ಡಿಎಲ್‌-ಆರ್‌ಸಿ ಸ್ಮಾರ್ಟ್‌ ಕಾರ್ಡ್‌ ಸಿಗುತ್ತಿಲ್ಲ!

| Published : Dec 16 2023, 02:00 AM IST

ಸಾರಾಂಶ

ರಾಜ್ಯದ ಸಾರಿಗೆ ಇಲಾಖೆಯು ಜನರಿಗೆ ಡಿಎಲ್‌, ಆರ್‌ಸಿ ಸ್ಮಾರ್ಟ್‌ ಕಾರ್ಡ್‌ ಪೂರೈಸುತ್ತಿಲ್ಲ

ಕನ್ನಡಪ್ರಭ ವಾರ್ತೆ ಬೆಂಗಳೂರು

ಸಾರಿಗೆ ಇಲಾಖೆಯಲ್ಲಿ ವಾಹನ ಚಾಲನಾ ಪರವಾನಗಿ ಹಾಗೂ ವಾಹನ ನೋಂದಣಿ ಸ್ಮಾರ್ಟ್‌ಕಾರ್ಡ್‌ಗಳ ಪೂರೈಕೆಯಲ್ಲಿ ವ್ಯತ್ಯಯವಾಗಿದ್ದು, ಜನರು ಡಿಎಲ್‌ ಮತ್ತು ವಾಹನಗಳ ಆರ್‌ಸಿ ಪಡೆಯಲು ಆರ್‌ಟಿಒ ಕಚೇರಿಗೆ ಅಲೆಯುವಂತಾಗಿದೆ.

ಕಳೆದ ತಿಂಗಳಲ್ಲಷ್ಟೇ ಸಾರಿಗೆ ಇಲಾಖೆಯ ಆನ್‌ಲೈನ್‌ ಸೇವೆಯಲ್ಲಿ ವ್ಯತ್ಯಯವಾಗಿ ವಾಹನಗಳ ನೋಂದಣಿಯಲ್ಲಿ ಸಮಸ್ಯೆಯಾಗಿತ್ತು. ಒಂದು ವಾರಕ್ಕೂ ಹೆಚ್ಚಿನ ಅವಧಿಯವರೆಗೆ ವಾಹನಗಳ ಆನ್‌ಲೈನ್‌ ನೋಂದಣಿ ಮಾಡಲಾಗದೆ ಜನರು ಪರದಾಡಿದ್ದರು. ಇದೀಗ ಅಂತಹದ್ದೇ ಪರಿಸ್ಥಿತಿ ಎದುರಾಗಿದ್ದು, ಡಿಎಲ್‌ ಮತ್ತು ಆರ್‌ಸಿ ಸ್ಮಾರ್ಟ್‌ ಕಾರ್ಡ್‌ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಅದರಿಂದ ವಾಹನ ಚಾಲನಾ ಪರವಾನಗಿ ಪಡೆಯುವ ಪರೀಕ್ಷೆಯಲ್ಲಿ ಪಾಸಾಗಿದ್ದರೂ ಹಾಗೂ ವಾಹನಗಳ ನೋಂದಣಿ ಮಾಡಿಕೊಡಲಾಗಿದ್ದರೂ ಸ್ಮಾರ್ಟ್‌ ಕಾರ್ಡ್‌ ಮಾತ್ರ ದೊರೆಯುತ್ತಿಲ್ಲ. ಕಳೆದ 10 ದಿನಗಳಿಂದ ಸ್ಮಾರ್ಟ್‌ಕಾರ್ಡ್‌ ವಿತರಣೆಯಲ್ಲಿ ಸಮಸ್ಯೆಯಾಗಿದೆ.

