ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಗ್ರೇಟರ್ ಬೆಂಗಳೂರು ಪ್ರಾಧಿಕಾರದಡಿ ರಚನೆಯಾದ ಐದು ನಗರ ಪಾಲಿಕೆಗೆ ನೂತನವಾಗಿ ನೇಮಕಗೊಂಡ ಆಯುಕ್ತರು, ಶನಿವಾರ ಆಯಾ ವ್ಯಾಪ್ತಿಯಲ್ಲಿ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಧಿಕಾರಿಗಳಿಗೆ ಅಗತ್ಯ ಸಲಹೆ, ಸೂಚನೆ ನೀಡಿದರು.ಬೆಂಗಳೂರು ಉತ್ತರ ನಗರ ಪಾಲಿಕೆಯ ಆಯುಕ್ತ ಪೊಮ್ಮುಲ ಸುನೀಲ್ ಕುಮಾರ್, ಶುಕ್ರವಾರ ಬೆಳಗ್ಗೆ ಯಲಹಂಕ ಸ್ಯಾಟಲೈಟ್ ಹಾಗೂ ತಿಂಡ್ಲು ವಾರ್ಡ್‌ನ ಪೌರಕಾರ್ಮಿಕರು ಮತ್ತು ಆಟೋ ಟಿಪ್ಪರ್ ಮಸ್ಟರಿಂಗ್ ಕೇಂದ್ರಕ್ಕೆ ಭೇಟಿ ನೀಡಿ ಹಾಜರಾತಿ, ತ್ಯಾಜ್ಯ ವಿಲೇವಾರಿ ಪರಿಶೀಲಿಸಿದರು. ಸರಿಯಾದ ಸಮಯಕ್ಕೆ ಬರಬೇಕು. ರಸ್ತೆ ಬದಿ ಮಾತ್ರ ಗುಡಿಸುವುದಲ್ಲ, ಶೋಲ್ಡರ್ ಡ್ರೈನ್ ಹಾಗೂ ಪಾದಚಾರಿ ಮಾರ್ಗಗಳಲ್ಲೂ ಗುಡಿಸಿ ಸ್ವಚ್ಛಗೊಳಿಸಬೇಕು ಎಂದು ಸೂಚಿಸಿದರು.
ವಾಣಿಜ್ಯ ಮತ್ತು ಅಂಗಡಿ ಮಳಿಗೆಗಳ ಮುಂಭಾಗದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವುದಕ್ಕೆ ಸೂಚಿಸಿ, ಪಾಲಿಸದ ಅಂಗಡಿ ಮಾಲೀಕರಿಗೆ ದಂಡ ವಿಧಿಸಿ ಎಂದು ಅಧಿಕಾರಿಗಳಿಗೆ ನಿರ್ದೇಶಿಸಿದರು.ಬೆಂಗಳೂರು ದಕ್ಷಿಣ ನಗರ ಪಾಲಿಕೆ ಆಯುಕ್ತ ಕೆ.ಎನ್. ರಮೇಶ್ ಜಯನಗರ ವಾರ್ಡ್ ಮಸ್ಟರಿಂಗ್ ಕೇಂದ್ರ ಹಾಗೂ ಕಸ ಬಿಸಾಡುವ ಬ್ಲಾಕ್ ಸ್ಪಾಟ್ ಗಳ ಪರಿಶೀಲಿಸಿ ಸಾಮೂಹಿಕ ಸ್ವಚ್ಛತಾ ಕಾರ್ಯವನ್ನು ಪರಿಣಾಮಕಾರಿಯಾಗಿ ಮಾಡಬೇಕು. ಪಾದಚಾರಿ ಮಾರ್ಗಗಳಲ್ಲಿ ದುರಸ್ತಿಯಾಗಿರುವ ಸ್ಲ್ಯಾಬ್‌ಗಳನ್ನು ಕೂಡಲೇ ಸರಿಪಡಿಸಬೇಕು. ಜಯನಗರ ಶಾಪಿಂಗ್ ಕಾಂಪ್ಲೆಕ್ಸ್ ಬಳಿ ಸ್ವಚ್ಛತೆ ಕಾಪಾಡಲು ಸೂಚನೆ ನೀಡಿದರು. ಇದೇ ವೇಳೆ ಜಯನಗರ ಕಾಂಪ್ಲೆಕ್ಸ್ ಬಳಿ ನಿವಾಸಿಗಳ ಜೊತೆ ಸ್ಥಳೀಯ ಸಮಸ್ಯೆಗಳ ಕುರಿತು ಚರ್ಚಿಸಿ ಆದ್ಯತೆ ಮೇರೆಗೆ ಬಗೆಹರಿಸುವ ಭರವಸೆ ನೀಡಿದರು.
ಬೆಂಗಳೂರು ಪಶ್ಚಿಮ ನಗರ ಪಾಲಿಕೆಯ ಆಯುಕ್ತ ಡಾ.ಕೆ.ವಿ.ರಾಜೇಂದ್ರ, ಹಾವನೂರು ವೃತ್ತ, ಬಸವೇಶ್ವರ ನಗರ, ಸಿದ್ಧಯ್ಯ ಪುರಾಣಿಕ ರಸ್ತೆ, 8ನೇ ಬಿ ಮುಖ್ಯರಸ್ತೆ ವರೆಗೆ ಅಧಿಕಾರಿಗಳೊಂದಿಗೆ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.ನೇತಾಜಿ ಸುಭಾಷ್ ಚಂದ್ರ ಉದ್ಯಾನ ಪರಿಶೀಲಿಸಿ ಸ್ವಚ್ಛತೆ ಕಾಪಾಡುವ ಜತೆಗೆ ಸೊಳ್ಳೆಗಳ ನಿಯಂತ್ರಣಕ್ಕೆ ಫಾಗಿಂಗ್ ಮಾಡಬೇಕು. ಇಂದಿರಾ ಕ್ಯಾಂಟೀನ್ ಗೆ ಭೇಟಿ ನೀಡಿ ಗುಣಮಟ್ಟ ಆಹಾರ ಪೂರೈಕೆಗೆ ಸೂಚಿಸಿದರು.
ಬೆಂಗಳೂರು ಪೂರ್ವ ನಗರ ಪಾಲಿಕೆ ಆಯುಕ್ತ ಡಿ.ಎಸ್.ರಮೇಶ್, ಇಬ್ಬಲೂರು ಜಂಕ್ಷನ್, ವಿಪ್ರೋ, ಸನ್ನಿ ಬ್ರೂಕ್ಸ್ ಬಳಿ ರಾಜಕಾಲುವೆ ಸಮಸ್ಯೆ ಕುರಿತಂತೆ ಪರಿಶೀಲನೆ ನಡೆಸಿ ಜಲಾವೃತವಾಗದಂತೆ ಅಗತ್ಯ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಸೂಚಿಸಿದರು. ಇನ್ನು ದೊಡ್ಡಕನ್ನಹಳ್ಳಿ ರಸ್ತೆ ಅಗಲೀಕರಣವನ್ನು ತ್ವರಿತವಾಗಿ ಪೂರ್ಣಗೊಳಿಬೇಕು. ಸರ್ಜಾಪುರದಿಂದ ವರ್ತೂರು ರಾಜ್ಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ಸಿಡಿಪಿ ರಸ್ತೆಯನ್ನು 45 ಮೀಟರ್ ಗೆ ಅಗಲೀಕರಣ ಮಾಡಬೇಕಿದ್ದು, ಅದಕ್ಕೆ ಅರಣ್ಯ ಭೂಮಿಯ ಅವಶ್ಯಕತೆಯಿದೆ. ಭೂಮಿ ಹಸ್ತಾಂತರ ಮಾಡಿಕೊಳ್ಳುವ ಸಲುವಾಗಿ ಕೂಡಲೆ ಸಭೆ ಏರ್ಪಡಿಸಲು ತಿಳಿಸಿದರು.ಬೆಂಗಳೂರು ಕೇಂದ್ರ ನಗರ ಪಾಲಿಕೆ ಆಯುಕ್ತ ರಾಜೇಂದ್ರ ಚೋಳನ್, ಕಂದಾಯ, ಕಾಮಗಾರಿ, ಹಣಕಾಸು, ಆರೋಗ್ಯ ವಿದ್ಯುತ್ ಸೇರಿದಂತೆ ಎಲ್ಲಾ ವಿಷಯಗಳ ಕುರಿತು ಸಂಬಂಧಿಸಿದ ಎಂಜಿನಿಯರ್ ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ತೆರಿಗೆ ಸಂಗ್ರಹ, ಬ್ಲಾಕ್ ಸ್ಪಾಟ್ ಗಳನ್ನು ಶಾಶ್ವತವಾಗಿ ನಿರ್ಮೂಲನೆ ಮಾಡುವಂತೆ ನಿರ್ದೇಶಿಸಿದರು.=---ಫೋಟೋ---
ಬೆಂಗಳೂರು ದಕ್ಷಿಣ ನಗರ ಪಾಲಿಕೆ ಆಯುಕ್ತ ಕೆ.ಎನ್. ರಮೇಶ್ ಶನಿವಾರ ಪಾಲಿಕೆ ವ್ಯಾಪ್ತಿಯ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.