ಕಳೆದ 6-8 ತಿಂಗಳ ಅವಧಿಯಲ್ಲಿ ಇಸ್ರೋದ ಸುಮಾರು 100 ವಿಜ್ಞಾನಿಗಳು ರಾಜೀನಾಮೆ ನೀಡಿದ್ದಾರೆ. ಇದು ತೀವ್ರ ಕಳವಳಕಾರಿ ವಿಷಯ. ಇಸ್ರೋವನ್ನು ಉತ್ತಮ ಪ್ರತಿಭೆಗಳನ್ನು ಉಳಿಸಿಕೊಳ್ಳುವ ಸಂಸ್ಥೆಯಾಗಿಸುವುದು ಭಾರತದ ಭವಿಷ್ಯದ ಬಾಹ್ಯಾಕಾಶ ಕಾರ್ಯಕ್ರಮಕ್ಕೆ ಅತ್ಯಂತ ಮುಖ್ಯ. ಇದಕ್ಕೆ ಅನುಭವಿ ತಂತ್ರಜ್ಞರು ಮತ್ತು ವಿಜ್ಞಾನಿಗಳ ಸಲಹೆ ಪಡೆದು, ತ್ವರಿತ ಕ್ರಮಗಳನ್ನು ತೆಗೆದುಕೊಳ್ಳಬೇಕು. ಭಾರತದ ವೈಜ್ಞಾನಿಕ ಪ್ರಗತಿ ಮತ್ತು ಸ್ವಾವಲಂಬನೆಗೆ ಇದೇ ಸರಿಯಾದ ಮಾರ್ಗ.
-ಜಿ. ಮಾಧವನ್ ನಾಯರ್, ಇಸ್ರೋ ಮಾಜಿ ಮುಖ್ಯಸ್ಥ
ಕಳೆದ 6-8 ತಿಂಗಳ ಅವಧಿಯಲ್ಲಿ ಇಸ್ರೋದ ಸುಮಾರು 100 ವಿಜ್ಞಾನಿಗಳು ರಾಜೀನಾಮೆ ನೀಡಿದ್ದಾರೆ. ಇದು ತೀವ್ರ ಕಳವಳಕಾರಿ ಸಂಗತಿ. ಇಸ್ರೋ ತಂತ್ರಜ್ಞಾನದ ಅತ್ಯಾಧುನಿಕ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಒಂದು ಪ್ರಮುಖ ಸಂಸ್ಥೆ. ಇದಕ್ಕೆ ಬೇಕಾದ ತಂತ್ರಜ್ಞಾನ, ಕೌಶಲ್ಯ ಹಾಗೂ ಜ್ಞಾನ ಬೇಕು ಅಂದ ತಕ್ಷಣ ಸಿಗುವಂಥದ್ದಲ್ಲ. ಇದು 5 ದಶಕಕ್ಕೂ ಹೆಚ್ಚು ಕಾಲದ ಪರಿಶ್ರಮದಿಂದ ದೊರಕಿರುವಂಥದ್ದು. ಎಂಜಿನಿಯರಿಂಗ್‌ನ ಬಹುತೇಕ ಎಲ್ಲಾ ಶಾಖೆಗಳು ಒಂದಲ್ಲಾ ಒಂದು ರೀತಿಯಲ್ಲಿ ಬಾಹ್ಯಾಕಾಶ ತಂತ್ರಜ್ಞಾನಕ್ಕೆ ಸಂಬಂಧ ಹೊಂದಿರುತ್ತವೆ. ಇಲ್ಲಿನ ಜನಗಳು ಕಷ್ಟಪಟ್ಟು ಕೆಲಸ ಮಾಡಿರುತ್ತಾರೆ. ಹೊರಗಿನ ಯಾವುದೇ ಸಂಸ್ಥೆಗಳ ಸಹಾಯವಿಲ್ಲದೆ ಈ ಹಂತಕ್ಕೆ ಬಂದಿರುತ್ತಾರೆ ಹಾಗೂ ತಂತ್ರಜ್ಞಾನದಲ್ಲಿ ನೈಪುಣ್ಯ ಹೊಂದಿರುತ್ತಾರೆ. ಈಗ ಅಂತಹ ವ್ಯಕ್ತಿಗಳು ಸಂಸ್ಥೆಯನ್ನು ತೊರೆಯುವುದು ಅತ್ಯಂತ ನೋವಿನ ವಿಚಾರ. ಈ ಬಗ್ಗೆ ನಿಜವಾಗಿಯೂ ಆತ್ಮಾವಲೋಕನ ಮಾಡಿಕೊಳ್ಳುವ ಅಗತ್ಯವಿದೆ.
