ಕರ್ನಾಟಕದ ಆದಿತ್‌ ಮೂರ್ತಿಗೆ ಪರಿಸರ ಆಸ್ಕರ್‌

| Published : Nov 10 2023, 01:00 AM IST

ಕರ್ನಾಟಕದ ಆದಿತ್‌ ಮೂರ್ತಿಗೆ ಪರಿಸರ ಆಸ್ಕರ್‌
Share this Article
  • FB
  • TW
  • Linkdin
  • Email

ಸಾರಾಂಶ

ಹವಾಮಾನ ಬದಲಾವಣೆಯಿಂದ ಸಂಕಷ್ಟಕ್ಕೆ ಗುರಿಯಾಗಿರುವ ರೈತರ ನೆರವಿಗಾಗಿ ಕೆಲಸ ಮಾಡುತ್ತಿರುವ ‘ಭೂಮಿತ್ರ’ ಸಂಸ್ಥೆಗೆ ಪರಿಸರ ಆಸ್ಕರ್‌ ಎಂದೇ ಪ್ರಸಿದ್ಧವಾಗಿರುವ 2023ನೇ ಸಾಲಿನ ಅರ್ಥ್‌ಶಾಟ್‌ ಪ್ರಶಸ್ತಿ ಲಭಿಸಿದೆ.

