ಆಯುಧ ಪೂಜೆ: ಪೂಜಾ ಸಾಮಗ್ರಿಗಳ ಖರೀದಿ ಜೋರು
KannadaprabhaNewsNetwork | Published : Oct 23 2023, 12:16 AM IST
ಆಯುಧ ಪೂಜೆ: ಪೂಜಾ ಸಾಮಗ್ರಿಗಳ ಖರೀದಿ ಜೋರು
ಸಾರಾಂಶ
ಆಯುಧ ಪೂಜೆ: ಪೂಜಾ ಸಾಮಗ್ರಿಗಳ ಖರೀದಿ ಜೋರು
ಕನ್ನಡಪ್ರಭ ವಾರ್ತೆ ಶಹಾಪುರ ಆಯುಧ ಪೂಜೆ ಸಂಭ್ರಮ ಜೋರಾಗಿದೆ. ಜನರು ಹೂವು, ಹಣ್ಣು, ಬಾಳೆದಿಂಡು, ಕರಿ ಕುಂಬಳಕಾಯಿ ಖರೀದಿಸಲು ನಗರದ ಮಾರುಕಟ್ಟೆಯಲ್ಲಿ ಮುಗಿಬಿದ್ದಿದ್ದಾರೆ. ಪೂಜಾ ಸಾಮಗ್ರಿಗಳನ್ನು ಖರೀದಿಸಲು ಮಾರ್ಕೆಟ್‌ನಲ್ಲಿ ಜನ ಜಂಗುಳಿಯಿಂದ ಗಿಜಿಗುಡುತ್ತಿದೆ. ಬರಗಾಲದ ನಡುವೆಯೂ ಹಬ್ಬದ ಸಂಭ್ರಮದಲ್ಲಿರುವ ಗ್ರಾಹಕರು ಖರೀದಿಯಲ್ಲಿ ನಿರತರಾಗಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ಜನರು ಮಾರುಕಟ್ಟೆಯಲ್ಲಿ ಜಮಾಯಿಸಿದ್ದು ಕಂಡುಬಂತು. ನಗರದ ಬಸವೇಶ್ವರ ವೃತ್ತ, ಮಾರುತಿ ರೋಡ್, ತರಕಾರಿ ಮಾರುಕಟ್ಟೆ ಹಾಗೂ ಹಳೇ ಬಸ್ ನಿಲ್ದಾಣ ರಸ್ತೆಯಲ್ಲಿ ಹೂವು, ಹಣ್ಣು, ಬೂದುಗುಂಬಳ, ನಿಂಬೆಹಣ್ಣು ಹೇರಳವಾಗಿ ಬಂದಿದೆ. ಖರೀದಿದಾರರು ಕೂಡ ಹೂವು, ಹಣ್ಣು ಹಾಗೂ ಇತರೆ ಪೂಜಾ ಸಾಮಗ್ರಿಗಳ ಖರೀದಿಯಲ್ಲಿ ತೊಡಗಿದ್ದಾರೆ. ಹೂವು, ಹಣ್ಣು, ಇತರೆ ಸಾಮಾನುಗಳ ಬೆಲೆ ಏರಿಕೆ ಕೂಡ ಕಂಡಿವೆ. ಹೆಚ್ಚಿದ ವಸ್ತುಗಳ ದರ: ಸೇವಂತಿ ಹೂವು ಒಂದು ಮಾರಿಗೆ 100 ರು.ಗಳಿಂದ 150 ರು.ಗಳಿಗೆ ಮಾರಾಟ ಮಾಡಲಾಗುತ್ತಿತ್ತು. ಸಣ್ಣ ಗಾತ್ರದ ನಿಂಬೆಹಣ್ಣು 10 ರು.