ಸರ್ಕಾರದ ವೈಫಲ್ಯ:
ನಿಜ ಹೇಳಬೇಕೆಂದರೆ, ನಾನು ಇತ್ತೀಚೆಗೆ ಇಸ್ರೋದ ಚಟುವಟಿಕೆಗಳನ್ನು ಹತ್ತಿರದಿಂದ ಗಮನಿಸುತ್ತಿಲ್ಲ. ಆದರೂ, ಸರ್ಕಾರವೇ ತೆಗೆದುಕೊಂಡ ಕೆಲವು ನೀತಿ ನಿರ್ಧಾರಗಳಿಂದಾಗಿ ಸಂಸ್ಥೆಯಲ್ಲಿ ಒಂದು ಮಟ್ಟದ ಅಸ್ಥಿರತೆ ಮತ್ತು ನೈತಿಕ ಸ್ಥೈರ್ಯ ಕುಸಿಯುವಂತಹ ಪರಿಸ್ಥಿತಿ ಉಂಟಾಗಿದೆ ಎಂಬುದು ನನಗೆ ಅರ್ಥವಾಗುತ್ತಿದೆ. ಮೊದಲನೆಯದಾಗಿ ಮತ್ತು ಅತ್ಯಂತ ಪ್ರಮುಖವಾಗಿ, ದೇಶದಲ್ಲಿ ಬಾಹ್ಯಾಕಾಶ ಉದ್ಯಮವನ್ನು ಬೆಳೆಸಬೇಕೆಂದು ಸರ್ಕಾರವು ಬಲವಾಗಿ ಪ್ರತಿಪಾದಿಸುತ್ತಾ ಬಂದಿದೆ. ಕಳೆದ ಒಂದು ದಶಕದ ಹಿಂದೆ ಈ ನೀತಿಯನ್ನು ಘೋಷಿಸಲಾಗಿದೆ. ಇಸ್ರೋ ಕಾರ್ಯಕ್ರಮಗಳನ್ನು ಪ್ರೋತ್ಸಾಹಿಸಲೆಂದೇ ಪ್ರತ್ಯೇಕ ಸಂಸ್ಥೆಯನ್ನೂ ಸ್ಥಾಪಿಸಲಾಗಿದೆ. ದುರದೃಷ್ಟವಶಾತ್ ಅವರಿಗೆ (ಸರ್ಕಾರಕ್ಕೆ) ಈ ವಿಷಯದಲ್ಲಿ ಯಾವುದೇ ಮಹತ್ತರವಾದುದನ್ನು ಸಾಧಿಸಲು ಸಾಧ್ಯವಾಗಿಲ್ಲ ಹಾಗೂ ಈ ಕ್ಷೇತ್ರದಲ್ಲಿನ ಪ್ರಗತಿ ಅತ್ಯಲ್ಪವಾಗಿದೆ.
