ಬದುಕಿನಲ್ಲಿ ಬಸವತತ್ವ ಪಾಲಸಿ: ಬೇಲಿಮಠ ಶ್ರೀ

| N/A | Published : May 01 2025, 01:47 AM IST / Updated: May 01 2025, 05:19 AM IST

ಸಾರಾಂಶ

ಬಸವಣ್ಣನೊಡನೆ ಹೆಜ್ಜೆ ಎಂದರೆ ಮೆರವಣಿಗೆಯಲ್ಲ ಬಸವತತ್ವಗಳ ಪಾಲನೆಯೇ ಬಸವಣ್ಣನೊಡನೆ ಹೆಜ್ಜೆಯಾಗಿರುತ್ತದೆ. ಬಸವ ತತ್ವಗಳನ್ನು ಬದುಕಿನಲ್ಲಿ ಪರಿಪಾಲನೆ ಮಾಡುವುದಾಗಿರುತ್ತದೆ ಎಂದು ಬೇಲಿಮಠದ ಶಿವರುದ್ರಸ್ವಾಮೀಜಿ ಹೇಳಿದ್ದಾರೆ.

 ಬೆಂಗಳೂರು : ಬಸವಣ್ಣನೊಡನೆ ಹೆಜ್ಜೆ ಎಂದರೆ ಮೆರವಣಿಗೆಯಲ್ಲ ಬಸವತತ್ವಗಳ ಪಾಲನೆಯೇ ಬಸವಣ್ಣನೊಡನೆ ಹೆಜ್ಜೆಯಾಗಿರುತ್ತದೆ. ಬಸವ ತತ್ವಗಳನ್ನು ಬದುಕಿನಲ್ಲಿ ಪರಿಪಾಲನೆ ಮಾಡುವುದಾಗಿರುತ್ತದೆ ಎಂದು ಬೇಲಿಮಠದ ಶಿವರುದ್ರಸ್ವಾಮೀಜಿ ಹೇಳಿದ್ದಾರೆ.

ಬಸವ ಜಯಂತಿ ಪ್ರಯುಕ್ತ ವಚನಜ್ಯೋತಿ ಬಳಗ ಬುಧವಾರ ವಿಜಯನಗರದಲ್ಲಿ ಆಯೋಜಿಸಿದ್ದ ಬಸವ ಉತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬಸವಣ್ಣ ಅಂದರೆ ಒಂದು ವ್ಯಕ್ತಿಯಲ್ಲ, ಸಮಷ್ಟಿಯ ಸಂಕೇತ. ಬಸವ ಉತ್ಸವ ಸಾಂಸ್ಕೃತಿಕ ಸಂಪನ್ನತೆಯ ದ್ಯೋತಕ. ಬಸವಣ್ಣ ಅವರ ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡರೆ ಬದುಕು ಸಂಪನ್ನವಾಗುತ್ತದೆ. ಬಸವಣ್ಣನವರನ್ನು ಅರಿಯಲು ಪ್ರಯತ್ನಿಸುವುದೇ ನಿಜವಾದ ಜ್ಞಾನಾರ್ಚನೆ ಎಂದು ತಿಳಿಸಿದರು.

ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಸಿ.ಸೋಮಶೇಖರ್‌ ಮಾತನಾಡಿ, ಕನ್ನಡಿಗರ ಸಾಂಸ್ಕೃತಿಕ ಸಂಪತ್ತಾದ ವಚನಗಳನ್ನು ನಮಗೆ ಕರುಣಿಸಿರುವ ಬಸವಣ್ಣನ ನೆನೆಯುವುದೆಂದರೆ ಕನ್ನಡವನ್ನು ನೆನೆಯುವ ಕಾರ್ಯವಾಗಿದೆ. ವಚನಗಳ ಮೂಲಕ ಕನ್ನಡಕ್ಕೆ ಹೊಸ ದಿಕ್ಕು ನೀಡಿದ ಕನ್ನಡದ ಅಣ್ಣ ಬಸವಣ್ಣನವರಾಗಿದ್ದು, ಜಗತ್ತಿನಾದ್ಯಂತ ಬಸವಣ್ಣನವರ ಜಯಂತಿ ಆಚರಣೆಯಾಗುತ್ತಿರುವುದರಿಂದ ಜಗದಣ್ಣನೂ ಆಗಿದ್ದಾರೆ ಎಂದು ವಿವರಿಸಿದರು.

