ಅನಿವಾರ್ಯತೆಗೆ ಹೆಗಲಾಗಿ ಆತ್ಮತೃಪ್ತಿಯ ಕೆಲಸ ಮಾಡಿ . ಬ್ಯುಸಿನೆಸ್‌ ಅಂದರೆ ಒತ್ತಡ, ಟೆನ್ಶನ್‌ ಎಂಬ ಮನೋಭಾವ ಇದೆ. ಆದರೆ ಇಲ್ಲಿ ಕೈತುಂಬ ದುಡ್ಡು ಕೊಡುವ ಜೊತೆಗೆ ಸಮಾಧಾನ, ಆತ್ಮತೃಪ್ತಿಯನ್ನೂ ನೀಡುವ ಬಿಸಿನೆಸ್‌ ಐಡಿಯಾಗಳು ಇವೆ.

1. ವೃದ್ಧರು ಮತ್ತು ಒಂಟಿ ವ್ಯಕ್ತಿಗಳಿಗಾಗಿ ಸೇವೆ

‘ಕಂಪ್ಯಾನಿಯನ್ ಆ್ಯಂಡ್ ಕನ್ಸೈರ್ಜ್’ ಅನ್ನುವ ಸೇವೆ ಮಹಾನಗರಗಳಲ್ಲಿ ಜನಪ್ರಿಯವಾಗುತ್ತಿವೆ. ಆಗಾಗ್ಗೆ ಇನ್ನೊಬ್ಬರ ನೆರವಿನ ಅಗತ್ಯ ಇರುವ ವೃದ್ಧರು ಹಾಗೂ ಒಂಟಿ ವ್ಯಕ್ತಿಗೆ ಅಗತ್ಯ ಸಹಾಯ ನೀಡುವ ಕೆಲಸವಿದು. ಔಷಧಿ ತಂದುಕೊಡುವುದು, ಅಗತ್ಯವಿದ್ದಾಗ ಆಸ್ಪತ್ರೆಗೆ ಕರೆದೊಯ್ಯುವುದು, ಬ್ಯಾಂಕ್‌ ಕೆಲಸ ಮಾಡಿಕೊಡುವುದು, ಆಗಾಗ್ಗೆ ಸ್ನೇಹಿತನಂತೆ ಮಾತನಾಡುವುದು ಇತ್ಯಾದಿ. ಹೊರ ದೇಶಗಳಲ್ಲಿ ಇದು ದೊಡ್ಡ ಮಟ್ಟದಲ್ಲಿ ನಡೆಯುತ್ತಿರುವ ಬಿಸಿನೆಸ್‌. ನಮ್ಮಲ್ಲೂ ಈಗೀಗ ಹೆಚ್ಚೆಚ್ಚು ಬೇಡಿಕೆ ಪಡೆಯುತ್ತಿದೆ. ಸಾಮಾನ್ಯವಾಗಿ ಈ ಸೇವೆಗೆ ಪ್ರತೀ ವ್ಯಕ್ತಿಯಿಂದ ತಿಂಗಳಿಗೆ ಅಂದಾಜು 5000 ರು.ವರೆಗೆ ಪಡೆಯುತ್ತಾರೆ. 20 ವ್ಯಕ್ತಿಗಳ ಜವಾಬ್ದಾರಿ ಹೊತ್ತರೆ ಯಾವುದೇ ಬಂಡವಾಳವಿಲ್ಲದೆ ತಿಂಗಳಿಗೆ ಲಕ್ಷದವರೆಗೆ ದುಡಿಯಬಹುದು.

