ಹೊಂದಾಣಿಕೆ ಸಮಸ್ಯೆ, ಮಾನಸಿಕ ಸ್ಥಿತಿಯೇ ವಿಚ್ಛೇದನಕ್ಕೆ ಕಾರಣ: ನಿವೃತ್ತ ನ್ಯಾಯಮೂರ್ತಿ ಪಾಟೀಲ್‌

| Published : Dec 07 2024, 01:32 AM IST / Updated: Dec 07 2024, 07:03 AM IST

ಸಾರಾಂಶ

ಇತ್ತೀಚಿನ ದಿನಗಳಲ್ಲಿ ವಿಚ್ಚೇದನ ಪ್ರಕರಣಗಳು ಹೆಚ್ಚಾಗುತ್ತಿರುವುದಕ್ಕೆ ಕಾರಣ ಮಹಿಳೆಯರ ಆರ್ಥಿಕ ಸ್ವಾವಲಂಬನೆಯಲ್ಲ. ಅವರ ಮಾನಸಿಕ ಸ್ಥಿತಿ ಹಾಗೂ ಹೊಂದಾಣಿಕೆ ಸಮಸ್ಯೆ ಎಂದು ನ್ಯಾಯಮೂರ್ತಿ ಶಿವರಾಜ್‌ ಪಾಟೀಲ್‌ ಹೇಳಿದರು.

 ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ವಿಚ್ಚೇದನ ಪ್ರಕರಣಗಳು ಹೆಚ್ಚಾಗುತ್ತಿರುವುದಕ್ಕೆ ಕಾರಣ ಮಹಿಳೆಯರ ಆರ್ಥಿಕ ಸ್ವಾವಲಂಬನೆಯಲ್ಲ. ಅವರ ಮಾನಸಿಕ ಸ್ಥಿತಿ ಹಾಗೂ ಹೊಂದಾಣಿಕೆ ಸಮಸ್ಯೆ ಎಂದು ನ್ಯಾಯಮೂರ್ತಿ ಶಿವರಾಜ್‌ ಪಾಟೀಲ್‌ ಹೇಳಿದರು.

ಕರ್ನಾಟಕ ಪ್ರತಿಭಾವರ್ಧಕ ಅಕಾಡೆಮಿ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಶುಕ್ರವಾರ ಆಯೋಜಿಸಿದ್ದ ಕರ್ನಾಟಕ ಸುವರ್ಣ ಸಂಭ್ರಮ ಸಮಾರಂಭದಲ್ಲಿ ಆರ್ದಶ ದಂಪತಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ಮಹಿಳೆಯರಿಗೆ ಆರ್ಥಿಕ ಸ್ವಾವಲಂಬನೆ ದೊರೆತ ನಂತರ ವಿಚ್ಚೇದನ ಪ್ರಕರಣಗಳು ಹೆಚ್ಚಾಗುತ್ತಿವೆ ಎನ್ನಲಾಗುತ್ತಿದೆ. ಆದರೆ, ವಿಚ್ಚೇದನ ಹೆಚ್ಚಾಗುತ್ತಿರುವುದು ಆರ್ಥಿಕ ಸ್ವಾವಲಂಬನೆಯಿಂದಲ್ಲ. ಹೊಂದಾಣಿಕೆ ಮತ್ತು ಮಾನಸಿಕ ಸಮಸ್ಯೆಯಿಂದ. ಪರಸ್ಪರ ಹೊಂದಾಣಿಕೆ ಮಾಡಿಕೊಂಡು ಎಲ್ಲವೂ ಸರಿಯಾಗಲಿದೆ ಎಂದರು.

ಪರಸ್ಪರ ಪ್ರೀತಿ, ವಿಶ್ವಾಸ, ಗೌರವ, ತಿಳವಳಿಕೆ ಹಾಗೂ ಸಹನೆ ದಾಂಪತ್ಯ ಜೀವನ ಯಶಸ್ವಿಯಾಗುವುದಕ್ಕೆ ಸಾಧ್ಯ. ದಾಂಪತ್ಯ ಜೀವನವು ಮಕ್ಕಳ ಭವಿಷ್ಯಕ್ಕೆ, ಸಾಮಾಜಿಕ ನೆಮ್ಮದಿ ಹಾಗೂ ದೇಶದ ಪ್ರಗತಿಗೆ ಅವಶ್ಯಕವಾಗಿದೆ ಎಂದು ಹೇಳಿದರು.

87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಗೋ.ರು.ಚನ್ನಬಸಪ್ಪ ಮಾತನಾಡಿ, ಮದುವೆಗೆ ಮುನ್ನವೇ, ಮದುವೆಯ ದಿನವೇ, ಮದುವೆಯಾದ ತಿಂಗಳ ಒಳಗೇ, ಮಕ್ಕಳಾಗುವ ಮುನ್ನವೇ, ಮಕ್ಕಳಾದ ಮೇಲೆಯೂ ವಿಚ್ಚೇದನ ಪಡೆಯುವುದು ಪದ್ಧತಿಯಾಗಿರುವ ಈ ಕಾಲದಲ್ಲಿ 60 ವರ್ಷ ಸುದೀರ್ಘ ದಾಂಪತ್ಯ ನಡೆಸಿರುವ ನ್ಯಾಯಮೂರ್ತಿ ಶಿವರಾಜ್‌ ಪಾಟೀಲ್‌ ದಂಪತಿ ಗೌರವಿಸುವುದು ಮಹತ್ವದಾಗಿದೆ ಎಂದರು.

