ಸಾರಾಂಶ
ಬೆಂಗಳೂರು : ನಗರದಲ್ಲಿ ಸ್ವಾತಂತ್ರ್ಯ ಉದ್ಯಾನದಲ್ಲಿ ಮಾತ್ರ ಪ್ರತಿಭಟನೆಗೆ ಅವಕಾಶ ನೀಡಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ವಿವಿಧ ಪ್ರಗತಿಪರ ಚಿಂತಕರು ಮತ್ತು ಸಾಮಾಜಿಕ ಕಾರ್ಯಕರ್ತರು ಪ್ರತಿಭಟನೆಗೆ ಇರುವ ನಿರ್ಬಂಧಗಳನ್ನು ತೆರವು ಮಾಡುವಂತೆ ಆಗ್ರಹಿಸಿದ್ದಾರೆ.
‘ಹೋರಾಟದ ಹಕ್ಕಿಗಾಗಿ ಜನಾಂದೋಲನ ಸಂಸ್ಥೆ’ ಶನಿವಾರ ಆಯೋಜಿಸಿದ್ದ ದುಂಡು ಮೇಜಿನ ಸಭೆಯಲ್ಲಿ, ಚಿಂತಕರಾದ ಆಕಾರ್ ಪಟೇಲ್, ದು. ಸರಸ್ವತಿ, ಲಿಂಗತ್ವ ಮತ್ತು ಲೈಂಗಿಕತೆ ಹಕ್ಕುಗಳ ಹೋರಾಟಗಾರ್ತಿ ಅಕ್ಕೈ ಪದ್ಮಶಾಲಿ, ರಾಷ್ಟ್ರೀಯ ಕಾನೂನು ಶಾಲೆ ಪ್ರಾಧ್ಯಾಪಕ ಪ್ರೊ. ಬಾಬು ಮ್ಯಾಥ್ಯೂ, ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ರಾಜ್ಯ ಸಂಚಾಲಕ ಮಾವಳ್ಳಿ ಶಂಕರ್ ಅವರು ಭಾಗವಹಿಸಿ ತಮ್ಮ ವಿಚಾರ ಮಂಡಿಸಿದರು.
2021ರಿಂದಲೂ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಲು ಪರದಾಡುವ ಸ್ಥಿತಿಯಿದೆ. ಮೂಲಭೂತ ಹಕ್ಕುಗಳ ರಕ್ಷಣೆಗಾಗಿ ಹೋರಾಟವನ್ನು ಕೇವಲ ಸ್ವಾತಂತ್ರ್ಯ ಉದ್ಯಾನದಲ್ಲಿ ಮಾತ್ರ ಮಾಡಬೇಕಿದೆ. ಈ ಹಿಂದಿನ ಬಿಜೆಪಿ ಸರ್ಕಾರ ಹೋರಾಟವನ್ನು ನಿಯಂತ್ರಿಸಲು ಸ್ವಾತಂತ್ರ್ಯ ಉದ್ಯಾನದಲ್ಲಿ ಮಾತ್ರ ಪ್ರತಿಭಟಿಸಬೇಕು ಎಂದು ಆದೇಶಿಸಿತ್ತು. ಈಗಿನ ಕಾಂಗ್ರೆಸ್ ಸರ್ಕಾರವೂ ಅದನ್ನು ಮುಂದುವರಿಸಿಕೊಂಡು ಹೋಗುತ್ತಿದೆ. ಇದರಿಂದ ಜನರ ಹಕ್ಕು ಹತ್ತಿಕ್ಕಿದ್ದಂತಾಗಿದೆ. ಹೀಗಾಗಿ ಸರ್ಕಾರ ಕೂಡಲೇ ಪ್ರತಿಭಟನೆಗೆ ಇರುವ ನಿರ್ಬಂಧವನ್ನು ತೆರವು ಮಾಡಬೇಕು ಎಂದು ಒತ್ತಾಯಸಿದರು.
ನಗರದಲ್ಲಿ ರಾಜಕೀಯ ಮತ್ತು ಧಾರ್ಮಿಕ ರ್‍ಯಾಲಿಗಳಿಗೆ ಪೊಲೀಸರೇ ಅವಕಾಶ ನೀಡುತ್ತಿದ್ದಾರೆ. ಆದರೆ, ಜನರ ಸಮಸ್ಯೆಗಳು ಮತ್ತು ಅನ್ಯಾಯದ ವಿರುದ್ಧ ಧ್ವನಿ ಎತ್ತುವಂತಹ ಪ್ರತಿಭಟನೆಗಳಿಗೆ ಮಾತ್ರ ನಿರ್ಬಂಧವಿದೆ. ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟಿಸುವುದರಿಂದ ಸೂಕ್ತ ಸಂಸ್ಥೆ ಅಥವಾ ವ್ಯಕ್ತಿಗೆ ತಲುಪುತ್ತಿಲ್ಲ. ಹೀಗಾಗಿ ಸ್ವಾತಂತ್ರ್ಯ ಉದ್ಯಾನದಲ್ಲಿ ಮಾತ್ರ ಪ್ರತಿಭಟಿಸಬೇಕು ಎಂಬ ಸರ್ಕಾರದ ಆದೇಶ ರದ್ದು ಮಾಡಬೇಕು ಎಂದು ಒತ್ತಾಯಿಸಿದರು.