ಚಿಕ್ಕಬಾಣಾವರ ಪುರಸಭೆ ಕಚೇರಿಯ ಮೇಲ್ಛಾವಣಿ ಅಕ್ಷರಶಃ ಕುಸಿಯುತ್ತಿದೆ : ಗೋಡೆಗಳು ಬಿರುಕು

| Published : Nov 29 2024, 01:30 AM IST / Updated: Nov 29 2024, 06:52 AM IST

ಸಾರಾಂಶ

ಚಿಕ್ಕಬಾಣಾವರ ಪುರಸಭೆ ಕಚೇರಿಯ ಮೇಲ್ಛಾವಣಿ ಅಕ್ಷರಶಃ ಕುಸಿಯುತ್ತಿದೆ. ಗೋಡೆಗಳು ಕೂಡ ಬಿರುಕುಬಿಟ್ಟಿದ್ದು ಕೂಡಲೇ ಅಧಿಕಾರಿಗಳು ಎಚ್ಚೆತ್ತುಕೊಳ್ಳದಿದ್ದರೆ ನಿಜಕ್ಕೂ ಮಹತ್ವದ ದಾಖಲೆಗಳು ನಾಶವಾಗುವ ಆತಂಕವಿದೆ.

ಪ್ರಶಾಂತ್ ಕೆಂಗನಹಳ್ಳಿ

 ಪೀಣ್ಯ ದಾಸರಹಳ್ಳಿ : ಚಿಕ್ಕಬಾಣಾವರ ಪುರಸಭೆ ಕಚೇರಿಯ ಮೇಲ್ಛಾವಣಿ ಅಕ್ಷರಶಃ ಕುಸಿಯುತ್ತಿದೆ. ಗೋಡೆಗಳು ಕೂಡ ಬಿರುಕುಬಿಟ್ಟಿದ್ದು ಕೂಡಲೇ ಅಧಿಕಾರಿಗಳು ಎಚ್ಚೆತ್ತುಕೊಳ್ಳದಿದ್ದರೆ ನಿಜಕ್ಕೂ ಮಹತ್ವದ ದಾಖಲೆಗಳು ನಾಶವಾಗುವ ಆತಂಕವಿದೆ.

2008ರಲ್ಲಿ ಸುವರ್ಣ ಗ್ರಾಮೋದಯ ಯೋಜನೆ ಕಾಮಗಾರಿಯಲ್ಲಿ ಗ್ರಾಮ ಪಂಚಾಯ್ತಿಯ ಕಟ್ಟಡಕ್ಕೆ ಶಂಕುಸ್ಥಾಪನೆ ಮಾಡಲಾಯಿತು. ಚಿಕ್ಕಬಾಣಾವರ ಹಾಗೂ ಸೋಮಶೆಟ್ಟಿಹಳ್ಳಿ ಎರಡು ಪಂಚಾಯ್ತಿಯನ್ನು 2021ರಲ್ಲಿ ಚಿಕ್ಕಬಾಣಾವರ ಪುರಸಭೆಯಾಗಿ ಮೇಲ್ದರ್ಜೆಗೆ ಏರಿಸಲಾಯಿತು. ಗ್ರಾಮ ಪಂಚಾಯ್ತಿಯ ಕಟ್ಟಡದಲ್ಲೆ ಪುರಸಭೆಯವರು ಕೆಲಸ ಮಾಡುತ್ತಿದ್ದಾರೆ.

 ಕಟ್ಟಡ ಬಿರುಕಿಗೆ ಮಾನವ ಹಕ್ಕು ರಕ್ಷಣಾ ಸಮಿತಿ ಚಿಕ್ಕಬಾಣಾವರ ಪುರಸಭೆಗೆ ಪತ್ರ ಬರೆದಿದೆ. ಬೇರೆ ಕಟ್ಟಡಕ್ಕೆ ಅಥವಾ ಹೊಸ ಕಟ್ಟಡವನ್ನು ನಿರ್ಮಿಸಿ ಎಂದು ಆಗ್ರಹಿಸಿದ್ದಾರೆ.ಪುರಸಭೆಯ ಮುಂಬಾಗದಲ್ಲಿ ಕೆರೆಯ ಅಂಗಳವಿದ್ದು ಹಿಂಬಾಗದಲ್ಲಿ ದೊಡ್ಡಮಟ್ಟದ ರಾಜಕಾಲುವೆ ಇದೆ. ಪ್ರತಿನಿತ್ಯ ನೀರು ಹರಿಯುತ್ತಿರುವುದರಿಂದ ಪುರಸಭೆಯ ಗೊಡೆಗಳು ಬಿರುಕುಬಿಟ್ಟಿದೆ. ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಮಳೆ ಕಾರಣ ಗೋಡೆ ಬಿರುಕುಬಿಟ್ಟು ಅಧಿಕಾರಿಗಳು ಕೆಲಸ ಮಾಡದಂತಾಗಿದೆ.ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಪುರಸಭೆಯಲ್ಲಿ ಅಧಿಕಾರಿಗಳು, ಸಿಬ್ಬಂದಿ, ಸಾರ್ವಜನಿಕರು ಭಯದಿಂದಲೇ ಕಚೇರಿಗೆ ಆಗಮಿಸುತ್ತಿದ್ದಾರೆ. ಯಾವಾಗ ಬೇಕಾದರೂ ಛಾವಣಿ ಬೀಳುವ ಸಾಧ್ಯತೆ ಇರುವ ಕಾರಣ ಸಿಬ್ಬಂದಿ ತಲೆಗೆ ಹೆಲ್ಮೆಟ್‌ ಧರಿಸಿವುದು ಸೂಕ್ತವಾಗಿದೆ.

ಮಳೆ ನೀರಿನಿಂದ ಮೇಲ್ಛಾವಣಿ ಒದ್ದೆ:ಇತ್ತೀಚಿನ ದಿನಗಳಲ್ಲಿ ಮಳೆ ಪ್ರಮಾಣ ಹೆಚ್ಚಾದ ಕಾರಣ ಛಾವಣಿ ಮೇಲೆ ಕಳೆ, ಗಿಡಗಂಟಿ ಬೆಳೆದು ನಿಂತಿದೆ. ಹೀಗಾಗಿ ಕಚೇರಿಯ ಮೇಲ್ಛಾವಣಿ ಒದ್ದೆಯಾಗುತ್ತಿದೆ. ನೀರಿನಿಂದ ಕೊಠಡಿಯ ಒಳಗೆ ಕಾಂಕ್ರೀಟ್‌ ಕಳಚಿ ಬೀಳುತ್ತಿದೆ. ಕಳೆದ ಕೆಲ ದಿನಗಳ ಹಿಂದೆ ಕಚೇರಿ ಮೇಲ್ಛಾವಣಿ ಕಳಚಿ ಬಿದ್ದಿದ್ದು, ಯಾವುದೇ ದುರಂತವಾಗಿಲ್ಲ. ಮಹತ್ವದ ದಾಖಲೆಗಳು ಮಳೆ ನೀರಿನಿಂದ ಒದ್ದೆಯಾಗಿ ನಾಶವಾಗುವ ಆತಂಕ ಸಾರ್ವಜನಿಕರಲ್ಲಿ ಕಾಡುತ್ತಿದೆ. ಜೊತೆಗೆ ಚುನಾವಣಾ ಶಾಖೆಯಲ್ಲಿನ ದಾಖಲೆಗಳು ಸಹ ನಾಶವಾಗಬಹುದು ಎಂಬ ಆತಂಕ ಜನರಲ್ಲಿದೆ

.ಕಚೇರಿ ಮೇಲ್ಛಾವಣಿ ದುರಸ್ತಿಪಡಿಸಿ: ಪುರಸಭೆಯ ಅಧಿಕಾರಿಗಳು ಮುಂಜಾಗ್ರತೆ ವಹಿಸಿಕೊಂಡು ಸರ್ಕಾರಿ ಕಚೇರಿಯ ಮೇಲ್ಛಾವಣಿ ದುರಸ್ತಿಪಡಿಸಬೇಕು. ಮುಂದೆ ಆಗುವ ಅನಾಹುತವನ್ನು ತಪ್ಪಿಸಬೇಕು. ಇಲ್ಲದಿದ್ದರೆ ಅಧಿಕಾರಿಗಳೇ ಹೊಣೆ ಹೊರಬೇಕಾಗುತ್ತದೆ. ಜಾಗೃತರಾಗಿ ಮಹತ್ವದ ದಾಖಲೆಗಳನ್ನು ಉಳಿಸಿ, ಅಧಿಕಾರಿಗಳು, ಸಿಬ್ಬಂದಿ ನೆಮ್ಮದಿಯಿಂದ ತಮ್ಮ ಕರ್ತವ್ಯವನ್ನು ನಿರ್ವಹಿಸುವ ವಾತಾವರಣ ನಿರ್ಮಿಸಬೇಕಿದೆ.

ಪುರಸಭೆ ಆಗುವುದಕ್ಕಿಂತ ಮೊದಲು ಗ್ರಾಮ ಪಂಚಾಯ್ತಿಯಲ್ಲಿ ಇದ್ದು ಕೆಲಸ ಮಾಡುತ್ತಿದ್ದೇವೆ. ಪುರಸಭೆಯಾಗಿ ಮೇಲ್ದರ್ಜೆಗೇರಿಸಿದ ಮೇಲೆ ಅದೇ ಕಟ್ಟಡದಲ್ಲೆ ಕಾರ್ಯನಿರ್ವಹಿಸುತ್ತಿದ್ದೇವೆ. ಕಟ್ಟಡವು ಬಿರುಕುಬಿಟ್ಟಿದೆ ಅದನ್ನು ಸ್ಥಳೀಯ ಶಾಸಕರು ಮತ್ತು ಮೇಲಾಧಿಕಾರಿಗಳ ಗಮನಕ್ಕೆ ತರುತ್ತೇವೆ.

- ಎಚ್‌.ಎ.ಕುಮಾರ್‌, ಪುರಸಭೆ ಮುಖ್ಯಾಧಿಕಾರಿ