ಪ್ರಯಾಗ್‌ ರಾಜ್‌ನಲ್ಲಿ ಬೆಳೆದ ಅಶೋಕ್‌ ಅವರು, ಸಂಗಮದ ದಂಡೆಯ ಮೇಲೆ ಗಂಟೆಗಟ್ಟಲೆ ಕುಳಿತಿರುತ್ತಿದ್ದರು. ನದಿಯ ಹರಿವು ಅವರನ್ನು ಆಕರ್ಷಿಸುತ್ತಿತ್ತಾದರೂ, ಅಲ್ಲಿಗೆ ಬರುತ್ತಿದ್ದ ಸಂತರು, ಋಷಿಮುನಿಗಳು ಮತ್ತು ಭಕ್ತರು ಅವರ ಮನಸ್ಸಿನ ಮೇಲೆ ಆಳವಾದ ಪ್ರಭಾವಬೀರಿದ್ದರು.

ಪ್ರಯಾಗ್‌ ರಾಜ್‌ನಲ್ಲಿ ಬೆಳೆದ ಅಶೋಕ್‌ ಅವರು, ಸಂಗಮದ ದಂಡೆಯ ಮೇಲೆ ಗಂಟೆಗಟ್ಟಲೆ ಕುಳಿತಿರುತ್ತಿದ್ದರು. ನದಿಯ ಹರಿವು ಅವರನ್ನು ಆಕರ್ಷಿಸುತ್ತಿತ್ತಾದರೂ, ಅಲ್ಲಿಗೆ ಬರುತ್ತಿದ್ದ ಸಂತರು, ಋಷಿಮುನಿಗಳು ಮತ್ತು ಭಕ್ತರು ಅವರ ಮನಸ್ಸಿನ ಮೇಲೆ ಆಳವಾದ ಪ್ರಭಾವಬೀರಿದ್ದರು. ಇದು ಭಾರತದ ಸಾಂಸ್ಕೃತಿಕ ಮೌಲ್ಯಗಳ ಬಗ್ಗೆ ಅವರಲ್ಲಿ ತಿಳುವಳಿಕೆಯನ್ನು ಬೆಳೆಸಿತು ಮತ್ತು ಸಮಾಜಕ್ಕಾಗಿ ಏನಾದರೂ ಮಾಡಬೇಕೆಂಬ ಸಂಕಲ್ಪವನ್ನು ಬಲಪಡಿಸಿತು.

-ನರೇಂದ್ರ ಮೋದಿ, ಭಾರತದ ಪ್ರಧಾನಮಂತ್ರಿ.

‘ವೃಕ್ಷ ಕಬಹು ನಹಿಂ ಫಲ್‌ ಭಖೈ, ನದೀ ನ ಸಂಚೈ ನೀರ್। ಪರಮಾರಥ್ ಕೇಕಾರಣೇ, ಸಾಧುನ ಧರಾ ಶರೀರ್॥’ ಎಂಬ ಸುಂದರವಾದ ನಾಣ್ಣುಡಿಯೊಂದಿದೆ. ಅಂದರೆ, ಮರವು ತನ್ನ ಹಣ್ಣುಗಳನ್ನು ತಾನೇ ತಿನ್ನುವುದಿಲ್ಲ; ನದಿಯು ತನ್ನ ನೀರನ್ನು ತಾನೇ ಕುಡಿಯುವುದಿಲ್ಲ. ಇವೆರಡೂ ಇತರರ ಒಳಿತಿಗಾಗಿಯೇ ಇರುತ್ತವೆ. ನಮ್ಮ ಸುತ್ತಮುತ್ತಲಿನ ಜನರ ಒಳಿತಿಗಾಗಿ ಮೀಸಲಿಟ್ಟ ಬದುಕು, ವೈಯಕ್ತಿಕ ಸಾಧನೆಗಿಂತಲೂ ಎಷ್ಟೋ ಪಟ್ಟು ಹೆಚ್ಚಿನ ಅರ್ಥವನ್ನು ಪಡೆದುಕೊಳ್ಳುತ್ತದೆ ಎಂಬುದನ್ನು ನಮ್ಮ ಸಂತರು ಮತ್ತು ಋಷಿಮುನಿಗಳು ನಮಗೆ ಬಹಳ ಹಿಂದಿನಿಂದಲೂ ಕಲಿಸಿಕೊಟ್ಟಿದ್ದಾರೆ. ಈ ಸೇವೆಯ ಭಾವನೆ ಯಾರಲ್ಲಿ ಸದಾ ಎದ್ದು ಕಾಣುತ್ತಿತ್ತೋ, ಅವರೇ ಅಶೋಕ್‌ ಸಿಂಘಲ್‌ ಅವರು.