ಬಾಹ್ಯಾಕಾಶ ಕ್ಷೇತ್ರದಲ್ಲಿ ಅಪಾರ ಹಣದ ಅವಕಾಶವಿದೆ, ಸ್ಟಾರ್ಟಪ್‌ಗಳು ಅದರಲ್ಲಿ ಪಾಲು ಪಡೆಯಬಹುದು ಹಾಗೂ ತಮ್ಮದೇ ಆದ ರೀತಿಯಲ್ಲಿ ಕಾರ್ಯನಿರ್ವಹಿಸಬಹುದು ಎಂಬ ಉತ್ಸಾಹದ ಅಲೆ ಈಗ ಮತ್ತೆ ಕಂಡುಬರುತ್ತಿದೆ. ಅದನ್ನು ಮಾಡಲು ತಮ್ಮದೇ ಆದ ದಾರಿಯನ್ನು ಆಯ್ದುಕೊಳ್ಳಲೂ ಅವಕಾಶವಿದೆ. ದುರದೃಷ್ಟವಶಾತ್ ಸ್ಟಾರ್ಟಪ್‌ಗಳು ಸೇರಿದಂತೆ ಇತರ ವಲಯಗಳಲ್ಲಿ ಇದುವರೆಗೆ ಏನೆಲ್ಲ ಆಗಿದೆಯೋ ಅವು ತೃಪ್ತಿಕರವಾಗಿಲ್ಲ.
ಖಾಸಗಿ ಸಂಸ್ಥೆಗಳಿಂದ ಆಮಿಷ:
ಕೆಲವು ಖಾಸಗಿ ಉದ್ಯಮಗಳು ಇಸ್ರೋದ ರೀತಿಯಲ್ಲೇ ಸಂಸ್ಥೆಗಳನ್ನು ಸ್ಥಾಪಿಸಲು ಯತ್ನಿಸುತ್ತಿವೆ. ಆದರೆ ಅವರಿಗೆ ಇದಕ್ಕೆ ಬೇಕಾದ ಮಾನವ ಸಂಪನ್ಮೂಲ ತಕ್ಷಣಕ್ಕೆ ಸಿಗುತ್ತಿಲ್ಲ. ಅವರಿಗೆ ಬೇಕಾದ ವಿಜ್ಞಾನಿಗಳು ಸಿಗುವುದು ಒಂದು ಇಸ್ರೋದಿಂದ ಅಥವಾ ಡಿಆರ್‌ಡಿಒದಿಂದ. ಖಾಸಗಿ ಸಂಸ್ಥೆಗಳು ಈಗ ಏನು ಮಾಡುತ್ತಿವೆಯೋ, ಅವು ಸಂಪೂರ್ಣ ಅನೈತಿಕ. ಅವರು ಇಸ್ರೋಗಿಂತ 3-5 ಪಟ್ಟು ಹೆಚ್ಚು ಸಂಬಳದ ಆಫರ್ ನೀಡಿ, ಉದ್ಯೋಗಿಗಳನ್ನು ಸೆಳೆಯುತ್ತಿವೆ. ಖಂಡಿತವಾಗಿಯೂ ಹಣವು ಯುವಜನರನ್ನು ಆಕರ್ಷಿಸುತ್ತದೆ ಮತ್ತು ಅದು ವ್ಯವಸ್ಥೆಯನ್ನು ವಿರೂಪಗೊಳಿಸುತ್ತದೆ. ಇಸ್ರೋ ನಿರ್ಬಂಧಗಳನ್ನು ಹೇರುವ ಮೂಲಕ ಉದ್ಯೋಗಿಗಳನ್ನು ಹಿಡಿದಿಟ್ಟುಕೊಳ್ಳಲು ಹೋಗಬಾರದು. ಬದಲಿಗೆ, ಅವರನ್ನು ಪ್ರೋತ್ಸಾಹಿಸುವ ಮೂಲಕ, ಹೆಚ್ಚೆಚ್ಚು ಅವಕಾಶ ಮತ್ತು ಭತ್ತೆಗಳನ್ನು ಕೊಡುವ ಮೂಲಕ ಈ ಸವಾಲನ್ನು ಎದುರಿಸಬೇಕು.
