ಸಾರಾಂಶ
ಬೆಂಗಳೂರು: ದರ ಹೆಚ್ಚಾದರೂ ಕೂಡ ಸಂಚಾರ ದಟ್ಟಣೆ, ಸಮಯ ಉಳಿತಾಯ ಹಾಗೂ ಬೇಸಿಗೆ ಕಾರಣಗಳಿಂದ ಅನಿವಾರ್ಯವಾಗಿ ನಮ್ಮ ಮೆಟ್ರೋದತ್ತ ಪ್ರಯಾಣಿಕರು ಪುನಃ ಮುಖ ಮಾಡಿದ್ದಾರೆ. ಏಪ್ರಿಲ್ 17ರಂದು 9,08,153 ಪ್ರಯಾಣಿಕರು ಸಂಚರಿಸಿದ್ದಾರೆ ಎಂದು ಬಿಎಂಆರ್‌ಸಿಲ್ ತಿಳಿಸಿದೆ.
ಈ ಅಂಕಿ ಅಂಶದ ಪ್ರಕಾರ, ವೈಟ್‌ಫೀಲ್ಡ್ ಮೆಟ್ರೋ ನಿಲ್ದಾಣದಿಂದ ಚಲ್ಲಘಟ್ಟ ಟರ್ಮಿನಲ್‌ನ ನೇರಳೆ ಮಾರ್ಗದಲ್ಲಿ 4,35,516 ಮಂದಿ ಪ್ರಯಾಣಿಸಿದ್ದಾರೆ ಮತ್ತು ಮಾದಾವರದಿಂದ ಸಿಲ್ಕ್ ಇನ್‌ಸ್ಟಿಟ್ಯೂಟ್ ಹಸಿರು ಮಾರ್ಗದಲ್ಲಿ 2,85,240 ಜನ ಪ್ರಯಾಣಿಸಿದ್ದಾರೆ. ಕೆಂಪೇಗೌಡ ನಿಲ್ದಾಣದಲ್ಲಿ 1,87,397 ಪ್ರಯಾಣಿಕರು ಮಾರ್ಗ ಬದಲಾಯಿಸಿದ್ದಾರೆ. ಇದಲ್ಲದೆ, ಏ.16ರಂದು 8,73,279 ಪ್ರಯಾಣಿಕರು ಮೆಟ್ರೋದಲ್ಲಿ ಸಂಚರಿಸಿದ್ದಾರೆ.
ಈ ಹಿಂದೆ 2024ರ ಆಗಸ್ಟ್ 14ರಂದು ಒಂದೇ ದಿನ ನಮ್ಮ ಮೆಟ್ರೋದಲ್ಲಿ 9.17 ಲಕ್ಷ ಪ್ರಯಾಣಿಕರು ಹಾಗೂ ಡಿ.6ರಂದು 9.20 ಲಕ್ಷ ಪ್ರಯಾಣಿಕರು ಓಡಾಡಿದ್ದರು. ಇದೀಗ 9.08ಲಕ್ಷ ಜನ ಸಂಚರಿಸಿರುವುದು ಮೆಟ್ರೋದ 3ನೇ ದಾಖಲೆಯಾಗಿದೆ.
2024 ಡಿಸೆಂಬರ್ ಹಾಗೂ 2025 ಜನವರಿಯಲ್ಲಿ ನಿತ್ಯ 9 ಲಕ್ಷ ಮಂದಿ ಪ್ರಯಾಣ ಮಾಡುತ್ತಿದ್ದರು. ವಾರದ ಆರಂಭ ಮತ್ತು ವಾರಾಂತ್ಯದ ಸೋಮವಾರ ಹಾಗೂ ಶುಕ್ರವಾರ ಈ ಸಂಖ್ಯೆ 10 ಲಕ್ಷ ದಾಟುತ್ತಿತ್ತು. ಜನವರಿಯಲ್ಲಿ ಬರೋಬ್ಬರಿ 2.5 ಕೋಟಿ ಮಂದಿ ಪ್ರಯಾಣ ಮಾಡಿದ್ದರು. ಆದರೆ, ಬಳಿಕ ಫೆಬ್ರವರಿಯಲ್ಲಿ ಮೆಟ್ರೋ ದರವನ್ನು ಏರಿಸಿದ ಬಳಿಕ ಎರಡು ತಿಂಗಳ ಕಾಲ ಮೆಟ್ರೋ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಕುಸಿದಿತ್ತು.