ಸೆಪ್ಟೆಂಬರ್ 27ರಿಂದ, ಆಧ್ಯಾತ್ಮಿಕ ಸಾಧನೆ, ಸಾಂಸ್ಕೃತಿಕ ಜಾಗೃತಿ ಮತ್ತು ದಶಕಗಳ ಕಾಲದ ಸಮರ್ಪಿತ ಸಂಘಟನಾ ಸೇವೆಯನ್ನು ಒಗ್ಗೂಡಿಸಿದ ಅತ್ಯಂತ ಅಪರೂಪದ ವ್ಯಕ್ತಿತ್ವವನ್ನು ಸ್ಮರಿಸಲು ನಾವು ಅವರ ಜನ್ಮ ಶತಮಾನೋತ್ಸವವನ್ನು ಆಚರಿಸುತ್ತಿದ್ದೇವೆ.

ಅಶೋಕ್‌ ಅವರೊಂದಿಗೆ ಅನೇಕ ಬಾರಿ ಮಾತನಾಡುವ ಹಾಗೂ ಅವರ ಪ್ರೀತಿ ಮತ್ತು ವಾತ್ಸಲ್ಯವನ್ನು ಪಡೆಯುವ ಅವಕಾಶ ನನಗೆ ಸಿಕ್ಕಿದ್ದನ್ನು ನನ್ನ ಸೌಭಾಗ್ಯವೆಂದೇ ಭಾವಿಸುತ್ತೇನೆ. ಅಂತಹ ಆರಂಭಿಕ ಸಂದರ್ಭಗಳಲ್ಲಿ ಒಂದು 1981ರದ್ದು. ಆಗ ನಾನು ಯುವ ಕಾರ್ಯಕರ್ತನಾಗಿ ನನಗೆ ವಹಿಸಿದ್ದ ಸಂಘಟನಾ ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದೆ. ಆ ಸಮಯದಲ್ಲಿ ಅವರಿಂದ ನನಗೊಂದು ಕೈ ಬರಹದ ಪತ್ರ ಬಂದಿತ್ತು. ಸಹಜವಾಗಿಯೇ, ಅದು ನನಗೆ ಅತ್ಯಂತ ವಿಶೇಷವಾದ ಕ್ಷಣವಾಗಿತ್ತು. ಮುಂಬರುವ ಒಂದು ಪ್ರಮುಖ ಕಾರ್ಯಕ್ರಮದ ಬಗ್ಗೆ ತಿಳಿಸಿ, ನಾನು ನಿರ್ವಹಿಸಬೇಕಾದ ಕೆಲವು ಕೆಲಸಗಳನ್ನು ಅದರಲ್ಲಿ ವಹಿಸಿದ್ದರು.

ಜನರಿಗಾಗಿ ಸದಾ ಆಲೋಚನೆ:

ಹಲವು ದಶಕಗಳ ಕಾಲ ಅವರು ಹಗಲಿರುಳು ಶ್ರಮಿಸುವುದನ್ನು ನಾನು ಹತ್ತಿರದಿಂದ ನೋಡಿದ್ದೇನೆ. ಅವರು ದೂರದ ಪ್ರದೇಶಗಳಿಗೂ ಸುದೀರ್ಘವಾದ, ಕಷ್ಟಕರವಾದ ಪ್ರಯಾಣಗಳನ್ನು ಮಾಡುತ್ತಿದ್ದರು. ಅದರಲ್ಲೂ ಗುಜರಾತ್‌ ಬುಡಕಟ್ಟು ಪ್ರದೇಶಗಳಲ್ಲಿ ಸಂಚರಿಸುವುದು ಎಂದರೆ ಅವರಿಗೆ ಎಲ್ಲಿಲ್ಲದ ಆಸಕ್ತಿ. ಸಮಾಜದ ಕೊನೆಯ ಸಾಲಿನಲ್ಲಿರುವ ಜನರಿಗಾಗಿ ಇನ್ನು ಏನೇನು ಮಾಡಬಹುದು ಎಂಬುದರ ಕುರಿತೇ ಅವರ ಮನಸ್ಸು ಸದಾ ಯೋಚಿಸುತ್ತಿತ್ತು. ದೇಶದ ಯಾವುದೇ ಭಾಗದಲ್ಲಿ ನೈಸರ್ಗಿಕ ವಿಕೋಪ ಸಂಭವಿಸಿದಾಗಲೂ, ಅಲ್ಲಿಗೆ ತಾವೇ ಖುದ್ದಾಗಿ ಧಾವಿಸುವವರಲ್ಲಿ ಅಥವಾ ಸಂತ್ರಸ್ತರಿಗೆ ನೆರವಾಗಲು ಕಾರ್ಯಕರ್ತರಿಗೆ ಮಾರ್ಗದರ್ಶನ ನೀಡುವವರಲ್ಲಿ ಅಶೋಕ್‌ ಅವರು ಮುಂಚೂಣಿಯಲ್ಲಿರುತ್ತಿದ್ದರು. 2001ರ ಕಚ್‌ ಭೂಕಂಪದ ನಂತರ ಅವರೊಂದಿಗೆ ನನಗಾದ ಅನುಭವ ಎಂದಿಗೂ ಮರೆಯಲಾಗದಂತಹುದು.

