ಛತ್ರಪತಿ ಶಿವಾಜಿ: ಬೃಹತ್ ಐತಿಹಾಸಿಕ ಕಾದಂಬರಿ

| Published : Sep 09 2024, 01:39 AM IST

ಸಾರಾಂಶ

ಶಿವಾಜಿ ಒಬ್ಬ ಧರ್ಮಾತೀತ ಸೆಕ್ಯುಲರ್ ರಾಜನಾಗಿದ್ದ. ಪ್ರಜಾವತ್ಸಲ ರಾಜನಾಗಿದ್ದ. ಪರಧರ್ಮದ ಬಗೆಗಿನ ಸಂಶಯ ಪಿಶಾಚಿಗೆ ತನ್ನ ತಲೆಯಲ್ಲಿ ಸ್ಥಳ ನೀಡಿರಲಿಲ್ಲ. ಸರ್ವಧರ್ಮದವರನ್ನು ಸಮಾನವಾಗಿ ಕಾಣುತ್ತಿದ್ದ ಎಂಬುದನ್ನು ಹನ್ನೊಂದು ಅಧ್ಯಾಯಗಳ ಮೂಲಕ ಲೇಖಕರು ಪ್ರತಿಪಾದಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮೈಸೂರು

ಛತ್ರಪತಿ ಶಿವಾಜಿಃ ಧರ್ಮಾತೀತ ಸೆಕ್ಯುಲರ್ ರಾಜ ಎಂಬ 1004 ಪುಟಗಳ ಬೃಹತ್ ಐತಿಹಾಸಿಕ ಕಾದಂಬರಿಯನ್ನು ಸೃಷ್ಟಿ ಪಬ್ಲಿಕೇಷನ್ಸ್ ಪ್ರಕಟಿಸಿದೆ.

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಮಹಾರಾಷ್ಟ್ರದ ರಣಜೀತ್ ದೇಸಾಯಿ ಅವರ ಮರಾಠಿ ಮೂಲದ ಈ ಕಾದಂಬರಿಯನ್ನು ರಾಹು ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ.

ದೇಶವನ್ನು ಆಳಿದ ಸಾಮಂತರ, ಸಂಸ್ಥಾನಿಕರು, ರಾಜಮಹಾರಾಜರು, ಚಕ್ರವರ್ತಿಗಳು, ಸಾಮ್ರಾಟರಲ್ಲಿ ಅಶೋಕ, ಅಕ್ಬರ್, ಛತ್ರಪತಿ ಶಿವಾಜಿ, ಕಿತ್ತೂರು ರಾಣಿ ಚನ್ನಮ್ಮ, ಟಿಪ್ಪು ಸುಲ್ತಾನ, ನಾಲ್ವಡಿ ಕೃಷ್ಣರಾಜ ಒಡೆಯರ್ ಮೊದಲಾದವರು ಇವತ್ತಿಗೂ ಪ್ರಾತಃಸ್ಮರಣೀಯರಾಗಿ ಉಳಿದಿದ್ದಾರೆ.

ಶಿವಾಜಿ ಒಬ್ಬ ಧರ್ಮಾತೀತ ಸೆಕ್ಯುಲರ್ ರಾಜನಾಗಿದ್ದ. ಪ್ರಜಾವತ್ಸಲ ರಾಜನಾಗಿದ್ದ. ಪರಧರ್ಮದ ಬಗೆಗಿನ ಸಂಶಯ ಪಿಶಾಚಿಗೆ ತನ್ನ ತಲೆಯಲ್ಲಿ ಸ್ಥಳ ನೀಡಿರಲಿಲ್ಲ. ಸರ್ವಧರ್ಮದವರನ್ನು ಸಮಾನವಾಗಿ ಕಾಣುತ್ತಿದ್ದ ಎಂಬುದನ್ನು ಹನ್ನೊಂದು ಅಧ್ಯಾಯಗಳ ಮೂಲಕ ಲೇಖಕರು ಪ್ರತಿಪಾದಿಸಿದ್ದಾರೆ.

