ಸಾರಾಂಶ
ಭೂಪೇನ್ ಹಜಾರಿಕಾ ಅವರನ್ನು ಪಡೆದ ಭಾರತವು ಧನ್ಯ. ಅವರ ಶತಮಾನೋತ್ಸವ ವರ್ಷವನ್ನು ಪ್ರಾರಂಭಿಸುತ್ತಿರುವ ಈ ಸಂದರ್ಭದಲ್ಲಿ, ಅವರ ಸಂದೇಶವನ್ನು ವ್ಯಾಪಕವಾಗಿ ಹರಡುವ ನಮ್ಮ ಬದ್ಧತೆಯನ್ನು ಪುನರುಚ್ಚರಿಸೋಣ
ನರೇಂದ್ರ ಮೋದಿ
ಪ್ರಧಾನಮಂತ್ರಿ
ಭೂಪೇನ್ ಹಜಾರಿಕಾ ಅವರನ್ನು ಪಡೆದ ಭಾರತವು ಧನ್ಯ. ಅವರ ಶತಮಾನೋತ್ಸವ ವರ್ಷವನ್ನು ಪ್ರಾರಂಭಿಸುತ್ತಿರುವ ಈ ಸಂದರ್ಭದಲ್ಲಿ, ಅವರ ಸಂದೇಶವನ್ನು ವ್ಯಾಪಕವಾಗಿ ಹರಡುವ ನಮ್ಮ ಬದ್ಧತೆಯನ್ನು ಪುನರುಚ್ಚರಿಸೋಣ
ಇಂದು, ಸೆಪ್ಟೆಂಬರ್ 8. ಭಾರತೀಯ ಸಂಸ್ಕೃತಿ ಮತ್ತು ಸಂಗೀತವನ್ನು ಪ್ರೀತಿಸುವ ಎಲ್ಲರಿಗೂಬಹಳ ವಿಶೇಷವಾದ ದಿನ. ಈ ದಿನ ಅಸ್ಸಾಂನ ನನ್ನ ಸಹೋದರ- ಸಹೋದರಿಯರಿಗೆ ಇನ್ನಷ್ಟು ವಿಶೇಷವಾದುದು. ಭಾರತ ಕಂಡ ಅತ್ಯಂತ ಅಸಾಧಾರಣ ಧ್ವನಿಗಳಲ್ಲಿ ಒಬ್ಬರಾದಡಾ. ಭೂಪೇನ್ ಹಜಾರಿಕಾ ಅವರ ಜಯಂತಿ, ನಿಮಗೆಲ್ಲರಿಗೂ ತಿಳಿದಿರುವಂತೆ, ಈ ವರ್ಷ ಅವರ ಜನ್ಮ ಶತಮಾನೋತ್ಸವದಆಚರಣೆ ಆರಂಭವಾಗಿದೆ.ಭಾರತೀಯ ಕಲಾತ್ಮಕ ಅಭಿವ್ಯಕ್ತಿ ಮತ್ತು ಜನಮಾನಸಕ್ಕೆ ಅವರ ಅಮೂಲ್ಯ ಕೊಡುಗೆಗಳನ್ನು ಸ್ಮರಿಸುವ ಸಂದರ್ಭವಿದು.