ಇತರರ ಮೇಲಿನ ಈ ಕರುಣೆ ಮತ್ತು ಕಾಳಜಿಯ ಗುಣ ಅಶೋಕ್‌ ಅವರಿಗೆ ಅತ್ಯಂತ ಚಿಕ್ಕವಯಸ್ಸಿನಲ್ಲೇ ಬಂದಿತ್ತು. ಅವರು ಪ್ರತಿಷ್ಠಿತ ಹಾಗೂ ಶ್ರೀಮಂತ ಕುಟುಂಬದಿಂದ ಬಂದವರು. ಅವರ ತಂದೆ ಮಹಾವೀರ್‌ ಅವರು ಹೆಸರಾಂತ ಆಡಳಿತಾಧಿಕಾರಿ ಆಗಿದ್ದರು. ಅವರ ಸಹೋದರರಲ್ಲಿ ಒಬ್ಬರಾದ ಬಿ.ಪಿ. ಸಿಂಘಲ್‌ ಅವರು ಪೊಲೀಸ್‌ ಅಧಿಕಾರಿಯಾಗಿ ಸೇವೆ ಸಲ್ಲಿಸಿ, ಮುಂದೆ ಸಂಸದರಾದರು. ಮತ್ತೊಬ್ಬ ಸಹೋದರರಾದ ವಿ.ಪಿ.ಸಿಂಘಲ್‌ ಅವರು, ತ್ರಿಪುರ ರಾಜ್ಯ ರಚನೆಯಾದ ಹೊಸದರಲ್ಲಿ ಅದರ ಮುಖ್ಯ ಕಾರ್ಯದರ್ಶಿಯಾಗಿದ್ದರು. ಕುಟುಂಬದ ಇತರ ಸದಸ್ಯರು ವ್ಯಾಪಾರ ಮತ್ತು ಕೃಷಿ ಕ್ಷೇತ್ರಗಳಲ್ಲಿ ಯಶಸ್ಸು ಕಂಡಿದ್ದರು. ಆದರೆ ಚಿಕ್ಕಂದಿನಿಂದಲೇ ಅಶೋಕ್‌ ಅವರ ಮನಸ್ಸು ಆಕರ್ಷಿತವಾಗಿದ್ದು ಮಾತ್ರ ಸಂಪೂರ್ಣವಾಗಿ ಬೇರೆಯದೇ ಧ್ಯೇಯದತ್ತ... ಭಾರತದ ಪುನರುತ್ಥಾನ ಮತ್ತು ಭಾರತ ಮಾತೆಯ ಮಕ್ಕಳಿಗೆ ಕೀರ್ತಿ ತರುವುದು. ಪ್ರಯಾಗ್‌ ರಾಜ್‌ನಲ್ಲಿ ಬೆಳೆದ ಅಶೋಕ್‌ ಅವರು, ಸಂಗಮದ ದಂಡೆಯ ಮೇಲೆ ಗಂಟೆಗಟ್ಟಲೆ ಕುಳಿತಿರುತ್ತಿದ್ದರು. ನದಿಯ ಹರಿವು ಅವರನ್ನು ಆಕರ್ಷಿಸುತ್ತಿತ್ತಾದರೂ, ಅಲ್ಲಿಗೆ ಬರುತ್ತಿದ್ದ ಸಂತರು, ಋಷಿಮುನಿಗಳು ಮತ್ತು ಭಕ್ತರು ಅವರ ಮನಸ್ಸಿನ ಮೇಲೆ ಆಳವಾದ ಪ್ರಭಾವಬೀರಿದ್ದರು. ಇದು ಭಾರತದ ಸಾಂಸ್ಕೃತಿಕ ಮೌಲ್ಯಗಳ ಬಗ್ಗೆ ಅವರಲ್ಲಿ ತಿಳುವಳಿಕೆಯನ್ನು ಬೆಳೆಸಿತು ಮತ್ತು ಸಮಾಜಕ್ಕಾಗಿ ಏನಾದರೂ ಮಾಡಬೇಕೆಂಬ ಸಂಕಲ್ಪವನ್ನು ಬಲಪಡಿಸಿತು. ಇತರರಿಗಾಗಿ ಬದುಕಬೇಕೆಂಬ ಈ ತುಡಿತವೇ ಅವರನ್ನುಆರ್‌ಎಸ್‌ಎಸ್‌ನತ್ತ ಸೆಳೆಯಿತು. ತಮ್ಮ ಬಳಿ ಬಂದ ಪ್ರತಿಯೊಂದು ಜವಾಬ್ದಾರಿಯನ್ನೂ ಅವರು ಉತ್ಸಾಹ, ಶಿಸ್ತು ಮತ್ತು ಕರ್ತವ್ಯಪ್ರಜ್ಞೆಯಿಂದ ವಹಿಸಿಕೊಂಡರು.

ಗಂಭೀರ ಧ್ವನಿ, ವಾಗ್ಮಿತೆಯ ವರ:

ಅಶೋಕ್‌ ಸಿಂಘಲ್‌ ಅವರು ತಮ್ಮ ಸತತ ಪ್ರಯತ್ನ ಮತ್ತು ಕಠಿಣ ಪರಿಶ್ರಮದಿಂದ ಸಂಸ್ಥೆಗಳನ್ನು ಹಾಗೂ ಚಳವಳಿಗಳನ್ನು ಕಟ್ಟಿ ಬೆಳೆಸಿದರು. ಅವರಿಗೆ ಗಂಭೀರವಾದ ಅದ್ಭುತ ಧ್ವನಿ ಇತ್ತು ಮತ್ತು ಇಡೀ ಸಭೆಯನ್ನೇ ಮಂತ್ರಮುಗ್ಧಗೊಳಿಸುವಂತಹ ವಾಗ್ಮಿತೆ ಇತ್ತು. ಜೊತೆಗಿದ್ದ ಕಾರ್ಯಕರ್ತರ ಬಗ್ಗೆ ಅವರು ತೋರಿಸುತ್ತಿದ್ದ ಪ್ರೀತಿ-ಕಾಳಜಿಯೂ ಅಷ್ಟೇ ದೊಡ್ಡದಾಗಿತ್ತು. ಅವರ ಸಂಪರ್ಕಕ್ಕೆ ಬಂದ ಯಾರೇ ಆಗಲಿ, ಅವರ ಅಪೂರ್ವ ಸರಳತೆಯನ್ನು ಕಂಡು ಅಚ್ಚರಿಪಡದಿರಲು ಸಾಧ್ಯವಿರಲಿಲ್ಲ. ಸಂತ ಸಮಾಜದೊಂದಿಗೆ ಅವರು ಆಳವಾದ ಬಾಂಧವ್ಯ ಹೊಂದಿದ್ದರು ಮತ್ತು ದೇಶಾದ್ಯಂತದ ಸಂತರು ಹಾಗೂ ಋಷಿಮುನಿಗಳಲ್ಲಿ ಅಪಾರ ಗೌರವವನ್ನು ಗಳಿಸಿದ್ದರು. ಅವರು ಅಶೋಕ್‌ ಅವರ ಮಾತಿಗೆ ಹೆಚ್ಚಿನ ಬೆಲೆ ನೀಡುತ್ತಿದ್ದರು ಮತ್ತು ಅತ್ಯಂತ ಗೌರವದಿಂದ ಆಲಿಸುತ್ತಿದ್ದರು.

ಅಶೋಕ್‌ ಸಿಂಘಲ್‌ ಅವರ ಅಪ್ರತಿಮ ವ್ಯಕ್ತಿತ್ವವನ್ನು ತೋರಿಸುವ ಎರಡು ಘಟನೆಗಳು ನನ್ನ ನೆನಪಿಗೆ ಬರುತ್ತವೆ. ಮೊದಲನೆಯದು 1993ರದ್ದು. ಸ್ವಾಮಿ ವಿವೇಕಾನಂದರು ಚಿಕಾಗೋದಲ್ಲಿ ಮಾಡಿದ ಐತಿಹಾಸಿಕ ಭಾಷಣಕ್ಕೆ 100 ವರ್ಷಗಳು ತುಂಬಿದ ನೆನಪಿನಲ್ಲಿ ವಿಶ್ವ ಹಿಂದೂ ಪರಿಷತ್ ಅಮೆರಿಕದಲ್ಲಿ ಬೃಹತ್‌ ಸಮಾವೇಶವನ್ನು ಆಯೋಜಿಸಿತ್ತು. ವಿದೇಶದಲ್ಲಿ ಇಂತಹ ಸಮ್ಮೇಳನವನ್ನು ಆಯೋಜಿಸುವ ದೂರ ದೃಷ್ಟಿ, ಅದರ ಅದ್ಭುತ ಯೋಜನೆ ಹಾಗೂ ವಿವಿಧ ಕ್ಷೇತ್ರಗಳ ಜನರನ್ನು ಒಗ್ಗೂಡಿಸಿದ ರೀತಿ ಅಶೋಕ್‌ ಅವರ ಸಂಘಟನಾ ಸಾಮರ್ಥ್ಯಕ್ಕೆ ಸಾಕ್ಷಿಯಾಗಿತ್ತು.

