ಸಿಇಟಿ ಪರೀಕ್ಷೆ: 50 ಔಟ್‌ ಆಫ್‌ ಸಿಲೆಬಸ್‌ ಪ್ರಶ್ನೆ ಕೈಬಿಟ್ಟು ಮೌಲ್ಯಮಾಪನ

| Published : Apr 29 2024, 06:08 AM IST

cet exam
ಸಿಇಟಿ ಪರೀಕ್ಷೆ: 50 ಔಟ್‌ ಆಫ್‌ ಸಿಲೆಬಸ್‌ ಪ್ರಶ್ನೆ ಕೈಬಿಟ್ಟು ಮೌಲ್ಯಮಾಪನ
Share this Article
  • FB
  • TW
  • Linkdin
  • Email

ಸಾರಾಂಶ

ವಿವಿಧ ವೃತ್ತಿಪರ ಕೋರ್ಸ್‌ ಪ್ರವೇಶಾತಿ ಸಂಬಂಧ ಮೂರೂವರೆ ಲಕ್ಷ ವಿದ್ಯಾರ್ಥಿಗಳು ಬರೆದಿದ್ದ ಪ್ರಸಕ್ತ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ (ಸಿಇಟಿ) ಬರೋಬ್ಬರಿ 50 ಪಠ್ಯೇತರ ಪ್ರಶ್ನೆಗಳನ್ನು ಕೇಳಿರುವುದು ತಜ್ಞರ ಸಮಿತಿ ವರದಿಯಲ್ಲಿ ಸಾಬೀತಾಗಿದೆ.

ಬೆಂಗಳೂರು : ವಿವಿಧ ವೃತ್ತಿಪರ ಕೋರ್ಸ್‌ ಪ್ರವೇಶಾತಿ ಸಂಬಂಧ ಮೂರೂವರೆ ಲಕ್ಷ ವಿದ್ಯಾರ್ಥಿಗಳು ಬರೆದಿದ್ದ ಪ್ರಸಕ್ತ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ (ಸಿಇಟಿ) ಬರೋಬ್ಬರಿ 50 ಪಠ್ಯೇತರ ಪ್ರಶ್ನೆಗಳನ್ನು ಕೇಳಿರುವುದು ತಜ್ಞರ ಸಮಿತಿ ವರದಿಯಲ್ಲಿ ಸಾಬೀತಾಗಿದೆ. 

ಈ ಹಿನ್ನೆಲೆಯಲ್ಲಿ ಪಠ್ಯೇತರ ಪ್ರಶ್ನೆಗಳನ್ನು ಕೈಬಿಟ್ಟು ಉಳಿದ ಪ್ರಶ್ನೆಗಳನ್ನು ಮಾತ್ರ ಮೌಲ್ಯಮಾಪನಕ್ಕೆ ಪರಿಗಣಿಸಿ ಅದರ ಫಲಿತಾಂಶ ಆಧರಿಸಿ ರ್‍ಯಾಂಕಿಂಗ್‌ ನೀಡಬೇಕು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಸರ್ಕಾರ ಸ್ಪಷ್ಟ ಆದೇಶ ನೀಡಿದೆ. ಒಟ್ಟು ಐವತ್ತು ಪ್ರಶ್ನೆಗಳನ್ನು ಕೈಬಿಡುತ್ತಿರುವ ಹಿನ್ನೆಲೆಯಲ್ಲಿ 190 ಅಂಕಗಳಿಗೆ ಸೀಮಿತವಾಗಿ ಮೌಲ್ಯಮಾಪನ ನಡೆಯಲಿದ್ದು, ವೇಳಾಪಟ್ಟಿಯಂತೆ ಮೇ ಕೊನೆಯ ವಾರ ಪರೀಕ್ಷಾ ಫಲಿತಾಂಶ ಪ್ರಕಟಿಸುವುದಾಗಿ ಸರ್ಕಾರ ಭರವಸೆ ನೀಡಿದೆ.

ಪ್ರಶ್ನೆ ಪತ್ರಿಕೆಯಲ್ಲಿ ತಪ್ಪಾಗಿ ಕೇಳಲಾಗಿದ್ದ ಎರಡು ಪ್ರಶ್ನೆಗಳಿಗೆ ಎರಡು ಗ್ರೇಸ್‌ ಅಂಕ ನೀಡಲು ಕೂಡ ಸೂಚಿಸಿರುವ ಉನ್ನತ ಶಿಕ್ಷಣ ಇಲಾಖೆ, ಮೇ-ಜೂನ್‌ನಲ್ಲಿ ನೀಟ್‌, ಕಾಮೆಡ್‌-ಕೆ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳು, ಸೋಮವಾರದಿಂದ ದ್ವಿತೀಯ ಪಿಯುಸಿ ಪರೀಕ್ಷೆ-2 ಆರಂಭಗಾಗುತ್ತಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮರು ಪರೀಕ್ಷೆ ನಡೆಸುವ ನಿರ್ಧಾರ ಕೈಗೊಂಡಿಲ್ಲ ಎಂದು ಸ್ಪಷ್ಪಪಡಿಸಿದೆ. 

ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಶ್ರೀಕರ್‌ ಈ ಸಂಬಂಧ ಭಾನುವಾರ ಪತ್ರಿಕಾ ಪ್ರಕಟಣೆ ನೀಡಿದ್ದು, ಪಠ್ಯೇತರ ಪ್ರಶ್ನೆಗಳ ಖಚಿತತೆಗೆ ವಿಷಯವಾರು ರಚಿಸಿದ್ದ ತಜ್ಞರ ಸಮಿತಿಯು ಭೌತಶಾಸ್ತ್ರ-9, ರಸಾಯನ ಶಾಸ್ತ್ರ- 15, ಗಣಿತ- 15 ಮತ್ತು ಜೀವಶಾಸ್ತ್ರ ವಿಷಯದಲ್ಲಿ 11 ಪಠ್ಯೇತರ ಪ್ರಶ್ನೆಗಳನ್ನು ಕೇಳಲಾಗಿದೆ ಎಂದು ತಿಳಿಸಿದೆ.