2. ರೆಂಟಲ್‌ ಬುಟಿಕ್‌

ಮದುವೆ ಅಥವಾ ದೊಡ್ಡ ಸಮಾರಂಭಗಳಿಗೆ ಜನ ಲಕ್ಷಾಂತರ ರೂಪಾಯಿ ಬೆಲೆಬಾಳುವ ರೇಷ್ಮೆ ಸೀರೆಗಳು, ಲೆಹೆಂಗಾ ಹಾಗೂ ಶೇರ್ವಾನಿಗಳನ್ನು ಖರೀದಿಸುತ್ತಾರೆ. ಕೇವಲ ಒಂದೆರಡು ಗಂಟೆಗಳಷ್ಟೇ ಧರಿಸುತ್ತಾರೆ. ಬಳಿಕ ಅವು ಮೂಲೆ ಸೇರುತ್ತವೆ. ಇಂಥಾ ದುಬಾರಿ ಬಟ್ಟೆಗಳನ್ನು ಕಡಿಮೆ ಬೆಲೆಗೆ ಖರೀದಿಸಬಹುದು ಅಥವಾ ಬಜೆಟ್‌ ಚೆನ್ನಾಗಿದ್ದರೆ ಹೊಸತಾಗಿ ಖರೀದಿಸಬಹುದು. ಬಳಿಕ ದಿನದ ಬಾಡಿಗೆಗೆ ನೀಡಬಹುದು. ಇದು ಸದ್ಯ ನಗರದಲ್ಲಿ ಅಧಿಕ ಸಂಪಾದನೆ ತರುತ್ತಿರುವ ವಹಿವಾಟು. ಹುಬ್ಬಳ್ಳಿಯ ಮಹಿಳೆಯೊಬ್ಬರು ತನ್ನ ಮನೆಯ ಒಂದು ರೂಮ್‌ನಲ್ಲಿ ಇಂಥಾ ಉಡುಗೆಗಳ ರೆಂಟಲ್‌ ಬುಟಿಕ್‌ ಆರಂಭಿಸಿ ತಿಂಗಳಿಗೆ ಲಕ್ಷಾಂತರ ರೂಪಾಯಿ ವಹಿವಾಟು ನಡೆಸುತ್ತಿದ್ದಾರೆ. 20,000 ರು. ರೂಪಾಯಿ ಬೆಲೆಯ ಡಿಸೈನರ್ ಲೆಹೆಂಗಾ ಅಥವಾ ರೇಷ್ಮೆ ಸೀರೆಗೆ ಒಂದು ದಿನದ ಬಾಡಿಗೆ ಕನಿಷ್ಠ 2500 ದಿಂದ 4000 ರು.ವರೆಗೆ ಇರುತ್ತದೆ. ಒಂದು ಬಟ್ಟೆಯನ್ನು ಆರೇಳು ಬಾರಿ ಬಾಡಿಗೆಗೆ ಕೊಟ್ಟರೆ ಅದರ ಮೂಲ ಬೆಲೆ ವಾಪಸ್ ಬರುತ್ತದೆ. ಉಳಿದದ್ದೆಲ್ಲ ಲಾಭವೇ.

3. ಕ್ಲೌಡ್‌ ಕಿಚನ್‌

ಬದಲಾದ ಲೈಫ್‌ಸ್ಟೈಲ್‌ನಲ್ಲಿ ಜನ ಹೊಟೇಲ್‌ ಊಟಕ್ಕಿಂತ ಮನೆಯ ರುಚಿಯನ್ನು ಹೆಚ್ಚು ಇಷ್ಟಪಡುತ್ತಾರೆ. ಕ್ಲೌಡ್‌ ಕಿಚನ್‌ ಕಾನ್ಸೆಪ್ಟ್‌ ಈಗೀಗ ಹೆಚ್ಚು ಪ್ರಸಿದ್ಧಿಗೆ ಬರುತ್ತಿದೆ. ಮನೆ ಅಥವಾ ಸಣ್ಣ ಜಾಗದಲ್ಲಿ ಕ್ಲೌಡ್‌ ಕಿಚನ್‌ ತೆರೆದರೆ ಬ್ಯಾಚುಲರ್‌ಗಳು, ಉದ್ಯೋಗಿಗಳು ಹುಡುಕಿಕೊಂಡು ಬಂದು ಊಟ ಮಾಡುತ್ತಾರೆ. ಇದಕ್ಕೆ ಬೇಡಿಕೆ ಯಾವತ್ತೂ ಕಡಿಮೆ ಆಗುವುದಿಲ್ಲ. ಬೆಂಗಳೂರಿನ ಎಚ್‌ಎಸ್‌ಆರ್ ಲೇಔಟ್‌ನಲ್ಲಿ ಗೃಹಿಣಿಯೊಬ್ಬರು ತನ್ನ ಮನೆಯಲ್ಲೇ ಮಧ್ಯಾಹ್ನ ಮತ್ತು ರಾತ್ರಿಯ ಊಟದ ಬಾಕ್ಸ್‌ಗಳನ್ನು ಸಿದ್ಧಪಡಿಸಿ ಸುತ್ತಮುತ್ತಲಿನ ಅಪಾರ್ಟ್‌ಮೆಂಟ್‌ಗಳಿಗೆ ಕಳುಹಿಸುತ್ತಿದ್ದಾರೆ. ಎಲ್ಲ ಖರ್ಚು ಕಳೆದು ತಿಂಗಳಿಗೆ 60 ರಿಂದ 80 ಸಾವಿರದಷ್ಟು ಮೊತ್ತ ಕೈಗೆ ಬರುತ್ತದೆ ಎನ್ನುತ್ತಾರವರು.