ಎರಡನೆಯ ಘಟನೆ 2000ನೇ ಇಸವಿಯದ್ದು. ಟ್ರಿನಿಡಾಡ್‌ ಮತ್ತು ಟೊಬಾಗೊದ ಪೋರ್ಟ್‌ ಆಫ್‌ ಸ್ಪೈನ್‌ನಲ್ಲಿ ವಿಶ್ವ ಹಿಂದೂ ಸಮಾವೇಶವನ್ನು ಆಯೋಜಿಸಲಾಗಿತ್ತು. ಅಶೋಕ್‌ ಅವರ ಉಪಸ್ಥಿತಿಯು ಅಲ್ಲಿದ್ದ ಇತರ ಪ್ರತಿನಿಧಿಗಳಲ್ಲಿ ಎಷ್ಟೊಂದು ಉತ್ಸಾಹವನ್ನು ತುಂಬಿತ್ತು ಎಂಬುದನ್ನು ನಾನು ಕಣ್ಣಾರೆ ಕಂಡೆ. ನನ್ನ ಭಾಷಣದ ನಂತರ ಅವರು ಆಡಿದ ಮೆಚ್ಚುಗೆಯ ಮಾತುಗಳು ನನಗೆ ಅತ್ಯಂತ ಭಾವುಕ ಅನುಭವ ನೀಡಿದವು. ಅವರ ಪ್ರೋತ್ಸಾಹವು ಪ್ರತಿಯೊಬ್ಬ ಕಾರ್ಯಕರ್ತನಲ್ಲೂ ಎಷ್ಟೊಂದು ಹೊಸ ಚೈತನ್ಯ ತುಂಬುತ್ತಿತ್ತು ಎಂಬುದನ್ನು ನಾನು ಮತ್ತೊಮ್ಮೆ ಕಂಡು ಕೊಂಡೆ.

ರಾಮ ಮಂದಿರ ಹಿಂದಿನ ಶಕ್ತಿ:

ರಾಮ ಜನ್ಮ ಭೂಮಿ ಚಳವಳಿಯಲ್ಲಿ ಅಶೋಕ್‌ ಸಿಂಘಲ್‌ ಅವರು ವಹಿಸಿದ ಪ್ರಮುಖ ಪಾತ್ರವನ್ನು ನೆನಪಿಸಿಕೊಳ್ಳದೆ ಅವರ ಬಗ್ಗೆ ಯಾವುದೇ ಮಾತು ಪೂರ್ಣಗೊಳ್ಳುವುದಿಲ್ಲ. 1991ರ ಬೋಟ್‌ ಕ್ಲಬ್‌ ರ್ಯಾಲಿಯಲ್ಲಿ ಅವರು ಮಾಡಿದ ಭಾಷಣವನ್ನು ಯಾರು ತಾನೆ ಮರೆಯಲು ಸಾಧ್ಯ? ಅಥವಾ ಚಳವಳಿಯ ಉತ್ತುಂಗದಲ್ಲಿದ್ದಾಗ ಗಾಯಗೊಂಡು ರಕ್ತಸಿಕ್ತರಾಗಿದ್ದ ಅಶೋಕ್‌ ಅವರ ಐತಿಹಾಸಿಕ ಚಿತ್ರವನ್ನು ಯಾರು ಮರೆಯಬಲ್ಲರು? ಇಂದು ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ತಲೆ ಎತ್ತಿ ನಿಂತಿದ್ದರೆ, ಅದನ್ನು ಸಾಧ್ಯವಾಗಿಸಲು ನಿಸ್ವಾರ್ಥವಾಗಿ ತಮ್ಮನ್ನೇ ಅರ್ಪಿಸಿಕೊಂಡ ಅವರಂತಹ ಮಹನೀಯರ ಪರಿಶ್ರಮವೇ ಕಾರಣ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಗೊಳ್ಳುತ್ತಿರುವುದನ್ನು ನೋಡಿದ್ದರೆ, ಅಶೋಕ್‌ ಅವರಿಗಿಂತ ಹೆಚ್ಚು ಸಂತೋಷ ಪಡುವವರು ಬಹುಶಃ ಯಾರೂ ಇರುತ್ತಿರಲಿಲ್ಲ.