ಶಿವನೇರಿ ಕೋಟೆಯಲ್ಲಿ ಶಿವಾಜಿಯ ಜನನ, ನಂತರ ಪುಣೆಗೆ ಬಂದಿದ್ದು, ಶಿವಾಜಿ- ಸಾಯಿಬಾಯಿಯ ವಿವಾಹ, ರೋಹಿಡೇಶ್ವರದಲ್ಲಿ ಪ್ರಮಾಣ ವಚನ, ತೋರಣಾ ಕೋಟೆ ವಶ, ದಾದೋಜಿ ಕೊಂಡದೇವನ ಮರಣ, ಫತೇಖಾನನ್ನು ಸೋಲಿಸಿದ್ದು, ಸಖೂಬಾಯಿಯ ಜನನ, ಬಾಬಾಜಿಯನ್ನು ಮರಳಿ ಹಿಂದೂ ಧರ್ಮಕ್ಕೆ ಕರೆದುಕೊಂಡಿದ್ದು, ಸಖೂಬಾಯಿಯ ವಿವಾಹ, ಔವಳಿ ವಶ, ಚಂದ್ರಾರಾವ್ ಮಕ್ಕಳ ಕೊಲೆ, ಸಂಬಾಜಿಯ ಜನನ, ಸಾಯಿಬಾಯಿಯ ಮರಣ, ಅಫಜಲ್ಖಾನ್ ಹತ್ಯೆ, ಪುಣೆಗೆ ಶಾಯಿಸ್ತಾಖಾನ್, ಬಾಜಿಪ್ರಭು ದೇಶಪಾಂಡೆ ಸಾವು, ಶಹಾಜಿ- ಶಿವಾಜಿಯ ಭೇಟಿ, ಉಂಬರ್ ಖಿಂಡಿಯ ಕಾಳಗ, ಶಾಯಿಸ್ಥಾಖಾನನ ಮೇಲೆ ದಾಳಿ, ಸೂರತ್ ಲೂಟಿ, ಬಾಜಿ ಫೋರ್ಪಡೆ ಸಾವು, ಸಿಂಧೂ ದುರ್ಗದ ನಿರ್ಮಾಣ, ಪುರುಂದರ ಒಪ್ಪಂದ, ಶಿವಾಜಿಗೆ ಫರ್ಮಾನ್, ಶಹಾಜಾನನ ಸಾವು, ಶಿವಾಜಿ ಆಗ್ರಾಕ್ಕೆ ಹೋಗಿ ದರ್ಬಾರ್ ನಡೆಸಿದ್ದು, ಆಗ್ರಾದಿಂದ ಪಲಾಯನ, ರಾಯಗಢಕ್ಕೆ ವಾಪಸ್, ಮಿರ್ಜಾರಾಜಾ ಜೈಸಿಂಗ್ ಮರಣ, ಪ್ರತಾಪ್ ರಾವ್ ಗಜಾರ, ಕಾಶಿಬಾಯಿಯ ಸಾವು, ಶಿವಾಜಿಯ ಪಟ್ಟಾಭಿಷೇಕ, ಶಿವಾಜಿಯ ನಿಧನ- ಹೀಗೆ ಎಲ್ಲಾ ಘಟನೆಗಳನ್ನು ಎಳೆಎಳೆಯಾಗಿ ವಿವರಿಸಲಾಗಿದೆ. ಆ ಮೂಲಕ ಶಿವಾಜಿ ಒಬ್ಬ ಶ್ರೇಷ್ಠ ರಾಜನಾಗಿದ್ದ ಎಂಬುದಕ್ಕೆ ನಿದರ್ಶನಗಳು ದೊರೆಯುತ್ತವೆ. ನೆರೆಯ ಮಹಾರಾಷ್ಟ್ರದ ಬಹುಭಾಗವನ್ನು ಆಳಿದ ಶಿವಾಜಿಗೂ ಕರ್ನಾಟಕಕ್ಕೂ ಅವಿನಾಭಾವ ಸಂಬಂಧ ಇತ್ತು ಎಂಬುದನ್ನು ಉಲ್ಲೇಖಿಸಲಾಗಿದೆ.

ಇದು ಮರಾಠಿಯಲ್ಲಿ ನಂ.1 ಅತ್ಯುತ್ತಮ ಮಾರಾಟ ಕೃತಿಯಾಗಿದೆ. ಕಾದಂಬರಿಯಲ್ಲಿ ಬರುವ ಪಾತ್ರಗಳು, ಸ್ಥಳನಾಮಗಳು, ಪ್ರಮಖ ಘಟನೆಗಳನ್ನು ಆರಂಭದಲ್ಲಿಯೇ ನೀಡಲಾಗಿದೆ. ಶಿವಾಜಿಯವರ ಬಗ್ಗೆ ಸಮಗ್ರವಾಗಿ ತಿಳಿದುಕೊಳ್ಳಲು ಈ ಕೃತಿ ಸಹಕಾರಿಯಾಗಿದೆ. ಆಸಕ್ತರು ಸೃಷ್ಟಿ ನಾಗೇಶ್, ಮೊ.98450 96668 ಸಂಪರ್ಕಿಸಬಹುದು.