ಮನೋರಂಜನ್ ಮನೆಗೆ ಕೇಂದ್ರ, ರಾಜ್ಯ ಗುಪ್ತಚರ ಪೊಲೀಸರ ಭೇಟಿ

| Published : Dec 15 2023, 01:31 AM IST

ಮನೋರಂಜನ್ ಮನೆಗೆ ಕೇಂದ್ರ, ರಾಜ್ಯ ಗುಪ್ತಚರ ಪೊಲೀಸರ ಭೇಟಿ
Share this Article
  • FB
  • TW
  • Linkdin
  • Email

ಸಾರಾಂಶ

ಮನೋರಂಜನ್ ಮನೆಗೆ ಕೇಂದ್ರ, ರಾಜ್ಯ ಗುಪ್ತಚರ ಪೊಲೀಸರ ಭೇಟಿ- ವಿಜಯನಗರ ಮನೆ ಸುತ್ತಾ ಪೊಲೀಸರ ನಿಗಾ- ಸಂಸದ ಕಚೇರಿ ಸುತ್ತಮುತ್ತ ಪೊಲೀಸರಿಂದ ಬಿಗಿಭದ್ರತೆ

- ವಿಜಯನಗರ ಮನೆ ಸುತ್ತಾ ಪೊಲೀಸರ ನಿಗಾ

- ಸಂಸದ ಕಚೇರಿ ಸುತ್ತಮುತ್ತ ಪೊಲೀಸರಿಂದ ಬಿಗಿಭದ್ರತೆಫೋಟೋ- 14ಎಂವೈಎಸ್3

ಮೈಸೂರಿನ ವಿಜಯನಗರದಲ್ಲಿರುವ ಮನೋರಂಜನ್ ಮನೆ ಬಳಿ ಪೊಲೀಸರ ನಿಗಾ.14ಎಂವೈಎಸ್4

ಮೈಸೂರಿನ ಜಲದರ್ಶಿನಿ ಆವರಣದಲ್ಲಿರುವ ಸಂಸದ ಪ್ರತಾಪ್ ಸಿಂಹ ಕಚೇರಿ ಆವರಣದಲ್ಲಿ ಪೊಲೀಸರಿಂದ ಬಿಗಿ ಭದ್ರತೆ.

----ಕನ್ನಡಪ್ರಭ ವಾರ್ತೆ ಮೈಸೂರು

ಸಂಸತ್ ನಲ್ಲಿ ಹೊಗೆ ಬಾಂಬ್ ಸಿಡಿಸಿದ ಮನೋರಂಜನ್ ಮೈಸೂರಿನ ಮನೆಗೆ ಕೇಂದ್ರ ಮತ್ತು ರಾಜ್ಯ ಗುಪ್ತಚರ ಪೊಲೀಸರು ಗುರುವಾರ ಭೇಟಿ ನೀಡಿ, ಮನೋರಂಜನ್ ಕುಟುಂಬಸ್ಥರಿಂದ ಮಾಹಿತಿ ಸಂಗ್ರಹಿಸಿದರು.

ಕೇಂದ್ರ ಗುಪ್ತಚರ ಇಲಾಖೆ ಮೈಸೂರು ವಿಭಾಗದ ಉಪ ನಿರ್ದೇಶಕ ಪ್ರವೀಣ್ ನೇತೃತ್ವದ ತಂಡವು ಒಂದು ಗಂಟೆಗೂ ಹೆಚ್ಚು ಕಾಲ ಮನೆಯಲ್ಲಿ ತಪಾಸಣೆ ನಡೆಸಿದ್ದಲ್ಲದೇ, ಮನೋರಂಜನ್ ಬಗ್ಗೆ ಹಲವು ಪ್ರಶ್ನೆಗಳನ್ನು ಕೇಳುವ ಮೂಲಕ ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸಿ, ಕೇಂದ್ರ ಕಚೇರಿಗೆ ಮಾಹಿತಿ ರವಾನಿಸಿದ್ದಾರೆ.

ಅಲ್ಲದೆ, ಮನೋರಂಜನ್ ಕೊಠಡಿಯನ್ನು ಇಂಚಿಂಚು ಪರಿಶೀಲಿಸಿರುವ ಗುಪ್ತಚರ ಪೊಲೀಸರು, ಆತನ ಸಂಪರ್ಕಿತರ ಸುಳಿವುಗಾಗಿ ಹುಡುಕಾಟ ಆರಂಭಿಸಿದ್ದಾರೆ.

ಅಕ್ಕಪಕ್ಕದವರ ವಿಚಾರಣೆ

ಮನೋರಂಜನ್ ನಿವಾಸದ ಸುತ್ತಮುತ್ತಲಿನ ಮನೆಯವರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಅಲ್ಲದೆ, ಮನೆಯ ಸುತ್ತಮುತ್ತ ಬಿಗಿ ಭದ್ರತೆ ಕೈಗೊಳ್ಳುವ ಮೂಲಕ ಹೆಚ್ಚಿನ ನಿಗಾ ವಹಿಸಿದ್ದಾರೆ.