ಅಶೋಕ್‌ ಸಿಂಘಲ್‌ ಅವರು ಆಲೋಚನೆಗಳಲ್ಲಿ ಅಪಾರ ಸ್ಪಷ್ಟತೆಯನ್ನು ಹೊಂದಿದ್ದರು. ನಮ್ಮ ಸಮಾಜ ಸಾಮರಸ್ಯದಿಂದ ಕೂಡಿರಬೇಕು, ಸಹೋದರತ್ವದ ಸಂದೇಶವನ್ನು ಮತ್ತೆ ಮತ್ತೆ ಸಾರಬೇಕು ಎಂಬ ಅವರ ನಂಬಿಕೆಯಲ್ಲಿ ಈ ಗುಣ ಎದ್ದು ಕಾಣುತ್ತಿತ್ತು. ಸಾಮಾಜಿಕ ಏಕತೆ ಮತ್ತು ಸಮಾನತೆಯನ್ನು ಬಲಪಡಿಸಲು ಅವರು ಶ್ರಮಿಸಿದರು. ಸಮಾಜದಲ್ಲಿ ಯಾವುದೇ ರೀತಿಯ ಭೇದಭಾವ ಇರಬಾರದು ಮತ್ತು ಪ್ರತಿಯೊಬ್ಬ ವ್ಯಕ್ತಿಗೂ ಸಮಾನ ಗೌರವ ಹಾಗೂ ಘನತೆ ದೊರೆಯಬೇಕು ಎಂಬುದು ಅವರ ದೃಢನಂಬಿಕೆಯಾಗಿತ್ತು. ಅಯೋಧ್ಯೆಯ ರಾಮಮಂದಿರದ ಮೊದಲ ಇಟ್ಟಿಗೆಯನ್ನು ಬಿಹಾರದ ಸಮಾಜದ ಶೋಷಿತ ವರ್ಗಕ್ಕೆ ಸೇರಿದ, ತಳ ಮಟ್ಟದ ವಿಚ್‌ಪಿ ಕಾರ್ಯಕರ್ತರಾದ ಕಾಮೇಶ್ವರ ಚೌಪಾಲ್‌ ಅವರಿಂದಲೇ ಇಡಿಸಬೇಕು ಎಂಬುದು ಅವರದ್ದೇ ಆಲೋಚನೆಯಾಗಿತ್ತು. ಕಾಶಿಯಲ್ಲಿ ನಡೆದ ಧರ್ಮ ಸಂಸದ್‌ನಲ್ಲಿ ದೋಮ್‌ ರಾಜರನ್ನು ಗೌರವಿಸಬೇಕು ಎಂದು ಅವರು ನಿರ್ಧರಿಸಿದರು ಮತ್ತು ವಿವಿಧ ಸಾಮಾಜಿಕ ಕಾರ್ಯಗಳಲ್ಲಿ ಅವರೊಂದಿಗೆ ಸೇರಿ ಕೆಲಸ ಮಾಡಿದರು.

ಶಿಕ್ಷಣ, ಸಂಗೀತದ ಬಗ್ಗೆ ಆಸಕ್ತಿ:

ರಾಷ್ಟ್ರ ನಿರ್ಮಾಣದ ಜೊತೆಗೆ, ಅಶೋಕ್‌ ಸಿಂಘಲ್‌ ಅವರ ಹೃದಯಕ್ಕೆ ಅತ್ಯಂತ ಹತ್ತಿರವಾಗಿದ್ದ ಇನ್ನೆರಡು ಕ್ಷೇತ್ರಗಳೆಂದರೆ: ಶಿಕ್ಷಣ (ವಿಶೇಷವಾಗಿ ವೈದಿಕ ಶಿಕ್ಷಣ) ಮತ್ತು ಸಂಗೀತ. ವಾರಾಣಸಿಯ ಸಂಸದನಾಗಿರುವ ನನಗೆ, ನಾನು ಪ್ರತಿನಿಧಿಸುವ ಈ ಸನಾತನ ನಗರಿ ಕಾಶಿಯು ಅಶೋಕ್‌ ಸಿಂಘಲ್‌ ಅವರ ಜೀವನದಲ್ಲಿ ಪ್ರಮುಖ ಪಾತ್ರವಹಿಸಿದೆ ಎಂಬುದು ಹೆಮ್ಮೆಯ ಸಂಗತಿ. ಅವರು ಬಿಎಚ್‌ಯುನಲ್ಲಿ ಶಿಕ್ಷಣ ಪಡೆದಿದ್ದರು ಮತ್ತು ಅತ್ಯುತ್ತಮ ವಿದ್ಯಾರ್ಥಿಯಾಗಿದ್ದರು. ದೂರದ ಹಳ್ಳಿಗಳಿಗೆ, ಮುಖ್ಯವಾಗಿ ಬುಡಕಟ್ಟು ಸಮುದಾಯಗಳಿಗೆ ಮೂಲಭೂತ ಶಿಕ್ಷಣವನ್ನು ತಲುಪಿಸುವ ‘ಏಕಲ್‌ ವಿದ್ಯಾಲಯ’ ಕಾರ್ಯಕ್ರಮದೊಂದಿಗೆ ಅವರು ನಿಕಟವಾಗಿ ತೊಡಗಿಸಿಕೊಂಡಿದ್ದರು. ಅವರಿಗೆ ಓದುವ ಅಪಾರ ಹವ್ಯಾಸವಿತ್ತು, ಹಾಗೆಯೇ ಅವರು ಅತ್ಯುತ್ತಮ ಕೇಳುಗರೂ ಆಗಿದ್ದರು. ಯುವ ಕಾರ್ಯಕರ್ತರಿಗೆ ಸಾಧ್ಯವಾದಷ್ಟು ಹೆಚ್ಚು ಓದಲು ಅವರು ಸದಾ ಪ್ರೋತ್ಸಾಹಿಸುತ್ತಿದ್ದರು.

