ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಜವಾಬ್ದಾರಿ ಬೆಳೆಸಬೇಕು: ಥಾವರ್‌ ಚಂದ್‌ ಗೆಹಲೋತ್‌

| Published : Sep 28 2025, 02:00 AM IST

ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಜವಾಬ್ದಾರಿ ಬೆಳೆಸಬೇಕು: ಥಾವರ್‌ ಚಂದ್‌ ಗೆಹಲೋತ್‌
Share this Article
  • FB
  • TW
  • Linkdin
  • Email

ಸಾರಾಂಶ

ವಿಶ್ವವಿದ್ಯಾಲಯಗಳು, ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಪಠ್ಯವಸ್ತುಗಳನ್ನು ಬೋಧಿಸಿ, ವೃತ್ತಿ ಆಧಾರಿತ ಕೌಶಲ್ಯ ಕಲಿಸುವ ಜತೆಗೆ ಸಾಮಾಜಿಕ ಜವಾಬ್ದಾರಿ ಬೆಳೆಸಬೇಕು ಎಂದು ರಾಜ್ಯಪಾಲ ಥಾವರ್‌ ಚಂದ್‌ ಗೆಹಲೋತ್‌ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ವಿಶ್ವವಿದ್ಯಾಲಯಗಳು, ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಪಠ್ಯವಸ್ತುಗಳನ್ನು ಬೋಧಿಸಿ, ವೃತ್ತಿ ಆಧಾರಿತ ಕೌಶಲ್ಯ ಕಲಿಸುವ ಜತೆಗೆ ಸಾಮಾಜಿಕ ಜವಾಬ್ದಾರಿ ಬೆಳೆಸಬೇಕು ಎಂದು ರಾಜ್ಯಪಾಲ ಥಾವರ್‌ ಚಂದ್‌ ಗೆಹಲೋತ್‌ ಹೇಳಿದರು.

ಸೆಂಟ್‌ ಜೋಸೆಫ್‌ ವಿಶ್ವವಿದ್ಯಾಲಯ ಶನಿವಾರ ನಗರದಲ್ಲಿ ಆಯೋಜಿಸಿದ್ದ ವಿವಿಯ ಎರಡನೇ ಘಟಕೋತ್ಸವದಲ್ಲಿ 2747 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ಅವರು ಮಾತನಾಡಿದರು.

ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಭಾರತ ಮುಂಚೂಣಿಯಲ್ಲಿದೆ. ವಿಶ್ವದಲ್ಲೇ ಮೂರನೇ ಅತಿದೊಡ್ಡ ಆರ್ಥಿಕತೆಯಾಗಿ ದಾಪುಗಾಲಿಡುತ್ತಿದೆ. ವಿಕಸಿತ ಭಾರತದ ಕನಸು ಸಾಕಾರವಾಗುವ ಕಾಲ ಬರುತ್ತಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯೂ ದೇಶದ ಅಭಿವೃದ್ಧಿಗೆ ತನ್ನದೇ ಕೊಡುಗೆ ನೀಡುವ ಆಲೋಚನೆ ಬೆಳೆಸಿಕೊಂಡು ನಡೆಯಬೇಕು ಎಂದರು.

ತಿರುವನಂತಪುರಂನ ಭಾರತೀಯ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯ (ಐಐಎಸ್‌ಇಆರ್‌) ನಿರ್ದೇಶಕ ಡಾ. ಜೆ. ಎನ್. ಮೂರ್ತಿ ಮಾತನಾಡಿ, ವಿದ್ಯಾರ್ಥಿಗಳು ಆಧುನಿಕ ತಂತ್ರಜ್ಞಾನ, ನಾವೀನತ್ಯೆಗಳನ್ನು ಬಳಸಿಕೊಂಡು ಸೈಬರ್‌ ಅಪರಾಧಗಳ ನಿಯಂತ್ರಣದಂತಹ ಸವಾಲು ಸೇರಿದಂತೆ ಇತರೆ ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯಲು ಹೊಸ ಅನ್ವೇಷಣೆಗಳನ್ನು ನಡೆಸಬೇಕು. ಕೃತಕ ಬುದ್ಧಿಮತ್ತೆಯಿಂದ ಯಾವುದೇ ಸಮಸ್ಯೆ ಆಗದಂತೆ ಸಮರ್ಪಕವಾಗಿ ಬಳಸಿಕೊಳ್ಳಲು ಮಾವನ ಬುದ್ಧಿ ಶಕ್ತಿ ಜಾಗೃತವಾಗಿ ಕೆಲಸ ಮಾಡಬೇಕು ಎಂದರು.

ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್‌ ಮಾತನಾಡಿ, ಅವಕಾಶಗಳು ನಮ್ಮ ಮನೆ ಬಾಗಿಲಿಗೆ ಹುಡುಕಿಕೊಂಡು ಬರುವುದಿಲ್ಲ. ನಾವು ಅವಕಾಶಗಳ ಹಿಂದೆ ಹೋಗಬೇಕು. ಅಥವಾ ಅವಕಾಶಗಳನ್ನು ಸೃಷ್ಟಿಸಿಕೊಳ್ಳಬೇಕು. ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳು ಸಿಕ್ಕ ಯಾವ ಅವಕಾಶಗಳನ್ನೂ ಕೈಚೆಲ್ಲಬಾರದು ಎಂದು ಸಲಹೆ ನೀಡಿದರು.

ಸೆಂಟ್‌ ಜೋಸೆಫ್‌ ವಿವಿಯ ಕುಲಾಧಿಪತಿ ರೆವರೆಂಡ್ ಫಾದರ್ ಡಯನೇಶಿಯಸ್‌ ವಾಜ್‌ , ಕುಲಪತಿ ರೆವರೆಂಡ್ ಡಾ. ವಿಕ್ಟರ್ ಲೋಬೊ, ವಿವಿಯ ಇತರೆ ಅಧಿಕಾರಿಗಳಾದ ಡಾ. ಗಾಡ್ವಿನ್ ಡಿಸೋಜಾ, ಡಾ. ಸೈಯದ್ ವಜೀದ್, ಡಾ. ರೊನಾಲ್ಡ್ ಜೆ. ಮಸ್ಕರೇನ್ಹಸ್ ಉಪಸ್ಥಿತರಿದ್ದರು.