ನಷ್ಟ ತರಬಹುದಾದ ಸಂಗತಿ ಇದು.ಹಿಂದುಳಿದ ರಾಜ್ಯಗಳ ಅಭಿವೃದ್ಧಿ ಸಮತೆಯ ಬಗ್ಗೆ ಸಹಮತ ಹೊಂದಿ, ಸಾಧನೆ ಮಾಡಿರುವ ರಾಜ್ಯಗಳ ಬಗ್ಗೆ ಯಾವ ಕಾಳಜಿಯೂ ಇಲ್ಲದಿದ್ದರೆ ದೀರ್ಘಾವಧಿಯಲ್ಲಿ ಇದು ಇಡೀ ದೇಶಕ್ಕೆ ನಷ್ಟದಾಯಕವಾಗಬಹುದು.ಒಕ್ಕೂಟದ ಮನೋಧರ್ಮದ ಭಾಗವಾಗಿ, ಹಿಂದುಳಿದ ರಾಜ್ಯಗಳ ಹಿತಾಸಕ್ತಿಗೆ ಗಮನ ನೀಡಿದಂತೆ, ಉತ್ತಮ ಸಾಧನೆ ಮಾಡಿರುವ ರಾಜ್ಯಗಳ ಹಿತಾಸಕ್ತಿಗೂ ಗಮನ ಹರಿಸಬೇಕಿದೆ. ಆಯಾ ರಾಜ್ಯಗಳಿಗೆ ಅವುಗಳ ತೆರಿಗೆ ಪಾಲನ್ನು ಆಧರಿಸಿದ ಒಂದು ಪಾಲನ್ನು ಮರಳಿಸುವುದು, ಆಯಾ ರಾಜ್ಯಗಳ ಒಟ್ಟಾರೆ ಆಂತರಿಕ ಉತ್ಪನ್ನವನ್ನು ಒಂದು ಸೂಚಿಯಾಗಿ ಹಣಕಾಸು ಆಯೋಗ ಪರಿಗಣಿಸುವುದು- ಇತ್ಯಾದಿ ಸಲಹೆಗಳನ್ನು ತಜ್ಞರು ಮುಂದಿಟ್ಟಿದ್ದಾರೆ. ಇವೆಲ್ಲಾ ಸಮಾನತೆ ಮತ್ತು ಸಾಧನೆಗಳೆರಡನ್ನೂ ಸಂತುಲಿತಗೊಳಿಸಿ ಅಭಿವೃದ್ಧಿಯನ್ನು ಸಾಧಿಸುವ ಉಪಾಯಗಳು.
(ಕೆಪಿ ಸುರೇಶ್ ಅನುವಾದಿಸಿರುವ ಕೆ ಎಸ್ ನೀಲಕಂಠನ್ ಅವರ ‘ಸೌತ್ ವರ್ಸಸ್ ನಾರ್ತ್’ ಕೃತಿಯ ಕನ್ನಡ ಅವತರಣಿಕೆ ‘ದಕ್ಷಿಣ ವರ್ಸಸ್ ಉತ್ತರ’ ಇಂದು ಬೆಂಗಳೂರಿನ ಸಾಹಿತ್ಯ ಪರಿಷತ್‌ನಲ್ಲಿ ಬಿಡುಗಡೆಯಾಗುತ್ತಿದೆ. ಈ ಪುಸ್ತಕಕ್ಕೆಕೃಷ್ಣ ಭೈರೇಗೌಡ ಬರೆದಿರುವ ಮುನ್ನುಡಿಯ ಆಯ್ದ ಭಾಗವಿದು.)