ಸಾರಾಂಶ
ಬೆಂಗಳೂರು : ಪ್ರಬುದ್ಧ ವ್ಯಕ್ತಿತ್ವದವರಾಗಿದ್ದ ಪ್ರೊ.ಎಂ.ಆರ್.ದೊರೆಸ್ವಾಮಿ ಅವರ ಅಪಾರ ಶಿಸ್ತು, ದೂರದೃಷ್ಟಿ ಮತ್ತು ಹಿಡಿದ ಕೆಲಸವನ್ನು ಮಾಡಿ ತೋರಿಸುವ ಛಾತಿ ಎಲ್ಲರಿಗೂ ಮಾದರಿ ಎಂದು ಮಾಜಿ ಉನ್ನತ ಶಿಕ್ಷಣ ಸಚಿವ ಹಾಗೂ ಶಾಸಕ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದ್ದಾರೆ.
ಭಾನುವಾರ ನಗರದ ಅರಮನೆ ಮೈದಾನದಲ್ಲಿ ನಡೆದ ಪಿಇಎಸ್ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಪ್ರೊ.ಎಂ.ಆರ್.ದೊರೆಸ್ವಾಮಿ ಶ್ರದ್ಧಾಜಲಿ ಸಭೆಯಲ್ಲಿ ಮಾತನಾಡಿದರು.
ದೊರೆಸ್ವಾಮಿಯವರು ಚಿಕ್ಕದಾಗಿ ಕಾಲೇಜು ಪ್ರಾರಂಭಿಸಿ, ಅದನ್ನು ಶಿಸ್ತಿನಿಂದ ಬೆಳೆಸಿ, ದೇಶ-ವಿದೇಶಗಳಲ್ಲಿ ಅದಕ್ಕೊಂದು ಹೆಸರು ತಂದಿದ್ದರು. ಅವರ ಅಪಾರವಾದ ಶಿಸ್ತು, ದೂರದೃಷ್ಟಿ ಮತ್ತು ಹಿಡಿದ ಕೆಲಸವನ್ನು ಮಾಡಿ ತೋರಿಸುವ ಛಲ ಎಂಥವರೂ ಮೆಚ್ಚಿಕೊಳ್ಳಬೇಕು ಎಂದರು.
ಪ್ರತಿಪಕ್ಷದ ನಾಯಕ ಆರ್. ಅಶೋಕ್ ಮಾತನಾಡಿ, ದೊರೆಸ್ವಾಮಿಯವರು ಕೇವಲ ತಮ್ಮ ಶಿಕ್ಷಣ ಸಂಸ್ಥೆಯನ್ನು ಮಾತ್ರ ಬೆಳೆಸದೆ ಇತರ ಸಂಸ್ಥೆಗಳಿಗೆ ಮಾರ್ಗದರ್ಶನ ನೀಡಿದ್ದರು. ಸರ್ಕಾರದ ಶಿಕ್ಷಣ ಸಲಹೆಗಾರರಾಗಿ ಅವರು ಸರ್ಕಾರೀ ಶಾಲೆಗಳ ದತ್ತು ಪಡೆಯಲು ಜನ ಪ್ರತಿನಿಧಿಗಳು ಮತ್ತು ಉದ್ಯಮಿಗಳ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದರು. ಸರ್ಕಾರೀ ಶಾಲೆಗಳ ಬಗ್ಗೆ ಕಾಳಜಿ ವಹಿಸಿದ್ದನ್ನು ಗಮನಿಸಿದವರಿತೆ ಅವರ ಪ್ರಬುದ್ಧ ವ್ಯಕ್ತಿತ್ವದ ಪರಿಚಯವಾಗುತ್ತದೆ ಎಂದರು.
ಹಿರಿಯ ವೈದ್ಯೆ ವಿಜಯಲಕ್ಷ್ಮಿ ಬಾಳೆಕುಂದ್ರಿ ಮಾತನಾಡಿ, ದೊರೆಸ್ವಾಮಿಯವರ ಅಗಲಿಕೆ ಅವರ ಕುಟುಂಬದವರಿಗೆ ನೋವು ತಂದಿಲ್ಲ, ಎಲ್ಲ ಶಿಕ್ಷಣ ಪ್ರೇಮಿಗಳೂ ನೊಂದಿದ್ದಾರೆ ಎಂದರು.
ಜನಪ್ರತಿನಿಧಿಗಳು, ಅಧಿಕಾರಿಗಳು, ಶಿಕ್ಷಣ ಪ್ರೇಮಿಗಳು, ಪಿಇಎಸ್ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿ ಸೇರಿ ನಾಲ್ಕು ಸಾವಿರಕ್ಕೂ ಅಧಿಕ ಜನ ಪಾಲ್ಗೊಂಡು ಶ್ರದ್ಧಾಂಜಲಿ ಅರ್ಪಿಸಿದರು.