ವಚನಜ್ಯೋತಿ ಬಳಗದ ಅಧ್ಯಕ್ಷ ಎಸ್. ಪಿನಾಕಪಾಣಿ ಮಾತನಾಡಿ, ಸಮ ಸಮಾಜವನ್ನು ಕಟ್ಟಿ ವರ್ಗವರ್ಣ ನಿರ್ಮೂಲನ ಮಾಡಿ ಹೆಣ್ಣಿಗೆ ಸಮಾನ ಸ್ಥಾನಮಾನ ನೀಡಿದ ಬಸವಣ್ಣ ಜಗದ ನಿಜವಾದ ದಾರ್ಶನಿಕರಾಗಿದ್ದಾರೆ. ಅತ್ಯಂತ ಸರಳವಾದ ಕನ್ನಡದಲ್ಲಿ ಅನುಭಾವಗಳನ್ನು ತಾವು ನೀಡಿದ್ದು ಮಾತ್ರವಲ್ಲ, ಇತರರಿಂದಲೂ ಕೊಡಿಸಿದ ಬಸವಣ್ಣನವರ ಜಯಂತಿ ಕನ್ನಡದ ಸಂಕೇತವಾಗಿದೆ. ಬಸವ ಉತ್ಸವದ ಮೂಲಕ ಕನ್ನಡದ ಉತ್ಸವವನ್ನು ನಡೆಸಲಾಗುತ್ತಿದೆ ಎಂದರು.

ಬಸವ ಸಮಿತಿಯ ಅಧ್ಯಕ್ಷ ಅರವಿಂದ ಜತ್ತಿ ಮಾತನಾಡಿದರು. ಕಾರ್ಯಕ್ರಮದಲ್ಲಿ ವಿಶ್ವಬಂಧು ಪ್ರತಿಷ್ಠಾನದ ಡಾ. ಸಿದ್ದಯ್ಯ ಗುರೂಜಿ, ನಾರಸಂದ್ರ ಮಠದ ಶ್ರೀ ಸಿದ್ದಲಿಂಗಸ್ವಾಮಿಗಳು, ಹಿರಿಯ ಐ.ಎ.ಎಸ್. ಅಧಿಕಾರಿ ಶಿವಾನಂದ ಕಾಪಸಿ ಉಪಸ್ಥಿತರಿದ್ದರು.

ಅದ್ಧೂರಿ ಮೆರವಣಿಗೆ : ಬಸವ ಜಯಂತಿ ಪ್ರಯುಕ್ತ ವಿಜಯನಗರ-ಹೊಸಹಳ್ಳಿ-ಹಂಪಿನಗರದಲ್ಲಿ ಮಾರ್ಗದಲ್ಲಿ ನಡೆದ ಬಸವ ಉತ್ಸವ ಮೆರವಣಿಗೆಯಲ್ಲಿ ವೀರಗಾಸೆ, ಡೊಳ್ಳು ಕುಣಿತ, ನಂದಿ ಧ್ವಜ ತಂಡಗಳ ಪ್ರದರ್ಶನ ಮತ್ತು ಕತ್ತರಗುಪ್ಪೆಯ ವೀರಮಾತಾ ಯೋಗಕೇಂದ್ರದವರು ನಡೆಸಿಕೊಟ್ಟ ವಚನಗಾಸೆ ಎಲ್ಲರನ್ನೂ ಆಕರ್ಷಿಸಿತು. 

ಈ ಸಂದರ್ಭದಲ್ಲಿ ಶಾಸಕ ಎಂ.ಕೃಷ್ಣಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಬಲವಂತರಾವ್ ಪಾಟೀಲ್, ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಪ್ರಭುಶಂಕರ್, ಸರ್ಕಾರದ ಜಂಟಿ ಕಾರ್ಯದರ್ಶಿ ಪಂಪನಗೌಡ ಮೇಲ್ಸೀಮೆ, ಸಾಹಿತಿ ಆರ್.ಜಿ. ಹಳ್ಳಿ ನಾಗರಾಜ್ ಮತ್ತಿತರರು ಪಾಲ್ಗೊಂಡಿದ್ದರು.