ರಾಜ್ಯದಲ್ಲಿ ಪ್ರತಿದಿನ ಸರಾಸರಿ 5 ಸಾವಿರ ವಾಹನಗಳು ನೋಂದಣಿ ಆಗುತ್ತಿದ್ದರೆ, 4 ಸಾವಿರಕ್ಕೂ ಹೆಚ್ಚಿನ ಮಂದಿ ವಾಹನ ಚಾಲನಾ ಪರವಾನಗಿ ಪರೀಕ್ಷೆ ಬರೆಯುತ್ತಿದ್ದಾರೆ. ಅವರಿಗೆ ಕನಿಷ್ಠ 10 ದಿನಗಳಲ್ಲಿ ಸ್ಮಾರ್ಟ್‌ಕಾರ್ಡ್‌ ವಿತರಿಸಲಾಗುತ್ತದೆ. ಈ ಸ್ಮಾರ್ಟ್‌ಕಾರ್ಡ್‌ಗಳನ್ನು ಪೂರೈಸಲು ರೋಸ್‌ ಮಾರ್ಟ್‌ ಖಾಸಗಿ ಸಂಸ್ಥೆಗೆ ಗುತ್ತಿಗೆ ನೀಡಲಾಗಿದೆ. ಆದರೆ, ಸ್ಮಾರ್ಟ್‌ಕಾರ್ಡ್‌ಗೆ ಅಳವಡಿಸಲಾಗುವ ಚಿಪ್‌ ಪೂರೈಕೆಯಾಗದ ಕಾರಣ ರೋಸ್‌ಮಾರ್ಟ್‌ ಸಂಸ್ಥೆಯು ಸ್ಮಾರ್ಟ್‌ಕಾರ್ಡ್‌ ಸಿದ್ಧಪಡಿಸಲು ಸಾಧ್ಯವಾಗುತ್ತಿಲ್ಲ. ಅದರ ಪರಿಣಾಮ ಡಿಎಲ್‌ ಮತ್ತು ಆರ್‌ಸಿ ಪಡೆಯಬೇಕೆಂದಿದ್ದ ಸಾರ್ವಜನಿಕರಿಗೆ ಸಮಸ್ಯೆ ಉಂಟಾಗಿದೆ.

ಈ ಕುರಿತು ಸಾರಿಗೆ ಇಲಾಖೆ ಅಧಿಕಾರಿಗಳನ್ನು ವಿಚಾರಿಸಿದರೆ, ರೋಸ್‌ಮಾರ್ಟ್‌ ಸಂಸ್ಥೆಯು ನಿರಂತರವಾಗಿ ಸ್ಮಾರ್ಟ್‌ಕಾರ್ಡ್‌ ಪೂರೈಸುತ್ತಿದೆ. ಆದರೆ, ಸಂಸ್ಥೆಗೆ ಚಿಪ್‌ ಪೂರೈಕೆಯಲ್ಲಿ ಸಮಸ್ಯೆಯಾಗುವ ಕಾರಣ ಸಾರಿಗೆ ಇಲಾಖೆಯು ಸೂಚಿಸಿದಂತೆ ಸ್ಮಾರ್ಟ್‌ಕಾರ್ಟ್‌ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಇನ್ನೆರಡು ದಿನಗಳಲ್ಲಿ ಸಮಸ್ಯೆ ಬಗೆಹರಿಯಲಿದ್ದು, ಸೋಮವಾರದಿಂದ ಸ್ಮಾರ್ಟ್‌ಕಾರ್ಡ್‌ ಪೂರೈಕೆ ಮರು ಸ್ಥಾಪಿಸಲಾಗುವುದು. ಈವರೆಗೆ ಬಾಕಿ ಇದ್ದ ಎಲ್ಲರಿಗೂ ವಾರದೊಳಗೆ ಸ್ಮಾರ್ಟ್‌ಕಾರ್ಡ್‌ ವಿತರಿಸಲಾಗುವುದು ಎಂದು ತಿಳಿಸಿದ್ದಾರೆ.

ಮುಂದಿನ ವರ್ಷದಿಂದ ಕ್ಯೂಆರ್‌

ಕೋಡ್‌ನ ಸ್ಮಾರ್ಟ್‌ ಕಾರ್ಡ್‌?