ಇಂದು ಡಾ। ಭೂಪೇನ್ ಹಜಾರಿಕಾ ಜನ್ಮದಿನ ಭೂಪೇನ್‌ದಾನಮಗೆ ನೀಡಿದ್ದು ಸಂಗೀತವನ್ನು ಮೀರಿ ವಿಸ್ತರಿಸಿದೆ. ಅವರ ಸಂಯೋಜನೆಗಳು ಮಾಧುರ್ಯ ಮೀರಿದ ಭಾವನೆಗಳ ಮಿಲನವಾಗಿವೆ. ಕೇವಲ ಧ್ವನಿಗಿಂತ ಹೆಚ್ಚಾಗಿ, ಅವರು ಜನರ ಹೃದಯ ಬಡಿತವಾಗಿದ್ದರು. ಅವರ ಹಾಡುಗಳನ್ನು ಕೇಳುತ್ತಾ ತಲೆಮಾರುಗಳು ಬೆಳೆದಿವೆ. 5ನೇ ವಯಸ್ಸಲ್ಲೇ ಸಾರ್ವಜನಿಕ ಕಾಠ್ಯಕ್ರಮ ಅಸ್ಸಾಂನಿಂದ ಹೊರಹೊಮ್ಮಿದ ಧ್ವನಿಯು ಕಾಲಾತೀತ ನದಿಯಂತೆ ಹರಿಯಿತು, ಗಡಿಗಳು ಮತ್ತು ಸಂಸ್ಕೃತಿಗಳನ್ನು ದಾಟಿತು, ಮಾನವೀಯತೆಯ ಚೈತನ್ಯವನ್ನು ಹೊತ್ತು ಸಾಗಿತು. ಭೂಪೇನ್ ದಾ ಪ್ರಪಂಚದಾದ್ಯಂತ ಪ್ರಯಾಣಿಸಿದರು, ಸಮಾಜದ ಎಲ್ಲಾ ವರ್ಗಗಳ ದಿಗ್ಗಜರೊಂದಿಗೆ ಹೆಗಲಿಗೆ ಹೆಗಲುಕೊಟ್ಟು ಕೆಲಸಮಾಡಿದರು. ಆದರೆ ಅವರು ಅಸ್ಸಾಂನಲ್ಲಿನ ತಮ್ಮ ಬೇರುಗಳೊಂದಿಗೆ ಆಳವಾದ ಸಂಪರ್ಕ ಹೊಂದಿದ್ದರು. ಅವರು ಯಾವಾಗಲೂ ಅಸ್ಸಾಂನ ಮೂಲ ಅಸ್ಮಿತೆ, ಅಲ್ಲಿನ ಜನರ ನೈತಿಕ ಪ್ರಜ್ಞೆಯನ್ನು ತಮ್ಮೊಳಗೆ ಹೊಂದಿದ್ದರು.
ಭೂಪೇನ್ ದಾ ಕೇವಲ ಐದು ವರ್ಷ ವಯಸ್ಸಿನಲ್ಲಿ ಸಾರ್ವಜನಿಕ ಸಮಾರಂಭದಲ್ಲಿ ಹಾಡಿದರು ಮತ್ತು ಅಸ್ಸಾಮಿ ಸಾಹಿತ್ಯದ ದಿಗ್ಗಜ ಲಕ್ಷ್ಮಿ ನಾಥ್ ಬೆಜ್ಜರುವಾ ಅವರ ಗಮನ ಸೆಳೆದರು. ಅವರ ಹದಿಹರೆಯದಲ್ಲಿ ತಮ್ಮ ಮೊದಲಹಾಡನ್ನುರೆಕಾರ್ಡ್ ಮಾಡಿದರು. ಆದರೆ ಸಂಗೀತವು ಅವರ ವ್ಯಕ್ತಿತ್ವದ ಒಂದು ಭಾಗ ಮಾತ್ರವಾಗಿತ್ತು. ಭೂಪೇನ್ ದಾ ಅವರು ಕುತೂಹಲ, ಮುಕ್ತ ಮಾತು ಮತ್ತು ಜಗತ್ತನ್ನು ಅರ್ಥಮಾಡಿಕೊಳ್ಳುವ ಅದಮ್ಯ ಬಯಕೆ ಹೊಂದಿದ್ದ ಹೃದಯದಿಂದ ಬುದ್ಧಿಜೀವಿಯಾಗಿದ್ದರು. ಕಲಿಯುವ ಈ ಉತ್ಸಾಹವು ಅವರನ್ನು ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಕಾಟನ್ ಕಾಲೇಜಿನಲ್ಲಿ ಉತ್ತಮ ಸಾಧನೆ ಮಾಡಲು ಕಾರಣವಾಯಿತು ಮತ್ತು ಅವರನ್ನು ಅಮೆರಿಕಗೆ ಕರೆದೊಯ್ದಿತು. ಅಲ್ಲಿ ಅವರು ಆ ಕಾಲದ ಪ್ರಮುಖ ಶಿಕ್ಷಣ ತಜ್ಞರು, ಚಿಂತಕರು ಮತ್ತು ಸಂಗೀತಗಾರರೊಂದಿಗೆ ಸಂವಾದ ನಡೆಸಿದರು.
ಅವರು ಶ್ರೇಷ್ಠ ಕಲಾವಿದ ಮತ್ತು ನಾಗರಿಕ ಹಕ್ಕುಗಳ ನಾಯಕ ಪಾಲ್ ರೋಬೆಸನ್ ಅವರನ್ನು ಭೇಟಿಯಾದರು. ರೋಬೆಸನ್ ಅವರ 'OlMan River' ಹಾಡು ಭೂಪೇನ್ ದಾ ಅವರ ಸಾಂಪ್ರದಾಯಿಕ ಸಂಯೋಜನೆ 'ಬಿಸ್ತಿರ್ನೊ ಪರೋರೆ'ಗೆ ಸ್ಫೂರ್ತಿಯಾಯಿತು. ಜನರಿಗೆ ಅಚ್ಚುಮೆಚ್ಚಿನವರಾಗಿದ್ದ ಮಾಜಿ ಅಮೆರಿಕ ಪ್ರಥಮ ಮಹಿಳೆ ಎಲೀನರ್‌ರೂಸ್‌ವೆಲ್ಟ್ ಅವರು ಭಾರತೀಯ ಜಾನಪದ ಸಂಗೀತದ ಪ್ರದರ್ಶನಕ್ಕಾಗಿ ಅವರಿಗೆ ಚಿನ್ನದ ಪದಕ ನೀಡಿದರು.
