ಬಹುಅಂಗವೈಕಲ್ಯದ ಮಕ್ಕಳಿಗೆ ದೈನಂದಿನ ತರಬೇತಿ, ವಿಶೇಷ ಶಿಕ್ಷಣದ ಅಗತ್ಯವಿದ್ದು ಇದಕ್ಕಾಗಿ ವಿಶೇಷ ಶಿಕ್ಷಕರ ನೇಮಕ ಹಾಗೂ ಅನುದಾನಕ್ಕೆ ಸಂಘಸಂಸ್ಥೆಗಳು ಪ್ರಸ್ತಾವನೆ ಸಲ್ಲಿಸಿದ್ದಲ್ಲಿ ಸರ್ಕಾರಕ್ಕೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗುವುದು ಎಂದು ರಾಜ್ಯಅಂಗವಿಕಲರ ಹಕ್ಕುಗಳ ಆಯುಕ್ತ ದಾಸ್ ಸೂರ್ಯವಂಶಿ ಹೇಳಿದರು.
ಕನ್ನಡಪ್ರಭ ವಾರ್ತೆ ಬೆಂಗಳೂರು
ಬಹುಅಂಗವೈಕಲ್ಯದ ಮಕ್ಕಳಿಗೆ ದೈನಂದಿನ ತರಬೇತಿ, ವಿಶೇಷ ಶಿಕ್ಷಣದ ಅಗತ್ಯವಿದ್ದು ಇದಕ್ಕಾಗಿ ವಿಶೇಷ ಶಿಕ್ಷಕರ ನೇಮಕ ಹಾಗೂ ಅನುದಾನಕ್ಕೆ ಸಂಘಸಂಸ್ಥೆಗಳು ಪ್ರಸ್ತಾವನೆ ಸಲ್ಲಿಸಿದ್ದಲ್ಲಿ ಸರ್ಕಾರಕ್ಕೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗುವುದು ಎಂದು ರಾಜ್ಯಅಂಗವಿಕಲರ ಹಕ್ಕುಗಳ ಆಯುಕ್ತ ದಾಸ್ ಸೂರ್ಯವಂಶಿ ಹೇಳಿದರು.ನಗರದಲ್ಲಿ ಸೆನ್ಸ್ ಇಂಟರ್ ನ್ಯಾಷನಲ್ ಇಂಡಿಯಾ ಹಾಗೂ ಸ್ಪರ್ಶ್ ಸೆಂಟರ್ ಸಹಯೋಗದಲ್ಲಿ ಗುರುವಾರ ನಡೆದ ಬಹುಅಂಗಾಂಗ ವೈಕಲ್ಯ ಹೊಂದಿದ ವಿಕಲಚೇತನರ ಮಕ್ಕಳ ಪಾಲಕರೊಂದಿಗಿನ ರಾಜ್ಯಮಟ್ಟದ ಸಭೆಯಲ್ಲಿ ಅವರು ಮಾತನಾಡಿದರು.
ಅಂಗವಿಕಲರು, ವಿಶೇಷ ಚೇತನರು ಸಮಾಜದಲ್ಲಿ ನಿರ್ಲಕ್ಷ್ಯ ಮತ್ತು ತಾರತಮ್ಯ ಎದುರಿಸುತ್ತಿದ್ದಾರೆ. ಅದರಲ್ಲೂ ಬಹುಅಂಗಾಗ ವೈಕಲ್ಯವುಳ್ಳವರು ಸಂವಹನ ಸಮಸ್ಯೆಯ ದೊಡ್ಡ ಸವಾಲು ಎದುರಿಸುತ್ತಿದ್ದಾರೆ. ಇಂತಹ ಮಕ್ಕಳು ಎಲ್ಲರೊಂದಿಗೆ ಬೆರೆತು ಸಂವಹನ ಸಾಧಿಸಲು ವಿಶೇಷ ಶಿಕ್ಷಣದ ಅಗತ್ಯವಿದೆ ಎಂದರು.ಸೆನ್ಸ್ ಇಂಟರ್‌ನ್ಯಾಷನಲ್ ಇಂಡಿಯಾ ಸಂಸ್ಥೆ ಸದಸ್ಯೆ ಕೀರ್ತಿ ಮಾತನಾಡಿ, ಕಣ್ಣು, ಕಿವಿ, ಬಾಯಿಯ ಅಂಗವಿಕಲತೆ ಸಮಸ್ಯೆ ಎದುರಿಸುವ ಮಕ್ಕಳಿಗೆ ಒಂದೇ ಕಡೆ ಶಿಕ್ಷಣ ದೊರೆಯುವಂತೆ ಮಾಡಿ ಸಮಾಜದ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಬಹುಅಂಗಾಂಗ ವಿಕಲಚೇತನ ಮಕ್ಕಳನ್ನು ಗುರುತಿಸಿ, ಸಮಸ್ಯೆ ಪರಿಹರಿಸಿ ಶಿಕ್ಷಣ ನೀಡುವ ನಿಟ್ಟಿನಲ್ಲಿ ಸಂಸ್ಥೆ ಮುಂದಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಜಂಟಿ ನಿರ್ದೇಶಕಿ ಅಶ್ವತ್ಥಮ್ಮ, ಕೇಂದ್ರ ವ್ಯವಸ್ಥಾಪಕ ಬಿ.ನಾರಾಯಣ, ಬಿ.ವಸ್ತ್ರದ್, ಡಾ.ವೆಂಕಟೇಶ್, ಶೃತಿಲತಾ ಮತ್ತಿತರರು ಇದ್ದರು.