4. ಎಕೋ-ಫ್ರೆಂಡ್ಲಿ ಪೆಟ್ ಕೇರ್

ಮಹಾನಗರಗಳ ಒಂಟಿತನ ನೀಗಲು ಅದೆಷ್ಟೋ ಮಂದಿ ಪ್ರಾಣಿಗಳನ್ನು ಸಾಕುತ್ತಾರೆ. ಅವುಗಳ ಬಗ್ಗೆ ತಮಗಿಂತ ಹೆಚ್ಚು ಕಾಳಜಿ ಮಾಡುವವರೂ ಇದ್ದಾರೆ. ಹೀಗಾಗಿ ಪ್ಯಾಕೆಟ್‌ಗಳಲ್ಲಿ ಬರುವ ಪೆಟ್‌ ಫುಡ್‌ ಕೊಡಲು ಅವರಿಗೆ ಇಷ್ಟವಾಗುವುದಿಲ್ಲ. ಹೀಗಾಗಿ ಸಾಕು ಪ್ರಾಣಿಗಳ ದೈಹಿಕ ಅಗತ್ಯಗಳನ್ನು ಅರಿತು ಮನೆಯಲ್ಲೇ ಸಹಜವಾಗಿ ಅವಕ್ಕೆ ಆಹಾರ ತಯಾರಿಸಿ ಕೊಟ್ಟರೆ ಸಾಕಷ್ಟು ಗಳಿಕೆ ಮಾಡಬಹುದು. ಪೆಟ್‌ಕೇರ್‌ ಸದ್ಯ ಶೀಘ್ರವಾಗಿ ಬೆಳೆಯುತ್ತಿರುವ ಕ್ಷೇತ್ರ. ಆರ್ಗ್ಯಾನಿಕ್‌ ಪೆಟ್‌ ಬಿಸ್ಕೆಟ್‌ ಜೊತೆಗೆ ಅವುಗಳ ಶ್ಯಾಂಪೂ, ಮಲಮೂತ್ರ ವಿಲೇವಾರಿ ವಿಶೇಷ ಬ್ಯಾಗ್‌ನಂಥವುಗಳ ಬಿಸಿನೆಸ್‌ ಆರಂಭಿಸಿದರೂ ಲಾಭ ಗಳಿಸಬಹುದು.

5. ಮನೆ ಬಾಗಿಲಲ್ಲೇ ಹೈಜಿನಿಕ್ ವೆಹಿಕಲ್‌ ವಾಶ್

ಪ್ರತಿ ಮನೆಯಲ್ಲೂ ಇಂದು ಕಾರು ಅಥವಾ ಬೈಕ್‌ಗಳಿವೆ. ಗ್ರಾಹಕರ ಮನೆ ಬಾಗಿಲಿಗೇ ಹೋಗಿ ಇಕೋ-ಫ್ರೆಂಡ್ಲಿ ವಾಟರ್‌ಲೆಸ್‌ ಅಥವಾ ಪೋರ್ಟಬಲ್ ಪ್ರೆಶರ್ ವಾಶರ್ ಬಳಸಿ ವಾಹನಗಳನ್ನು ಸ್ವಚ್ಛಗೊಳಿಸಿ ಕೊಡಬಹುದು. ಇದಕ್ಕೆ ಹಳ್ಳಿಗಳಿಂದ ಮಹಾನಗರಗಳವರೆಗೂ ಬಹಳ ಬೇಡಿಕೆ ಇದೆ. ತಿಂಗಳಿಗೆ ಇಂತಿಷ್ಟು ದರ ನಿಗದಿ ಮಾಡಿ ವಾಹನ ಸ್ವಚ್ಛಗೊಳಿಸಿ ಅಧಿಕ ಆದಾಯ ಪಡೆಯಬಹುದು.