ಕೆಟ್ಟ ಕಾವ್ಯಕ್ಕೂ ಒಂದು ದಿನ - ಆಗಸ್ಟ್ 18 ಬ್ಯಾಡ್ ಪೋಯೆಟ್ರಿ ಡೇ!

| N/A | Published : Aug 17 2025, 01:55 PM IST

Poetry Day

ಸಾರಾಂಶ

ಅರಸಿಕರಾದ ಜನದ ಮುಂದೆ ಕಾವ್ಯ ಓದುವ ಹಣೆಬರಹ ಬರೆಯಬೇಡ ಅಂತ ಕವಿಯೊಬ್ಬ ವಿಧಿಯ ಹತ್ತಿರ ಕೇಳಿಕೊಂಡಿದ್ದನಂತೆ. ಕೇಳುಗರು ಕೂಡ ಕೆಟ್ಟ ಕವಿತೆಯನ್ನು ಯಾವತ್ತೂ ಕೇಳಿಸಬೇಡ ಅಂತ ಪ್ರಾರ್ಥಿಸಬಹುದು. ಆದರೆ ಕೆಟ್ಟ ಕಾವ್ಯಕ್ಕೆ ಕೊನೆಯಿಲ್ಲ. ಅನೇಕ ಸಲ ಎಲ್ಲರೂ ಕೆಟ್ಟ ಕವಿತೆಗೆ ಕಿವಿಯೊಡ್ಡಲೇ ಬೇಕು.

- ಡಾ. ಕೆ.ಎಸ್. ಪವಿತ್ರ

ಅರಸಿಕರಾದ ಜನದ ಮುಂದೆ ಕಾವ್ಯ ಓದುವ ಹಣೆಬರಹ ಬರೆಯಬೇಡ ಅಂತ ಕವಿಯೊಬ್ಬ ವಿಧಿಯ ಹತ್ತಿರ ಕೇಳಿಕೊಂಡಿದ್ದನಂತೆ. ಕೇಳುಗರು ಕೂಡ ಕೆಟ್ಟ ಕವಿತೆಯನ್ನು ಯಾವತ್ತೂ ಕೇಳಿಸಬೇಡ ಅಂತ ಪ್ರಾರ್ಥಿಸಬಹುದು. ಆದರೆ ಕೆಟ್ಟ ಕಾವ್ಯಕ್ಕೆ ಕೊನೆಯಿಲ್ಲ. ಅನೇಕ ಸಲ ಎಲ್ಲರೂ ಕೆಟ್ಟ ಕವಿತೆಗೆ ಕಿವಿಯೊಡ್ಡಲೇ ಬೇಕು.

ಆಗಸ್ಟ್ 18 ಕೆಟ್ಟ ಕಾವ್ಯದ ದಿನ. ಕೆಟ್ಟ ಕಾವ್ಯ ಬರೆಯುವುದೂ ತಪ್ಪಲ್ಲ, ಕೇಳುವುದೂ ತಪ್ಪಲ್ಲ ಅಂತ ನಂಬಿದವರಿಗೆ ಮೀಸಲಾದ ದಿನವಿದು. ಕಾವ್ಯ ಚರಿತ್ರೆಯ ಪುಟ ತಿರುಗಿಸಿ ನೋಡಿದರೆ ‘ಕೆಟ್ಟ ಕಾವ್ಯ’ ದ ಬಲದಿಂದಲೇ ಪ್ರಸಿದ್ದರಾದವರಿದ್ದಾರೆ. ವಿಲಿಯಮ್‌ ಮೆಕ್ ಗೊನ್ನಾಗಲ್ ಎಂಬ ಕವಿಯನ್ನು ಇಂಗ್ಲಿಷ್ ಭಾಷೆಯ ‘ಕುಕವಿ’ ಎಂದೇ ಕರೆಯುತ್ತಾರೆ. ಈತ ಛಂದಸ್ಸು, ವ್ಯಾಕರಣ ಎಲ್ಲವನ್ನೂ ಕ್ಷುಲ್ಲಕವಾಗಿಸಿ, ತನಗೆ ಬೇಕಾದ ಹಾಗೆ ಭಾಷೆಯನ್ನು ಬಳಸಿ, ಉದ್ದೇಶ ರಹಿತವಾಗಿ ಹಾಸ್ಯವನ್ನು ಹೊರಹೊಮ್ಮಿಸಿಬಿಟ್ಟ! ಅವನ ಒಂದೇ ಪುಸ್ತಕ ‘ಪೊಯೆಟಿಕ್ ಜೆಮ್ಸ್’ ಸಾವಿರಗಟ್ಟಲೆ ಡಾಲರ್‌ಗಳಿಗೆ ಹರಾಜಿನಲ್ಲಿ ಮಾರಾಟವಾಯಿತು. ಒಟ್ಟಿನಲ್ಲಿ ಗುಣಮಟ್ಟದ ಕಾವ್ಯಕ್ಕೂ ಸಿಗದಷ್ಟು ಪ್ರಚಾರ, ಪ್ರಸಿದ್ಧಿ ಕೆಲವೊಮ್ಮೆ ಕೆಟ್ಟ ಕಾವ್ಯವನ್ನು ಹಠದಿಂದ, ಛಲಬಿಡದೆ ಸೃಷ್ಟಿಸಿದ್ದಕ್ಕೆ ದಕ್ಕಿಸಿಕೊಳ್ಳಬಹುದು ಎಂಬುದಕ್ಕೆ ಮೆಕ್‌ ಗೊನ್ನಾಗಲ್ ಒಂದು ನಿದರ್ಶನ.

