ಬೆಂಗಳೂರಲ್ಲಿ ಪ್ರಥಮ ಬಾರಿಗೆ ಕಂಬಳ ಸ್ಪರ್ಧೆ: ತುಳುಗೆ ಹೆಚ್ಚುವರಿ ಭಾಷೆಯ ಸ್ಥಾನ ನೀಡಲು ಪ್ರಯತ್ನ: ಸಿಎಂ ಭರವಸೆ

| Published : Nov 26 2023, 01:15 AM IST

ಸಾರಾಂಶ

ಕನ್ನಡ- ಸಂಸ್ಕೃತಿ ಸಚಿವರ ಜತೆ ಈ ಬಗ್ಗೆ ಚರ್ಚೆ ಮಾಡುವೆ: ಸಿದ್ದು

ಕನ್ನಡಪ್ರಭ ವಾರ್ತೆ ಬೆಂಗಳೂರುತುಳು ಭಾಷೆಯನ್ನು ರಾಜ್ಯದ ಹೆಚ್ಚುವರಿ ಭಾಷೆಯನ್ನಾಗಿ ಮಾಡಲು ಪ್ರಯತ್ನಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.ರಾಜಧಾನಿ ಬೆಂಗಳೂರಿನಲ್ಲಿ ಮೊದಲ ಬಾರಿಗೆ ಆಯೋಜನೆಗೊಂಡಿರುವ ಎರಡು ದಿನಗಳ ‘ಬೆಂಗಳೂರು ಕಂಬಳ’ಕ್ಕೆ ಅರಮನೆ ಮೈದಾನದಲ್ಲಿ ಶನಿವಾರ ಚಾಲನೆ ನೀಡಿ ಮಾತನಾಡಿದ ಅವರು, ‘ತುಳುನಾಡಿನವರು ಎಲ್ಲೇ ಹೋದರೂ ತುಳು ಮಾತನಾಡುತ್ತಾರೆ. ಅವರು ಮಾತನಾಡುವಾಗ ನಾವು ಕಣ್ ಕಣ್ ಬಿಟ್ಟು ನೋಡಬೇಕಾಗುತ್ತದೆ. ಮಾತೃಭಾಷೆ ಬಗ್ಗೆ ಅವರಿಗೆ ಅತೀವ ಅಭಿಮಾನ, ಪ್ರೀತಿ ಇದೆ. ಎಲ್ಲೇ ಹೋದರೂ ತುಳುವಿನಲ್ಲೇ ಮಾತನಾಡುತ್ತಾರೆ. ತುಳುವಿಗೆ ರಾಜ್ಯದ ಹೆಚ್ಚುವರಿ ಭಾಷೆ ಮಾನ್ಯತೆ ನೀಡಬೇಕು ಎಂಬ ಬೇಡಿಕೆ ಇದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರ ಜೊತೆ ಚರ್ಚಿಸುತ್ತೇನೆ. ಹೆಚ್ಚುವರಿ ಭಾಷೆಯನ್ನಾಗಿ ಮಾಡಲು ಪ್ರಯತ್ನ ಮಾಡುತ್ತೇವೆ. ಕಂಬಳ ಸಮಿತಿಯಿಂದ ಸಮುದಾಯ ಭವನ ನಿರ್ಮಾಣಕ್ಕೆ ಜಾಗದ ಬೇಡಿಕೆ ಇದ್ದು, ನೀಡಲಾಗುವುದು’ ಎಂದು ಭರವಸೆ ನೀಡಿದರು.‘ಭತ್ತ ಬೆಳೆಯುತ್ತಿದ್ದ ರೈತರು, ವ್ಯವಸಾಯ ಇಲ್ಲದಾಗ ಮನರಂಜನಾ ಚಟುವಟಿಕೆಯ ಭಾಗವಾಗಿ ಜಾನುವಾರುಗಳ ಉತ್ಸವ ಮಾಡುತ್ತಿದ್ದರು. ಗದ್ದೆಯಲ್ಲಿ ಮಣ್ಣನ್ನು ಹದ ಮಾಡಿ ಕೋಣವನ್ನು ಓಡಿಸುವ ಕ್ರೀಡೆಯಲ್ಲಿ ತೊಡಗಿಸಿಕೊಂಡು ಖುಷಿ ಪಡುತ್ತಿದ್ದರು. ಕೋಣ ಓಡಿಸುವವರು ಒಳ್ಳೆಯ ಅಥ್ಲೀಟ್ ಆಗಿರಬೇಕು. ಶಕ್ತಿವಂತರಾಗಿರಬೇಕು. ಇಲ್ಲದಿದ್ದರೆ ಕೆಸರು ಮಣ್ಣಿನಲ್ಲಿ ಓಡಲು ಆಗುವುದಿಲ್ಲ’ ಎಂದು ಸಿಎಂ ನುಡಿದರು.‘ಪುರಾತನ ಕಾಲದಿಂದ ನಡೆದುಕೊಂಡು ಬಂದಿರುವ ಕರಾವಳಿ ಜನರ ಕ್ರೀಡೆಯನ್ನು ಹಲವಾರು ಜನ ಮೈಗೂಡಿಸಿಕೊಂಡಿದ್ದಾರೆ. ಇದಕ್ಕೆ ಜನರೂ ಪ್ರೋತ್ಸಾಹ ನೀಡಿದ್ದಾರೆ. ಉಡುಪಿ, ಮಂಗಳೂರಲ್ಲಿ ಜನಪ್ರಿಯವಾಗಿದೆ. ಕೋಣ ಓಡಿಸುವುದು ಬಡವರ ಕ್ರೀಡೆಯಾಗಿತ್ತು. ಆದರೆ ಈಗ ಶ್ರೀಮಂತರ ಕ್ರೀಡೆಯಾಗಿದೆ. ವರ್ಷಕ್ಕೆ 15 ಲಕ್ಷ ರು. ಖರ್ಚು ಮಾಡುವವರಿದ್ದಾರೆ. ಹೀಗಾಗಿ, ಕೋಣ ಸಾಕುವುದು ಕಷ್ಟದ ಕೆಲಸ. ಕರಾವಳಿ ಕ್ರೀಡೆ ಬೆಂಗಳೂರಿಗೆ ಪರಿಚಯಿಸಿರುವುದು ಶ್ಲಾಘನೀಯ. ಪ್ರತಿ ವರ್ಷ ಬೆಂಗಳೂರಿನಲ್ಲಿ ಕಂಬಳ ಆಯೋಜನೆಯಾಗಲಿ. ಇದು ಜನಸಾಮಾನ್ಯರ ಕ್ರೀಡೆಯಾಗಿ ಬೆಳೆಯಬೇಕು’ ಎಂದು ಸಿಎಂ ಹೇಳಿದರು.‘ಕಂಬಳ ಮತ್ತು ಯಕ್ಷಗಾನ ದಕ್ಷಿಣ ಕನ್ನಡ ಜಿಲ್ಲೆಯ ಎರಡು ಕಣ್ಣುಗಳಿದ್ದಂತೆ. ಅರಮನೆ ಮೈದಾನಕ್ಕೆ ಬಂದಾಗ ಇದು ಮಂಗಳೂರಾ, ಬೆಂಗಳೂರಾ ಎನ್ನುವ ಅನುಮಾನ ಉಂಟಾಯಿತು. ಕಂಬಳ ಆಯೋಜನೆಯಲ್ಲಿ ಆಯೋಜಕರು ತುಂಬಾ ಶ್ರಮ ವಹಿಸಿ ಅಚ್ಚುಕಟ್ಟಾಗಿ ಮಾಡಿದ್ದಾರೆ. ಎಲ್ಲರನ್ನು ಒಗ್ಗೂಡಿಸುವ ಕಾರ್ಯಕ್ರಮ ಇದಾಗಿದ್ದು, ಪ್ರತಿ ವರ್ಷ ಜರುಗಲಿ’ ಎಂದು ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಹೇಳಿದರು.ಕಂಬಳ ಸಮಿತಿ ಪದಾಧಿಕಾರಿಗಳಾದ ಶಾಸಕ ಅಶೋಕ್ ಕುಮಾರ್ ರೈ, ಪ್ರಕಾಶ್ ಶೆಟ್ಟಿ, ಉಮೇಶ್ ಶೆಟ್ಟಿ, ಗುರುಕಿರಣ್ ಇನ್ನಿತರರು ಉಪಸ್ಥಿತರಿದ್ದರು.

