ಸಸ್ಯಕಾಶಿ ಲಾಲ್‌ಬಾಗ್‌ಗೆ ಬನ್ನಿ ರಾಮಾಯಣ ಕಣ್ತುಂಬಿಕೊಳ್ಳಿ : ಪುಷ್ಪ ಪ್ರದರ್ಶನ ಆರಂಭ

| Published : Jan 17 2025, 01:46 AM IST / Updated: Jan 17 2025, 05:03 AM IST

ಸಾರಾಂಶ

ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಆಯೋಜಿಸಿರುವ ‘ಆದಿಕವಿ ವಾಲ್ಮೀಕಿ ಮತ್ತು ರಾಮಾಯಣದ ಚರಿತ್ರೆ’ ವಿಷಯಾಧಾರಿತ 217ನೇ ಫಲಪುಷ್ಪ ಪ್ರದರ್ಶನಕ್ಕೆ ಮೊದಲ ದಿನವೇ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

 ಬೆಂಗಳೂರು : ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಆಯೋಜಿಸಿರುವ ‘ಆದಿಕವಿ ವಾಲ್ಮೀಕಿ ಮತ್ತು ರಾಮಾಯಣದ ಚರಿತ್ರೆ’ ವಿಷಯಾಧಾರಿತ 217ನೇ ಫಲಪುಷ್ಪ ಪ್ರದರ್ಶನಕ್ಕೆ ಮೊದಲ ದಿನವೇ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಗುರುವಾರ ಸಂಜೆಯೊಳಗೆ ಸುಮಾರು 10 ಸಾವಿರಕ್ಕೂ ಹೆಚ್ಚು ಜನರು ಪ್ರದರ್ಶನ ವೀಕ್ಷಿಸಿದ್ದಾರೆ. ಗಾಜಿನ ಮನೆಯ ಕೇಂದ್ರ ಭಾಗದಲ್ಲಿ ಡಚ್ ಗುಲಾಬಿ, ಪಿಂಚ್ಡ್ ಗುಲಾಬಿ ಹಾಗೂ ಹೈದರಾಬಾದ್ ಸೇವಂತಿಗೆ ಹೂವುಗಳನ್ನು ಬಳಸಿ ಬೃಹತ್ ಹುತ್ತದ ಮಾದರಿ ನಿರ್ಮಿಸಲಾಗಿದೆ. ಮಹರ್ಷಿ ವಾಲ್ಮೀಕಿ ಅವರು ತಪಸ್ಸು ಮಾಡುವ ಭಂಗಿಯ 10 ಅಡಿ ಎತ್ತರ, 38 ಅಡಿ ಸುತ್ತಳತೆಯ ಪ್ರತಿಕೃತಿಯನ್ನು ಆಕರ್ಷಣೆಯನ್ನು ಜನರು ಕಣ್ಮುಂಬಿಕೊಂಡಿದ್ದಾರೆ.

ರಾಮಾಯಣ ಮಹಾಕಾವ್ಯ ರಚನೆಯಲ್ಲಿ ನಿರತ ಆದಿಕವಿ, ಪಂಚವಟಿ ವನ, ರಾಮ-ಸೀತೆ-ಲಕ್ಷ್ಮಣರ ವನವಾಸ, ಲಕ್ಷಾಂತರ ಹೂಗಳ ಮಧ್ಯೆ ಕಂಗೊಳಿಸುವ ಬೃಹತ್ ವಲ್ಮೀಕದ (ಹುತ್ತ) ಮಾದರಿ, ಕಣ್ಮನ ಸೆಳೆಯುವ ಆಶ್ರಮ, ಹನುಮ, ಜಟಾಯು, ಜಾಂಬವಂತ, ಅಳಿಲಿನ ಕಲಾಕೃತಿಗಳು, ಕವಿಗಳ ಪುತ್ಥಳಿಗಳು, ಮಹರ್ಷಿ ವಾಲ್ಮೀಕಿ ಅವರ ಜೀವನ, ಸಾಧನೆ, ರಾಮಾಯಣದ ಚರಿತ್ರೆ ಲಕ್ಷಾಂತರ ಹೂವುಗಳಲ್ಲಿ ಅನಾವರಣಗೊಂಡಿವೆ.

