ಸಾರಾಂಶ
70ನೇ ಅಖಿಲ ಭಾರತ ಸಹಕಾರ ಸಪ್ತಾಹ ಸಮಾರಂಭದಲ್ಲಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಅಭಿಮತಕನ್ನಡಪ್ರಭ ವಾರ್ತೆ ರಾಯಚೂರು
ಸಮಾಜದಲ್ಲಿ ಸಾಕಷ್ಟು ಬದಲಾವಣೆ ತರುವ ಶಕ್ತಿ ಸಹಕಾರಿ ಕ್ಷೇತ್ರಕ್ಕೆ ಇದೆ ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಶರಣಪ್ರಕಾಶ ಪಾಟೀಲ್ ಅಭಿಪ್ರಾಯ ವ್ಯಕ್ತಪಡಿಸಿದರು.ಸ್ಥಳೀಯ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಪ್ರೇಕ್ಷಾಗೃಹದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಂಡಳ, ಕರ್ನಾಟಕ ರಾಜ್ಯ ಸಹಕಾರ ಎಣ್ಣೆ ಬೀಜ ಬೆಳಗಾರರ ಮಹಾಮಂಡಳ, ಜಿಲ್ಲಾ ಸಹಕಾರ ಒಕ್ಕೂಟ, ಕರ್ನಾಟಕ ರಾಜ್ಯ ಪಟ್ಟಣ ಸಹಕಾರ ಬ್ಯಾಂಕುಗಳ ಮಹಾಮಂಡಳ, ರಾಜ್ಯ ಸಹಕಾರ ಗ್ರಾಹಕರ ಮಹಾಮಂಡಳ, ರಾಜ್ಯ ಸಹಕಾರ ಕುರಿ, ಮೇಕೆ ಸಾಕಾಣಿಕೆದಾರರ ಮಹಾಮಂಡಳ, ರಾಯಚೂರು ಕೊಪ್ಪಳ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್, ರಾಯಚೂರು ಬಳ್ಳಾರಿ, ವಿಜಯನಗರ ಜಿಲ್ಲಾ ಸಹಕಾರ ಹಾಲು ಒಕ್ಕೂಟ, ಜಿಲ್ಲಾ ಪಟ್ಟಣ ಸಹಕಾರ ಬ್ಯಾಂಕುಗಳ ಮತ್ತು ಪತ್ತಿನ ಸಹಕಾರ ಸಂಘಗಳು, ಜಿಲ್ಲಾ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘ, ಜಿಲ್ಲಾ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ಗಳು ಹಾಗೂ ಜಿಲ್ಲಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ವತಿಯಿಂದ ಹಮ್ಮಿಕೊಂಡಿದ್ದ 70ನೇ ಅಖಿಲ ಭಾರತ ಸಹಕಾರ ಸಪ್ತಾಹ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಕರ್ನಾಟಕದಲ್ಲಿಯೇ ಆರಂಭಗೊಂಡು ಬೇರೆ ರಾಜ್ಯ ಹಾಗೂ ದೇಶಗಳಲ್ಲಿ ವ್ಯಾಪಿಸಿರುವ ಸಹಕಾರಿ ವಲಯದ ಚಳವಳಿ ಅತ್ಯಂತ ಮಹತ್ವದ್ದಾಗಿದೆ. ಸಹಕಾರಿ ಕ್ಷೇತ್ರವು ಮೂರು ಮುಖ್ಯವಾದ ಅಂಶಗಳ ಮೇಲೆ ಅಭಿವೃದ್ಧಿಯನ್ನು ಸಾಧಿಸಲಿದ್ದು, ಪ್ರಾಮಾಣಿಕತೆ, ನಿಸ್ವಾರ್ಥತೆ ಹಾಗೂ ಸಮಾಜದ ಬಗ್ಗೆ ಕಳಕಳಿಯನ್ನು ಅಂಶಗಳಡಿಯೇ ಸಹಕಾರಿ ಕ್ಷೇತ್ರದ ಏಳ್ಗೆಯು ನಿಂತಿದೆ. ಸಹಕಾರ ಕ್ಷೇತ್ರ ಬಹಳ ದೊಡ್ಡ ವ್ಯಾಪ್ತಿಯನ್ನು ಹೊಂದಿದ್ದು, ಎಲ್ಲಾ ಚಟುವಟಿಕೆಗಳಲ್ಲಿ ಸಹಕಾರಿ ಕ್ಷೇತ್ರಗಳನ್ನು ಸ್ಥಾಪಿಸುವ ಮೂಲಕ ಎಲ್ಲಾ ಚಟುವಟಿಕೆಗಲ್ಲಿ ಪ್ರತಿಯೊಬ್ಬರು ತಮ್ಮನ್ನು ತಾವು ತೊಡಗಿಸಲು ಸಾಧ್ಯವಾಗುತ್ತದೆ ಎಂದರು.ಸಹಕಾರಿ ಕ್ಷೇತ್ರದಲ್ಲಿ ಸಮಾನತೆಯಿದ್ದು, ಎಲ್ಲರೂ ಸೇರಿ ಸಮಾನರಾಗಿ ತಮ್ಮನ್ನು ತಾವು ವಿಶ್ವಾಸದಿಂದ ಕಟ್ಟುವ ಸಂಘಗಳು ಸಹಕಾರ ಸಂಘಗಳಾಗಿವೆ. ಯಾವುದೇ ಸಹಕಾರಿ ಕ್ಷೇತ್ರಗಳು ಬೆಳೆಯಲು ಪ್ರಮಾಣಿಕತೆ, ನಿಸ್ವಾರ್ಥತೆ ಮತ್ತು ಸಮಾಜದ ಬಗ್ಗೆ ಕಳಕಳಿಯನ್ನು ಹೊಂದಿದಾಗ ಮಾತ್ರ ಸಹಕಾರ ಸಂಘ ಬೆಳೆಯಲು ಸಾಧ್ಯ ಎಂದು ತಿಳಿಸಿದರು.
ಅನೇಕ ಸಹಕಾರಿ ಸಂಘಗಳು ಸ್ವಾರ್ಥತೆಯಿಂದ ನಶಿಸಿಹೋಗಿವೆ. ನಿಸ್ವಾರ್ಥತೆಯಿಂದ ಇರುವ ಸಹಕಾರಿ ಸಂಘ ನಶಿಸುವುದಿಲ್ಲ. ಯುವಕರಿಗೆ ಉತ್ತಮ ವೇದಿಕೆಯಾಗಿದ್ದು, ಪ್ರಬಲ ಅಸ್ತ್ರವಾಗಿದೆ. ಆರ್ಥಿಕತೆ ಜೊತೆಗೆ ಹೊಸ ಹೊಸ ಪ್ರಯತ್ನಗಳನ್ನು ಬಳಸಿಕೊಳ್ಳಲು ಸಹಕಾರಿ ಸಂಘಗಳು ಮುಂದಾಗಬೇಕು ಎಂದರು.ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್.ಎಸ್. ಬೋಸರಾಜು ಮಾತನಾಡಿ, ರಾಜ್ಯದಲ್ಲಿರುವ ಸಹಕಾರ ಸಂಘಗಳು ಕೆಲವೇ ವರ್ಷಗಳಲ್ಲಿ ಹೆಚ್ಚಿನ ಸದಸ್ಯರನ್ನು ಹೊಂದುವ ಮೂಲಕ ಉತ್ತಮವಾದ ಸಾಧನೆಯನ್ನು ತೋರಿವೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಹಕಾರಿ ಕ್ಷೇತ್ರದಲ್ಲಿ ಸದಸ್ಯತ್ವ ನೋಂದಣಿಗೆ ಮುಂದಾಗಬೇಕು, ಹೆಚ್ಚಿನ ರೀತಿಯಲ್ಲಿ ವಿವಿಧ ವಿಭಾಗಗಳಲ್ಲಿ ಸಹಕಾರಿ ಕ್ಷೇತ್ರಗಳಿಗೆ ಸದಸ್ಯತ್ವ ಪಡೆದುಕೊಳ್ಳಬೇಕಾಗುತ್ತದೆ. ಅಂದಾಗ ಮಾತ್ರ ಸಹಕಾರಿ ಕ್ಷೇತ್ರಗಳಿಂದ ಜನರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ಇದೇ ವೇಳೆ ಸಹಕಾರಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿವಿಧ ಸಹಕಾರಿ ಸಂಘಗಳು, ಮಹಾ ಮಂಡಲಗಳು ಹಾಗೂ ನಿಯಮಿತಗಳ ಸದಸ್ಯರಿಗೆ, ಸಹಕಾರಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.ಈ ಸಂದರ್ಭದಲ್ಲಿ ಗ್ರಾಮೀಣ ಶಾಸಕ ಬಸನಗೌಡ ದದ್ದಲ್, ಸಿಂಧನೂರು ಶಾಸಕ ಹಂಪನಗೌಡ ಬಾದರ್ಲಿ, ಮಾನ್ವಿ ಶಾಸಕ ಜಿ.ಹಂಪಯ್ಯ ನಾಯಕ, ದೇವದುರ್ಗ ಶಾಸಕಿ ಕರೆಮ್ಮ ಜಿ.ನಾಯಕ, ಎಂಎಲ್ಸಿ ಶರಣಗೌಡ ಬಯ್ಯಾಪೂರ, ಕೆಒಎಫ್ ಅಧ್ಯಕ್ಷ ವೆಂಕಟರಾವ್ ನಾಡಗೌಡ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಗೌಡ, ಉಪಾಧ್ಯಕ್ಷ ಬಸೀರ ಆಹ್ಮದ್, ಡಿಸಿ ಚಂದ್ರಶೇಖರ ನಾಯಕ, ಸಿಇಒ ರಾಹುಲ್ ತುಕಾರಾಂ ಪಾಂಡ್ವೆ,ಕರ್ನಾಟಕ ರಾಜ್ಯ ಸಹಕಾರ ಮಹಿಳಾ ಮಹಾಮಂಡಳದ ಅಧ್ಯಕ್ಷೆ ಶಕುಂತಲಾ ಬೆಲ್ದಾಳೆ, ಕೆಒಎಫ್ ಉಪಾಧ್ಯಕ್ಷ ಮಹಾಂತೇಶ ಪಾಟೀಲ್ ಅತ್ತನೂರು, ರಾಯಚೂರು ಕೊಪ್ಪಳ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಯಮಿತದ ಅಧ್ಯಕ್ಷ ವಿಶ್ವನಾಥ ಪಾಟೀಲ್ ತೋರಣದಿನ್ನಿ, ಕರ್ನಾಟಕ ರಾಜ್ಯ ಸಹಕಾರಿ ಮಹಾಮಂಡಳ ನಿಯಮಿತದ ನಿರ್ದೇಶಕ ಶೇಖರಗೌಡ ಮಾಲಿಪಾಟೀಲ್, ಬಿ.ಟಿ. ಬೇವಿನಕಟ್ಟಿ, ಮಲ್ಲೇಶಗೌಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
- - -15ಕೆಪಿಆರ್‌ಸಿಆರ್01:
ರಾಯಚೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ 70ನೇ ಅಖಿಲ ಭಾರತ ಸಹಕಾರ ಸಪ್ತಾಹ ಸಮಾರಂಭವನ್ನು ಸಚಿವರಾದ ಡಾ.ಶರಣಪ್ರಕಾಶ ಪಾಟೀಲ್ ಹಾಗೂ ಎನ್.ಎಸ್. ಬೋಸರಾಜು ಜಂಟಿಯಾಗಿ ಉದ್ಘಾಟಿಸಿದರು.