ಬೆಂಗಳೂರು ನಗರದಲ್ಲಿ ನಾಳೆಯಿಂದ ಜಾತಿ ಗಣತಿ ಆರಂಭ

| N/A | Published : Oct 03 2025, 02:00 AM IST

ಸಾರಾಂಶ

ಗ್ರೇಟರ್‌ ಬೆಂಗಳೂರು ವ್ಯಾಪ್ತಿಯಲ್ಲಿ ಅ.4 ರಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಆರಂಭಗೊಳ್ಳಲಿದ್ದು, ಕೇವಲ 17 ಸಾವಿರ ಗಣತಿದಾರರು ಸಮೀಕ್ಷಾ ಕಾರ್ಯದಲ್ಲಿ ಭಾಗವಹಿಸುತ್ತಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಸಮೀಕ್ಷೆ ಕಾರ್ಯ ಪೂರ್ಣಕ್ಕೆ ಕನಿಷ್ಠ 2 ರಿಂದ 3 ತಿಂಗಳು ಬೇಕಾಗಲಿದೆ ಎನ್ನಲಾಗುತ್ತಿದೆ.

  ಬೆಂಗಳೂರು :  ಗ್ರೇಟರ್‌ ಬೆಂಗಳೂರು ವ್ಯಾಪ್ತಿಯಲ್ಲಿ ಅ.4 ರಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಆರಂಭಗೊಳ್ಳಲಿದ್ದು, ಕೇವಲ 17 ಸಾವಿರ ಗಣತಿದಾರರು ಸಮೀಕ್ಷಾ ಕಾರ್ಯದಲ್ಲಿ ಭಾಗವಹಿಸುತ್ತಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಸಮೀಕ್ಷೆ ಕಾರ್ಯ ಪೂರ್ಣಕ್ಕೆ ಕನಿಷ್ಠ 2 ರಿಂದ 3 ತಿಂಗಳು ಬೇಕಾಗಲಿದೆ ಎನ್ನಲಾಗುತ್ತಿದೆ.

ಈಗಾಗಲೇ ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯ ಐದು ನಗರ ಪಾಲಿಕೆ ಹೊರತು ಪಡಿಸಿ ಉಳಿದಂತೆ ರಾಜ್ಯಾದ್ಯಂತ ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗ ನಡೆಸುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಭರದಿಂದ ಸಾಗಿದೆ. ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಬೇಕೆಂಬ ಮುಖ್ಯಮಂತ್ರಿಯ ಸೂಚನೆ ಹಿನ್ನೆಲೆಯಲ್ಲಿ ಹಬ್ಬದ ದಿನವಾದ ಬುಧವಾರವೂ ಸಮೀಕ್ಷೆದಾರರು ಮನೆ ಮನೆ ತೆರಳಿ ಮಾಹಿತಿ ಸಂಗ್ರಹಿಸಿದ್ದರು.

ಅ.3 ರಂದು ಜಿಬಿಎ ವ್ಯಾಪ್ತಿಯ 17 ಸಾವಿರ ಗಣತಿದಾರರಿಗೆ ಅಂತಿಮ ಹಂತದ ತರಬೇತಿ ನೀಡುವುದಕ್ಕೆ ತೀರ್ಮಾನಿಸಲಾಗಿದ್ದು, ಅ.4ರ ಶನಿವಾರದಿಂದ ಗಣತಿದಾರರು ಮನೆ ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸುವ ಕಾರ್ಯ ಶುರು ಮಾಡಲಿದ್ದಾರೆ.

ಸರ್ಕಾರದ ಎಚ್‌ಎಂಎಸ್‌ ದಾಖಲೆಯ ಪ್ರಕಾರ ನಗರದಲ್ಲಿ 22,700 ಮಂದಿಯ ಮಾಹಿತಿಯನ್ನು ಜಿಬಿಎ ಅಧಿಕಾರಿಗಳು ಪಡೆದುಕೊಂಡಿದ್ದರು. ಈ ಪೈಕಿ ನಿವೃತ್ತಿ, ವರ್ಗಾವಣೆ, ನಿಧನ ಸೇರಿದಂತೆ ಮೊದಲಾದ ಕಾರಣಕ್ಕೆ ಸುಮಾರು 17 ಸಾವಿರ ಮಂದಿ ಮಾತ್ರ ಸಮೀಕ್ಷೆಯಲ್ಲಿ ಭಾಗವಹಿಸುತ್ತಿದ್ದಾರೆ. ನಗರದಲ್ಲಿ 32 ಲಕ್ಷ ಕುಟುಂಬಗಳಿವೆ ಎಂದು ಅಂದಾಜಿಸಲಾಗಿದೆ. ಬೆಂಗಳೂರಿನ ಗಣತಿದಾರರಿಗೆ ತಲಾ 200 ರಿಂದ 300 ಮನೆ ಗಣತಿ ನಡೆಸುವ ಗುರಿ ನೀಡಲಾಗುತ್ತಿದೆ. ಗ್ರಾಮಾಂತರ ಪ್ರದೇಶದ ಗಣತಿದಾರರಿಗೆ ದಿನಕ್ಕೆ 10ರಂತೆ ಸುಮಾರು 150 ಮನೆ ಗಣತಿ ನಡೆಸುವ ಗುರಿ ನೀಡಲಾಗುತ್ತಿದೆ. ಆದರೂ ನಿಗದಿತ ಅವಧಿಯಲ್ಲಿ ಗಣತಿ ಕಾರ್ಯ ಪೂರ್ಣಗೊಳಿಸುವುದಕ್ಕೆ ಸಾಧ್ಯವಾಗುತ್ತಿಲ್ಲ. ಈ ಲೆಕ್ಕಾಚಾರದಲ್ಲಿ ಬೆಂಗಳೂರಿನ ಗಣತಿದಾರರಿಗೆ ನೀಡಿರುವ ಗುರಿ ಹೆಚ್ಚಾಗಿರುವುದರಿಂದ ಸಮೀಕ್ಷೆ ಪೂರ್ಣಗೊಳಿಸುವುದಕ್ಕೆ ಹೆಚ್ಚಿನ ಸಮಯ ಬೇಕಾಗಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಹೊರಗೆ ಹೋಗುವವರೇ ಜಾಸ್ತಿ:

ಜತೆಗೆ, ಬೆಂಗಳೂರಿನ ನಿವಾಸಿಗಳು ಉದ್ಯೋಗಕ್ಕಾಗಿ ಮನೆಯಿಂದ ಹೊರಗೆ ಹೋಗುವವರ ಸಂಖ್ಯೆ ಹೆಚ್ಚಾಗಿದೆ. ಗಣತಿದಾರರಿಗೆ ಬೆಳಗ್ಗೆ, ಸಂಜೆ ಹಾಗೂ ರಜೆ ದಿನಗಳಲ್ಲಿ ಮಾತ್ರ ಲಭ್ಯವಾಗುವ ಸಾಧ್ಯತೆ ಇದೆ. ಹೀಗಾಗಿ, ಬೆಂಗಳೂರಿನಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕಾರ್ಯ ಪೂರ್ಣಗೊಳ್ಳುವುದಕ್ಕೆ ಕನಿಷ್ಠ 2 ರಿಂದ 3 ತಿಂಗಳು ಬೇಕಾಗಲಿದೆ ಎಂದು ತಿಳಿಸಿದ್ದಾರೆ.

Read more Articles on