ಜನವರಿಯಲ್ಲಿ 2.49 ಕೋಟಿ ಮಂದಿ:
ನಮ್ಮ ಮೆಟ್ರೋ ಒಟ್ಟಾರೆ ಪ್ರಯಾಣಿಕರ ಸಂಖ್ಯೆ ಜನವರಿಯಲ್ಲಿ 2.49 ಕೋಟಿ ಇದ್ದರೆ, ಫೆಬ್ರವರಿಯಲ್ಲಿ 2.9 ಕೋಟಿ ಸಂಚರಿಸಿದ್ದರು. 41 ಲಕ್ಷಕ್ಕೂ ಅಧಿಕ ಕುಸಿತ ಕಂಡಿತ್ತು. ಈ ಅಂಕಿ ಅಂಶಗಳ ಪ್ರಕಾರ ಮೆಟ್ರೋ ನಿತ್ಯ 1 ಲಕ್ಷಕ್ಕೂ ಹೆಚ್ಚಿನ ಪ್ರಯಾಣಿಕರ ಕೊರತೆ ಕಂಡಿತ್ತು. ಅದರಲ್ಲಿ ಅರ್ಧಕ್ಕೂ ಹೆಚ್ಚಿನವರು ಬೈಕ್ ಅಥವಾ ಕಾರ್ ರಸ್ತೆಗಿಳಿಸಿದ್ದರು. ಇದು ಟ್ರಾಫಿಕ್ ಹೆಚ್ಚಳಕ್ಕೆ ಕಾರಣವಾಗಿತ್ತು. ಆದರೆ, ಬೇಸಿಗೆ ಆರಂಭದ ಬಳಿಕ ಮಾರ್ಚ್‌ನಲ್ಲಿ 2,24,63,620 ಪ್ರಯಾಣಿಕರು ಸಂಚರಿಸಿದ್ದಾರೆ.
ಮೆಟ್ರೋದಲ್ಲಿ ಸಂಚರಿಸುವುದು ಬೇಸಿಗೆಯಲ್ಲಿ ಅನಿವಾರ್ಯ. ಬೇಸಿಗೆ ಸೆಕೆಗೆ ದ್ವಿಚಕ್ರ ವಾಹನದಲ್ಲಿ ಹೆಲ್ಮೆಟ್ ಧರಿಸಿ ಸಂಚರಿಸುವುದು ಕಷ್ಟವಾಗುತ್ತದೆ. ಅಲ್ಲದೆ ಟ್ರಾಫಿಕ್ ಕಿರಿಕಿರಿ. ಕಳೆದೊಂದು ವಾರದಿಂದ ಅನಿಶ್ಚಿತ ಮಳೆ ಕೂಡ ಪ್ರಯಾಣಿಕರನ್ನು ಕಾಡುತ್ತಿದೆ. ಹೀಗಾಗಿ ಮೆಟ್ರೋವನ್ನು ಜನತೆ ನೆಚ್ಚಿಕೊಳ್ಳುವಂತಾಗಿದೆ.
ಎಲೆಕ್ಟ್ರಾನಿಕ್ ಸಿಟಿ ಸಂಪರ್ಕಿಸುವ ಆರ್.ವಿ.ರಸ್ತೆಯಿಂದ ಬೊಮ್ಮಸಂದ್ರವರೆಗಿನ ಹಳದಿ ಮಾರ್ಗ ಆರಂಭವಾದ ಬಳಿಕ ಮತ್ತಷ್ಟು ಪ್ರಯಾಣಿಕರ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ.
ಜನ ಆಕ್ರೋಶ:
ಮೆಟ್ರೋ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾದ ಕುರಿತು ಬಿಎಂಆರ್‌ಸಿಎಲ್ ‘ಎಕ್ಸ್’ನಲ್ಲಿ ಹಂಚಿಕೊಂಡು ಇದೊಂದು ದಾಖಲೆ ಎಂದು ಪೋಸ್ಟ್ ಮಾಡಿದೆ. ಆದರೆ, ಈ ಬಗ್ಗೆ ಪ್ರಯಾಣಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು ಮೊದಲು ದರ ಇಳಿಸಿ. ಪ್ರಯಾಣಿಕರಿಗೆ ಅಗತ್ಯ ಸೌಲಭ್ಯ ಕಲ್ಪಿಸಿ ಎಂದು ಹೇಳಿದ್ದಾರೆ. ವರ್ಷಗಳಿಂದ ಹಳದಿ ಮಾರ್ಗ ಅರಂಭಿಸದೆ ಇರುವುಸಕ್ಕೆ ಬೇಸರ ಹೊರಹಾಕಿದ್ದಾರೆ.