‘ಕೆಟ್ಟ ಕಾವ್ಯದ ದಿನ’ ಎಂಬ ಆಚರಣೆ ‘ಕಾವ್ಯದ ದಿನ’ - ಅರ್ಥಾತ್ ಒಳ್ಳೆ ಕಾವ್ಯದ ದಿನ ಎಂಬ ಯುನೆಸ್ಕೋದ ಜಾಗತಿಕ ಆಚರಣೆಯ ದಿನಕ್ಕಿಂತ ಹೆಚ್ಚು ವಿಶೇಷ ಅಂತ ನನಗೆ ಅನ್ನಿಸುತ್ತದೆ. ‘ಒಳ್ಳೆಯ’ , ‘ಕೆಟ್ಟ’ ಎಂಬ ಪದಗಳು ಕಾವ್ಯಕ್ಕೆ ಅನ್ವಯವಾಗುವ ಬಗೆ ಹೇಗೆ? ಕವಿತೆ ಬರೆಯಬೇಕೆನ್ನುವವರು ಪರಿಪೂರ್ಣವಾದ ಕವಿತೆ ಬರೆಯುವ ಹಾಗಿದ್ದರೆ ಮಾತ್ರ ಬರೆಯಬೇಕೇ? ಕೆಟ್ಟದ್ದು ಒಳ್ಳೆಯದು ಎಂದು ನಿರ್ಧಾರ ಮಾಡುವವರು ಯಾರು? ಎಂಥಾ ಒಳ್ಳೇ ಕವಿ ಕೂಡ ಒಂದೆರಡು ಕೆಟ್ಟ ಕವಿತೆಗಳನ್ನೂ ಬರೆದಿರುತ್ತಾನಲ್ಲ. ಆದ್ದರಿಂದಲೇ ‘ಕೆಟ್ಟ ಕಾವ್ಯದ ದಿನ’ಕ್ಕೆ ಮಹತ್ವ ಬರುವುದು.

ಎಷ್ಟೋ ಬಾರಿ ಕವಿಗಳು ಯಾವುದೋ ಒಂದು ಕಾವ್ಯ, ಕವಿತೆಗೆ ಪ್ರಸಿದ್ಧರಾಗಿಬಿಡುತ್ತಾರೆ. ಇದು ‘ಒಳ್ಳೆಯ’ ಕಾವ್ಯದ ಸಾಲಿನಲ್ಲಿ ನಿಂತು ಬಿಡುತ್ತದೆ. ಅದಾದ ನಂತರ ಅದೇ ಕವಿ ಬರೆಯುವ ಅದೆಷ್ಟೋ ಕವಿತೆಗಳು ಚೆನ್ನಾಗಿಲ್ಲದೇ ಹೋದರೂ ಒಳ್ಳೆಯ ಕವಿ ಎಂಬ ಲೇಬಲ್ ಮಾತ್ರ ಉಳಿಯುತ್ತದೆ. ಕೆಲವು ಕವಿಗಳ ಅಷ್ಟೇನೂ ಜನಪ್ರಿಯವಾಗದ ಒಳ್ಳೆಯ ಕವಿತೆಗ‍ಳೂ ಇರುತ್ತವೆ. ಕಾವ್ಯ ಒಳ್ಳೆಯದೋ ಕೆಟ್ಟದ್ದೋ ಆಗುವುದು ಕವಿಯ ಕೈಯಲ್ಲಿಲ್ಲ, ಓದುಗರ ಕೈಯಲ್ಲಿದೆ ಅನ್ನುವುದನ್ನೂ ನಾವು ಮರೆಯುವಂತಿಲ್ಲ.

ಡಿಜಿಟಲ್ ಲೋಕ ‘ಕೆಟ್ಟ ಕಾವ್ಯ ದಿನ’ಕ್ಕೆ ಮತ್ತಷ್ಟು ಹೊಸ ಆಯಾಮಗಳನ್ನೊದಗಿಸಿದೆ. ಇಡೀ ಜಗತ್ತು ಆತ್ಮರತಿಯಲ್ಲಿ ಮುಳುಗಿದೆಯೋ ಎಂಬಂತೆ ತೋರುವಾಗ, ಪ್ರಶಂಸೆಗಾಗಿ-ಲೈಕ್, ಹಾರ್ಟ್‌ಗಳಿಗಾಗಿ ಹಾತೊರೆಯುತ್ತಿರುವಾಗ ‘ಕೆಟ್ಟ ಕಾವ್ಯದ ದಿನ’ದಂದು ‘ನಾನು ಕವಿತೆಯನ್ನು ಕೆಟ್ಟದಾಗಿ ಬರೆದಿದ್ದೇನೆ’ ಎಂದೇ ನಗುತ್ತಾ ಶೇರ್ ಮಾಡುವ ಧೈರ್ಯ ಮಾಡಬಹುದು! ನೀವು ಹಂಚಿಕೊಂಡದ್ದಕ್ಕೆ ಇನ್ನೊಬ್ಬರು ತಾವು ಬರೆದ ಕೆಟ್ಟ ಕಾವ್ಯವನ್ನು ಹಂಚಿಕೊಳ್ಳಬಹುದು. ನಿಮ್ಮ ತಪ್ಪು ಎತ್ತಿ ತೋರಿಸಲೂಬಹುದು! ‘ಕೆಟ್ಟ ಕಾವ್ಯ ನನ್ನದು’ ಎಂದು ಮುಕ್ತವಾಗಿ ಒಪ್ಪಿಕೊಳ್ಳುವ ಧೈರ್ಯವೇ ಕವಿಯಾಗುವ ಮೊದಲ ಲಕ್ಷಣ.

Read more Articles on