ಕುಟುಂಬದ ಆಶಯ ನೆಮ್ಮದಿಯಾಗಿದೆ. ಆದರೆ, ಎಲ್ಲಾ ಕುಟುಂಬಗಳು ನೆಮ್ಮದಿಯಿಂದ ಇವೆ ಎಂದು ಹೇಳುವುದಕ್ಕೆ ಸಾಧ್ಯವಿಲ್ಲ. ಸಂಸಾರದಲ್ಲಿ ಗಂಡ - ಹೆಂಡತಿ ಎಣ್ಣೆ ಬತ್ತಿಯಂತೆ ಇದ್ದರೆ ಜೀವನ ನಂದಾದೀಪವಾಗಲಿದೆ ಎಂದು ಅಭಿಪ್ರಾಯಪಟ್ಟರು.

ನಿಡುಮಾಮಿಡಿ ವೀರಭದ್ರ ಚೆನ್ನಮಲ್ಲ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಸುದೀರ್ಘಕಾಲ ಎರಡು ಜೀವನಗಳ ಒಟ್ಟಿಗೆ ಬದುಕುವುದು ವಿಶೇಷವಾಗಿದೆ. ಪ್ರಾಚೀನ ಕಾಲದಲ್ಲಿ ಭಾರತೀಯ ಸಾಮಾಜಿಕ- ಸಾಂಸ್ಕೃತಿಕ ಬದುಕಿನ ಆರ್ದಶ ದಾಂಪತ್ಯಕ್ಕೆ ಶಿವ ಪಾರ್ವತಿಯನ್ನು ಉದಾಹರಣೆ ನೀಡಲಾಗುತ್ತದೆ. ಅದಕ್ಕಿಂತ ಹಿಂದೆ ಸಾಂಸಾರಿಕ ಮೌಲ್ಯಗಳು ಖಚಿತವಾಗಿರಲಿಲ್ಲ. ಸಂಬಂಧಗಳಲ್ಲಿ ಸ್ಪಷ್ಟತೆ ಇರಲಿಲ್ಲ. ದಾಂಪತ್ಯದ ಮೌಲ್ಯಗಳು ರೂಪಗೊಂಡಿದ್ದು, ಶಿವನ ಕಾಲಘಟ್ಟದಲ್ಲಿ. ಕೊನೆಯವರೆಗೆ ಒಟ್ಟಿಗೆ ಬದುಕುವುದೇ ದಾಂಪತ್ಯವೇ ಶ್ರೇಷ್ಠವಾಗಿದ್ದು. ಅಂತಹ ಶ್ರೇಷ್ಠವಾದ ದಾಂಪತ್ಯವನ್ನು ನ್ಯಾಯಮೂರ್ತಿ ಶಿವರಾಜ್‌ ಪಾಟೀಲ್‌ ಮಾಡಿದ್ದಾರೆ ಎಂದು ಅಭಿನಂದಿಸಿದರು.

ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ, ಪ್ರಾಮಾಣಿಕತೆ ಹಾಗೂ ಪಾರದರ್ಶಕತೆಯ ಬಗ್ಗೆ ಸಾಕಷ್ಟು ಮಾತನಾಡುತ್ತೇವೆ. ಅದಕ್ಕೆ ನಿಜವಾದ ಧಿಕ್ಕು ನೀಡಿದವರು ನ್ಯಾಯಮೂರ್ತಿ ಶಿವರಾಜ್‌ ಪಾಟೀಲ್‌ ಎಂದರು.

ಬೇಲಿಮಠದ ಶಿವಾನುಭವ ಚರಮೂರ್ತಿ ಶಿವರುದ್ರ ಸ್ವಾಮೀಜಿ ಮಾತನಾಡಿದರು. ಶರಣ ಸಾಹಿತ್ಯ ಸಾಧನೆಗೆ ಡಾ। ಸಿ.ಸೋಮಶೇಖರ್‌, ಶಾಸ್ತ್ರೀಯ ಸಂಗೀತಕ್ಕೆ ವಿದ್ವಾನ್‌ ಡಾ। ಆರ್‌.ಕೆ.ಪದ್ಮನಾಭ, ಕಲಾವಿದರಾದ ವಿದುಷಿ ಶುಭಧನಂಜಯ, ಅಪ್ಪುಗೆರೆ ತಿಮ್ಮರಾಜು ಸೇರಿದಂತೆ ಮೊದಲಾದವರಿಗೆ ನಾಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ನ್ಯಾಯಮೂರ್ತಿ ಎಸ್‌.ಆರ್‌.ಬನ್ನೂರುಮಠ. ಅಕಾಡೆಮಿ ಅಧ್ಯಕ್ಷ ಮು.ಗೋವಿಂದರಾಜು ಉಪಸ್ಥಿತರಿದ್ದರು.