ತುಳುನಾಡಿನವರು ಎಲ್ಲೇ ಹೋದರೂ ತುಳು ಮಾತನಾಡುತ್ತಾರೆ. ಅವರು ಮಾತನಾಡುವಾಗ ನಾವು ಕಣ್ ಕಣ್ ಬಿಟ್ಟು ನೋಡಬೇಕಾಗುತ್ತದೆ. ಮಾತೃಭಾಷೆ ಬಗ್ಗೆ ಅವರಿಗೆ ಅತೀವ ಅಭಿಮಾನ, ಪ್ರೀತಿ ಇದೆ. ಎಲ್ಲೇ ಹೋದರೂ ತುಳುವಿನಲ್ಲೇ ಮಾತನಾಡುತ್ತಾರೆ. ತುಳುವಿಗೆ ರಾಜ್ಯದ ಹೆಚ್ಚುವರಿ ಭಾಷೆ ಮಾನ್ಯತೆ ನೀಡಬೇಕು ಎಂಬ ಬೇಡಿಕೆ ಇದೆ. ಆ ಬಗ್ಗೆ ಪ್ರಯತ್ನ ಮಾಡುತ್ತೇವೆ.- ಸಿದ್ದರಾಮಯ್ಯ, ಮುಖ್ಯಮಂತ್ರಿ