ಕೇಂದ್ರ ಮತ್ತು ರಾಜ್ಯಸರ್ಕಾರಗಳ ಆಡಳಿತ ವೈಫಲ್ಯ ಮತ್ತು ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆ ಖಂಡಿಸಿ ರಾಜ್ಯ ರೈತಸಂಘ (ಮೂಲ ಸಂಘಟನೆ) ಕಾರ್ಯಕರ್ತರು ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ಕನ್ನಡಪ್ರಭ ವಾರ್ತೆ ಮಂಡ್ಯ
ಕೇಂದ್ರ ಮತ್ತು ರಾಜ್ಯಸರ್ಕಾರಗಳ ಆಡಳಿತ ವೈಫಲ್ಯ ಮತ್ತು ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆ ಖಂಡಿಸಿ ರಾಜ್ಯ ರೈತಸಂಘ (ಮೂಲ ಸಂಘಟನೆ) ಕಾರ್ಯಕರ್ತರು ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.ಇಲ್ಲಿನ ವಿಶ್ವೇಶ್ವರಯ್ಯ ಪ್ರತಿಮೆಯಿಂದ ಮೆರವಣಿಗೆಯಲ್ಲಿ ತೆರಳಿದ ರೈತಸಂಘದ ಕಾರ್ಯಕರ್ತರು ರೈತರ ಎಲ್ಲಾ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿ ಕಾಯ್ದೆ ಬದ್ಧವಾಗಿಲ್ಲ, ಕಬ್ಬಿನ ಎಫ್‌ಆರ್‌ಪಿ ಅವೈಜ್ಞಾನಿಕ ನಿಗದಿ, ರಾಷ್ಟ್ರೀಕೃತ, ಸಹಕಾರಿ ಬ್ಯಾಂಕ್‌ಗಳಿಂದ ಸುಲಭ ಸಾಲ ಸೌಲಭ್ಯವಿಲ್ಲದಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.ಪ್ರತಿಭಟನೆ ನೇತೃತ್ವ ವಹಿಸಿದ್ದ ಅಧ್ಯಕ್ಷ ಇಂಡುವಾಳು ಚಂದ್ರಶೇಖರ್ ಕಬ್ಬಿನ ಎಫ್‌ಆರ್‌ಪಿ 4500 ರು. ನಿಗದಿ ಆಗಬೇಕು. ರಾಜ್ಯಸರ್ಕಾರ ಟನ್ ಒಂದಕ್ಕೆ 500 ರು. ಪ್ರೋತ್ಸಾಹಧನ ಕೊಡಬೇಕು. ಸಾಗಾಣಿಕೆ-ಕಟಾವು ವೆಚ್ಚವನ್ನು ಕಾರ್ಖಾನೆ ಅವರೇ ಭರಿಸಬೇಕು. ಕಬ್ಬಿನ ಹಣ 100 ರು.ಗಳನ್ನು ಸರ್ಕಾರ ಮತ್ತು ಕಾರ್ಖಾನೆ ಮಾಲೀಕರು ಬಿಡುಗಡೆ ಮಾಡುವಂತೆ ಆಗ್ರಹಪಡಿಸಿದರು.ರಾಜ್ಯದಲ್ಲಿ ಒಂದನೇ ತರಗತಿಯಿಂದ ಪಿಯುಸಿಯವರೆಗೆ ದ್ವಿಭಾಷಾ ನೀತಿಯಲ್ಲಿ ಏಕರೂಪ ಶಿಕ್ಷಣ ಜಾರಿಯಾಗಬೇಕು. ಸರ್ಕಾರಿ ಶಾಲೆಗಳನ್ನು ಉಳಿಸಬೇಕು. ಜಿಲ್ಲೆಯ ಎಲ್ಲಾ ತಾಲೂಕು ಕಚೇರಿಗಳಲ್ಲಿ ಸಾರ್ವಜನಿಕ ಕೆಲಸ-ಕಾರ್ಯಗಳು, ಸರ್ವೆ ಕಾರ್ಯಗಳ ವಿಳಂಬ ತಪ್ಪಿಸಿ ದಾಖಲೆಗಳು ಸಕಾಲದಲ್ಲಿ ದೊರೆಯುವಂತೆ ಆಗ್ರಹಿಸಿದರು.ಬಗರ್‌ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ, ಪಹಣಿ, ದುರಸ್ತಿಗೊಳಿಸಬೇಕು. ರೈತರ ಜಮೀನುಗಳ ಬೀಳು ರದ್ದಾಗಬೇಕು. ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಬೆಳೆ ಸಾಲ ಪಡೆಯುವ ನಿಬಂಧನೆಗಳು ಸಡಿಲಗೊಳ್ಳಬೇಕು. ಒಂದು ಎಕರೆಗೆ 5ಲಕ್ಷ ಸಾಲ ಸಿಗಬೇಕು ಮತ್ತು ಸಿಬಿಲ್ ಮಾನದಂಡ ರೈತರಿಗೆ ಹೊರತುಪಡಿಸಬೇಕು ಎಂದು ಒತ್ತಾಯಿಸಿದರು.ಕೆಆರ್‌ಎಸ್‌ನಲ್ಲಿ ಸಾಕಷ್ಟು ನೀರು ಲಭ್ಯವಿರುವುದರಿಂದ ಮೇ, ಜೂನ್ ತಿಂಗಳವರೆಗೆ ನಾಲೆಗಳಲ್ಲಿ ನೀರು ಹರಿಸಿ ಬೆಳೆಗಳನ್ನು ರಕ್ಷಣೆ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದರು.ಪ್ರತಿಭಟನೆಯಲ್ಲಿ ಮಂಜೇಶ್‌ಗೌಡ, ಸೊ.ಸಿ.ಪ್ರಕಾಶ್, ನಾಗೇಂದ್ರಸ್ವಾಮಿ, ರಾಮಲಿಂಗೇಗೌಡ, ಶಿವಳ್ಳಿ ಚಂದ್ರಶೇಖರ್, ದೊಡ್ಡಪಾಳ್ಯ ಚಂದ್ರಶೇಖರ್, ಮರಿಚನ್ನೇಗೌಡ, ಅಣ್ಣೂರು ಮಹೇಂದ್ರ, ಕೀಳಘಟ್ಟ ನಂಜುಂಡಯ್ಯ, ಮಹೇಶ ದೇವಿಪುರ, ಶಿವಲಿಂಗಯ್ಯ, ಬೋರಲಿಂಗಯ್ಯ, ಹಲ್ಲೇಗೆರೆ ಶಿವರಾಮು ಇತರರಿದ್ದರು.