ಅಮೆರಿಕ ಬಿಟ್ಟು ಭಾರತಕ್ಕೆ ಬಂದರು
ಭೂಪೇನ್ ದಾ ಅವರಿಗೆ ಅಮೆರಿಕದಲ್ಲಿಯೇ ಉಳಿಯುವ ಅವಕಾಶವಿತ್ತು. ಆದರೆ ಅವರು ಭಾರತಕ್ಕೆ ಹಿಂತಿರುಗಿ ಸಂಗೀತದಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡರು. ರೇಡಿಯೋದಿಂದ ರಂಗಭೂಮಿಯವರೆಗೆ, ಚಲನಚಿತ್ರಗಳಿಂದ ಶೈಕ್ಷಣಿಕ ಸಾಕ್ಷ್ಯ ಚಿತ್ರಗಳವರೆಗೆ, ಅವರು ಪ್ರತಿಯೊಂದು ಮಾಧ್ಯಮದಲ್ಲೂ ಪ್ರವೀಣರಾಗಿದ್ದರು. ಅವರು ಹೋದಲ್ಲೆಲ್ಲಾ ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸುವತ್ತ ಗಮನ ನೀಡಿದರು. ಅವರ ಸಂಯೋಜನೆಗಳಲ್ಲಿ ಸಾಹಿತ್ಯದ ಜೊತೆಗೆ ಸಾಮಾಜಿಕ ಸಂದೇಶಗಳೂ ಇದ್ದವು. ಬಡವರಿಗೆ ನ್ಯಾಯ, ಗ್ರಾಮೀಣಾಭಿವೃದ್ಧಿ, ಸಾಮಾನ್ಯ ನಾಗರಿಕರ ಶಕ್ತಿ ಮುಂತಾದ ವಿಷಯಗಳನ್ನು ಅವು ಒಳಗೊಂಡಿದ್ದವು. ತಮ್ಮ ಸಂಗೀತದ ಮೂಲಕ ಅವರು ದೋಣಿ ನಡೆಸುವವರು, ಚಹಾ ತೋಟದ ಕೆಲಸಗಾರರು, ಮಹಿಳೆಯರು, ರೈತರು ಮುಂತಾದವರ ಆಕಾಂಕ್ಷೆಗಳಿಗೆ ಧ್ವನಿಯಾದರು. ಅನೇಕ ಜನರು, ವಿಶೇಷವಾಗಿ ಅವರಂತಹ ಸಾಮಾಜಿಕವಾಗಿ ಹಿಂದುಳಿದ ವರ್ಗಗಳ ಜನರು, ಅವರ ಸಂಗೀತದಿಂದ ಶಕ್ತಿ ಮತ್ತು ಭರವಸೆ ಪಡೆದರು. ಭೂಪೇನ್ ದಾ ನಿಜವಾಗಿಯೂ ರಾಜಕೀಯ ವ್ಯಕ್ತಿಯಲ್ಲದಿದ್ದರೂ, ಸಾರ್ವಜನಿಕ ಸೇವೆಯ ಪ್ರಪಂಚದೊಂದಿಗೆ ಸಂಪರ್ಕಹೊಂದಿದ್ದರು.
1967ರಲ್ಲಿ ಅವರು ಅಸ್ಸಾಂನ ನವೋಬೋಯಿಚಾ ಕ್ಷೇತ್ರದಿಂದ ಸ್ವತಂತ್ರ ಶಾಸಕರಾಗಿ ಆಯ್ಕೆಯಾದರು. ಇದು ಅವರ ಸಾರ್ವಜನಿಕ ವ್ಯಕ್ತಿತ್ವವು ಸಾರ್ವಜನಿಕ ನಂಬಿಕೆಯಲ್ಲಿ ಎಷ್ಟು ಆಳವಾಗಿ ಬೇರೂರಿದೆ ಎಂಬುದನ್ನು ಸ್ಪಷ್ಟಪಡಿಸಿತು. ಅವರು ಎಂದಿಗೂ ವೃತ್ತಿಪರ ರಾಜಕಾರಣಿಯಾಗಲಿಲ್ಲವಾದರೂ, ಇತರರಿಗೆ ಸೇವೆಸಲ್ಲಿಸುವ ಅವರ ಉತ್ಸಾಹವು ಅತ್ಯಂತ ಪ್ರಭಾವಶಾಲಿಯಾಗಿತ್ತು.