ಅಶೋಕ್‌ ಅವರನ್ನು ಹತ್ತಿರದಿಂದ ಬಲ್ಲವರಿಗೆ ಅವರು ಎಷ್ಟು ಮಧುರವಾಗಿ ಹಾಡುತ್ತಿದ್ದರು ಎಂಬುದು ಗೊತ್ತಿತ್ತು! ನಾಗಪುರದಲ್ಲಿ ನಡೆದ ಸಭೆಗಳು ನನ್ನ ನೆನಪಿಗೆ ಬರುತ್ತವೆ. ಅಲ್ಲಿ ಅವರು ‘ಏಕಲ್‌ ಗೀತೆ’ಯನ್ನು ಹಾಡುತ್ತಿದ್ದಾಗ, ಎಲ್ಲರೂ ಮಂತ್ರಮುಗ್ಧರಾಗುತ್ತಿದ್ದರು ಮತ್ತು ಸಭೆಗೆ ಅದರಿಂದಲೇ ಒಂದು ವಿಶೇಷ ವಾತಾವರಣ ಸೃಷ್ಟಿಯಾಗುತ್ತಿತ್ತು. 2015ರಲ್ಲಿ ಅವರ 90ನೇ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ಎಲ್ಲರನ್ನೂ ಆಶ್ಚರ್ಯಗೊಳಿಸಿ ಅವರು ‘ಹೇ ಮಾತೃ ಭೂಮಿಮೇರಿ, ಹೇ ಪಿತೃ ಭೂಮಿ ಮೇರಿ’ ಎಂದು ಹಾಡಿದ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಅತ್ಯಂತ ಜನಪ್ರಿಯವಾಗಿತ್ತು.

ಅವರ ಜನ್ಮ ಶತಮಾನೋತ್ಸವದ ಈ ಪವಿತ್ರ ಸಂದರ್ಭದಲ್ಲಿ, ಹೆಚ್ಚಿನ ಸಂಖ್ಯೆಯ ಯುವ ಜನರು ಅವರ ಶ್ರೇಷ್ಠತೆ ಮತ್ತು ಸಾಧನೆಗಳ ಬಗ್ಗೆ ತಿಳಿದುಕೊಳ್ಳುವಂತೆ ನಾವು ಮಾಡೋಣ. ನಮ್ಮ ರಾಷ್ಟ್ರ ಮತ್ತು ದೇಶದ ಜನರಿಗಾಗಿ ಅವರು ಕಂಡ ಕನಸುಗಳನ್ನು ನನಸಾಗಿಸುವ ನಮ್ಮ ಸಂಕಲ್ಪವನ್ನು ಮತ್ತೊಮ್ಮೆ ದೃಢಗೊಳಿಸೋಣ.