ಗಳಿಗೆ 2, ದಪ್ಪ ಗಾತ್ರದ ನಿಂಬೆಹಣ್ಣು 20 ರು.ಗಳಿಗೆ 3, ಸಣ್ಣ ಗಾತ್ರದ ಬೂದುಗುಂಬಳಕಾಯಿ 30 ರು.ಗಳು, ಮಧ್ಯಮ ಗಾತ್ರ ಬೂದುಗುಂಬಳಕ್ಕೆ 80 ರಿಂದ 100 ರು.ಗಳಿಗೆ ಮಾರಾಟ ಮಾಡಲಾಗುತ್ತಿತ್ತು. ಒಂದು ಜೊತೆ ಬಾಳೆ ಕಂದಿಗೆ 50 ರಿಂದ 100 ರು.ಗಳವರೆಗೆ ದರ ನಿಗದಿ ಮಾಡಲಾಗಿದೆ. ಅಲ್ಲದೆ ಹೊಸ ಬಟ್ಟೆಯ ಖರೀದಿಯಲ್ಲಿ ಜನ ಬಟ್ಟೆ ಅಂಗಡಿಗಳಲ್ಲಿ ಮುಗಿಬಿದ್ದಿದ್ದರು. ಆಯುಧ ಪೂಜೆಯ ವಿಶೇಷತೆ: ಈ ದಿನ ಅಡುಗೆ ಮನೆಯಲ್ಲಿ ತರಕಾರಿ ಕತ್ತರಿಸುವ ಚಾಕುವಿನಿಂದ ಹಿಡಿದು, ದೇಶದ ಗಡಿ ಕಾಯುವ ಅತ್ಯಾಧುನಿಕ ಯುದ್ಧ ವಿಮಾನಗಳಿಗೂ ಆಯುಧ ಪೂಜೆಯನ್ನು ಮಾಡಲಾಗುತ್ತದೆ. ಹಿಂದೂ ಸಂಸ್ಕೃತಿಯ ಪ್ರಕಾರ ಯಂತ್ರಗಳಿಗೂ ದೈವಿಕ ಶಕ್ತಿ ಇದೆ. ಇದರಿಂದಾಗಿ ಆಯುಧ ಪೂಜೆಯಂದು ವಾಹನಗಳಿಗೆ ಪೂಜೆ ಸಲ್ಲಿಸಿದರೆ ಯಾವುದೇ ರೀತಿಯ ಸಮಸ್ಯೆ ಉಂಟಾಗುವುದಿಲ್ಲ ಎಂಬ ನಂಬಿಕೆ ಬಹಳ ವರ್ಷಗಳಿಂದ ಉಳಿದುಕೊಂಡು ಬಂದಿದೆ. ಮಹಾಭಾರತದ ಉಲ್ಲೇಖ: ಇನ್ನು ಮಹಾಭಾರತದಲ್ಲಿ ಆಯುಧ ಪೂಜೆಯ ಸ್ಪಷ್ಟ ಉಲ್ಲೇಖವಿದ್ದು, ದ್ವಾಪರ ಯುಗದಲ್ಲಿ ಪಾಂಡವರು 13 ವರ್ಷಗಳ ವನವಾಸ ಮುಗಿಸುತ್ತಾರೆ. ಬಳಿಕ ಒಂದು ವರ್ಷ ಅಜ್ಞಾತವಾಸ ಮುಗಿಸುತ್ತಾರೆ. ಈ ಅಜ್ಞಾತವಾಸದ ಅಂತಿಮ ದಿನವೇ ವಿಜಯದಶಮಿ. ಅಜ್ಞಾತವಾಸದ ಸಮಯದಲ್ಲಿ ಪಾಂಡವರು ತಮ್ಮ ಶಸ್ತ್ರಾಸ್ತ್ರಗಳನ್ನೆಲ್ಲಾ ಬನ್ನಿ ಮರದಲ್ಲಿ ಬಚ್ಚಿಡುತ್ತಾರೆ. ವಿಜಯದಶಮಿ ಅಂದರೆ ತಮ್ಮ ಅಜ್ಞಾತವಾಸ ಮುಗಿದ ದಿನದಂದು ಬನ್ನಿಗಿಡದಲ್ಲಿ ಬಚ್ಚಿಟ್ಟಿದ್ದ ತಮ್ಮ ಶಸ್ತ್ರಾಸ್ತ್ರಗಳನ್ನೆಲ್ಲ ತೆಗೆದು ವಿರಾಟರಾಜನ ಶತ್ರುಗಳ ವಿರುದ್ಧ ಪಾಂಡವರು ವಿಜಯವನ್ನು ಸಾಧಿಸುತ್ತಾರೆ. - - - - ಕೋಟ್-1: ಹಬ್ಬದ ಸಂದರ್ಭದಲ್ಲಿ ಬೆಂಗಳೂರು, ದಾವಣಗೆರೆ, ಚಿತ್ರದುರ್ಗ ಸೇರಿದಂತೆ ವಿವಿಧ ಭಾಗಗಳಿಂದ ಹೂ ಮಾರಲು ಬರುತ್ತಾರೆ. ಹಬ್ಬದ ಸಂದರ್ಭ ನೋಡಿಕೊಂಡು ಬಂದಹಾಗೆ ವ್ಯಾಪಾರ ಮಾಡಿಕೊಂಡು ಹೋಗುತ್ತಾರೆ. ಆದರೆ ಸ್ಥಳೀಯವಾಗಿ ಹೂ ಮಾರುವವರಿಗೆ ವ್ಯಾಪಾರ ಕಡಿಮೆ. -ಅಮೃತ ಹೂಗಾರ್, ಹೂವಿನ ವ್ಯಾಪಾರಿ - - - ಕೋಟ್-2: ಮೊದಲು ಬೇರೆ ಕಡೆಯಿಂದ ಕರಿ ಕುಂಬಳಕಾಯಿ ತಂದು ಮಾರಾಟ ಮಾಡುತ್ತಿದ್ದೇವು. ಆದರೆ, ಈ ಸಲ ಕೆಲವೊಂದು ಕಡೆ ರೈತರೇ ಕರಿ ಕುಂಬಳಕಾಯಿ ಬೆಳೆದಿದ್ದಾರೆ. ರೈತರಿಂದ ಖರೀದಿಸಿ ತರುತ್ತಿದ್ದೇವೆ. ಒಂದು ಕುಂಬಳಕಾಯಿ ಗಾತ್ರದ ಮೇಲೆ 5, 10, 15 ರು.ಗಳು ಉಳಿಯುತ್ತದೆ. -ರೆಡ್ಡಿ ಚಾಮನಾಳ, ಕರಿ ಕುಂಬಳಕಾಯಿ ವ್ಯಾಪಾರಿ. - - - - 22ವೈಡಿಆರ್13 ಮತ್ತು 22ವೈಡಿಆರ್14: ಶಹಾಪುರ ನಗರದ ಮಾರುಕಟ್ಟೆಯಲ್ಲಿ ಹಬ್ಬದ ಸಾಮಾನುಗಳು ಖರೀದಿಯಲ್ಲಿ ಮುಗಿಬಿದ್ದಿರುವ ಜನತೆ. - - - - 22ವೈಡಿಆರ್15 ರಿಂದ 22ವೈಡಿಆರ್17ರವರೆಗೆ : ಯಾದಗಿರಿ ನಗರದಲ್ಲಿ ವಿಜಯದಶಮಿ ಆಯುಧಪೂಜೆ ನಿಮಿತ್ತ ಭಾನುವಾರ ಜನರು ಹಣ್ಣು, ಹೂವು, ಬಾಳೆದಿಂಡು, ಕುಂಬಳಕಾಯಿ ಖರೀದಿಯಲ್ಲಿ ನಿರತರಾಗಿದ್ದರು. ---000---