ಎನ್‌ಡಿಎ ಸರ್ಕಾರದಿಂದ 'ಭಾರತ ರತ್ನ'
ಭಾರತ ಸರ್ಕಾರ ಮತ್ತು ಜನರು ಅವರ ಅಮೂಲ್ಯ ಕೊಡುಗೆಗಳನ್ನು ಗುರುತಿಸಿದ್ದಾರೆ.ಅವರಿಗೆ ಪದ್ಮಶ್ರೀ, ಪದ್ಮಭೂಷಣ, ಪದ್ಮವಿಭೂಷಣ, ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ. 2019ರಲ್ಲಿ ನಮ್ಮ ಅಧಿಕಾರಾವಧಿಯಲ್ಲಿ ಅವರಿಗೆ ಭಾರತ ರತ್ನ ನೀಡಿ ಗೌರವಿಸಿದ್ದು ವೈಯಕ್ತಿಕವಾಗಿ ನನಗೆ ಮತ್ತು ಎನ್‌ಡಿಎ ಸರ್ಕಾರಕ್ಕೆ ಗೌರವದ ವಿಷಯವಾಗಿದೆ. 2011ರಲ್ಲಿ ಭೂಪೇನ್ದಾ ಅವರು ನಿಧನರಾದ ಸಮಯನನಗೆ ನೆನಪಿದೆ. ಅವರ ಅಂತಿಮ ಸಂಸ್ಕಾರದಲ್ಲಿಲಕ್ಷಾಂತರ ಜನರು ಭಾಗವಹಿಸಿದ್ದನ್ನು ನಾನು ದೂರದರ್ಶನದಲ್ಲಿ ನೋಡಿದೆ. ಆ ಸಮಯದಲ್ಲಿ ಎಲ್ಲರ ಕಣ್ಣುಗಳು ತೇವವಾಗಿದ್ದವು. ಅವರ ಅದ್ಭುತ ಜೀವನದಂತೆಯೇ, ಸಾವಿನಲ್ಲೂ ಅವರು ಜನರನ್ನು ಒಂದು ಗೂಡಿಸಿದರು.
ಹಜಾರಿಕಾ ಸಂದೇಶವನ್ನು ಹರಡೋಣ
ಈ ಭೂಪೇನ್ ಹಜಾರಿಕಾ ಅವರನ್ನು ಪಡೆದ ಭಾರತವು ಧನ್ಯ. ಅವರ ಶತಮಾನೋತ್ಸವ ವರ್ಷವನ್ನು ಪ್ರಾರಂಭಿಸುತ್ತಿರುವ ಸಂದರ್ಭದಲ್ಲಿ ಅವರಸಂದೇಶವನ್ನು ವ್ಯಾಪಕವಾಗಿಹರಡುವನಮ್ಮ ಬದ್ಧತೆಯನ್ನು ಪುನರುಚ್ಚರಿಸೋಣ. ಸಂಗೀತ, ಕಲೆ ಮತ್ತು ಸಂಸ್ಕೃತಿಯನ್ನು ಉತ್ತೇಜಿಸಲು, ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸಲು ಮತ್ತು ಭಾರತವನ್ನು ಸೃಜನಶೀಲತೆ ಮತ್ತು ಕಲಾತ್ಮಕ ಶ್ರೇಷ್ಠತೆಯನ್ನು ಪೋಷಿಸುವ ನೆಲವನ್ನಾಗಿ ಮಾಡಲು ಇದು ನಮಗೆ ಸ್ಫೂರ್ತಿ ನೀಡಲಿ. ಭಾರತದ ಪ್ರಮುಖ ಮೂಲಸೌಕರ್ಯ ಯೋಜನೆಗಳಲ್ಲಿ ಒಂದಾದ ಧೋಲಾ ಮತ್ತು ಸಾದಿಯಾವನ್ನು ಸಂಪರ್ಕಿಸುವ ಸೇತುವೆಗೆ ಭೂಪೇನ್ ಹಜಾರಿಕಾ ಅವರ ಹೆಸರಿಟ್ಟಿರುವುದು ಸೂಕ್ತವಾಗಿದೆ.