ಶಿಕ್ಷಣ, ಉದ್ಯಮ, ಕೃಷಿ ಇತ್ಯಾದಿ ಕ್ಷೇತ್ರಗಳಲ್ಲಿ ಎಐ ಬಳಕೆ ಹೆಚ್ಚಳ : ಮೆಟಾ ಘೋಷಣೆ

| Published : Oct 25 2024, 12:50 AM IST / Updated: Oct 25 2024, 05:22 AM IST

ಸಾರಾಂಶ

ಬೆಂಗಳೂರಿನಲ್ಲಿ ಮೆಟಾ ಸಂಸ್ಥೆ ಆಯೋಜಿಸಿದ್ದ ಬಿಲ್ಡ್ ವಿತ್ ಎಐ ಸಮಾವೇಶದಲ್ಲಿ ಎಐ ಜಗತ್ತಿನ ಆಗುಹೋಗುಗಳ ಕುರಿತು ಚರ್ಚೆ ನಡೆಯಿತು. ಈ ಸಂದರ್ಭದಲ್ಲಿ ಎಐ ಜಗತ್ತಿನಲ್ಲಿ ನಡೆಯುತ್ತಿರುವ ಅಭಿವೃದ್ಧಿಗಳ ಕುರಿತು ಚರ್ಚಿಸಲಾಯಿತು.

 ಬೆಂಗಳೂರು : ಉದ್ಯಮ, ಶಿಕ್ಷಣ, ಕೃಷಿ ಇತ್ಯಾದಿ ಕ್ಷೇತ್ರಗಳಲ್ಲಿ ಎಐ ಬಳಕೆ ಗಣನೀಯವಾಗಿ ಹೆಚ್ಚುತ್ತಿದೆ. ಅದರಲ್ಲೂ ಎಐ ಬಳಕೆಯನ್ನು ಹೆಚ್ಚಿಸಲು ಮೆಟಾ ನೆರವಾಗುತ್ತಿದೆ. ವಿಶೇಷವಾಗಿ ಸರ್ಕಾರದ ಇಲಾಖೆಗಳ ಕೆಲಸಗಳು ವೇಗವಾಗಿ ನಡೆಯಲು ಆಂಧ್ರಪ್ರದೇಶ ಮತ್ತು ತೆಲಂಗಾಣ ಸರ್ಕಾರಗಳು ಮೆಟಾ ಜೊತೆಗೆ ಸಹಯೋಗ ಮಾಡಿಕೊಂಡಿವೆ ಎಂದು ಮೆಟಾ ಸಂಸ್ಥೆಯು ತಿಳಿಸಿದೆ.

ಬೆಂಗಳೂರಿನಲ್ಲಿ ಮೆಟಾ ಸಂಸ್ಥೆ ಆಯೋಜಿಸಿದ್ದ ಬಿಲ್ಡ್ ವಿತ್ ಎಐ ಸಮಾವೇಶದಲ್ಲಿ ಎಐ ಜಗತ್ತಿನ ಆಗುಹೋಗುಗಳ ಕುರಿತು ಚರ್ಚೆ ನಡೆಯಿತು. ಈ ಸಂದರ್ಭದಲ್ಲಿ ಎಐ ಜಗತ್ತಿನಲ್ಲಿ ನಡೆಯುತ್ತಿರುವ ಅಭಿವೃದ್ಧಿಗಳ ಕುರಿತು ಚರ್ಚಿಸಲಾಯಿತು.

ವಿವಿಧ ಕ್ಷೇತ್ರಗಳಲ್ಲಿ ಎಐ ಬಳಕೆಯಾಗುತ್ತಿರುವ ಕುರಿತು ಈ ಸಂದರ್ಭದಲ್ಲಿ ಮಾಹಿತಿ ನೀಡಲಾಯಿತು. ಮೆಟಾ ಸಂಸ್ಥೆಯ ಬೆಂಬಲದಿಂದ ಕಿಸಾನ್‌ ಎಐ ಸಂಸ್ಥೆಯು ಧೇನು ಲಾಮಾ 3 ಅನ್ನು ಬಿಡುಗಡೆ ಮಾಡಿದೆ. ಇದು ಭಾರತೀಯ ರೈತರಿಗಾಗಿಯೇ ವಿನ್ಯಾಸಗೊಳಿಸಲಾದ ಎಐ ಮಾಡೆಲ್ ಆಗಿದ್ದು, ಕೃಷಿ ಕಾರ್ಯಗಳಿಗಾಗಿ ನೆರವಾಗುತ್ತದೆ. 9 ಭಾರತೀಯ ಭಾಷೆಗಳು ಸೇರಿದಂತೆ ಒಟ್ಟು 22 ಭಾಷೆಗಳಲ್ಲಿ ಇದು ಲಭ್ಯವಿದೆ.

