ಸಾರಾಂಶ
ಬೆಂಗಳೂರು : ಬೆಂಗಳೂರಿನಲ್ಲಿನ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ 2 ಜಿಲ್ಲಾ ನೋಂದಣಿ ಕಚೇರಿ ಮತ್ತು 34 ಉಪ ನೋಂದಣಿ ಕಚೇರಿಗಳಿಗೆ ಹೊಸ ಕಟ್ಟಡ ನಿರ್ಮಾಣ ಮಾಡಲು ಗುರುವಾರ ನಡೆದ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ.
ಪ್ರತಿ ಕಟ್ಟಡ ನಿರ್ಮಾಣಕ್ಕೆ ₹2.50 ಕೋಟಿ ಖರ್ಚು ಮಾಡಲಾಗುತ್ತದೆ. ಒಂದು ವೇಳೆ ಹೊಸ ಕಟ್ಟಡ ನಿರ್ಮಾಣಕ್ಕೆ ನಿವೇಶನ ದೊರೆಯದಿದ್ದರೆ ಬಿಬಿಎಂಪಿ, ಬೆಂಗಳೂರು ನಗರ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪಂಚಾಯಿತಿಗಳ ಕಟ್ಟಡಗಳಲ್ಲಿನ ಸ್ಥಳಾವಕಾಶ ಲಭ್ಯವಿರುವಲ್ಲಿ ಕಚೇರಿ ಸ್ಥಳಾಂತರಿಸಲಾಗುವುದು. ಹಾಗೆಯೇ, ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಮಾನವ ಸಂಪನ್ಮೂಲ ನಿಯೋಜನೆ, ಐಟಿ ಮೂಲಸೌಕರ್ಯಗಳ ಸ್ಥಾಪನೆ, ಕಾರ್ಯಾಚರಣೆಗೆ ₹637.45 ಕೋಟಿ ಪರಿಷ್ಕೃತ ಅಂದಾಜಿಗೂ ಅನುಮೋದಿಸಲಾಗಿದೆ ಎಂದು ಸಚಿವ ಎಚ್.ಕೆ. ಪಾಟೀಲ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನಿವೃತ್ತ ಐಎಫ್‌ಎಸ್ ವಿರುದ್ಧ ಸಿವಿಲ್ ದಾವೆ:
ತಮ್ಮ ಕಾಲಾವಧಿಯಲ್ಲಿ ಗಣಿಗಾರಿಕೆಗೆ ಸಂಬಂಧಿಸಿದಂತೆ ಸರ್ಕಾರಕ್ಕೆ ನಷ್ಟವಾಗುವಂತೆ ಮಾಡಿದ ನಿವೃತ್ತ ಐಎಎಸ್ ಅಧಿಕಾರಿ ಎಸ್. ಮುತ್ತಯ್ಯ ವಿರುದ್ಧ ಸವಿಲ್ ದಾವೆ ಹೂಡಲು ಸಚಿವ ಸಂಪುಟ ನಿರ್ಧರಿಸಿದೆ. ಅಲ್ಲದೆ, ದಾವೆ ಮೂಲಕ ಸರ್ಕಾರಕ್ಕೆ ನಷ್ಟವಾಗಿರುವ 2.40 ಕೋಟಿ ರು. ಅವರಿಂದ ವಸೂಲಿ ಮಾಡಲು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಗೆ ವಹಿಸಲು ನಿರ್ಣಯಿಸಲಾಯಿತು.
ಇದೇ ವೇಳೆ ಲೋಕಾಯುಕ್ತ ತನಿಖೆ ಎದುರಿಸುತ್ತಿರುವ ಹಿರಿಯ ಐಎಎಸ್ ಅಧಿಕಾರಿಗಳಾದ ಪ್ರಶಾಂತ್‌ಕುಮಾರ್ ಮಿಶ್ರ ಮತ್ತು ಎನ್. ಜಯರಾಮ್ ವಿರುದ್ಧದ ಲೋಕಾಯುಕ್ತ ತನಿಖೆ ಶಿಫಾರಸನ್ನು ಕೈಬಿಡಲು ನಿರ್ಧರಿಸಲಾಗಿದೆ.