ಅದೇ ರೀತಿ ಮೈಸೂರಿನ ಹುಣಸೂರು ರಸ್ತೆ ಜಲದರ್ಶಿನಿ ಆವರಣದಲ್ಲಿರುವ ಸಂಸದ ಪ್ರತಾಪ್ ಸಿಂಹ ಅವರ ಕಚೇರಿ ಸುತ್ತಮುತ್ತ ಪೊಲೀಸರು ಬಂದೋಬಸ್ತ್ ಕೈಗೊಂಡಿದ್ದಾರೆ.

----

ಬಾಕ್ಸ್...

ಅಪ್ಪನ ಪರಿಚಯ ಹೇಳಿಕೊಂಡು ಪಾಸ್ ಪಡೆದಿದ್ದ

ತಂದೆ ದೇವರಾಜೇಗೌಡರ ಪರಿಚಯ ಹೇಳಿಕೊಂಡು ಸಂಸದ ಪ್ರತಾಪ್ ಸಿಂಹ ಕಚೇರಿಯಿಂದ ಮನೋರಂಜನ್ ಪಾಸ್ ಪಡೆದಿದ್ದಾಗಿ ತಿಳಿದು ಬಂದಿದೆ.

ತಾನು ‌ಮೈಸೂರಿನ ವಿಜಯನಗರ ನಿವಾಸಿ. ತನ್ನ ತಂದೆ ದೇವರಾಜೇಗೌಡ ಎಂದು ತನ್ನ ಪರಿಚಯ ಮಾಡಿಕೊಂಡು ಪ್ರತಾಪ್ ಸಿಂಹ ಬಳಿ ಪಾಸ್ ಗೆ ಅನುಮತಿ ಪಡೆದುಕೊಂಡ ಮನೋರಂಜನ್, ಮೊನ್ನೆ ಮಧ್ಯಾಹ್ನ ದೆಹಲಿಯ ಸಂಸದರ ಕಚೇರಿಗೆ ಹೋಗಿದ್ದ. ಮನೋರಂಜನ್ ಜೊತೆಗೆ ಸಾಗರ್ ಶರ್ಮಾನನ್ನು ಕರೆದುಕೊಂಡು ಹೋಗಿದ್ದ.

ಸಾಗರ್ ಶರ್ಮಾ ತನ್ನ ಸಹೋದ್ಯೋಗಿ ಎಂದು ಸಂಸದರ ಕಚೇರಿ ಸಿಬ್ಬಂದಿಗೆ ಪರಿಚಯ. ಇದಾದ ಬಳಿಕ ಸಾಗರ್ ಶರ್ಮಾ ಹೆಸರಿನಲ್ಲಿ ಪಾಸ್ ಕೊಡುವಂತೆ ಕೇಳಿಕೊಂಡಿದ್ದ. ಪಾಸನ್ನು ಸಂಗ್ರಹವಸ್ತುವಾಗಿ ಇಟ್ಟುಕೊಳ್ಳಲು ಸಾಗರ್ ಶರ್ಮಾ ಇಷ್ಟ ಪಟ್ಟಿದ್ದಾರೆ. ಹೀಗಾಗಿ, ಅವರ ಹೆಸರಿನಲ್ಲಿ ಪಾಸ್ ಕೊಡಿ ಎಂದು ಮನೋರಂಜನ್ ಪಡೆದುಕೊಂಡಿದ್ದ.

ಒಂದು ಪಾಸ್ ನಲ್ಲಿ ಇಬ್ಬರು ಸಂಸತ್ ಪ್ರವೇಶ ಮಾಡುವ ಅವಕಾಶ ಇದೆ. ಅದರಲ್ಲಿ ಒಂದು‌ ಪಾಸ್ ನಲ್ಲಿ ಮನೋರಂಜನ್ ಹಾಗೂ ಸಾಗರ್ ಶರ್ಮಾ ಸಂಸತ್ ಪ್ರವೇಶ ಮಾಡಿದ್ದರು.

-----

-- ಬಾಕ್ಸ್--

ಮೈಸೂರಿಗೆ ಭೇಟಿ ನೀಡಿದ್ದ ಸಾಗರ್ ಶರ್ಮಾ

ಸಂಸತ್‌ ಒಳಗೆ ಹೊಗೆ ಸ್ಫೋಟ ಮೂಲಕ ಕೋಲಾಹಲ ಸೃಷ್ಟಿಸಿದ ಪ್ರಕರಣದ ಆರೋಪಿ ಸಾಗರ್ ಶರ್ಮಾ ಮೈಸೂರಿಗೆ ಭೇಟಿ ನೀಡಿದ್ದ ಸಂಗತಿ ಬೆಳಕಿಗೆ ಬಂದಿದೆ.

ಉತ್ತರಪ್ರದೇಶದ ಸಾಗರ್ ಶರ್ಮಾ ಕಳೆದ ಮೇ ತಿಂಗಳಿನಲ್ಲಿ ಮೈಸೂರಿಗೆ ಆಗಮಿಸಿದ್ದ. ಆದರೆ, ಮನೋರಂಜನ್ ಭೇಟಿಗೆ ಆಗಮಿಸಿದ್ದನೇ ಅಥವಾ ಬೇರೆ ಯಾವ ಕಾರಣಕ್ಕೆ ಮೈಸೂರಿಗೆ ಆಗಮಿಸಿದ್ದ ಎನ್ನುವ ಬಗ್ಗೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.