ಸಾರ್ವಜನಿಕ ಸೇವಾ ಕೆಲಸಗಳನ್ನು ವೇಗಗೊಳಿಸಲು, ಸರ್ಕಾರಿ ಕೆಲಸಗಳು ವೇಗವಾಗಿ ನಡೆಯಲು ಆಂಧ್ರಪ್ರದೇಶ ತೆಲಂಗಾಣ ರಾಜ್ಯ ಸರ್ಕಾರದ ಜೊತೆ ಸಹಭಾಗಿತ್ವ ಮಾಡಿರುವುದಾಗಿ ಇದೇ ಸಂದರ್ಭದಲ್ಲಿ ಮೆಟಾ ತಿಳಿಸಿದೆ. ಭಾರತದ ಮೊದಲ ಸಂಪೂರ್ಣ ಸ್ವಯಂಚಾಲಿತ ಆನ್‌ಲೈನ್ ಕಲಿಕಾ ವೇದಿಕೆಯಾದ ಅರಿವಿಹಾನ್‌ ನಂತಹ ಶಿಕ್ಷಣ-ಕೇಂದ್ರಿತ ಯೋಜನೆಗಳಲ್ಲಿ ನಮ್ಮ ಓಪನ್ ಸೋರ್ಸ್ ಮಾಡೆಲ್ ಗಳನ್ನು ಬಳಸಲಾಗುತ್ತಿದೆ ಎಂದೂ ಮೆಟಾ ಸಂಸ್ಥೆ ಮಾಹಿತಿ ನೀಡಿದೆ. ಹೀಗೆ ವಿವಿಧ ಕ್ಷೇತ್ರಗಳಲ್ಲಿ ಎಐ ಅಳವಡಿಕೆಗೆ ಮೆಟಾ ನೆರವು ನೀಡುತ್ತಿದೆ.

ಮೆಟಾ ಲಾಮಾ ಓಪನ್ ಪ್ಲಾಟ್ ಫಾರ್ಮ್ ಅನ್ನು ಬಳಸಿಕೊಂಡು ಹೊಸ ಆವಿಷ್ಕಾರದಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹ ನೀಡಲು ಮೆಟಾ ಸಂಸ್ಥೆಯು ಇತ್ತೀಚೆಗೆ ಎಐ ಹ್ಯಾಕಥಾನ್ ಅನ್ನು ಆಯೋಜಿಸಿತ್ತು. ಅದರಲ್ಲಿ ಕ್ಯೂರ್ ಫಾರ್ಮಾ ಎಐ, ಸಿವಿಕ್ ಫಿಕ್ಸ್ ಮತ್ತು ಇವಿಎಐಸ್ಮೆಂಟ್ ತಂಡಗಳು ವಿಜೇತರಾಗಿ ಹೊರಹೊಮ್ಮಿದ್ದವು. ಶೀಬಿಲ್ಡ್ಸ್ ಎಂಬ ಮಹಿಳಾ ತಂಡವು ತೀರ್ಪುಗಾರರ ವಿಶೇಷ ಮನ್ನಣೆಗೆ ಪಾತ್ರವಾಗಿತ್ತು.

ಈ ಸಂದರ್ಭದಲ್ಲಿ ಹಾಜರಿದ್ದ ಮೆಟಾ ಸಂಸ್ಥೆಯ ವಿಪಿ ಮತ್ತು ಪ್ರಧಾನ ಎಐ ವಿಜ್ಞಾನಿ ಯಾನ್ ಲೆಕುನ್ ಅವರು, “ಎಐ ಭವಿಷ್ಯವನ್ನು ರೂಪಿಸುವ ವಿಚಾರದಲ್ಲಿ ಭಾರತವು ಅಗಾಧ ಸಾಮರ್ಥ್ಯವನ್ನು ಹೊಂದಿದೆ. ಉತ್ಪನ್ನ ಅಭಿವೃದ್ಧಿಯಲ್ಲಿ ಮಾತ್ರವೇ ಅಲ್ಲ, ಜೊತೆಗೆ ಅತ್ಯಾಧುನಿಕ ಸಂಶೋಧನೆಯಲ್ಲಿಯೂ ಸಹ ಮುಂಚೂಣಿಯಲ್ಲಿದೆ " ಎಂದು ಹೇಳಿದರು.

ಮೆಟಾ ಇಂಡಿಯಾದ ಉಪಾಧ್ಯಕ್ಷರಾದ ಮತ್ತು ಮುಖ್ಯಸ್ಥರಾದ ಸಂಧ್ಯಾ ದೇವನಾಥನ್ ಅವರು ಮಾತನಾಡಿ, “ಮೊಬೈಲ್ ಇಂಟರ್ ನೆಟ್ ಕ್ರಾಂತಿ ಮಾಡಿದಂತೆ ಎಐನಲ್ಲಿ ಕೂಡ ದಾರಿ ತೋರುವ ಸಾಮರ್ಥ್ಯವನ್ನು ಭಾರತ ಹೊಂದಿದೆ ಎಂಬುದು ಮೆಟಾ ನಂಬಿಕೆಯಾಗಿದೆ” ಎಂದು ಹೇಳಿದರು. ಹಲವಾರು ಎಐ ಆಸಕ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.