ಸಾರಾಂಶ
ಬೆಂಗಳೂರು : ಬ್ಯಾಂಕ್ ನೌಕರರ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಾಷ್ಟ್ರಾದ್ಯಂತ ಮಾ.23ರ ಮಧ್ಯರಾತ್ರಿಯಿಂದ ಮಾ.25ರ ಮಧ್ಯರಾತ್ರಿವರೆಗೆ ಬ್ಯಾಂಕ್ ಮುಷ್ಕರ ನಡೆಸುವುದಾಗಿ ಬ್ಯಾಂಕ್ ಯೂನಿಯನ್ಗಳ ಸಂಯುಕ್ತ ವೇದಿಕೆ ತಿಳಿಸಿದೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆಯ ರಾಜ್ಯ ಸಂಚಾಲಕ ಕೆ.ಎನ್.ಗಿರಿ, ಬ್ಯಾಂಕ್ ಉದ್ಯೋಗಿಗಳ ಕೊರತೆಯಿಂದಾಗಿ ಸಿಬ್ಬಂದಿ ಮೇಲೆ ಹೆಚ್ಚಿನ ಒತ್ತಡ ಬಿದ್ದಿದೆ. ಗ್ರಾಹಕರಿಗೆ ಉತ್ತಮ ಸೇವೆ ಸಿಗುತ್ತಿಲ್ಲ. ವಾಣಿಜ್ಯ ಕ್ಷೇತ್ರದಲ್ಲಿ ಐದು ದಿನಗಳ ಕೆಲಸದ ಪದ್ಧತಿ ಜಾರಿಯಲ್ಲಿದೆ. ಆದರೆ, ಸರ್ಕಾರಿ ಬ್ಯಾಂಕ್‌ಗಳಿಗೆ ಸಂಬಂಧಿಸಿ ಸರ್ಕಾರದಿಂದ ಈ ಆದೇಶವಾಗಿಲ್ಲ. ಜೊತೆಗೆ, ಬ್ಯಾಂಕಿನ ಕೆಲಸಗಳನ್ನು ಹೊರಗುತ್ತಿಗೆ ನೀಡುವುದನ್ನು ನಿಲ್ಲಿಸಲು ನಮ್ಮ ಆಗ್ರಹವಿದೆ. ಈ ಎಲ್ಲಾ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮುಷ್ಕರ ನಡೆಯಲಿದೆ. ಎಸ್ಬಿಐ, ಪಂಜಾಬ್ ನ್ಯಾಷನಲ್ ಬ್ಯಾಂಕ್ ಇತ್ಯಾದಿ ಸರ್ಕಾರಿ ಬ್ಯಾಂಕುಗಳ ಉದ್ಯೋಗಿಗಳು ಮುಷ್ಕರದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
ಬೇಡಿಕೆಗಳು:
ವಾರದಲ್ಲಿ ಐದು ದಿನ ಕೆಲಸದ ನೀತಿ ಜಾರಿಗೆ ತರಬೇಕು. ಸರ್ಕಾರಿ ಬ್ಯಾಂಕುಗಳಲ್ಲಿ ವಿವಿಧ ಸ್ತರಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಮಾಡಬೇಕು. ಗ್ರಾಚ್ಯುಯಿಟಿ ಹಣಕ್ಕೆ ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು ₹25 ಲಕ್ಷಕ್ಕೆ ಹೆಚ್ಚಿಸುವಂತೆ ಕಾಯ್ದೆಗೆ ತಿದ್ದುಪಡಿ ತರಬೇಕು. ಉದ್ಯೋಗಿಗಳ ಕಾರ್ಯಕ್ಷಮತೆ ಆಧಾರಿತವಾಗಿ ಭತ್ಯೆ ನೀಡುವ ಕ್ರಮದಿಂದ ಉದ್ಯೋಗಿಯ ಕೆಲಸದ ಅಭದ್ರತೆ ಹೆಚ್ಚುತ್ತದೆ, ಉದ್ಯೋಗಿಗಳ ನಡುವಿನ ಸಂಬಂಧ ದುರ್ಬಲಗೊಳ್ಳುತ್ತದೆ. ಹೀಗಾಗಿ, ಇಂತಹ ನಿರ್ದೇಶನಗಳನ್ನು ಹಿಂಪಡೆಯಬೇಕು. ಕೇಂದ್ರ ಹಣಕಾಸು ಸೇವೆಗಳ ಇಲಾಖೆಯು ಸರ್ಕಾರಿ ಬ್ಯಾಂಕುಗಳ ಚಿಕ್ಕಪುಟ್ಟ ವ್ಯವಹಾರದಲ್ಲೂ ಮಧ್ಯಪ್ರವೇಶಿಸುವುದನ್ನು ನಿಲ್ಲಿಸಬೇಕು. ಬ್ಯಾಂಕ್ ಮಂಡಳಿಗಳಿಗೆ ಹೆಚ್ಚಿನ ಸ್ವಾಯತ್ತತೆ ನೀಡಬೇಕೆಂಬುದು ಪ್ರಮುಖ ಬೇಡಿಕೆಯಾಗಿದೆ ಎಂದು ಅವರು ತಿಳಿಸಿದರು.