ಬೃಹತ್ ಹುತ್ತದ ಕಲಾಕೃತಿಯ ಮುಂಭಾಗದಲ್ಲಿ ಆರು ಅಡಿ ಪೀಠದ ಮೇಲೆ ರಾಮಾಯಣ ಕಾವ್ಯ ರಚನೆ ನಿರತ ಭಂಗಿಯಲ್ಲಿ ಮಹರ್ಷಿ ವಾಲ್ಮೀಕಿ ಅವರ 10 ಅಡಿ ಎತ್ತರದ ಪ್ರತಿಮೆ ಕಂಗೊಳಿಸುತ್ತಿದೆ. ಇದರ ಎಡಭಾಗದಲ್ಲಿ ನೇಪಾಳದಲ್ಲಿರುವ ವಾಲ್ಮೀಕಿ ಆಶ್ರಮದ ಮಾದರಿಯನ್ನು ಸಂಪೂರ್ಣವಾಗಿ ಸಂಪೂರ್ಣವಾಗಿ ಹೂವುಗಳಿಂದ ಅಲಂಕರಿಸಲಾಗಿದೆ. ಅದರ ಸುತ್ತಲೂ ರಾಮಾಯಣದ ಪ್ರಮುಖ ಘಟ್ಟಗಳನ್ನು ಬಿತ್ತರಿಸಿದ್ದು, ಆಯ್ದ ಪಾತ್ರಧಾರಿಗಳು ಮತ್ತು ಸನ್ನಿವೇಶಗಳನ್ನು ಚಿತ್ರಗಳಲ್ಲಿ ಸಂಕ್ಷಿಪ್ತವಾಗಿ ವಿವರಿಸಲಾಗಿದೆ. ಹಿಂಬದಿಯಲ್ಲಿ ವಾಲ್ಮೀಕಿ ನಂತರ ಅನೇಕರು ರಾಮಾಯಣ ರಚಿಸಿರುವ ಮಾಹಿತಿಯನ್ನು ಪ್ರದರ್ಶಿಸಿದ್ದು ಆಸಕ್ತರ ಮೆಚ್ಚುಗೆಗೆ ಪಾತ್ರವಾಗಿದೆ.

ಪ್ರಮುಖ ಆಕರ್ಷಣೆ

ರಾಮಾಯಣದ ಘಟನಾವಳಿ ತಿಳಿಸುವ 60 ಫಲಕಗಳ ಜೋಡಣೆ, ರಾಮ, ಸೀತೆ, ಲಕ್ಷಣರು ವನವಾಸವಿದ್ದ ಪಂಚವಟಿ ವನದ 3ಡಿ ಕಲಾಕೃತಿ, ಕಟೀರ ವಿನ್ಯಾಸದ ವರ್ಟಿಕಲ್‌ ಗಾರ್ಡನ್‌ ಮಾದರಿ, ವಾಲ್ಮೀಕಿ ರಾಮಾಯಣದ ಕಲಾಕೃತಿ, ಪುಷ್ಪದ ಪಿರಮಿಡ್‌ಗಳು, ರಾಮನ ಎಲೆ ಮನೆ, ಪ್ರಾಣಿ, ಪಕ್ಷಿಗಳಿಂದ ತುಂಬಿರುವ ಅರಣ್ಯ ಕಲಾಕೃತಿ ಗಾಜಿನ ಮನೆಯ ಪ್ರಮುಖ ಆಕರ್ಷಣೆಯಾಗಿವೆ.

ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ

ಲಾಲ್‌ಬಾಗ್‌ನ ಗಾಜಿನ ಮನೆಯಲ್ಲಿ ‘ಮಹಾಭಾರತ ಮಹಾಕಾವ್ಯ ಬರೆದ ಮಹರ್ಷಿ ವಾಲ್ಮೀಕಿ ಹಾಗೂ ರಾಮಾಯಣ ಮಹಾಕಾವ್ಯದ ವಿಷಯಾಧಾರಿತ ಫಲಪುಷ್ಪ ಪ್ರದರ್ಶನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ಚಾಲನೆ ನೀಡಿದರು.

ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ವಸತಿ ಸಚಿವ ಜಮೀರ್ ಅಹ್ಮದ್ ಖಾನ್, ಶಾಸಕ ಉದಯ್ ಬಿ. ಗರುಡಾಚಾರ್, ತೋಟಗಾರಿಕೆ ಇಲಾಖೆ ಕಾರ್ಯದರ್ಶಿ ಡಾ। ಶಮ್ಲಾ ಇಕ್ಬಾಲ್‌, ನಿರ್ದೇಶಕ ಡಿ.ಎಸ್.ರಮೇಶ್, ಜಂಟಿ ನಿದೇರ್ಶಕ ಡಾ। ಎಂ.ಜಗದೀಶ್‌ ಉಪಸ್ಥಿತರಿದ್ದರು.