ಕಾರ್ಯಕ್ಷಮತೆ ಆಧಾರದಲ್ಲಿ ವೇತನ:
ಇದಕ್ಕೆ ಕೆಲವು ನಿಯಮಗಳನ್ನು ಜಾರಿಗೆ ತರುವ ಅಗತ್ಯವಿದೆ. ಪ್ರಮುಖ ತಂತ್ರಜ್ಞಾನ ಹಾಗೂ ಹೈಟೆಕ್ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವವರು ಸುಮ್ಮನೆ ಅಲ್ಲಿಂದ ಹೊರಹೋಗಲು ಸಾಧ್ಯವಿಲ್ಲ. ಯಾವುದೇ ಸಂಸ್ಥೆಯಲ್ಲಿ ಬದ್ಧತೆಯ ವ್ಯವಸ್ಥೆ ಮತ್ತು ಪರಸ್ಪರ ಬಾಂಧವ್ಯ ಇರಲೇಬೇಕು. ಖಾಸಗಿ ಉದ್ಯಮವೊಂದು ಇಸ್ರೋದಿಂದ ಅಂತಹ ಸಾಮರ್ಥ್ಯವುಳ್ಳ ವ್ಯಕ್ತಿಯನ್ನು ನೇಮಿಸಿಕೊಳ್ಳಬೇಕಾದರೆ, ಅದಕ್ಕೆ ತಕ್ಕ ವೆಚ್ಚವನ್ನು ಮಾಡಲೇಬೇಕು. ಎರಡನೆಯದಾಗಿ, ನಾನು 2006 ಅಥವಾ 2007ರಲ್ಲೇ ಪರಿಚಯಿಸಿದ ಪ್ರೋತ್ಸಾಹಕ ಯೋಜನೆ ಪ್ರಮುಖವೆಂದು ಭಾವಿಸುತ್ತೇನೆ. ಇದು ಕಾರ್ಯಕ್ಷಮತೆಯನ್ನು ಆಧರಿಸಿದ ಪ್ರೋತ್ಸಾಹಕ ವ್ಯವಸ್ಥೆ. ಒಬ್ಬ ವ್ಯಕ್ತಿಯು ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದರೆ ಹಾಗೂ ಅವನ ಜ್ಞಾನ ಮತ್ತು ಕೌಶಲ್ಯದ ಮಟ್ಟವು ಉನ್ನತವಾಗಿದ್ದರೆ, ವ್ಯವಸ್ಥಿತ ಪರಿಶೀಲನೆಯ ಆಧಾರದ ಮೇಲೆ ಆತನಿಗೆ ಹೆಚ್ಚುವರಿ ಸಂಭಾವನೆ ನೀಡಲು ಅವಕಾಶವಿರುತ್ತದೆ. ಹಾಗೆಯೇ ಅತ್ಯತ್ತಮವಾಗಿ ಕಾರ್ಯನಿರ್ವಹಿಸಿ, ವಿಶೇಷ ಫಲಿತಾಂಶ ತಂದುಕೊಟ್ಟವರಿಗೆ ಕ್ಯಾಶ್ ಅವಾರ್ಡ್‌ಗಳು ಇರುತ್ತವೆ.
ನಿವೃತ್ತರಿಂದಲೂ ಸೇವೆ ಅಗತ್ಯ:
ಇಸ್ರೋ ಮತ್ತು ಡಿಎಇ ಸಂಸ್ಥೆಗಳಿಗಾಗಿಯೇ ಒಂದು ವಿಶಿಷ್ಟವಾದ ಯೋಜನೆಯೂ ಇತ್ತು. ಅದರ ಪ್ರಕಾರ, ಸಂಸ್ಥೆಯ ಅಗತ್ಯತೆ ಮತ್ತು ಕಾರ್ಯಕ್ಷಮತೆಯ ಆಧಾರದ ಮೇಲೆ, ಅಗತ್ಯವಿದ್ದಲ್ಲಿ 60 ವರ್ಷ ಮೀರಿದವರನ್ನೂ ಸೇವೆಯಲ್ಲಿ ಮುಂದುವರಿಸಬಹುದಾಗಿದೆ. ಇದು ಪ್ರಾಧ್ಯಾಪಕರಿಗೆ 65 ವರ್ಷಗಳವರೆಗೆ ಸೇವೆ ಸಲ್ಲಿಸಲು ಅವಕಾಶವಿರುವ ಶೈಕ್ಷಣಿಕ ವ್ಯವಸ್ಥೆಗೆ ಅನುಗುಣವಾಗಿದೆ. ಅದಕ್ಕೆ ಹೋಲಿಸಿದರೆ 60 ವರ್ಷಗಳು ಏನೂ ಅಲ್ಲ. ಅಂದರೆ ಪ್ರತಿಭಾವಂತರು 65 ವರ್ಷಗಳವರೆಗೂ ಇಸ್ರೋದಲ್ಲಿ ತಮ್ಮ ಕೆಲಸವನ್ನು ಮುಂದುವರಿಸಬಹುದು. ದೆಹಲಿಯ ಅಧಿಕಾರಿಗಳ ಅನಗತ್ಯ ಹಸ್ತಕ್ಷೇಪದಿಂದಾಗಿ ಈ ಎಲ್ಲಾ ಯೋಜನೆಗಳನ್ನು ಸ್ಥಗಿತಗೊಳಿಸಲಾಗಿದೆ. ಹೀಗಾಗಿ, ಇದು ಆತಂಕಕಾರಿ ವಿಷಯವಾಗಿದೆ. ಇಸ್ರೋ ಹಿಂದಿನಿಂದಲೂ ಒಂದು ವಿಶಿಷ್ಟ ಹಾಗೂ ಸ್ವಾಯತ್ತ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಾ ಬಂದಿದೆ. ಆದರೆ ಇತ್ತೀಚಿನ ದಿನಗಳಲ್ಲಿ, ದೆಹಲಿಯ ಕೆಲವು ಅಧಿಕಾರಿಗಳಿಂದ ಉಂಟಾಗುತ್ತಿರುವ ಹಸ್ತಕ್ಷೇಪವು ಸಕಾರಾತ್ಮಕವಾಗಿಲ್ಲ.
ಇಸ್ರೋ ತನ್ನ ಸ್ವಾಯತ್ತತೆಯನ್ನು ಕಳೆದುಕೊಳ್ಳದಂತೆ, ಅಧಿಕಾರಿಗಳ ಹಸ್ತಕ್ಷೇಪವನ್ನು ಕಡಿಮೆ ಮಾಡಿ, ಕಾರ್ಯಕ್ಷಮತೆ ಆಧರಿತ ಪ್ರೋತ್ಸಾಹಕಗಳನ್ನು ಜಾರಿಗೆ ತರಬೇಕಿದೆ. ಉನ್ನತ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಕೆಲಸ ಮಾಡುವ ವಿಜ್ಞಾನಿಗಳಿಗೆ ವಿಶೇಷ ಸೌಲಭ್ಯಗಳನ್ನು ನೀಡಬೇಕು. ಗಗನಯಾನದಂತಹ ರಾಷ್ಟ್ರೀಯ ಖ್ಯಾತಿಯ ಮಿಷನ್‌ಗಳ ಯಶಸ್ಸಿಗೆ ಇದು ಅತ್ಯಗತ್ಯ. ಇಸ್ರೋವನ್ನು ಉತ್ತಮ ಪ್ರತಿಭೆಗಳನ್ನು ಉಳಿಸಿಕೊಳ್ಳುವ ಸಂಸ್ಥೆಯಾಗಿಸುವುದು ಭಾರತದ ಭವಿಷ್ಯದ ಬಾಹ್ಯಾಕಾಶ ಕಾರ್ಯಕ್ರಮಕ್ಕೆ ಅತ್ಯಂತ ಮುಖ್ಯ. ಇದಕ್ಕೆ ಅನುಭವಿ ತಂತ್ರಜ್ಞರು ಮತ್ತು ವಿಜ್ಞಾನಿಗಳ ಸಲಹೆಯನ್ನು ಪಡೆದು, ತ್ವರಿತ ಕ್ರಮಗಳನ್ನು ತೆಗೆದುಕೊಳ್ಳಬೇಕು. ಭಾರತದ ವೈಜ್ಞಾನಿಕ ಪ್ರಗತಿ ಮತ್ತು ಸ್ವಾವಲಂಬನೆಗೆ ಇದೇ ಸರಿಯಾದ ಮಾರ್ಗ.
