ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ರಾಜಕಾಲುವೆ ಮತ್ತು ಕೆರೆಗಳಲ್ಲಿ ಒತ್ತುವರಿ ತೆರವು ಕಾರ್ಯಾಚರಣೆಯ ಸರ್ವೇ ಕಾರ್ಯಕ್ಕೆ ಹೆಚ್ಚು ಭೂಮಾಪಕರನ್ನು ನಿಯೋಜಿಸಲು ಭೂದಾಖಲೆಗಳ ಇಲಾಖೆಗೆ ಪತ್ರ ಬರೆಯುವಂತೆ ಅಧಿಕಾರಿಗಳಿಗೆ ಬಿಬಿಎಂಪಿಯ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸೂಚಿಸಿದ್ದಾರೆ.ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ಕುರಿತು ಶುಕ್ರವಾರ ಸಭೆ ನಡೆಸಿದ ಮಾತನಾಡಿದ ಅವರು, ರಾಜಕಾಲುವೆ ಹಾಗೂ ಕೆರೆಗಳ ಸರ್ವೇಗೆ ಹೆಚ್ಚು ಭೂಮಾಪಕರ ಅವಶ್ಯಕತೆ ಇದ್ದು, ಕಂದಾಯ ಇಲಾಖೆಯ ಅಡಿ ಬರುವ ಭೂಮಾಪನ, ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಗೆ ಪತ್ರ ಬರೆದು ಹೆಚ್ಚು ಭೂಮಾಪಕರನ್ನು ನಿಯೋಜನೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಿದರು.
ರಾಜಕಾಲುವೆ ಒತ್ತುವರಿ ಮಾಡಿಕೊಂಡ ಸ್ಥಳಗಳನ್ನು ಭೂಮಾಪಕರಿಂದ ಸರ್ವೇ ನಡೆಸಿ ಮಾರ್ಕ್ ಮಾಡಿ, ತಹಸೀಲ್ದಾರ್ ಅವರಿಂದ ಆದೇಶಗಳನ್ನು ಜಾರಿ ಮಾಡಿರುವ ಒತ್ತುವರಿಗಳನ್ನು ಕೂಡಲೆ ತೆರವುಗೊಳಿಸಬೇಕು. ಹೈಕೋರ್ಟ್ ತಡೆಯಾಜ್ಞೆ ಇರುವ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಗೊಳಿಸಿ ತೆರವು ಕಾರ್ಯಾಚರಣೆ ನಡೆಸಲು ನಿರ್ದೇಶಿಸಿದರು.ನಿಗದಿತ ಸಮಯದಲ್ಲಿ ಕೆರೆ ಹಾಗೂ ರಾಜಕಾಲುವೆ ಒತ್ತುವರಿಗಳನ್ನು ಗುರುತಿಸಲು ಕಂದಾಯ ಇಲಾಖೆಗೆ ಸೂಚನೆ ನೀಡಲಾಗಿದೆ. ಒತ್ತುವರಿಗಳನ್ನು ಗುರುತಿಸಿದ ನಂತರ ತಹಸೀಲ್ದಾರ್‌ಗಳು ಒತ್ತುವರಿದಾರರಿಗೆ ಆದೇಶಗಳನ್ನು ನೀಡಿದ ಬಳಿಕ ಪಾಲಿಕೆ ಹಾಗೂ ಕಂದಾಯ ಇಲಾಖೆಯು ಪೊಲೀಸ್ ಇಲಾಖೆಯ ಸಹಯೋಗದೊಂದಿಗೆ ಒತ್ತುವರಿ ತೆರವು ಕಾರ್ಯಾಚರಣೆಯನ್ನು ನಡೆಸಲಿದೆ ಎಂದು ಸಭೆಯ ಬಳಿಕ ಮಾಹಿತಿ ನೀಡಿದರು.
