ಸಾರಾಂಶ
ಭೋಗಾಪುರದ ಪರಿಶಿಷ್ಟ ಜಾತಿ,ಪಂಗಡಗಳ ಪ್ರಥಮದರ್ಜೆ ಕಾಲೇಜಿನ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ ।
ಕನ್ನಡಪ್ರಭ ವಾರ್ತೆ ಚಾಮರಾಜನಗರಭವಿಷ್ಯದಲ್ಲಿಯೂ ಬದುಕು ಉತ್ತಮವಾಗಿ ಉನ್ನತ ಸ್ಥಾನಕ್ಕೇರಲು ವಿದ್ಯಾರ್ಥಿಗಳು ಓದಿನ ಕಡೆಗೆ ಹೆಚ್ಚು ಗಮನಹರಿಸಬೇಕು ಎಂದು ಶಾಸಕ ಸಿ. ಪುಟ್ಟರಂಗಶೆಟ್ಟಿ ಹೇಳಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ, ಭೋಗಾಪುರದಲ್ಲಿ ನಿರ್ಮಾಣವಾಗಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವಸತಿಯುಕ್ತ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾಗಿದ್ದ ಅಭಿವಿನ್ಯಾಸ ಹಾಗೂ ಸ್ವಾಗತ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಅಭಿವೃದ್ದಿಗೆ ಶಿಕ್ಷಣವೇ ಮುಖ್ಯ. ಶಿಕ್ಷಣ ಇಲ್ಲದಿದ್ದರೆ ಯಾವುದೇ ಸಾಧನೆ ಸಾಕಾರವಾಗುವುದಿಲ್ಲ. ಶೈಕ್ಷಣಿಕ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.ಜಿಲ್ಲೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಶೈಕ್ಷಣಿಕ ಅಭಿವೃದ್ದಿಗೆ ಪೂರಕವಾಗಿ ಅನೇಕ ಸಂಸ್ಥೆಗಳು ಬಂದಿವೆ. ವೈದ್ಯಕೀಯ ಕಾಲೇಜು, ಕೃಷಿ ವಿಜ್ಞಾನ ಕಾಲೇಜು, ಮೊರಾರ್ಜಿ ಶಾಲೆಗಳು ಸೇರಿದಂತೆ ಇತರೆ ಶಾಲಾ ಕಾಲೇಜುಗಳು ಆರಂಭವಾಗಿವೆ. ಶಿಕ್ಷಣದಲ್ಲಿ ಜಿಲ್ಲೆ ಉತ್ತಮ ಸಾಧನೆಯತ್ತ ಮುನ್ನುಗ್ಗುತ್ತಿದೆ. ಭೋಗಾಪುರದಲ್ಲಿ ನಿರ್ಮಾಣವಾಗಿರುವ ವಸತಿಯುಕ್ತ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಬಾಕಿ ಇರುವ ಮೂಲ ಸೌಕರ್ಯಗಳನ್ನು ಕಲ್ಪಿಸಲಾಗುವುದೆಂದು ಅವರು ತಿಳಿಸಿದರು.
ನಗರಸಭಾ ಸದಸ್ಯ ಎಂ. ಮಹೇಶ್ ಮಾತನಾಡಿ, ಶಿಕ್ಷಣ ಪಡೆಯಲು ಎಲ್ಲರಿಗೂ ಹೆಚ್ಚಿನ ಅವಕಾಶಗಳಿವೆ.ಶಾಲೆಗೆ ಶೈಕ್ಷಣಿಕ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ವಿದ್ಯಾರ್ಥಿಗಳು ಪದವಿ ಹಂತದಲ್ಲಿಯೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪೂರಕವಾದ ಅಭ್ಯಾಸದಲ್ಲಿ ತೊಡಗಿಕೊಳ್ಳಬೇಕು. ದಿನಪತ್ರಿಕೆ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು.ಪ್ರಚಲಿತ ವಿದ್ಯಮಾನಗಳ ಬಗ್ಗೆ ಆಸಕ್ತಿ ಹೊಂದಬೇಕು ಎಂದರು.ಭೋಗಾಪುರದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವಸತಿಯುಕ್ತ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಪಿ. ದೇವರಾಜು ಮಾತನಾಡಿ, ಜಿಲ್ಲೆಯಲ್ಲಿ ವೈದ್ಯಕೀಯ, ಎಂಜಿನಿಯರಿಂಗ್, ಕೃಷಿ ಪದವಿ ಸೇರಿದಂತೆ ಎಲ್ಲಾ ವಿದ್ಯಾಸಂಸ್ಥೆಗಳು ಇವೆ. ಈ ಸಾಲಿಗೆ ಮತ್ತೊಂದು ಮೈಲಿಗಲ್ಲು ವಸತಿಯುಕ್ತ ಸರ್ಕಾರಿ ಪ್ರಥಮ ದರ್ಜೆ ಕಾಲೇಜಾಗಿದೆ. ಸುಸಜ್ಜಿತ ಕಾಲೇಜು ಕಟ್ಟಡ ಪೂರ್ಣಗೊಂಡಿದೆ. ಪೀಠೋಪಕರಣಗಳು ಮಾತ್ರ ಅಗತ್ಯವಿದೆ. ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಇಲ್ಲಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ತಾತ್ಕಾಲಿಕವಾಗಿ ಕಾಲೇಜು ಆರಂಭಿಸಲಾಗಿದೆ. 54 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಮುಂಬರುವ ಶೈಕ್ಷಣಿಕ ಸಾಲಿನಲ್ಲಿ ಭೋಗಾಪುರದ ನೂತನ ಕಟ್ಟಡದಲ್ಲಿಯೇ ಕಾಲೇಜು ನಡೆಯಲಿದೆ ಎಂದರು.
ಭೋಗಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೂಪ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಎ. ರಮೇಶ್, ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ. ಎಸ್. ಚಂದ್ರಮ್ಮ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.----------------
10ಸಿಎಚ್‌ಎನ್54ಚಾಮರಾಜನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಭೋಗಾಪುರದಲ್ಲಿ ನಿರ್ಮಾಣವಾಗಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವಸತಿಯುಕ್ತ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾಗಿದ್ದ ಅಭಿವಿನ್ಯಾಸ ಹಾಗೂ ಸ್ವಾಗತ ಕಾರ್ಯಕ್ರಮವನ್ನು ಶಾಸಕ ಸಿ. ಪುಟ್ಟರಂಗಶೆಟ್ಟಿ ಅವರು ಉದ್ಘಾಟಿಸಿದರು.
------------------