-ಸ್ಕ್ಯಾನ್‌ ಮಾಡಿದರೆ ತುರ್ತು ಸಂಪರ್ಕ ಸಂಖ್ಯೆ ಲಭ್ಯ

ಸದ್ಯ ಸ್ಮಾರ್ಟ್‌ಕಾರ್ಡ್‌ ಪೂರೈಸುತ್ತಿರುವ ಸಂಸ್ಥೆಯ ಗುತ್ತಿಗೆ ಅವಧಿ 2024ರ ಫೆಬ್ರವರಿಯಲ್ಲಿ ಮುಕ್ತಾಯಗೊಳ್ಳಲಿದೆ. ಹೀಗಾಗಿ ಹೊಸ ಸಂಸ್ಥೆಯನ್ನು ನೇಮಿಸಲು ಸಾರಿಗೆ ಇಲಾಖೆ ಜನವರಿಯಲ್ಲಿ ಟೆಂಡರ್‌ ಪ್ರಕ್ರಿಯೆ ಆರಂಭಿಸುವ ಸಾಧ್ಯತೆಗಳಿವೆ. ಹೊಸ ಸಂಸ್ಥೆ ನೇಮಕದ ಸಂದರ್ಭದಲ್ಲಿ ಈಗಿರುವ ಸ್ಮಾರ್ಟ್‌ಕಾರ್ಡ್‌ಗಿಂತ ಹೊಸ ಬಗೆಯ ಸ್ಮಾರ್ಟ್‌ಕಾರ್ಡ್‌ ವಿತರಿಸುವಂತೆ ಸೂಚಿಸಲು ಸಾರಿಗೆ ಇಲಾಖೆ ಅಧಿಕಾರಿಗಳು ಚರ್ಚೆ ನಡೆಸಿದ್ದಾರೆ. ಅದರಂತೆ ಸ್ಮಾರ್ಟ್‌ಕಾರ್ಡ್‌ನಲ್ಲಿ ಚಿಪ್‌ನ ಜತೆಗೆ ಕ್ಯೂಆರ್‌ ಕೋಡ್ ಕೂಡ ಅಳವಡಿಸಲಾಗುತ್ತದೆ.

ಹೊಸ ಮಾದರಿಯ ಡಿಎಲ್‌ನಲ್ಲಿ ಅಳವಡಿಸುವ ಕ್ಯೂಆರ್‌ ಕೋಡನ್ನು ಸ್ಕ್ಯಾನ್‌ ಮಾಡಿದರೆ ರಕ್ತದ ಗುಂಪು, ತುರ್ತು ಸಂಪರ್ಕ ಸಂಖ್ಯೆ, ಜನ್ಮ ದಿನಾಂಕ ಹೀಗೆ ಡಿಎಲ್‌ ಪಡೆಯುವವರ ವೈಯಕ್ತಿಕ ವಿವರಗಳು ದೊರೆಯುವಂತೆ ಮಾಡಲಾಗುತ್ತದೆ. ಒಂದು ವೇಳೆ ಅಪಘಾತಕ್ಕೀಡಾದ ಸಂದರ್ಭದಲ್ಲಿ ಅವರಿಗೆ ತುರ್ತು ನೆರವು ದೊರಕಿಸಿಕೊಡಲು ಇದು ಸಹಾಯವಾಗಲಿದೆ. ಅದೇ ರೀತಿ ವಾಹನದ ನೋಂದಣಿ ಸ್ಮಾರ್ಟ್‌ಕಾರ್ಡ್‌ನ ಕ್ಯೂಆರ್‌ ಕೋಡ್‌ನಲ್ಲೂ ಅದೇ ರೀತಿಯ ವಿವರ ದೊರೆಯುವಂತೆ ಮಾಡುವ ಬಗ್ಗೆ ಚರ್ಚಿಸಲಾಗಿದೆ.

---

ಡಿಎಲ್‌ ಮತ್ತು ಆರ್‌ಸಿ ಸ್ಮಾರ್ಟ್‌ಕಾರ್ಡ್‌ ವಿತರಣೆಯಲ್ಲಿ ವ್ಯತ್ಯಯವಾಗಿರುವುದು ಸತ್ಯ. ಸ್ಮಾರ್ಟ್‌ಕಾರ್ಡ್‌ ಪೂರೈಸುವ ಸಂಸ್ಥೆಗೆ ಚಿಪ್‌ಗಳು ಸಮರ್ಪಕವಾಗಿ ದೊರೆಯದ ಕಾರಣ ಕೆಲವೊಮ್ಮ ಈ ರೀತಿಯ ಸಮಸ್ಯೆ ಎದುರಾಗುತ್ತದೆ. ಇನ್ನೆರಡು ದಿನಗಳಲ್ಲಿ ಸಮಸ್ಯೆ ನಿವಾರಣೆಯಾಗಿ, ಸೋಮವಾರದಿಂದ ಸ್ಮಾರ್ಟ್‌ಕಾರ್ಡ್ ವಿತರಣೆ ಎಂದಿನಂತೆ ಆರಂಭವಾಗಲಿದೆ.

-ರಾಮಲಿಂಗಾರೆಡ್ಡಿ, ಸಾರಿಗೆ ಸಚಿವ.

--

ಫೋಟೋ:

1.ಡಿಎಲ್‌

2.ರಾಮಲಿಂಗಾರೆಡ್ಡಿ