ಸಭೆಯಲ್ಲಿ ಯೋಜನಾ ವಿಭಾಗದ ವಿಶೇಷ ಆಯುಕ್ತ ಡಾ। ಕೆ.ಹರೀಶ್ ಕುಮಾರ್, ಬಿಎಂಟಿಎಫ್ ಸೂಪರಿಡೆಂಟ್ ಆಫ್ ಪೊಲೀಸ್ ಡಾ। ವಿ.ಜೆ.ಶೋಭಾ ರಾಣಿ ಉಪಸ್ಥಿತರಿದ್ದರು.ಬಾಕ್ಸ್...15 ದಿನದಲ್ಲಿ 75 ಒತ್ತುವರಿ ತೆರವುಕಳೆದ 15 ದಿನಗಳಲ್ಲಿ ಮಹದೇವಪುರ ವ್ಯಾಪ್ತಿಯ ಎಬಿಕೆ, ಗುಂಜೂರು, ಕರಿಯಮ್ಮನ ಅಗ್ರಹಾರ, ಬೆಳ್ಳತ್ತೂರು ಹಾಗೂ ಕೆ.ಆರ್ ಪುರದಲ್ಲಿ 10 ಮಳಿಗೆಗಳು ಸೇರಿದಂತೆ 62 ಒತ್ತುವರಿಗಳನ್ನು ತೆರವುಗೊಳಿಸಲಾಗಿದೆ. ಇನ್ನು ಯಲಹಂಕ ವಲಯದ ವ್ಯಾಪ್ತಿಯಲ್ಲಿ 8, ಬೊಮ್ಮನಹಳ್ಳಿ ವಲಯ ವ್ಯಾಪ್ತಿಯಲ್ಲಿ 5 ಸೇರಿದಂತೆ ಒಟ್ಟು 75 ಒತ್ತುವರಿಗಳನ್ನು ತೆರವುಗೊಳಿಸಲಾಗಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.854 ರಾಜಕಾಲುವೆಒತ್ತುವರಿ ಬಾಕಿ
ಈವರೆಗೆ ಒಟ್ಟು 3,176 ಒತ್ತುವರಿ ಗುರುತಿಸಲಾಗಿದ್ದು, ಈ ಪೈಕಿ 2,322 ಒತ್ತುವರಿಗಳನ್ನು ತೆರವುಗೊಳಿಸಲಾಗಿದೆ. ಇನ್ನು 854 ಒತ್ತುವರಿಗಳನ್ನು ತೆರವುಗೊಳಿಸುವುದು ಬಾಕಿದೆ. ಇದರಲ್ಲಿ 155 ಒತ್ತುವರಿ ಪ್ರಕರಣಗಳು ನ್ಯಾಯಾಲಯದಲ್ಲಿ ಇವೆ. 487 ಒತ್ತುವರಿ ತೆರವಿಗೆ ಶೀಘ್ರದಲ್ಲಿ ಆದೇಶ ಜಾರಿಗೊಳಿಸಲಾಗುವುದು. ಇನ್ನು 162 ಒತ್ತುವರಿಗಳಿಗೆ ತಹಸೀಲ್ದಾರಿಂದ ಆದೇಶಗಳನ್ನು ಜಾರಿಗೊಳಿಸಲಾಗಿದೆ ಎಂದು ರಾಜಕಾಲುವೆ ವಿಭಾಗದ ಅಧಿಕಾರಿಗಳು ಸಭೆಯಲ್ಲಿ ಮಾಹಿತಿ ನೀಡಿದರು.ಕೆರೆಗಳ ಸರ್ವೇ ಚುರುಕುಗೊಳಿಸಿಬಿಬಿಎಂಪಿ ವ್ಯಾಪ್ತಿಯಲ್ಲಿ 202 ಕೆರೆಗಳಿದ್ದು, 159 ಕೆರೆಗಳಲ್ಲಿ ಒತ್ತುವರಿಯಾಗಿದೆ. ಅದರಂತೆ 140 ಕೆರೆಗಳಲ್ಲಿ ಒತ್ತುವರಿಯಾಗಿರುವ ಬಗ್ಗೆ ತಹಸೀಲ್ದಾರರಿಗೆ ಪತ್ರಗಳನ್ನು ಬರೆಯಲಾಗಿದೆ. ಈ ಪೈಕಿ 40 ಕೆರೆಗಳ ಸರ್ವೇ ಕಾರ್ಯ ಪೂರ್ಣಗೊಂಡಿದ್ದು, 100 ಕೆರೆಗಳಲ್ಲಿ ಸರ್ವೇ ಕಾರ್ಯ ನಡೆಸಬೇಕಿದೆ. ಉಳಿದ ಕೆರೆಗಳಲ್ಲಿ ಸರ್ವೇ ಕಾರ್ಯವನ್ನು ತ್ವರಿತವಾಗಿ ನಡೆಸಲು ಅಧಿಕಾರಿಗಳಿಗೆ ಮುಖ್ಯ ಆಯುಕ್ತ ತುಷಾರ್ ಸೂಚಿಸಿದರು.