10 ಕೋಟಿ ರು. ಮೌಲ್ಯದ ಅರ್ಥ್‌ಶಾಟ್‌ ಪ್ರಶಸ್ತಿ ಗೆದ್ದ ‘ಭೂಮಿತ್ರ’ ಸಂಸ್ಥೆ

ಭೂಮಿಯ ಫಲವತ್ತತೆ ಹೆಚ್ಚಿಸಲು ವಿಶ್ವಾದ್ಯಂತ ಕೆಲಸ ಮಾಡುತ್ತಿರುವ ಕಂಪನಿಪಿಟಿಐ ಲಂಡನ್‌ಹವಾಮಾನ ಬದಲಾವಣೆಯಿಂದ ಸಂಕಷ್ಟಕ್ಕೆ ಗುರಿಯಾಗಿರುವ ರೈತರ ನೆರವಿಗಾಗಿ ಕೆಲಸ ಮಾಡುತ್ತಿರುವ ‘ಭೂಮಿತ್ರ’ ಸಂಸ್ಥೆಗೆ ಪರಿಸರ ಆಸ್ಕರ್‌ ಎಂದೇ ಪ್ರಸಿದ್ಧವಾಗಿರುವ 2023ನೇ ಸಾಲಿನ ಅರ್ಥ್‌ಶಾಟ್‌ ಪ್ರಶಸ್ತಿ ಲಭಿಸಿದೆ. ವಿಶೇಷವೆಂದರೆ, ಈ ಸಂಸ್ಥೆಯನ್ನು ಕರ್ನಾಟಕ ಮೂಲದ ಆದಿತ್‌ ಮೂರ್ತಿ ಸ್ಥಾಪಿಸಿದ್ದಾರೆ. ಇವರು ಅಮೆರಿಕದಲ್ಲಿ ನೆಲೆಸಿದ್ದು, ಅಲ್ಲೇ ಇವರ ಸಂಸ್ಥೆಯ ಮುಖ್ಯ ಕಚೇರಿಯೂ ಇದೆ.ಬ್ರಿಟನ್ನಿನ ರಾಜಕುಮಾರ ವಿಲಿಯಮ್ಸ್‌ ಸ್ಥಾಪಿಸಿರುವ ಈ ಪ್ರಶಸ್ತಿಯು 10 ದಶಲಕ್ಷ ಪೌಂಡ್‌ (ಸುಮಾರು 10 ಕೋಟಿ ರು.) ಮೌಲ್ಯದ್ದಾಗಿದೆ. ‘ಭೂಮಿತ್ರ’ ಜೊತೆಗೆ ಭಾರತೀಯ ಮೂಲದ ಎಸ್‌4ಎಸ್‌ ಟೆಕ್ನಾಲಜೀಸ್‌ ಸಂಸ್ಥೆಯೂ ಈ ಪ್ರಶಸ್ತಿ ಪಡೆದಿದೆ. ಎಸ್‌4ಎಸ್‌ ಟೆಕ್ನಾಲಜೀಸ್‌ ಸಂಸ್ಥೆಯು ಸೌರಶಕ್ತಿ ಬಳಸಿ ಆಹಾರ ತ್ಯಾಜ್ಯಗಳನ್ನು ಪರಿಸರಸ್ನೇಹಿಯಾಗಿ ವಿಲೇವಾರಿ ಮಾಡುತ್ತದೆ.‘ಭೂಮಿತ್ರ’ ಸಂಸ್ಥೆಗೆ ‘ಫಿಕ್ಸ್‌ ಅವರ್‌ ಕ್ಲೈಮೇಟ್‌’ ವಿಭಾಗದಲ್ಲಿ ಅರ್ಥ್‌ಶಾಟ್‌ ಪ್ರಶಸ್ತಿ ಲಭಿಸಿದೆ. ಇತ್ತೀಚೆಗೆ ಸಿಂಗಾಪುರದಲ್ಲಿ ನಡೆದ ಸಮಾರಂಭದಲ್ಲಿ ಭೂಮಿತ್ರ, ಎಸ್‌4ಎಸ್‌ ಟೆಕ್ನಾಲಜೀಸ್‌ ಸೇರಿದಂತೆ ಒಟ್ಟು ಐದು ಸಂಸ್ಥೆಗಳಿಗೆ ಅರ್ಥ್‌ಶಾಟ್‌ ಪ್ರಶಸ್ತಿ ಪ್ರದಾನ ಮಾಡಲಾಯಿತು.‘ಭೂಮಿತ್ರ ಏನು ಮಾಡುತ್ತದೆ: ‘ಭೂಮಿತ್ರ’ ಕಂಪನಿಯು ಮಣ್ಣಿನಲ್ಲಿ ಇಂಗಾಲವನ್ನು ಉಳಿಸುವ ಮೂಲಕ ರೈತರಿಗೆ ಭೂಮಿಯ ಸಂರಕ್ಷಣೆಗೆ ಪ್ರೋತ್ಸಾಹ ನೀಡುತ್ತದೆ. ತನ್ಮೂಲಕ ವಾತಾವರಣಕ್ಕೆ ಇಂಗಾಲದ ಬಿಡುಗಡೆಯಾಗುವುದನ್ನು ತಡೆಯುವ ಹಾಗೂ ರೈತರ ಭೂಮಿಯನ್ನು ಫಲವತ್ತಾಗಿಸಿ ಅವರ ಆದಾಯವನ್ನು ಹೆಚ್ಚಿಸುವ ಕೆಲಸವನ್ನೂ ಮಾಡುತ್ತದೆ. ಭೂಮಿತ್ರ ಅಂದರೆ ಮಣ್ಣಿನ ಸ್ನೇಹಿತ ಎಂದರ್ಥ. ಇದು ಸುಸ್ಥಿರ ಭೂಸಂರಕ್ಷಣೆ ಮಾಡುವ ರೈತರಿಗೆ ಪ್ರೋತ್ಸಾಹ ನೀಡುತ್ತದೆ. ಅರ್ಧ ಎಕರೆ ಸಣ್ಣ ಹಿಡುವಳಿಯಿಂದ ಹಿಡಿದು ದೊಡ್ಡ ಪ್ರಮಾಣದ ಭೂಹಿಡುವಳಿ ಹೊಂದಿರುವ ಆಫ್ರಿಕಾ, ದಕ್ಷಿಣ ಅಮೆರಿಕ ಹಾಗೂ ಏಷ್ಯಾದ 1,50,000 ರೈತರ ಜೊತೆ ಸೇರಿ ಇದು ಕೆಲಸ ಮಾಡುತ್ತಿದೆ. ಒಟ್ಟಾರೆ ಇದು 50 ಲಕ್ಷ ಎಕರೆ ಭೂಮಿಯ ಸಂರಕ್ಷಣೆಯಲ್ಲಿ ಕೈಜೋಡಿಸಿದೆ.ರೈತನ ಆತ್ಮಹತ್ಯೆ ನೋಡಿ ಕಟ್ಟಿದ ಕಂಪನಿ:ಪ್ರಶಸ್ತಿಗೆ ಸಂತಸ ವ್ಯಕ್ತಪಡಿಸಿರುವ ಭೂಮಿತ್ರದ ಸಂಸ್ಥಾಪಕ ಸಿಇಒ ಆದಿತ್‌ ಮೂರ್ತಿ, ‘ಹವಾಮಾನ ಬದಲಾವಣೆಯ ಸವಾಲಿನ ಜೊತೆಜೊತೆಗೇ ಜಗತ್ತಿನ ಎಲ್ಲರಿಗೂ ಆಹಾರ ನೀಡಲು ಮಣ್ಣಿನಲ್ಲಿ ಬೆವರು ಹರಿಸಿ ಕೆಲಸ ಮಾಡುತ್ತಿರುವ ಎಲ್ಲ ರೈತರಿಗೆ ಈ ಪ್ರಶಸ್ತಿ ಅರ್ಪಿಸುತ್ತೇನೆ’ ಎಂದು ಹೇಳಿದ್ದಾರೆ.2017ರಲ್ಲಿ ಒಂದು ದಿನ ಭಾರತದ ಹಳ್ಳಿಯೊಂದರಲ್ಲಿ ಆದಿತ್‌ ರೈತನೊಬ್ಬನ ಶವಯಾತ್ರೆಯನ್ನು ನೋಡಿದ್ದರು. ಆತ ಬೆಳೆ ನಷ್ಟದಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದ. ಆ ಭಾವನಾತ್ಮಕ ಕ್ಷಣವು ಆದಿತ್‌ ಅವರ ಮನದಲ್ಲಿ ಹೇಗಾದರೂ ಮಾಡಿ ರೈತರಿಗೆ ನೆರವಾಗುವ ಕಾರ್ಯ ಮಾಡಬೇಕು ಎಂಬ ಆಸೆ ಮೂಡಿಸಿತು. ಅದರಿಂದಾಗಿಯೇ ಭೂಮಿತ್ರ ಜನ್ಮತಾಳಿತು. ಇಂದು ಬೆಂಗಳೂರು ಸೇರಿದಂತೆ ಜಗತ್ತಿನ ನಾನಾ ಕಡೆ ‘ಭೂಮಿತ್ರ’ ಕೆಲಸ ಮಾಡುತ್ತಿದೆ.